ಜಸ್ವಂತ್ ಸಿಂಗ್ ರಾವತ್ ಒಂದು ನೆನಪು

Update: 2020-07-08 05:14 GMT

ಆ ಸ್ಥಳದಲ್ಲಿದ್ದ ಹಳೆ ಬಂಕರ್‌ಗಳನ್ನು, ಯೋಧರ ಸಮಾಧಿಗಳನ್ನು, ಅಲ್ಲೆಲ್ಲ ಬಿದ್ದಿದ್ದ ಇನ್ನಿತರ ಯುದ್ಧ ಸಲಕರಣೆಗಳನ್ನು ನೋಡಿದಾಗ ನನ್ನ ಮನಸ್ಸು ತುಂಬಾ ವ್ಯಾಕುಲಗೊಂಡಿತು. ನಾಲ್ಕಾರು ಸಲ ಅಲ್ಲೆಲ್ಲ ಸುತ್ತಾಡಿ ಸುತ್ತಲಿನ ಪರ್ವತ ಶ್ರೇಣಿಗಳು, ಕಾಡು ಕಣಿವೆಗಳನ್ನು ನೋಡುತ್ತಾ ಅಲ್ಲೇ ಸುಮಾರು ಹೊತ್ತು ನಿಂತುಬಿಟ್ಟೆ. ಜೊತೆಗಿದ್ದ ರೆಡ್ಡಿ ಮತ್ತು ಚಾಲಕ ಸುತ್ತಲೂ ನೋಡುತ್ತ ಮೂಕರಾಗಿದ್ದರು. ನಮ್ಮ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳ ಬಗ್ಗೆ ಅನೇಕ ಆಲೋಚನೆಗಳು ಬಂದುಹೋದವು. ಇವರನ್ನೆಲ್ಲ ಕನಿಷ್ಠ ಒಂದು ಸಲವಾದರೂ ಈ ಪ್ರದೇಶಗಳಲ್ಲಿ ಓಡಾಡಿಸಿದರೆ ಒಳಿತೇನೋ ಎನು್ನವ ಆಲೋಚನೆ ಬಂದಿತ್ತು.

ಈಗ ಭಾರತ-ಚೀನಾದ ಗಡಿಯಲ್ಲಿ ಸಂಘರ್ಷದ ವಾತಾವರಣ ಹೊಗೆಯಾಡುತ್ತಲಿದ್ದು, 1962ರಲ್ಲಿ ನಡೆದ ಯುದ್ಧದ ಒಂದು ಕಿರು ಚಿತ್ರವನ್ನು ಇಲ್ಲಿ ಕೊಡಲಾಗಿದೆ. ತವಾಂಗ್ ಸುತ್ತಮುತ್ತ ತೀವ್ರ ಯುದ್ಧ ನಡೆದು ಸಾವಿರಾರು ಚೀನಿಯರು ಪರ್ವತಗಳಿಂದ ಮಾರ್ಟರ್ಸ್‌, ಮೆಷಿನ್ ಗನ್ಸ್, ಸ್ಟೆನ್‌ಗನ್ಸ್, ಗ್ರೆನೇಡ್ಸ್, ಹೆವಿ ಆರ್ಟಿಲರಿ, ಸೆಲ್‌ಗಳಿಂದ ದಾಳಿ ಮಾಡಿ ನೂರಾರು ಭಾರತೀಯ ಸೈನಿಕರನ್ನು ಮುಗಿಸುತ್ತ ಮುಂದುವರಿದಿದ್ದರು. ಭಾರತೀಯ ಸೈನಿಕರನ್ನು ತವಾಂಗ್‌ನಿಂದ ಹಿಂದಕ್ಕೆ ಕರೆಸಿಕೊಂಡು ಶಿಲಾಪಾಸ್ ಕೆಳಗಿನ ತಪ್ಪಲಲ್ಲಿ 4ನೇ ಬೆಟಾಲಿಯನ್‌ಗೆ ಸೇರಿದ ಘರ್‌ವಾಲ್ ರೈಫಲ್ಸ್ ಜೊತೆಗೆ ಸೇರಿಕೊಂಡು ಚೀನಿ ಯೋಧರನ್ನು ಎದುರಿಸುವಂತೆ ಆದೇಶಿಸಲಾಯಿತು. ಚೀನಿಯರು ಸ್ಥಳೀಯ ಮೋನ್ಫಾಗಳ ವೇಷದಲ್ಲಿ ಭಾರತೀಯ ಸೈನಿಕರನ್ನು ಭೇದಿಸಿ ಒಳಗೆ ನುಗ್ಗಲು ಪ್ರಯತ್ನಿಸುತ್ತಿರುವುದನ್ನು ಅರಿತು ಅವರನ್ನು ಹಿಮ್ಮೆಟ್ಟಿಸಲಾಯಿತು. ಅದೂ ಕೂಡ ಬೆಳಗಿನ ಜಾವ ಕತ್ತಲಲ್ಲಿ ಒಮ್ಮೆಲೇ ನೂರಾರು ಚೀನಿ ಯೋಧರು ಧಾವಿಸಿ ಬರುತ್ತಿದ್ದರು. ಕಡಿಮೆ ಸಂಖ್ಯೆಯಲ್ಲಿದ್ದ ಭಾರತೀಯ ಯೋಧರು ಚೀನಿ ಯೋಧರನ್ನು ತಡೆಯಲಾಗಲಿಲ್ಲ. ಹಿಂದಿನ ಪರ್ವತಗಳ ಜಾಡಿನಲ್ಲಿ ಕಣಿವೆಯ ಕೆಳಗೆ 40 ಮೀಟರ್ ಹತ್ತಿರದವರೆಗೂ ಸಾವಿರಾರು ಚೀನಿ ಯೋಧರು ಬಂದುಬಿಟ್ಟಿದ್ದರು. ಕಣಿವೆಯ ಮೇಲೆ ಬಂಕರ್‌ಗಳಲ್ಲಿ ಉಳಿದುಕೊಂಡಿದ್ದ ತ್ರಿಲೋಕ್ ಸಿಂಗ್, ಜಸ್ವಂತ್ ಸಿಂಗ್ ಮತ್ತು ಗೋಪಾಲ್‌ಸಿಂಗ್ ಮೂವರು ಉಸಿರು ಬಿಡದೆ ಸುಮ್ಮನೆ ಕುಳಿತುಕೊಂಡರು. ಈ ಮೂವರು ಯೋಧರ ಹತ್ತಿರ ಕೇವಲ ಒಂದು ಮೆಷಿನ್‌ಗನ್ ಜೊತೆಗೆ ಕೆಲವು ನೂರು ಗ್ರೆನೇಡುಗಳು ಮಾತ್ರ ಇದ್ದವು. ಚೀನಿಯರು ಇವರ ಮೇಲೆ ಒಂದೇ ಸಮನೆ ಫೈರ್ ಮಾಡುತ್ತಿದ್ದರು. ಅದರ ನಡುವೆಯೇ ಜಸ್ವಂತ್ ಸಿಂಗ್ ಮತ್ತು ತ್ರಿಲೋಕ್ ಸಿಂಗ್ ಕಣಿವೆಯ ಮರಗಿಡಗಳ ಮಧ್ಯೆ ತೆವಳಿಕೊಂಡು ಹೋಗುತ್ತಿದ್ದರೆ, ಹಿಂದೆ ಬಂಕರ್ ಹತ್ತಿರ ನಿಂತಿದ್ದ ಗೋಪಾಲ್ ಸಿಂಗ್ ಮೆಷಿನ್‌ಗನ್‌ನಿಂದ ಚೀನಿ ಯೋಧರ ಮೇಲೆ ಒಂದೇ ಸಮನೆ ಫೈರ್ ಮಾಡತೊಡಗಿದರು.

ಎದುರಿಗೆ ಗಾಯಗೊಂಡು ಬಿದ್ದಿದ್ದ ಒಬ್ಬ ಚೀನಿ ಯೋಧನ ಕೈಯಿಂದ ಗೋಪಾಲ್ ಸಿಂಗ್ ಒಂದು ಲೈಟ್ ಎಮ್‌ಎಮ್‌ಜಿ ಕಸಿದುಕೊಂಡು ಹಿಂದಕ್ಕೆ ಬಂಕರ್ ಕಡೆಗೆ ಓಡಿ ಬರತೊಡಗಿದರು. ಅಷ್ಟರಲ್ಲಿ ಒಂದು ಬುಲೆಟ್ ಆತನ ತಲೆಗೆ ಬಡಿದಿತ್ತು. ತ್ರಿಲೋಕ್ ಸಿಂಗ್ ಆ ಚೀನಿ ಯೋಧನ ಮೇಲೆ ಗ್ರನೇಡ್ ಎಸೆದು ಸಾಯಿಸಿದರು. ಆ ವೇಳೆಗೆ ಗೋಪಾಲ್ ಸಿಂಗ್, ಜಸ್ವಂತ್ ಸಿಂಗ್‌ರನ್ನು ಬಂಕರ್ ಒಳಕ್ಕೆ ಎಳೆದುಕೊಂಡಿದ್ದರು. ಇದೆಲ್ಲ ಕೇವಲ ಕೆಲವು ನಿಮಿಷಗಳಲ್ಲಿ ನಡೆದುಹೋಗಿತ್ತು. ಆದರೆ ಈ ಮೂವರು ಯೋಧರು ಇರುವೆ ಸಾಲಿನಂತೆ ಬರುತ್ತಿದ್ದ ಚೀನಿ ಯೋಧರನ್ನು ತಡೆದು ನಿಲ್ಲಿಸಿದ್ದರು. ಚೀನಿ ಯೋಧರು ಒಂದೇ ಸಮನೆ ಕಣಿವೆಯ ಇಳಿಜಾರಿನಲ್ಲಿ ಜಾರಿ ಬೀಳುತ್ತಿದ್ದರೂ, ಅಲೆಅಲೆಯಾಗಿ ಬರುತ್ತಲೇ ಇದ್ದರು. 300 ಚೀನಿಯರು ಸತ್ತು ನೂರಾರು ಯೋಧರು ಗಾಯಗೊಂಡು ಹಿಂದಕ್ಕೆ ಸರಿದಿದ್ದರು.

ಈ ಮೂವರು ಯೋಧರು ಮೂರು ರಾತ್ರಿ, ಮೂರು ಹಗಲುಗಳ ಕಾಲ ಈ ಇಕ್ಕಟ್ಟಾದ ಪ್ರದೇಶದಲ್ಲಿ ಸಾವಿರಾರು ಚೀನಿ ಯೋಧರನ್ನು ತಡೆದು ನಿಲ್ಲಿಸಿದ್ದರು. ಚೀನಿಯರು ಕಣಿವೆ ಮೇಲಿನ ಬಂಕರ್‌ಗಳಲ್ಲಿ ನೂರಾರು ಭಾರತೀಯ ಯೋಧರು ಅಡಗಿ ಕುಳಿತು ತಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ನಂಬಿದ್ದರು. ವೀರಯೋಧ ಜಸ್ವಂತ್ ಸಿಂಗ್ ರಾವತ್ ಜೊತೆಗೆ ಇದೇ ಸ್ಥಳದಲ್ಲಿ 3 ಅಧಿಕಾರಿಗಳು, 4 ಜೆಸಿಎಮ್‌ಗಳು, 147 ಯೋಧರು ಮತ್ತು 7 ಲ್ಯಾನ್ಸ್ ನಾಯಕ್ಸ್ ವೀರ ಮರಣ ಹೊಂದಿದರು. ಇವರೆಲ್ಲ ಘರ್‌ವಾಲ್ ರೈಫಲ್ಸ್ 4ನೇ ಬೆಟಾಲಿಯನ್‌ಗೆ ಸೇರಿದವರು. ಈ ಸ್ಥಳ ಈಗ ಜಸ್ವಂತ್ ಜಂಘೀಗರ್ ಎಂದೇ ಪ್ರಖ್ಯಾತಿ. ವೀರ ಮರಣ ಹೊಂದಿದ ಜಸ್ವಂತ್ ಸಿಂಗ್ ರಾವತ್‌ಗೆ ಮಹಾವೀರಚಕ್ರ, ತ್ರಿಲೋಕ್ ಸಿಂಗ್‌ಗೆ ವೀರಚಕ್ರ ಮತ್ತು ಬದುಕಿ ಉಳಿದುಕೊಂಡಿದ್ದ ಗೋಪಾಲ್ ಸಿಂಗ್‌ಗೆ ಭಾರತ ಸರಕಾರ ವೀರಚಕ್ರ ನೀಡಿ ಗೌರವಿಸಿತ್ತು.

ನಾನು ಕೂಡ ಆ ಸ್ಥಳಕ್ಕೆ ಭೇಟಿ ನೀಡಿದ್ದೆ. ಆಗ ಆ ಸ್ಥಳದಲ್ಲಿದ್ದ ಹಳೆ ಬಂಕರ್‌ಗಳನ್ನು, ಯೋಧರ ಸಮಾಧಿಗಳನ್ನು, ಅಲ್ಲೆಲ್ಲ ಬಿದ್ದಿದ್ದ ಇನ್ನಿತರ ಯುದ್ಧ ಸಲಕರಣೆಗಳನ್ನು ನೋಡಿದಾಗ ನನ್ನ ಮನಸ್ಸು ತುಂಬಾ ವ್ಯಾಕುಲಗೊಂಡಿತು. ನಾಲ್ಕಾರು ಸಲ ಅಲ್ಲೆಲ್ಲ ಸುತ್ತಾಡಿ ಸುತ್ತಲಿನ ಪರ್ವತ ಶ್ರೇಣಿಗಳು, ಕಾಡು ಕಣಿವೆಗಳನ್ನು ನೋಡುತ್ತಾ ಅಲ್ಲೇ ಸುಮಾರು ಹೊತ್ತು ನಿಂತುಬಿಟ್ಟೆ. ಜೊತೆಗಿದ್ದ ರೆಡ್ಡಿ ಮತ್ತು ಚಾಲಕ ಸುತ್ತಲೂ ನೋಡುತ್ತ ಮೂಕರಾಗಿದ್ದರು. ನಮ್ಮ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳ ಬಗ್ಗೆ ಅನೇಕ ಆಲೋಚನೆಗಳು ಬಂದುಹೋದವು. ಇವರನ್ನೆಲ್ಲ ಕನಿಷ್ಠ ಒಂದು ಸಲವಾದರೂ ಈ ಪ್ರದೇಶಗಳಲ್ಲಿ ಓಡಾಡಿಸಿದರೆ ಒಳಿತೇನೋ ಎನು್ನವ ಆಲೋಚನೆ ಬಂದಿತ್ತು.

ಶಿಲಾಪಾಸ್ ಕೆಳಗೆ ನ್ಯೂಕ್ಮಡೊಂಗ್ ಯುದ್ಧಸ್ಮಾರಕದಲ್ಲಿ ವೀರಮರಣ ಹೊಂದಿದ ಒಟ್ಟು 280 ವೀರಯೋಧರ ಪಟ್ಟಿ ಸಿಕ್ಕಿತು. ಅಸ್ಸಾಮಿನ

ತೇಜ್‌ಪುರ-ಬೊಮ್‌ಡಿಲಾ-ಜಂಗಿಘರ್-ಶಿಲಾಪಾಸ್-ದೀರಂಘ್-ತವಾಂಗ್‌ವರೆಗೂ ಮತ್ತು ತವಾಂಗ್-ಬುಮ್ಲಾ-ಶಾಂಗ್ಷಟಿಯರ್ ಸುತ್ತಮುತ್ತಲೂ ಎಲ್ಲಿ ನೋಡಿದರು ಯುದ್ಧ ನಡೆದ ರಣರಂಗ ಪ್ರದೇಶಗಳು ಮತ್ತು ಯುದ್ಧ ಸ್ಮಾರಕಗಳು. ಇನ್ನು ಯುದ್ಧದಲ್ಲಿ ಮಡಿದವರ ಹೆಸರಿನ ಪಟ್ಟಿಗಳನ್ನು ನೋಡಿದಾಗ ತಲೆ ಸುತ್ತಿ ಬರುತ್ತದೆ. ಹೀಗೆ ಈ ಪ್ರದೇಶದಲ್ಲಿ ಹತ್ತಾರು ಯುದ್ಧಸ್ಮಾರಕಗಳಿದ್ದು ನೂರಾರು ಯೋಧರ ಸಮಾಧಿಗಳಿವೆ.

ತವಾಂಗ್‌ನಿಂದ-ಬುಮ್ಲಾ-ಶಾಂಗ್ಷಟಿಯರ್ ಸರೋವರದ ರಸ್ತೆಯಲ್ಲಿ ನಮ್ಮ ಜೀಪು ಹೊರಟಿದ್ದು ರಸ್ತೆಯ ಉದ್ದಕ್ಕೂ ಯುದ್ಧದ ಕುರುಹುಗಳು ಕಾಣಿಸತೊಡಗಿದವು. ಬೆಟ್ಟ, ಗುಡ್ಡ, ಕಣಿವೆ, ಶಿಖರ ಎಲ್ಲೆಲ್ಲೂ ಬಂಕರ್‌ಗಳು, ಬಂಕರ್‌ಗಳ ಸುತ್ತಮುತ್ತಲೂ ಮತ್ತು ಒಳಗೆ ರಾಶಿ ರಾಶಿ ಸಿಡಿಮದ್ದುಗಳ ಹಳೆ ಕವಚಗಳು ಬಿದ್ದಿದ್ದವು. ಅವುಗಳ ಮೇಲೆ ಕೆಂಪು ಬಣ್ಣದಲ್ಲಿ ಬರೆದಿರುವ ‘ಪಾಯಿಷನ್’ ಎಂಬ ಪದಗಳು ಹಾಗೆ ಉಳಿದುಕೊಂಡಿದ್ದವು. ಬಂಕರ್‌ಗಳ ಮಧ್ಯೆ ಆಳವಾದ ಟ್ರಂಚುಗಳು, ಗೋಡೆಗಳು ಮತ್ತು ಹಲವು ಆಕಾರಗಳ ಬಂಕರ್‌ಗಳ ಮೇಲೆ ಹುಲ್ಲು ಬೆಳೆದು, ಹಿಮದ ಧೂಳು ಬಿದ್ದು, ಹಸಿರು ಬಿಳುಪಿನ ಹೊದಿಕೆು ಗೂಡುಗಳಂತೆ ಕಾಣಿಸುತ್ತಿದ್ದವು.

ಶಿಲೆಗಳ ಮಧ್ಯೆ ಇರುವ ಬಿರುಕು ಸಂದುಗಳು ಮತ್ತು ಗವಿಗಳನ್ನೇ ಬಂಕರ್‌ಗಳಾಗಿ ಉಪಯೋಗಿಸಲಾಗಿತ್ತು. ಅವುಗಳ ಮಧ್ಯೆಯೆ ಜಿಂಕ್ ಶೀಟುಗಳಲ್ಲಿ ನಿರ್ಮಿಸಿದ ಹೊಸ ಬಂಕರ್‌ಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಯೋಧರು ಒಳಗೆ ಹೊರಗೆ ನಿಂತು ದೇಶವನ್ನು ಕಾವಲು ಕಾಯುತ್ತಿದ್ದರು. ಅವರ ಮೇಲೆ ಹಿಮ ಧೂಳಿನ ಹೂಮಳೆ ಸುರಿಯುತ್ತಿದ್ದು ಯಾವ ಕಡೆ ನೋಡಿದರೂ ಹಿಮರಾಶಿಯೆ. ಎಲ್ಲಿ ಹುಟ್ಟಿ ಎಲ್ಲಿ ಬೆಳೆದ ಯೋಧರೋ, ಯಾವ ತಾಯಿ ಹೆತ್ತ ಮಕ್ಕಳೋ, ತಂದೆ, ತಾಯಿ, ಪತ್ನಿ, ಮಕ್ಕಳನ್ನು ಬಿಟ್ಟು ಈ ನೀರವ ರೌದ್ರ ಹಿಮರಾಶಿಯ ನಡುವೆ ಮರಗಟ್ಟುವ ಚಳಿಯಲ್ಲಿ ದೇಶದ ಗಡಿಯಲ್ಲಿ ನಿಂತು ದೇಶವನ್ನು ಕಾಯುತ್ತಿರುವ ಪರಿಯನ್ನು ನೋಡಿದರೆ ನಿಜವಾಗಿಯೂ ಮನಸ್ಸಿಗೆ ನೋವಾಗುತ್ತದೆ. ದೇಶಾಭಿಮಾನ ಉಕ್ಕಿಬರುತ್ತದೆ.

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News