ಎಲ್‌ಐಸಿ ವಿರುದ್ಧ ಮಾರಕಾಸ್ತ್ರ

Update: 2020-07-16 19:30 GMT

ಭಾರತೀಯ ಜೀವ ವಿಮಾ ನಿಗಮವನ್ನು ಖಾಸಗೀಕರಿಸುವ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಯತ್ನಗಳಲ್ಲಿ ಭಾಜಪ ಸರಕಾರ ಮಗ್ನವಾಗಿದೆ. ಎಲ್‌ಐಸಿ ದೇಶದ ಆರ್ಥಿಕ ಬೆನ್ನೆಲುಬು. ಅಂದ ಮೇಲೆ ಸರಕಾರ ಯಾತಕ್ಕೆ ಅದನ್ನು ಮಾರುವ ಪ್ರಯತ್ನಗಳನ್ನು ಮುಂದುವರಿಸಿದೆ? ಇದನ್ನು ಆರ್ಥಿಕ ತಜ್ಞರಾಗಿ ಅಲ್ಲದೆ, ಒಬ್ಬ ಸಾಮಾನ್ಯ ಪ್ರಜೆಯಾಗಿ, ವಿಮಾ ಗ್ರಾಹಕನಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಹತ್ತು ಹಲವಾರು ವರ್ಷಗಳ ಅನುಭವ ಜನರಿಗಿದೆ. ಅನೇಕಾನೇಕ ಖಾಸಗಿ ಹಣಕಾಸಿನ ಕಂಪೆನಿಗಳು, ಬ್ಯಾಂಕ್ ಹಾಗೂ ವಿಮಾ ಸಂಸ್ಥೆಗಳೂ ಸೇರಿದಂತೆ ದಿವಾಳಿಯಾಗಿವೆ. ಈ ಹಿನ್ನೆಲೆಯಲ್ಲಿ, ಎಲ್‌ಐಸಿ ವಿಚಾರದಲ್ಲಿ ಹಲವಾರು ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕು. ಎಲ್‌ಐಸಿ ದುರ್ಬಲವೇ, ಅದರ ಕಾರ್ಯಾಚರಣೆ ಸಮರ್ಪಕವಿಲ್ಲವೇ, ಹಣಕಾಸಿನ ನಷ್ಟ ಅನುಭವಿಸಿದೆಯೇ, ಅಕ್ರಮ ವ್ಯವಹಾರಗಳು ಸಂಭವಿಸಿವೆಯೇ, ಸೂಕ್ಷ್ಮವರಿಯದ ಸಂಸ್ಥೆಯೇ ಅಥವಾ ದಿವಾಳಿಯ ಹಾದಿಯಲ್ಲಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಸಾಮಾನ್ಯ ಜನ ನೀಡುವ ಒಂದೇ ನಿಖರವಾದ ಉತ್ತರ-ಇಲ್ಲ. ಮೇಲ್ಕಂಡ ಯಾವ ವಿಚಾರವನ್ನೂ ಜನ ಒಪ್ಪುವುದಿಲ್ಲ, ಸಂಪೂರ್ಣ ನಿರಾಕರಿಸುತ್ತಾರೆ. ಇದನ್ನು ಆರ್ಥಿಕ ತಜ್ಞರು, ನಿಯಂತ್ರಣಾ ಪ್ರಾಧಿಕಾರ, ಮಾರುಕಟ್ಟೆ ಹಾಗೂ ಮಾಧ್ಯಮ ಎಲ್ಲರೂ ಸಮರ್ಥಿಸುತ್ತಾರೆ.

ಭಾರತದಲ್ಲಿ ಅಷ್ಟೇ ಅಲ್ಲದೇ, ವಿಶ್ವದಲ್ಲಿ ಭಾರತೀಯ ಜೀವವಿಮಾ ನಿಗಮ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್. ಆರ್ಥಿಕವಾಗಿ ಸದೃಢವಾಗಿದೆ. ಹೀಗಿರುವಾಗ, ಮತ್ತ್ಯಾಕೆ ಕೇಂದ್ರ ಎಲ್‌ಐಸಿಯಲ್ಲಿ ತನ್ನ ಪಾಲಿನ ಬಂಡವಾಳವನ್ನು ಕಡಿಮೆ ಮಾಡಿಕೊಳ್ಳುತ್ತಿದೆ (Disinvestment)? ಇದು ಬರುವ ದಿನಗಳಲ್ಲಿ ಎಲ್‌ಐಸಿಯನ್ನು ಖಾಸಗೀಕರಿಸುವ ಮೊದಲ ಹೆಜ್ಜೆಯಲ್ಲವೇ? ಕೇಂದ್ರ ಸರಕಾರದ ಡಿಪಾರ್ಟ್‌ಮೆಂಟ್ ಆಫ್ ಇನ್ವೆಸ್ಟ್‌ಮೆಂಟ್ ಆ್ಯಂಡ್ ಪಬ್ಲಿಕ್ ಅಸೆಟ್ಸ್ ಮೇನೇಜ್‌ಮೆಂಟ್ (DIPAM), ಸಲಹಾ ಸಂಸ್ಥೆಗಳಿಂದ, ಇನ್ವೆಸ್ಟ್ ಮೆಂಟ್ ಬ್ಯಾಂಕುಗಳಿಂದ ಹಾಗೂ ವ್ಯಾಪಾರಿ ಹಣಕಾಸು ಸಂಸ್ಥೆಗಳಿಂದ, ಎಲ್‌ಐಸಿಯಲ್ಲಿ ಸರಕಾರ ಯಾವ ರೀತಿ ತನ್ನ ಬಂಡವಾಳವನ್ನು ಐಪಿಒ (IPO) ಮೂಲಕ ವಿಕ್ರಯಿಸಬಹುದು ಎಂಬ ವಿಚಾರದಲ್ಲಿ ಸಲಹೆ, ಸೂಚನೆಗಳನ್ನು ಆಹ್ವಾನಿಸಿದೆ. ಈ ಸಂಸ್ಥೆಗಳು ತಮ್ಮ ಸಲಹೆಗಳನ್ನು ಸಲ್ಲಿಸಲು ಕೊನೆಯ ತಾರೀಕು ಜುಲೈ 13 ಎಂದು ನಿಗದಿಯಾಗಿತ್ತು. ಎಲ್‌ಐಸಿ ಆರ್ಥಿಕವಾಗಿ ಬಲಿಷ್ಠವಾಗಿದೆ, ಆರೋಗ್ಯಕರವಾಗಿದೆ ಅಂದ ಮೇಲೆ ಕೇಂದ್ರ ಸರಕಾರ ಯಾವ ಕಾರಣಕ್ಕಾಗಿ ಅದನ್ನು ಕತ್ತರಿಸುವ ಮಣೆಯ ಮೇಲೆ ಇರಿಸಿದೆ ಅನ್ನುವುದನ್ನು ಸಾಮಾನ್ಯ ಜನರ ದೃಷ್ಟಿಕೋನದಿಂದ ವಿಮರ್ಶಿಸಬೇಕಾಗುತ್ತದೆ.

ಕೇಂದ್ರ ಸರಕಾರದ ತಪ್ಪುಆರ್ಥಿಕ ನೀತಿಗಳಿಂದ ವಿತ್ತ ಭಂಡಾರ ಖಾಲಿಯಾಗಿದೆ. ಕೊರೋನ ಹರಡುವ ಬಹಳ ಹಿಂದೆಯೇ ದೇಶದ ಆರ್ಥಿಕತೆ ಬಹಳಷ್ಟು ಮಟ್ಟಿಗೆ ನಾಶ ಹೊಂದಿತ್ತು. ಸಾಮಾನ್ಯ ಜನರ ಆದಾಯ ಕ್ಷೀಣಿಸಿದೆ. ಅವರ ಕೊಳ್ಳುವ ಸಾಮರ್ಥ್ಯ ಕುಗ್ಗಿದೆ. ಬಳಕೆ, ಬೇಡಿಕೆ ಹಾಗೂ ಖರ್ಚು ಗಣನೀಯವಾಗಿ ಮುಗ್ಗರಿಸಿದೆ. ತೆರಿಗೆ ಆದಾಯ ಕುಸಿದಿದೆ. ಇವನ್ನು ನಿರಾಕರಿಸಲು ಸರಕಾರದಿಂದ ಸಾಧ್ಯವಿಲ್ಲ. ಆದರೆ ಕಾರ್ಪೊರೇಟ್ ಕಂಪೆನಿಗಳಿಗೆ ತಮ್ಮ ಲಾಭವನ್ನು ಅಟ್ಟಕ್ಕೇರಿಸುವ ದುರಾಸೆ ವಿಪರೀತ ಹೆಚ್ಚಾಯಿತು. ಕೊರೋನ ವ್ಯಾಧಿಯೂ ಸಹ ಕಾರ್ಪೊರೇಟ್‌ಗಳಿಗೆ ಲಾಭದ ಜೂಜಾಟವೇ ಆಯಿತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾರ್ಪೊರೇಟ್‌ಗಳ ಪರವಾದ ಸರಕಾರ. ಎಲ್‌ಐಸಿಯನ್ನು (ಕಂತುಗಳಲ್ಲಿ) ಮಾರಾಟ ಮಾಡುವುದಕ್ಕೆ ಸರಕಾರದ ಮುಂದಿದ್ದ ಅತ್ಯಂತ ಪ್ರಮುಖ ಕಾರಣ, ಬರಿದಾದ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುವುದು. ಇನ್ನೊಂದು ಕಾರಣ ಕಾರ್ಪೊರೇಟ್‌ಗಳ ಪರವಾದ ಆರ್ಥಿಕ ಉದಾರೀಕರಣದ ಅನುಷ್ಠಾನ. ಒಂದೇ ಕಲ್ಲಿನಲ್ಲಿ ಎರಡು ಮಾವಿನಕಾಯಿ. ಇಂದು ಭಾರತದಲ್ಲಿ ಜನ ಕಾಣುತ್ತಿರುವುದು ಕ್ರೋನಿ ಕ್ಯಾಪಿಟಲಿಸಂ. ಇಲ್ಲಿಯವರೆಗೆ ಎಲ್‌ಐಸಿಯಲ್ಲಿ ತನ್ನ ಬೇಳೆಕಾಳನ್ನು ಬೇಯಿಸಿಕೊಳ್ಳಲು ಸರಕಾರಕ್ಕೆ ಹಿಂದೇಟಿತ್ತು. ದೇಶದ ಸಮಸ್ತ ಜನರ ಭರವಸೆಯೇ ಎಲ್‌ಐಸಿಗೆ ರಕ್ಷಾ ಕವಚವಾಗಿತ್ತು.

1956ರ ಪ್ರಾರಂಭದಿಂದ ಇಂದಿನವರೆಗೆ ಎಲ್‌ಐಸಿ ಸರಕಾರಕ್ಕೆ ಕಾಮಧೇನು, ಎಟಿಎಂ ಯಂತ್ರ ಆಗಿತ್ತು. ಎಲ್‌ಐಸಿಯನ್ನು ಮೊದಲ ಹಂತದಲ್ಲಿ ತನ್ನ ಪಾಲಿನ ಒಂದು ಭಾಗವನ್ನು ಮಾರಾಟ ಮಾಡುವುದರಿಂದ, ಕೇಂದ್ರ ಸರಕಾರಕ್ಕೆ 90,000 ಕೋಟಿ ರೂಪಾಯಿ ಆದಾಯ ಸಿಗಬಹುದೆಂಬ ನಿರೀಕ್ಷೆಯಿದೆ. ಇದು ಸೂರ್ಯನನ್ನು ಮಾರಿ ಒಂದೆರಡು ಮೊಂಬತ್ತಿಗಳನ್ನು ಕೊಂಡಂತೆ! ಕೊರೋನ ಮಹಾಮಾರಿ ಹಾಗೂ ಲಾಕ್‌ಡೌನ್ ಸಂದರ್ಭವನ್ನು ತನ್ನ ಅನುಕೂಲಕ್ಕೆ ದುರುಪಯೋಗ ಮಾಡಿಕೊಂಡು, ಅವಶ್ಯಕವಾದ ಚರ್ಚೆಗಳಿಲ್ಲದೆ, ಪಾರ್ಲಿಮೆಂಟಿನ ನಿಯಮಗಳನ್ನು ಗಾಳಿಗೆ ತೂರಿ, ಶಾರ್ಟ್ ಕಟ್‌ನಲ್ಲಿ ತನ್ನಿಷ್ಟ ಬಂದಂತೆ ನರೇಂದ್ರ ಮೋದಿ ಸರಕಾರ ಎಲ್‌ಐಸಿಯಲ್ಲಿನ ತನ್ನ ಬಂಡವಾಳವನ್ನು ವಾಪಸ್ ಪಡೆಯುವ ಕೆಲಸಕ್ಕೆ ಮುಂದಾಗಿದೆ. ಇದು ಅಪಾಯಕಾರಿ. ಹಿತ್ತಲ ಬಾಗಿಲಿನಿಂದ ಎಲ್‌ಐಸಿಯನ್ನು ಕ್ರಮೇಣ ಖಾಸಗೀಕರಿಸುವ ಪ್ರಯತ್ನ ಆತ್ಮಹತ್ಯೆಗೆ ಸಮ.

1956ರಲ್ಲಿ ಪ್ರಾರಂಭವಾದ ಎಲ್‌ಐಸಿ 64 ವಸಂತಗಳನ್ನು ಕಂಡಿದೆ. ಈ ಅವಧಿಯಲ್ಲಿ ಅದರ ಬೆಳವಣಿಗೆ ಅದ್ಭುತವಾದದ್ದು, ಊಹಿಸಲೂ ಅಸಾಧ್ಯವಾದದ್ದು. ಎಲ್‌ಐಸಿಯ ಒಟ್ಟು ಆಸ್ತಿ 32 ಲಕ್ಷ ಕೋಟಿ ರೂಪಾಯಿ. ಕೇಂದ್ರ ಸರಕಾರದ ಸೆಕ್ಯೂರಿಟಿ (ಬಂಡವಾಳ ಪತ್ರಗಳ) ಮತ್ತು ದೇಶ ಕಟ್ಟುವ ಯೋಜನೆಗಳಲ್ಲಿ ರೂ.21 ಲಕ್ಷ ಕೋಟಿಗಿಂತಲೂ ಹೆಚ್ಚಿನ ಹಣವನ್ನು ತೊಡಗಿಸಿದೆ. ಕುಡಿಯುವ ನೀರು, ಒಳಚರಂಡಿ, ಬೃಹತ್ ನೀರಾವರಿ ಯೋಜನೆಗಳು, ವಿದ್ಯುಚ್ಛಕ್ತಿ, ಆರೋಗ್ಯ, ರಸ್ತೆ ಹೆದ್ದಾರಿ, ರಸ್ತೆ ಸಾರಿಗೆ, ರೈಲ್ವೆ, ಟೆಲಿಕಾಂ, ರಕ್ಷಣೆ, ಕೈಗಾರಿಕೆ, ಸಹಕಾರಿ ಸಂಸ್ಥೆಗಳು, ಹೀಗೆ ಎಲ್ಲ ರಂಗಗಳಲ್ಲಿಯೂ ಎಲ್‌ಐಸಿಯನ್ನು ಜನ ಗುರುತಿಸಬಹುದು. ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಎಲ್‌ಐಸಿ ಹಾಸುಹೊಕ್ಕಾಗಿದೆ. 1956ರಲ್ಲಿ ಕೇಂದ್ರ ಸರಕಾರ ಎಲ್‌ಐಸಿಯಲ್ಲಿ ಹೂಡಿದ ಪ್ರಾರಂಭಿಕ ಬಂಡವಾಳ ಕೇವಲ ಐದು ಕೋಟಿ ರೂಪಾಯಿ. ಹಣಕಾಸು ವರ್ಷ 2018-19ರಲ್ಲಿ ಮಾತ್ರ ಕೇಂದ್ರ ಸರಕಾರಕ್ಕೆ ಡಿವಿಡೆಂಡ್ ಆಗಿ ಎಲ್‌ಐಸಿ 2,661 ಕೋಟಿ ರೂಪಾಯಿ ನೀಡಿದೆ. 1956ರಿಂದ ಇಂದಿನವರೆಗಿನ ಎಲ್ಲ ಪಂಚ ವಾರ್ಷಿಕ ಯೋಜನೆಗಳಿಗೆ ಎಲ್‌ಐಸಿ ಹಣ ಒದಗಿಸಿದೆ. ಎಲ್‌ಐಸಿಯ ಗ್ರಾಹಕರ ಸಂಖ್ಯೆ 30 ಕೋಟಿಗಿಂತ ಹೆಚ್ಚು. ಅನೇಕ ಯುರೋಪ್ ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚು. ಪ್ರತಿನಿಧಿ (ಅಜಛ್ಞಿಠಿ)ಗಳ ಸಂಖ್ಯೆ 11 ಲಕ್ಷಕ್ಕಿಂತ ಹೆಚ್ಚು. ಎಲ್‌ಐಸಿಯ ಕ್ಲೇಮ್ಸ್ ಸೆಟಲ್‌ಮೆಂಟ್ ವಿಶ್ವದಲ್ಲಿ ಅಪ್ರತಿಮ. ಭಾರತದ ಆರ್ಥಿಕತೆ ಗಟ್ಟಿ ನೆಲದ ಮೇಲೆ ಸ್ಥಿರವಾಗಿರಲು ಎಲ್‌ಐಸಿ ಪ್ರಧಾನ ಕಾರಣ. ಎಲ್‌ಐಸಿ ಚಿನ್ನದ ಮೊಟ್ಟೆಯಿಡುವ ಬಾತು ಕೋಳಿ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಅದನ್ನು ವಿಕೃತಗೊಳಿಸುವುದು ದೇಶದ ಆರ್ಥಿಕ ಸ್ವಾವಲಂಬನೆಯನ್ನು ಮಾರಿಕೊಳ್ಳುವುದಕ್ಕೆ ಸಮಾನ.

ಜೀವ ವಿಮಾ ನಿಗಮದ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು, ಏಜೆಂಟರು, ನೌಕರರು, ಗ್ರಾಹಕರು, ಸಾಮಾನ್ಯ ಜನ, ಇಡೀ ಕಾರ್ಮಿಕ ಸಂಘಟನೆಗಳು, ಪ್ರಜ್ಞಾವಂತ ಆರ್ಥಿಕ ತಜ್ಞರು ಹಾಗೂ ಮಾಧ್ಯಮದವರು ಎಲ್‌ಐಸಿ ಷೇರುಗಳನ್ನು ಮಾರಾಟ ಮಾಡುವುದನ್ನು ಉಗ್ರವಾಗಿ ಟೀಕಿಸಿದ್ದಾರೆ. ಎಲ್‌ಐಸಿ ಭಾರತದ ಎಲ್ಲ ಪ್ರಜೆಗಳ ಆಸ್ತಿ. ಅದನ್ನು ಲಾಭದ ಲಾಲಸೆಯಿಂದ ಕಾರ್ಪೊರೇಟ್‌ಗಳಿಗೆ ಮಾರುವುದು ಆತ್ಮಹತ್ಯೆಗೆ ಸಮ ಅನ್ನುವುದರಲ್ಲಿ ಸಂದೇಹ ಇರಲಿಕ್ಕಿಲ್ಲ. ಎಲ್‌ಐಸಿಯನ್ನು ಮಾರುಕಟ್ಟೆಯಲ್ಲಿ ಹರಾಜು ಹಾಕುವುದು ಭಾರತವನ್ನು ಹರಾಜು ಹಾಕಿದ ಹಾಗೆ.

ಎಲ್‌ಐಸಿಯ ಘೋಷವಾಕ್ಯ, ಭಗವತ್ ಗೀತೆಯಿಂದ ಆಯ್ದ ಒಂದು ಸಾಲು, ‘ಯೋಗಕ್ಷೇಮಂ ವಹಾಮ್ಯಹಂ’, ಅಂದರೆ ನಿಮ್ಮ ಯೋಗಕ್ಷೇಮ ನನ್ನ ಜವಾಬ್ದಾರಿ. ಇಂದು ಸರಕಾರವು ಜನತೆ ಮತ್ತು ಎಲ್‌ಐಸಿಯನ್ನು ಕುರಿತು ಹೇಳುತ್ತಿದೆ, ನಿಮ್ಮ ಯೋಗಕ್ಷೇಮ ನನ್ನ ಜವಾಬ್ದಾರಿ ಅಲ್ಲ!
ಎಲ್‌ಐಸಿಯನ್ನು ಹರಾಜು ಹಾಕುವುದರಿಂದ ಆತ್ಮನಿರ್ಭರ ಭಾರತ ಆಗುವುದು ಸಾಧ್ಯವಿಲ್ಲ.

Writer - ನ. ಸುಂದರಮೂರ್ತಿ

contributor

Editor - ನ. ಸುಂದರಮೂರ್ತಿ

contributor

Similar News