ನಷ್ಟ ಪರಿಹಾರ ವಸೂಲಿಗೆ ಹೊರಟಿರುವ ಸರಕಾರ "Exemplary Damage" ವಸೂಲಿ ಮಾಡದಿರುವುದು ಪಕ್ಷಪಾತವಲ್ಲವೇ?

Update: 2020-08-20 15:13 GMT

ನಿಂದನೆಯ ಪೋಸ್ಟ್ ಹಾಕಿದವರಿಂದ  "Exemplary Damage" ವಸೂಲಿ ಮಾಡದೆ ಇತರ ಆರೋಪಿಗಳಿಂದ "ನಷ್ಟ ಪರಿಹಾರ ವಸೂಲಿ" ಮಾಡುವುದು ಕಾನೂನು ಪಕ್ಷಪಾತವಾಗುವುದಿಲ್ಲವೇ? 

ಆಸ್ತಿಪಾಸ್ತಿ ಮುಟ್ಟುಗೋಲು ಮಾಡಿಕೊಂಡರೆ, ಯಾವುದೇ ಅಪಾರಾಧಗಳಲ್ಲಿ ಭಾಗವಹಿಸದ ಆರೋಪಿಯ ಕುಟುಂಬಕ್ಕೂ ಶಿಕ್ಷೆ ಕೊಟ್ಟಂತಾಗುವುದಿಲ್ಲವೇ?  

ಕಾವಲ್ ಭೈರಸಂದ್ರ ಪ್ರಕರಣದಲ್ಲಿ ರಾಜ್ಯದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಸರ್ಕಾರ ಗಲಭೆಕೋರರಿಂದಲೇ ನಷ್ಟ ಪರಿಹಾರ ವಸೂಲಿ ಮಾಡಲು ಹೈಕೋರ್ಟಿನ ಮೊರೆ ಹೋಗಿದೆ. 

ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಗಲಭೆಕೋರರು ನಷ್ಟ ಉಂಟು ಮಾಡಿದಾಗ ಅದಕ್ಕೆ ಪರಿಹಾರ ಒದಗಿಸುವ ಕಾಯಿದೆ- Prevention of Damage To Public Property Act (PDPP)- ಯು 1984ರಲ್ಲೇ ಜಾರಿಗೆ ಬಂದಿದ್ದರೂ ಯಾವ  ಸರ್ಕಾರಗಳು ಅದನ್ನು ಜಾರಿ ಮಾಡಿರಲಿಲ್ಲ. 

ಆದರೆ 2007ರಲ್ಲಿ (In Re:Destruction Of Public&Pvt.... vs State Of A.P. & Ors on 16 April, 2009) ಸುಪ್ರೀಂ ಕೋರ್ಟು ಹೆಚ್ಚುತ್ತಿರುವ ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟವನ್ನು ತಡೆಗಟ್ಟಲು ಕಾನೂನು ಕ್ರಮಗಳನ್ನು ಸೂಚಿಸಲು ಜಸ್ಟಿಸ್ ಕೆ. ಟಿ. ಥಾಮಸ್ ಹಾಗು ಹಿರಿಯ ವಕೀಲ ಫಾಲಿ ನಾರಿಮನ್ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ನೇಮಿಸಿತು. ಆ ಸಮಿತಿಗಳು ಕೊಟ್ಟ ವರದಿಯನ್ನು ಆಧರಿಸಿ 2009ರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಗಳನ್ನು ಗಲಭೆಕೋರರಿಂದ ವಸೂಲಿ ಮಾಡಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು. ( ಆಸಕ್ತರು ತೀರ್ಪಿನ ಪೂರ್ಣಪಠ್ಯವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://indiankanoon.org/doc/169453366/ )

ಆ ನಂತರವೂ ಈ ಸೂತ್ರಗಳನ್ನು ಯಾವ ಸರ್ಕಾರಗಳು ಪಾಲಿಸಲಿಲ್ಲ.

2018ರಲ್ಲಿ ಪದ್ಮಾವತಿ ಚಲನಚಿತ್ರವನ್ನು ನಿಷೇಧಿಸಬೇಕೆಂದು ರಾಜಪುತ್ ಕರ್ನಿ ಸೇನಾ ಸದಸ್ಯರು ಹಾಗೂ ಅವರಿಗೆ ಕುಮ್ಮಕ್ಕಾಗಿ ಸಂಘಪರಿವಾರವು ಇಡಿ ಉತ್ತರ ಭಾರತದಾದ್ಯಂತ ಹಿಂಸಾಚಾರಗಳನ್ನು ನಡೆಸಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಪಾಸ್ತಿಗಳಿಗೆ ಅಪಾರ ನಷ್ಟವುಂಟು ಮಾಡಿದರು.  ಆಗ ಆ ಚಿತ್ರ ನಿರ್ಮಾಪಕರು ತಮಗಾಗಿರುವ ಭೌತಿಕ ಹಾಗು ಭಾವನಾತ್ಮಕ ನಷ್ಟಗಳಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟಿನ ಮೊರೆ ಹೋದರು. 

ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಈ ಪ್ರಕರಣದಲ್ಲಿ (Kodungallur Film Society vs Union Of India on 1 October, 2018)ಮತ್ತೊಮ್ಮೆ 2009ರ ತನ್ನ ತೀರ್ಪನ್ನು ಉಲ್ಲೇಖಿಸಿ ಅದನ್ನು ಮತ್ತಷ್ಟು ಸಮಕಾಲೀನಗೊಳಿಸಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತು. 

ಸಾರಾಂಶದಲ್ಲಿ 2018ರ ಸುಪ್ರೀಂಕೋರ್ಟ್ ನ ಮಾರ್ಗದರ್ಶಿ ಸೂತ್ರವು ಹೇಳುವುದಿಷ್ಟು: 

- ಯಾವುದಾದರೂ ಸಂಘ-ಸಂಸ್ಥೆ ಅಥವಾ ರಾಜಕೀಯ ಪಕ್ಷಗಳು ಸಾರ್ವಜನಿಕ ಪ್ರದರ್ಶನಗಳಿಗೆ ಕರೆಕೊಟ್ಟಾಗ ಸಂಭವಿಸುವ ಆಸ್ತಿಪಾಸ್ತಿ ನಷ್ಟಗಳಿಗೆ ಸರಿಸಮನಾದ ಪರಿಹಾರವನ್ನು ಗಲಭೆಕೋರರಿಂದಲೇ ಪಡೆದುಕೊಳ್ಳಬೇಕು. 

- ಆದರೆ ಈ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನ ಎರಡು ಅಂಶಗಳು ಸಾಬೀತಾಗಬೇಕು. ಒಂದು- ಗಲಭೆಗಳಿಂದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂಬುದು. ಎರಡು- ನಿರ್ದಿಷ್ಟ ಆರೋಪಿ ಆ ಗಲಭೆಗಳಲ್ಲಿ ಪಾಲ್ಗೊಂಡಿದ್ದರು ಎಂಬುದು..

- ಅದಕ್ಕಾಗಿ ಸರ್ಕಾರವು ಆಸ್ತಿ-ಪಾಸ್ತಿ ನಷ್ಟಗಳ ವಿವರವಾದ ಯಾದಿ ಮತ್ತು ಗಲಭೆಕೋರರ ಪಟ್ಟಿಯನ್ನು ತಯಾರಿಸಿ ಹೈಕೋರ್ಟಿಗೆ ಸಲ್ಲಿಸಿ "ಕ್ಲೈಮ್ ಕಮಿಷನರ್" ನೇಮಿಸಲು ಕೋರ್ಟನ್ನು ಕೋರಬೇಕು. 

- ಹೈಕೋರ್ಟು, ಹಾಲಿ ಅಥವಾ ನಿವೃತ್ತ ಹೈಕೋರ್ಟು ಅಥವಾ ಜಿಲ್ಲಾ ನ್ಯಾಯಾಧೀಶರನ್ನು "ಕ್ಲೈಮ್ ಕಮಿಷನರ್" ರನ್ನಾಗಿ ನೇಮಿಸಬೇಕು. 

- ಕ್ಲೈಮ್ ಕಮಿಷನರ್ ಅವರು ಹೈಕೋರ್ಟಿನ ಮೂಲಕ ಗಲಭೆಕೋರರ ಹಾಗು ಆಸ್ತಿ ನಷ್ಟಗಳ ದಾವೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವಿವರವಾದ ವರದಿಯನ್ನು ಹೈಕೋರ್ಟಿಗೆ ಸಲ್ಲಿಸಬೇಕು. 

- ಹೈಕೋರ್ಟು ನಂತರ ಎರಡು ಪಕ್ಷಗಳ ವಾದಗಳನ್ನು ಪರಿಶೀಲಿಸಿ ಹೊಣೆಗಾರಿಕೆಯನ್ನು ನಿಗದಿಪಡಿಸುವುದು 

ಆದರೆ ಈ ಆದೇಶದಲ್ಲಿ ಎಲ್ಲಕ್ಕಿಂತ ಮುಖ್ಯವಾದ ಹಾಗು ಕರ್ನಾಟಕ ಸರ್ಕಾರ ಕಾವಲ್ ಭೈರಸಂದ್ರ ಪ್ರಕರಣದಲ್ಲಿ ಅವಗಣನೆ ಮಾಡುತ್ತಿರುವ ವಿಷಯ ಒಂದಿದೆ. 

ಯಾವ್ಯಾವ ನಷ್ಟಗಳಿಗೆ ಪರಿಹಾರ ವಸೂಲಿ ಮಾಡಬಹುದು ಎಂಬ ವಿಷಯದಲ್ಲಿ ಸುಪ್ರೀಂ ಕೋರ್ಟು :
1) ಸಾರ್ವಜನಿಕ ಆಸ್ತಿ 
1) ಖಾಸಗಿ ಆಸ್ತಿ 
1) ಪ್ರಾಣ ಹಾನಿ ಹಾಗೂ 
1) ಗಲಭೆಗಳನ್ನು ನಿಯಂತ್ರಿಸಲು ಸರ್ಕಾರಿ ಆಡಳಿತ ಯಂತ್ರಾಂಗಕ್ಕೆ ಆದ ವೆಚ್ಚಗಳಿಗೆ ಗಲಭೆಕೋರರಿಂದ ಪರಿಹಾರವನ್ನು ವಸೂಲಿ ಮಾಡಬಹುದೆಂದು ಹೇಳುತ್ತದೆ. 

ಇವೆಲ್ಲದರಷ್ಟೇ ಮುಖ್ಯವಾಗಿ ಯಾವುದಾದರೂ ಸಾರ್ವಜನಿಕ ಪ್ರತಿರೋಧಗಳಿಂದ ಒಂದು ಸಮುದಾಯ, ವರ್ಗ, ವ್ಯಕ್ತಿ ಅಥವಾ ಸಂಸ್ಥೆಯ ಘನತೆ, ಭಾವನೆ, ಶ್ರದ್ಧೆ ಅಥವಾ ಪ್ರತಿಷ್ಠೆಗಳಿಗೆ ಧಕ್ಕೆಯುಂಟಾಗಿದ್ದರೆ ಅದಕ್ಕೆ "Exemplary Damage" ಅನ್ನು ವಸೂಲಿ ಮಾಡಬಹುದೆಂದು ಮತ್ತು ಅದರ ಪ್ರಮಾಣ ಭೌತಿಕ ಡ್ಯಾಮೇಜಿನ ಪರಿಹಾರದ ಎರಡು ಪಟ್ಟಿರಬಹುದೆಂದು ಸುಪ್ರೀಂಕೋರ್ಟ್ ಆದೇಶ ತಿಳಿಸುತ್ತದೆ ಹಾಗೂ ಬಹಳಷ್ಟು ಬಾರಿ ಈ ಗಲಭೆಗಳಲ್ಲಿ ಭಾಗವಹಿಸುವ ಕಾಲಾಳುಗಳಿಗಿಂತ ಅವರ ಹಿಂದಿರುವ ನಾಯಕರೇ ಹೆಚ್ಚು ಅಪರಾಧಿಗಳಾಗಿದ್ದು ಅವರಿಂದಲೇ ಹೆಚ್ಚಿನ ಪರಿಹಾರವನ್ನು ವಸೂಲಿ ಮಾಡಬೇಕೆಂದು ಕೂಡಾ ನಿರ್ದೇಶಿಸುತ್ತದೆ . 

(ಈ ತೀರ್ಪಿನ ಪೂರ್ಣ ಪಠ್ಯವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು: https://indiankanoon.org/doc/139119795/ )

ಆದ್ದರಿಂದ, ಕಾವಲ್ ಭೈರಸಂದ್ರ ಪ್ರಕರಣದಲ್ಲಿ ಆಸ್ತಿಪಾಸ್ತಿ ನಷ್ಟಗಳಿಗೆ ಗಲಭೆಕೋರರನ್ನು ಹೊಣೆ ಮಾಡಲು ಹೊರಟಿರುವ ಬಿಜೆಪಿ ಸರ್ಕಾರ ಅದಕ್ಕೂ ಮುಂಚೆ ಪ್ರವಾದಿ ಬಗ್ಗೆ ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ ಹಾಕಿ ಇಡೀ ಸಮುದಾಯದ ನಂಬಿಕೆ, ಶ್ರದ್ಧೆ ಹಾಗು ಪ್ರತಿಷ್ಠೆಗಳಿಗೆ ಹಾನಿಯುಂಟು ಮಾಡಿದ ನವೀನ್ ಕುಮಾರ್ ಇಂದ "Exemplary Damage" ವಸೂಲಿ ಮಾಡಬೇಕಲ್ಲವೇ?

ನವೀನ್ ಕುಮಾರನ ಫೇಸ್ಬುಕ್ ಪೋಸ್ಟ್ ಬೇರೆಯವರ ಪೋಸ್ಟಿನ ಪಾರ್ವರ್ಡ್ ಆಗಿದ್ದು...ಆ ಪೋಸ್ಟನ್ನು ಸೃಷ್ಟಿಸಿದವರಿಂದಲೂ Exemplary Damage" ವಸೂಲಿ ಮಾಡಬೇಕಲ್ಲವೇ? ಹಾಗೆಯೇ, "ಬಾಬ್ರಿ ಮಸೀದಿ" ಯನ್ನು ನಾಶ ಮಾಡಿ ಇಡೀ ಭಾರತದ ಮುಸ್ಲಿಂ ಸಮುದಾಯದ ಶ್ರದ್ಧೆಯನ್ನು ಹಾಗೂ ಸಂವಿಧಾನದಲ್ಲಿ ನಂಬಿಕೆಯಿದ್ದವರನ್ನು ಅಪಮಾನಿಸಿ ಸುಪ್ರೀಂ ಕೋರ್ಟಿನ ಪ್ರಕಾರವೇ egregious crime- ಹೀನಾಯ ಅಪರಾಧ ಮಾಡಿದ ಸಂಘಪರಿವಾರದ ನಾಯಕರಿಂದಲೂ Exemplary Damage ವಸೂಲಿ ಮಾಡಬೇಕಲ್ಲವೇ?

ಅದನ್ನು ಮಾಡದೆ, ಅತ್ಯಂತ ಬಡತನದಲ್ಲಿ ಬದುಕುತ್ತಿರುವ ಹಾಗು ಆ ಬಡತನದಿಂದ ಉಂಟಾಗುವ ಅಭದ್ರತೆ ಹಾಗು ಅಸಹಾಯಕತೆಯಿಂದಾಗಿಯೇ ಹೆಚ್ಚೆಚ್ಚು ಧರ್ಮಾವಲಂಬಿಗಳಾಗುವ ಹಾಗು ಅದರಿಂದಾಗಿಯೇ ಧರ್ಮನಿಂದನೆಯಾದರೆ ಘಾಸಿಗೊಂಡು ಆಕ್ರೋಶಕ್ಕೆ ಒಳಗಾಗಾಗುವ ಜನರಿಂದ "ನಷ್ಟ ವಸೂಲಿ" ಮಾಡುವುದು ತಪ್ಪಲ್ಲವೇ? 

ಮೇಲಾಗಿ , ಭಾರತದ ದಂಡ ಸಂಹಿತೆಯ ಪ್ರಕಾರ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ನೀಡಬೇಕು. ಈ ಬಡಜನರ ಆಸ್ತಿಪಾಸ್ತಿಗಳಾಗಿರುವ ಗುಡಿಸಲನ್ನೋ, ತಳ್ಳೋಗಾಡಿಗಳನ್ನೊ, ಆಟೋಗಳನ್ನೋ ಮುಟ್ಟುಗೋಲು ಮಾಡಿಕೊಂಡರೆ, ಯಾವುದೇ ಅಪಾರಾಧಗಳಲ್ಲಿ ಭಾಗವಹಿಸದ ಆರೋಪಿಯ ಕುಟುಂಬಕ್ಕೂ ಶಿಕ್ಷೆ ವಿಧಿಸಿದಂತಾಗುವುದಿಲ್ಲವೇ? ಇದರಿಂದ ನಿರಪರಾಧಿಗಳಿಗೆ ಶಿಕ್ಷೆ ಕೊಟ್ಟಂತಾಗುವುದಿಲ್ಲವೇ? ಇದು ಭಾರತದ ನ್ಯಾಯ ಸಂಹಿತೆಗೆ ತದ್ವಿರುದ್ಧವಲ್ಲವೇ? 

ಜಸ್ಟ್ ಆಸ್ಕಿಂಗ್

- ಶಿವಸುಂದರ್

Writer - - ಶಿವಸುಂದರ್

contributor

Editor - - ಶಿವಸುಂದರ್

contributor

Similar News