ಕೊರೋನವನ್ನೂ ಮೆಟ್ಟಿನಿಲ್ಲಬಲ್ಲ ಮನುಷ್ಯ ನೆರೆ-ಪ್ರವಾಹದಿಂದ ತಪ್ಪಿಸಿಕೊಳ್ಳಬಲ್ಲನೇ?
21ನೇ ಶತಮಾನದ 20ನೇ ವರ್ಷ ಭೂಮಿಯ ಇತಿಹಾಸದಲ್ಲಿ ಮನುಷ್ಯನ ಪಾಲಿಗೆ ಘೋರ ವರ್ಷವಾಗಿ ಉಳಿದುಹೋಗಲಿದೆ... ಜಗತ್ತಿನಾದ್ಯಂತ ವಿಪರೀತ ನೆರೆ, ಬರ, ಹಸಿವು ಆಕ್ರಂದನ, ಮಹಾವಲಸೆ ಒಂದು ಕಡೆಯಾದರೆ, ಮನುಷ್ಯನ ಅಟ್ಟಹಾಸವನ್ನು ಮುರಿದು ಮೂಲೆಗೆ ಕೂರಿಸಿದ ಮಹಾವೈರಾಣು ಕೊರೋನ ಇನ್ನೊಂದು ಕಡೆ. ಮನುಷ್ಯ ಕೊರೋನವನ್ನು ಮೆಟ್ಟಿನಿಲ್ಲಬಹುದೇನೊ! ಆದರೆ ನೆರೆ-ಪ್ರವಾಹದಿಂದ ತಪ್ಪಿಸಿಕೊಳ್ಳಲಾರ. ಕಾರಣ, ಮನುಷ್ಯನ ತಪ್ಪುಅರಿವಾದರೂ ಕಾಲ ಮೀರಿಹೋಗುತ್ತಿದೆ!!
ಮೇಘಗಳು ಸ್ಫೋಟಗೊಳ್ಳುತ್ತಿವೆ, ಬೆಟ್ಟಗಳು ಕುಸಿಯುತ್ತಿವೆ, ನದಿಗಳು ಉಕ್ಕಿ ಹರಿಯುತ್ತಿವೆ, ಪ್ರಪಂಚದಾದ್ಯಂತ ಹಳ್ಳಿಪಟ್ಟಣಗಳೆನ್ನದೆ ಕೊಚ್ಚಿಕೊಂಡು ಹೋಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಪ್ರಪಂಚದಾದ್ಯಂತ ಹೆಚ್ಚೆಚ್ಚು ಪ್ರವಾಹಗಳು ಸೃಷ್ಟಿಯಾಗುತ್ತಿವೆ. ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯ, ಏಶ್ಯ ಹೀಗೆ ಪ್ರಪಂಚದ ಎಲ್ಲಾ ಖಂಡಗಳ ದೇಶಗಳಲ್ಲೂ ಮಳೆ ಮಿತಿಮೀರಿ ಸುರಿಯುತ್ತಿದೆ. ಕಳೆದು ಎರಡು ತಿಂಗಳಲ್ಲಿ ಬಿಹಾರ ರಾಜ್ಯದಲ್ಲಿ ಹೊಸದಾಗಿ ಕಟ್ಟಿದ ಮೂರು ಸೇತುವೆಗಳು ಮಳೆಗೆ ಹೊಚ್ಚಿಕೊಂಡುಹೋಗಿವೆ. ಮುಂದಿನ ವರ್ಷಗಳಲ್ಲಿ ಇದೇ ರೀತಿ ಮಳೆ ಸುರಿಯುತ್ತಿದ್ದರೆ ಪ್ರಪಂಚದಾದ್ಯಂತ ನೂರಾರು ಅಣೆಕಟ್ಟುಗಳು, ಸೇತುವೆಗಳು ಕೊಚ್ಚಿಕೊಂಡು ಹೋಗುವ ಲಕ್ಷಣಗಳು ಕಾಣಿಸುತ್ತಿವೆ ಎಂದರೆ ಅತಿಶಯ ಮಾತಾಗಲಾರದು. ಭಾರತದಲ್ಲಿರುವ ಬಹಳಷ್ಟು ಅಣೆಕಟ್ಟುಗಳು ಮತ್ತು ಸೇತುವೆಗಳ ವಯಸ್ಸು ಅರ್ಧ ಶತಮಾನ ತುಂಬಿದೆ. ಕೆಲವು ನೂರರ ಗಡಿಯಲ್ಲಿವೆ. ಕಳೆದ ಒಂದು ದಶಕದಿಂದ ಜಗತ್ತಿನ ಬಹಳಷ್ಟು ದೇಶಗಳು ಪ್ರವಾಹಗಳಿಂದ ತತ್ತರಿಸಿಹೋಗಿವೆ. ನಾಗರಿಕ ತೊಟ್ಟಿಲುಗಳನ್ನು ಕಟ್ಟಿಕೊಟ್ಟ ನದಿದಡಗಳು ಈಗ ಅಪಾಯಕಾರಿಯಾಗಿ ಪರಣಮಿಸಿವೆ. ಮನುಷ್ಯ ನದಿಗಳಿಗೆ ಅಡ್ಡವಾಗಿ ಅಣೆಕಟ್ಟುಗಳನ್ನು ಕಟ್ಟಿಕೊಂಡು ತಪ್ಪು ಮಾಡಿದ ಎನ್ನುವ ಅಪಾಯ ಈಗ ಗೊತ್ತಾಗುತ್ತಿದೆ. ಸಮುದ್ರ ದಡಗಳ ಗತಿಯೂ ಅದೇ ಆಗಿದೆ. ಒಟ್ಟಿನಲ್ಲಿ ಪ್ರಪಂಚದ ಅಭಿವೃದ್ಧಿ ಹೊಂದಿದ ದೇಶಗಳೂ ಸಹ ನೀರಿನಲ್ಲಿ ಮುಳುಗಿತೇಲುತ್ತಿವೆ ಎಂದರೆ ಇನ್ನು ಬಡದೇಶಗಳ ಪಾಡೇನು? ಕಳೆದು ಮೂರು ವರ್ಷಗಳಿಂದಲೂ ಸತತವಾಗಿ ಅರ್ಧ ಕರ್ನಾಟಕ ನೆರೆಯಲ್ಲಿ ಮುಳುಗಿ ತೇಲುತ್ತಿದೆ. ಅರ್ಧ ಭಾರತದ ಕತೆಯೂ ಅದೇ ಆಗಿದೆ. ಇಷ್ಟೆಲ್ಲ ಅನಾಹುತಗಳಿಗೆ ಕಾರಣ ನಾಲ್ಕಾರು ದಶಕಗಳಿಂದ ವಿಜ್ಞಾನಿಗಳು ಹೇಳುತ್ತಿದ್ದ ‘‘ಜಾಗತಿಕ ತಾಪಮಾನ’’. ಹವಾಮಾನದಲ್ಲಿ ತಾಪಮಾನ ಏರುತ್ತಿದ್ದಂತೆ ವಾತಾವರಣ ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಅದು ತಕ್ಷಣವೇ ಧಾರಾಕಾರ ಮಳೆಯಾಗಿ ಸುರಿಯುತ್ತದೆ. ವರ್ಷದಿಂದ ವರ್ಷಕ್ಕೆ ಮಳೆ ಬೀಳುವುದು ಹೆಚ್ಚಾಗುತ್ತಲೇ ಹೋಗುತ್ತಿದೆ ಎಂಬುದನ್ನು ವಿಜ್ಞಾನಿಗಳು ಪ್ರಯೋಗಗಳ ಮೂಲಕ ತೋರಿಸುತ್ತಿದ್ದಾರೆ. ಇದೇ ಜೂನ್ 3ರಂದು ‘‘ವಾಟರ್ ರಿಸೋರ್ಸಸ್ ರಿಸರ್ಚ್’’ ಸಂಚಿಕೆಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಜಾಗತಿಕ ತಾಪಮಾನ ಏರಿಕೆ ತೀವ್ರಗೊಳ್ಳಲು ಪ್ರಾರಂಭಿಸಿದ್ದು ಕಳೆದ ಶತಮಾನದ ಮಧ್ಯದಿಂದ, ಕೈಗಾರೀಕರಣ ಪ್ರಾರಂಭವಾದಾಗಿನಿಂದ. ಮಳೆ, ಹವಾಮಾನ ವ್ಯವಸ್ಥೆಯ ಒಂದು ಅತ್ಯಗತ್ಯ ಭಾಗವಾಗಿದೆ. ಆದರೆ ಭಾರೀ ಮಳೆ ಸಮುದಾಯಗಳನ್ನು ಧ್ವಂಸಗೊಳಿಸುತ್ತದೆ, ಕೃಷಿಯನ್ನು ನಾಶಮಾಡುತ್ತದೆ ಮತ್ತು ಫಲವತ್ತಾದ ನೆಲ ಕೊಚ್ಚಿಹೋಗಿ ಬರಡಾಗುತ್ತದೆ. ಕಳೆದ ವರ್ಷ ಧಾರಾಕಾರ ಮಳೆ ಸುರಿದ ಕಾರಣ ಬೆಳೆಗಳು ನಾಶವಾದವು, ಜೋಳ ಮತ್ತು ಸೋಯಾಬೀನ್ ನೆಡುವುದು ವಿಳಂಬವಾಗಿ ಆಫ್ರಿಕಾ ಖಂಡದಲ್ಲಿ ಅಪಾರ ನಷ್ಟವಾಗಿ ರೈತರು ಹಸಿವಿನಿಂದ ಬಳಲಬೇಕಾಯಿತು. ಪ್ರವಾಹ ಮತ್ತು ಚಂಡಮಾರುತಗಳಿಂದ ಕೊಳಚೆ ನೀರು ಮನೆ, ಬೀದಿಗಳಿಗೆ ನುಗ್ಗಿ ಮನೆಗಳು ಮುಳುಗಿಹೋಗಿ ಜನರು ಬೀದಿಪಾಲಾದರು. ನದಿ ದಡಗಳು ಮತ್ತು ಕಡಲ ದಂಡೆಗಳಲ್ಲಿ ವಾಸಿಸುತ್ತಿದ್ದ ಜನರ ಬದುಕು ಚೆಲ್ಲಾಪಿಲ್ಲಿಯಾಗಿ ಲಕ್ಷಾಂತರ ಜನರು ನೀರುಪಾಲಾದರು. ಪ್ರವಾಹ, ಭೂಕುಸಿತ, ಮೂಲಸೌಕರ್ಯಗಳ ನಾಶ, ನೀರಿನ ಮಾಲಿನ್ಯ-ರೋಗಗಳು, ಸಂಚಾರದ ಅವ್ಯವಸ್ಥೆ ಹೀಗೆ ಅನೇಕ ಸಮಸ್ಯೆಗಳು ಎದುರಾದವು. ಒಟ್ಟಿನಲ್ಲಿ ಹವಾಮಾನ ಬಿಕ್ಕಟ್ಟಿನಿಂದ ಜಲಚಕ್ರ ಅಪಾಯಕಾರಿ ರೀತಿಯಲ್ಲಿ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹವಾಮಾನ ಬಿಕ್ಕಟ್ಟು ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಾಕಷ್ಟು ವಿಚಾರಗಳು ನಮಗೆ ತಿಳಿದಿವೆ. ಇಷ್ಟಕ್ಕೂ ಹವಾಮಾನ ಏಕೆ ಬದಲಾವಣೆಯಾಗುತ್ತದೆ ಎನ್ನುವ ಪ್ರಶ್ನೆಗಳು ಏಳುತ್ತವೆ. ಮಳೆಯಾಗುವ ಮೋಡಗಳಿಗೆ ತೇವಾಂಶ ಅಥವಾ ನೀರಿನ ಆವಿ ಎರಡು ರೀತಿಯಲ್ಲಿ ಪ್ರವೇಶವಾಗುತ್ತದೆ. ಒಂದು ಅಧ್ಯಯನದ ಪ್ರಕಾರ ಭೂಮಿಯ ಮೇಲೆ ಬೀಳುವ ಸುಮಾರು ಶೇ. 60 ಮಳೆ ಮತ್ತು ಹಿಮವು ಸಾಗರಗಳಿಂದ ಹುಟ್ಟುವ ತೇವಾಂಶವಾದರೆ, ಉಳಿದ ಶೇ. 40 ಮಳೆ ಭೂಖಂಡಗಳ ಮೇಲಿನ ಜಲಚಕ್ರದಿಂದ ಅಥವಾ ಮರುಬಳಕೆಯ ನೀರಿನಿಂದ ಬರುತ್ತದೆ. ಚೀನಾದಲ್ಲಿ ಬೀಳುವ ಹೆಚ್ಚು ಮಳೆ ಮತ್ತು ಹಿಮ ಯುರೇಷಿಯಾ ಮೇಲೆ ಆವಿಯಾಗುವ ತೇವಾಂಶದಿಂದ ಬರುವ ಮಳೆಯಾಗಿದೆ. ವಾತಾವರಣ ಬೆಚ್ಚಗಾಗುತ್ತಿದ್ದಂತೆ ಅದು ಹೆಚ್ಚು ತೇವಾಂಶವನ್ನು ಹೀರಿಕೊಳ್ಳುತ್ತದೆ. ಮಳೆಯ ತೀವ್ರತೆ ಒಂದು ನಿರ್ದಿಷ್ಟ ಸಮಯದಲ್ಲಿ ವಾತಾವರಣ ಎಷ್ಟು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವಾತಾವರಣ ಬೆಚ್ಚಗಾಗುತ್ತಿದ್ದಂತೆ ಸಾಗರಗಳಿಂದ ಆವಿಯಾಗುವ ಪ್ರಮಾಣವೂ ಹೆಚ್ಚುತ್ತದೆ. ಒಲೆಯ ಮೇಲಿನ ಮಡಿಕೆ ಬಿಸಿಯಾಗುವ ರೀತಿ ನಮ್ಮ ಭೂಮಿಯ ತಾಪಮಾನ ಹೆಚ್ಚುತ್ತದೆ. ಆಗ ನೀರು ಹೆಚ್ಚೆಚ್ಚು ಆವಿಯಾಗಿ ಮಳೆ ಸುರಿಯುತ್ತದೆ. ಹವಾಮಾನ ಬದಲಾವಣೆ ವಿಭಿನ್ನ ಪ್ರದೇಶಗಳ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದರ ಇನ್ನೊಂದು ಮುಖವೆಂದರೆ ಅಷ್ಟೇ ತೀವ್ರವಾಗಿ ಭೂಮಿಯ ಮೇಲೆ ಬರಗಳನ್ನು ಸೃಷ್ಟಿಸುತ್ತದೆ. ಉತ್ತರಧ್ರುವದಲ್ಲಿ ಮತ್ತು ಯುರೋಪ್ ದೇಶಗಳಲ್ಲಿ ಈ ವರ್ಷ ಸರಾಸರಿ ತಾಪಮಾನ 30 ಡಿಗ್ರಿ ಸೆ.ಗ್ರೇಡ್ ಏರಿದೆ. ಉತ್ತರ ಅಮೆರಿಕ ಈಗ ಬಿಸಿಲಿಂದ ತತ್ತರಿಸುತ್ತಿದೆ. ಭೂಮಿಯ ತಾಪಮಾನ ಏರಿದಂತೆ ವಾತಾವರಣ ಬದಲಾಗುತ್ತದೆ? ಬೆಚ್ಚಗಿನ ವಾತಾವರಣ ನೀರನ್ನು ಬೇಗನೆ ಆವಿಯಾಗಿಸುತ್ತದೆ. ಒಣ ಪ್ರದೇಶಗಳು ಹೆಚ್ಚು ಒಣಗುತ್ತವೆ. ಮುಂದಿನ ದಿನಗಳಲ್ಲಿ ಕೆಲವು ಪ್ರದೇಶಗಳು ಬರ ಮತ್ತು ಹೆಚ್ಚಿನ ಪ್ರವಾಹಗಳನ್ನು ಪಡೆಯುತ್ತವೆ. (ಇದು ಬೇರೆಬೇರೆ ವರ್ಷಗಳಲ್ಲಿ!) ಶುಷ್ಕ ವಾತಾವರಣ ದೀರ್ಘವಾದಲ್ಲಿ ಮಣ್ಣಿನಲ್ಲಿನ ತೇವವನ್ನು ಹೀರಿಕೊಳ್ಳುತ್ತದೆ. ಫಲಿತಾಂಶ ಭಾರೀ ಮಳೆ ಸುರಿಯುತ್ತದೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ದೀರ್ಘವಾದ ಬರಗಾಲದ ನಂತರ ಭಾರೀ ಮಳೆಯಿಂದ ಪ್ರವಾಹಗಳು ಬಂದವು. ಅಂದರೆ ವಿಜ್ಞಾನಿಗಳು ಸರಿಯಾಗಿಯೇ ಹೇಳುತ್ತಿದ್ದಾರೆ. ಉಷ್ಣವಲಯದಲ್ಲಿ ಒಂದು ಡಿಗ್ರಿ ಸೆ.ಗ್ರೇಡ್ ತಾಪಮಾನ ಹೆಚ್ಚಿದರೆ ಶೇ. 10 ಮಳೆ ಹೆಚ್ಚುತ್ತದೆ ಎಂದು ತಿಳಿಯುತ್ತದೆ.
21ನೇ ಶತಮಾನದ 20ನೇ ವರ್ಷ ಭೂಮಿಯ ಇತಿಹಾಸದಲ್ಲಿ ಮನುಷ್ಯನ ಪಾಲಿಗೆ ಘೋರ ವರ್ಷವಾಗಿ ಉಳಿದುಹೋಗಲಿದೆ... ಜಗತ್ತಿನಾದ್ಯಂತ ವಿಪರೀತ ನೆರೆ, ಬರ, ಹಸಿವು ಆಕ್ರಂದನ, ಮಹಾವಲಸೆ ಒಂದು ಕಡೆಯಾದರೆ, ಮನುಷ್ಯನ ಅಟ್ಟಹಾಸವನ್ನು ಮುರಿದು ಮೂಲೆಗೆ ಕೂರಿಸಿದ ಮಹಾವೈರಾಣು ಕೊರೋನ ಇನ್ನೊಂದು ಕಡೆ. ಮನುಷ್ಯ ಕರೋನವನ್ನು ಮೆಟ್ಟಿನಿಲ್ಲಬಹುದೇನೊ! ಆದರೆ ನೆರೆ-ಪ್ರವಾಹದಿಂದ ತಪ್ಪಿಸಿಕೊಳ್ಳಲಾರ. ಕಾರಣ, ಮನುಷ್ಯನ ತಪ್ಪುಅರಿವಾದರೂ ಕಾಲ ಮೀರಿಹೋಗುತ್ತಿದೆ!!