ನೆರೆಯಲ್ಲಿ ಸಿಲುಕಿದ್ದ ಜನರು, ಜಾನುವಾರುಗಳನ್ನು ರಕ್ಷಿಸಿದ ಬಿಜೆಪಿ ಶಾಸಕ: ವ್ಯಾಪಕ ಪ್ರಶಂಸೆ
ಗೋಲಘಟ್ : ನೆರೆಯಿಂದಾಗಿ ಮೊಣಕಾಲು ತನಕ ನೀರು ತುಂಬಿದ್ದ ಪ್ರದೇಶಗಳಿಂದ ಜನರು ಹಾಗೂ ಜಾನುವಾರುಗಳನ್ನು ರಕ್ಷಿಸಿದ ಅಸ್ಸಾಂ ಶಾಸಕ ಮೃಣಾಲ್ ಸೈಕಿಯಾ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಈ ಕುರಿತಾದ ವೀಡಿಯೋವೊಂದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. “ನೆರೆ ನನ್ನ ಕ್ಷೇತ್ರದಲ್ಲಿ ಅವಾಂತರ ಸೃಷ್ಟಿಸಿದೆ. ಕಷ್ಟದಲ್ಲಿರುವ ಜನರನ್ನು ರಕ್ಷಿಸುತ್ತಿದ್ದೇನೆ'' ಎಂದು ಅವರು ಬರೆದಿದ್ದಾರೆ. ವೀಡಿಯೋದಲ್ಲಿ ಅವರು ಮಗುವೊಂದನ್ನು ರಕ್ಷಿಸುತ್ತಿರುವುದು ಕಾಣಿಸುತ್ತದೆ.
ಇನ್ನೊಂದು ವೀಡಿಯೋದಲ್ಲಿ ಅವರು ಗೋಲಘಾಟ್ ಜಿಲ್ಲೆಯ ಗೊರ್ಮೊರ ಗ್ರಾಮದಲ್ಲಿ ಆಡುಗಳನ್ನು ರಕ್ಷಿಸುತ್ತಿರುವುದು ಕಾಣಿಸುತ್ತದೆ. “ಜಾನುವಾರುಗಳು ಗ್ರಾಮೀಣ ಆರ್ಥಿಕತೆಗೆ ಬಹಳ ಮುಖ್ಯ. ಹಲವಾರು ಸ್ಥಳಗಳಿಂದ ನೂರಾರು ಆಡುಗಳನ್ನು ರಕ್ಷಿಸಿದ ಖುಷಿಯಿದೆ'' ಎಂದು ಅವರು ಬರೆದಿದ್ದಾರೆ.
ಅವರ ಈ ಕಾರ್ಯ ಸಾಮಾಜಿಕ ಜಾಲತಾಣ ಪ್ರಿಯರಿಂದ ಪ್ರಶಂಸೆ ಗಿಟ್ಟಿಸಿದೆ. ಜನಪ್ರತಿನಿಧಿಯೆಂದರೆ ಹೀಗಿರಬೇಕು. ನಿಮ್ಮ ಕಾರ್ಯ ಇತರ ರಾಜಕಾರಣಿಗಳಿಗೆ ಮಾದರಿಯಾಗಲಿ ಎಂದು ಹಲವರು ಬರೆದಿದ್ದಾರೆ.
ಅಸ್ಸಾಂ ರಾಜ್ಯದ 27 ಜಿಲ್ಲೆಗಳಲ್ಲಿ ನೆರೆ ಸಮಸ್ಯೆಯಿಂದ 22 ಲಕ್ಷಕ್ಕೂ ಅಧಿಕ ಜನರು ಬಾಧಿತರಾಗಿದ್ದಾರೆ.