ಬಂಡವಾಳ ಮಾರುಕಟ್ಟೆ, ಮನರಂಜನೆ ಮತ್ತು ಅನೈತಿಕತೆ

Update: 2020-09-05 19:30 GMT

ಮಾದಕ ದ್ರವ್ಯದ ದಂಧೆ ಇತ್ತೀಚೆಗಷ್ಟೇ ತಲೆದೋರಿದೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಕುಗ್ರಾಮಗಳಲ್ಲೂ, ಮಹಾನಗರದ ಪ್ರತಿಷ್ಠಿತ ಮಾಲ್‌ಗಳಲ್ಲೂ, ಪಟ್ಟಣಗಳ ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲೂ ಮೂಗಿನ ಮೂಲಕ ಏರಿಸುವ, ಬಾಯಿಯ ಮೂಲಕ ಸೇವಿಸುವ, ಪಾನೀಯದ ಮೂಲಕ ಬಳಸುವ ಮಾದಕ ದ್ರವ್ಯ ಲಭ್ಯವಿರುವುದು ಸರಕಾರಕ್ಕೂ ತಿಳಿದಿದೆ, ಪೊಲೀಸ್ ಇಲಾಖೆಗೂ ತಿಳಿದಿದೆ. ಆದರೆ ಇದರ ವಿರುದ್ಧ ಕ್ರಮ ಜರುಗಿಸುವ ಸ್ಥೈರ್ಯ ಆಡಳಿತಾರೂಢ ಪಕ್ಷಗಳಿಗೆ, ಸರಕಾರಗಳಿಗೆ ಇಲ್ಲ ಎನ್ನುವುದೂ ಸ್ಪಷ್ಟ. ಏಕೆಂದರೆ ಇಲ್ಲಿ ಬಂಡವಾಳದ ಹರಿವು ಮತ್ತು ಮಾರುಕಟ್ಟೆಯ ಲಾಭ ಮುಖ್ಯವಾಗುತ್ತದೆ. ಕೊರೋನ ಸಂಕಷ್ಟದ ನಡುವೆಯೂ ಅಬಕಾರಿ ಆದಾಯಕ್ಕಾಗಿ ಹೆಂಡದಂಗಡಿಗಳನ್ನು ತೆರೆದ ಸರಕಾರದ ನಿರ್ಧಾರ ಇದನ್ನೇ ನಿರೂಪಿಸಿದ್ದಲ್ಲವೇ? ಮತ್ತೇರಿಸುವ ದ್ರವ್ಯದಲ್ಲಿ ಮಾದಕ ವಸ್ತು ಇಲ್ಲ ಎಂದು ನಿರ್ಧರಿಸಲು ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಖಂಡಿತವಾಗಿಯೂ ಇಲ್ಲ.


ಘಮ ಘಮ ಪರಿಮಳ ಸೂಸುವ ಶ್ರೀಗಂಧದ ಹೆಸರಿನಲ್ಲಿ ಮನರಂಜನೆಯ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿರುವ ಕರ್ನಾಟಕದ ಚಿತ್ರರಂಗ ಇದೀಗ ಮಾದಕ ದ್ರವ್ಯದ ದುರ್ನಾತದಿಂದ ಕೊಳೆಯುವಂತಾಗಿರುವುದು ದುರಂತ ಎನಿಸಿದರೂ ಅಚ್ಚರಿಯ ವಿಚಾರವೇನಲ್ಲ. ಭಾರತದಲ್ಲಿ ಇಂದಿಗೂ ಸಹ ವಿವಿಧ ಭಾಷೆಗಳಲ್ಲಿ ಸಾಮಾಜಿಕ ಕಳಕಳಿಯುಳ್ಳ, ಮಾನವೀಯ ಸಂದೇಶವನ್ನು ಹೊತ್ತ ಚಲನಚಿತ್ರಗಳು ನಿರ್ಮಾಣವಾಗುತ್ತಿದ್ದರೂ, ಒಟ್ಟಾರೆಯಾಗಿ ಸಿನೆಮಾ ರಂಗ ಮನರಂಜನೆಯನ್ನು ಬಂಡವಾಳದ ಮಾರುಕಟ್ಟೆಯ ಸರಕಿನಂತೆ ಬಿಕರಿ ಮಾಡುತ್ತಿರುವುದು ಸ್ಪಷ್ಟ. ಮುನಿರತ್ನ ನಿರ್ಮಿಸಿದ ‘ಕುರುಕ್ಷೇತ್ರ’ ಚಿತ್ರ ಪೌರಾಣಿಕ ನೆಲೆಯುಳ್ಳದ್ದಾದರೂ ಚಿತ್ರದಲ್ಲಿ ಬಳಸಿರುವ ಸಂಭಾಷಣೆಯ ವೈಖರಿ ಮತ್ತು ವಿಧಾನ ನೇರವಾಗಿ ಮಾರುಕಟ್ಟೆಗೆ ಸ್ಪಂದಿಸುವಂತೆಯೇ ಇರುವುದು ದುರಂತ ಎನಿಸಿದರೂ ಸತ್ಯ. ಯಶ್ ನಿರ್ಮಾಣದ ‘ಕೆಜಿಎಫ್’ ಸಹ ಇದೇ ನಿಟ್ಟಿನಲ್ಲಿ ಸಾಗುತ್ತದೆ. ಚಿನ್ನದ ಗಣಿ ಕಾರ್ಮಿಕರ ಶ್ರಮ ಮತ್ತು ಶ್ರಮ ಶಕ್ತಿಯನ್ನು ನೇಪಥ್ಯದಲ್ಲಿರಿಸಿ ಮಾಫಿಯಾ ಕೇಂದ್ರಿತ ಕಥೆ ಹೆಣೆಯುವ ಮೂಲಕ ‘ಕೆಜಿಎಫ್’ ಬಂಡವಾಳ ಮಾರುಕಟ್ಟೆಗೆ ನೆರವಾಗಿದೆ.

ಈ ಪರಿಸರದಲ್ಲೇ ಇಡೀ ಕನ್ನಡ ಚಿತ್ರರಂಗವನ್ನು ಬೆಚ್ಚಿಬೀಳಿಸುವಂತಹ ಡ್ರಗ್ ಮಾಫಿಯಾ ಮತ್ತು ಡ್ರಗ್ ದಂಧೆ ಮುನ್ನೆಲೆಗೆ ಬಂದಿದೆ. ಕೆಲವು ಪ್ರತಿಷ್ಠಿತ ನಟ ನಟಿಯರು ಈಗ ಸಾರ್ವಜನಿಕರ ದೃಷ್ಟಿಯಲ್ಲಿ ಅಪರಾಧಿಗಳಾಗಿ ಕಾಣುತ್ತಿದ್ದಾರೆ. ಸುದ್ದಿಮನೆಗಳಿಗೆ ಈ ಸುದ್ದಿ ಮತ್ತೊಮ್ಮೆ ಟಿಆರ್‌ಪಿ ಹೆಚ್ಚಿಸುವ ಇಂಧನವಾಗಿ ಪರಿಣಮಿಸಿದೆ. ಇಂದ್ರಜಿತ್ ಲಂಕೇಶ್ ಅವರ ಸ್ಫೋಟಕ ಮಾಹಿತಿಯಿಂದ ಯಾವುದೇ ಸ್ಫೋಟ ಸಂಭವಿಸದಿದ್ದರೂ ಸುದ್ದಿಮನೆಗಳ ಸ್ಟುಡಿಯೋಗಳಲ್ಲಿ ಸದ್ದು ಜೋರಾಗಿಯೇ ಕೇಳಿಸುತ್ತಿದೆ. ಆದರೆ ಡಿಜಿಟಲ್ ಯುಗದ ಬಂಡವಾಳ ವ್ಯವಸ್ಥೆಯಲ್ಲಿ ಇದಾವುದೂ ಅಚ್ಚರಿ ಮೂಡಿಸುವ ವಿಚಾರವಲ್ಲ. ಕನ್ನಡ ಸಿನೆಮಾ ರಂಗದಲ್ಲಿ ಇಂದಿಗೂ ಪ್ರತಿಭಾವಂತ ಕಲಾವಿದರು ಹೇರಳವಾಗಿದ್ದರೂ, ಪರದೆಯ ಮೇಲೆ ವಿಜೃಂಭಿಸಲು ಬಂಡವಾಳ ಮತ್ತು ಮಾರುಕಟ್ಟೆಯೇ ಮಾನದಂಡವಾಗಿದೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಅತ್ಯುತ್ತಮ ನಟ ಅಥವಾ ನಟಿ, ಅತ್ಯುತ್ತಮ ಚಿತ್ರ ಎಂಬ ಮಾನದಂಡಗಳನ್ನು ನಿರ್ಧರಿಸುವ ವಿಮರ್ಶಾತ್ಮಕ ನೆಲೆಯನ್ನು ಕನ್ನಡ ಚಿತ್ರರಂಗ ಎಂದೋ ಕಳೆದುಕೊಂಡಿರುವುದನ್ನೂ ಗಮನಿಸಬೇಕು. ಹಾಗಾಗಿಯೇ ಎಷ್ಟೋ ಪ್ರತಿಭಾವಂತ ಹಿರಿಯ ನಟ ನಟಿಯರು ಮೂಲೆಗುಂಪಾಗಿದ್ದಾರೆ. ಹಾವಭಾವಗಳು ಮತ್ತು ಗ್ರಾಫಿಕ್ಸ್ ಮೋಡಿಯ ಮೂಲಕ ಮನರಂಜನೆ ಒದಗಿಸುವವರು ನಕ್ಷತ್ರಗಳಂತೆ ಮೆರೆಯುತ್ತಿದ್ದಾರೆ. ಇದರ ಪರಿಣಾಮವನ್ನು ಚಿತ್ರಕಥೆಯಲ್ಲೂ, ಕಥಾ ಹಂದರದಲ್ಲೂ, ಅಷ್ಟೇಕೆ ಇತ್ತೀಚಿನ ವಾಟ್ಸ್‌ಆ್ಯಪ್ ಪ್ರೇರಿತ ಹಾಡುಗಳಲ್ಲೂ ಗಮನಿಸಬಹುದು. ನೂರಾರು ಕೋಟಿ ಬಂಡವಾಳ ಹೂಡಿ ನಿರ್ಮಿಸಲಾಗುವ ಚಿತ್ರಗಳು ಮಾರುಕಟ್ಟೆಯಲ್ಲಿ ಲಾಭ ಗಳಿಸುವುದು ಮುಖ್ಯವಾಗುತ್ತದೆ. ಇಲ್ಲಿ ಸದಭಿರುಚಿ ಅಥವಾ ಸೂಕ್ಷ್ಮಸಂವೇದನೆಗಳು ಬಲಿಯಾಗುತ್ತವೆ. ಕೆಲವೊಮ್ಮೆ ಮಾನವೀಯ ಮೌಲ್ಯವೂ ಇಲ್ಲವಾಗುತ್ತದೆ ಎನ್ನಲು ಕನ್ನಡ ಸುದ್ದಿಮನೆಗಳ ‘‘ತುಪ್ಪದ ಹುಡುಗಿ’’ ವ್ಯಾಖ್ಯಾನವೇ ಸಾಕ್ಷಿ.

ಮಾದಕ ದ್ರವ್ಯದ ದಂಧೆ ಇತ್ತೀಚೆಗಷ್ಟೇ ತಲೆದೋರಿದೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಕುಗ್ರಾಮಗಳಲ್ಲೂ, ಮಹಾನಗರದ ಪ್ರತಿಷ್ಠಿತ ಮಾಲ್‌ಗಳಲ್ಲೂ, ಪಟ್ಟಣಗಳ ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲೂ ಮೂಗಿನ ಮೂಲಕ ಏರಿಸುವ, ಬಾಯಿಯ ಮೂಲಕ ಸೇವಿಸುವ, ಪಾನೀಯದ ಮೂಲಕ ಬಳಸುವ ಮಾದಕ ದ್ರವ್ಯ ಲಭ್ಯವಿರುವುದು ಸರಕಾರಕ್ಕೂ ತಿಳಿದಿದೆ, ಪೊಲೀಸ್ ಇಲಾಖೆಗೂ ತಿಳಿದಿದೆ. ಆದರೆ ಇದರ ವಿರುದ್ಧ ಕ್ರಮ ಜರುಗಿಸುವ ಸ್ಥೈರ್ಯ ಆಡಳಿತಾರೂಢ ಪಕ್ಷಗಳಿಗೆ, ಸರಕಾರಗಳಿಗೆ ಇಲ್ಲ ಎನ್ನುವುದೂ ಸ್ಪಷ್ಟ. ಏಕೆಂದರೆ ಇಲ್ಲಿ ಬಂಡವಾಳದ ಹರಿವು ಮತ್ತು ಮಾರುಕಟ್ಟೆಯ ಲಾಭ ಮುಖ್ಯವಾಗುತ್ತದೆ. ಕೊರೋನ ಸಂಕಷ್ಟದ ನಡುವೆಯೂ ಅಬಕಾರಿ ಆದಾಯಕ್ಕಾಗಿ ಹೆಂಡದಂಗಡಿಗಳನ್ನು ತೆರೆದ ಸರಕಾರದ ನಿರ್ಧಾರ ಇದನ್ನೇ ನಿರೂಪಿಸಿದ್ದಲ್ಲವೇ? ಮತ್ತೇರಿಸುವ ದ್ರವ್ಯದಲ್ಲಿ ಮಾದಕ ವಸ್ತು ಇಲ್ಲ ಎಂದು ನಿರ್ಧರಿಸಲು ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಖಂಡಿತವಾಗಿಯೂ ಇಲ್ಲ.

ಯುವ ಸಮಾಜವನ್ನು ವಿನಾಶದ ಅಂಚಿಗೆ ಕೊಂಡೊಯ್ಯುವ ಎಂಆರ್‌ಪಿ, ಟ್ರೂ ಸ್ಪಿರಿಟ್ಸ್ ಮತ್ತು ಪಬ್, ಬಾರ್ ರೆಸ್ಟೋರೆಂಟ್‌ಗಳು ಬೀದಿಗೊಂದು ತೆರೆಯಲಾಗುತ್ತಿರುವುದನ್ನು ಸರಕಾರ ಗಮನಿಸುತ್ತಿದೆಯೇ? ಇಲ್ಲಿ ಡ್ರಗ್ಸ್ ಸರಬರಾಜು ಆಗುತ್ತಿಲ್ಲ ಎಂಬ ಖಚಿತತೆ ಆಡಳಿತ ವ್ಯವಸ್ಥೆಗೆ ಇದೆಯೇ? ಇದ್ದರೂ ಕ್ರಮ ಕೈಗೊಳ್ಳುವುದಿಲ್ಲ. ಈ ಪರಿಸರದಲ್ಲೇ ಸ್ಯಾಂಡಲ್‌ವುಡ್ ಮಾದಕ ದ್ರವ್ಯದ ದುರ್ನಾತದಿಂದ ಬಳಲುತ್ತಿದೆ. ಬಂಡವಾಳ ಯಾವ ಮೂಲದಿಂದ ಹರಿದು ಬಂದರೂ, ಲಾಭದಾಯಕ ಹೂಡಿಕೆಯಾದರೆ ಯಾವ ಮಾನದಂಡಗಳೂ, ಮೌಲ್ಯಗಳೂ ಅನ್ವಯಿಸುವುದಿಲ್ಲ ಎನ್ನುವುದು ಬಂಡವಾಳ ವ್ಯವಸ್ಥೆಯ ನಿಯಮ. ಬಾಲಿವುಡ್ ಚಿತ್ರರಂಗದಲ್ಲಿ ಮಾಫಿಯಾ ಮತ್ತು ಭೂಗತ ದೊರೆಗಳ ನಂಟು ಇದನ್ನು ನಿರೂಪಿಸಿದೆ. ಸ್ಯಾಂಡಲ್‌ವುಡ್ ಸಹ ಇದಕ್ಕೆ ಅಪವಾದವಾಗಿರಲು ಸಾಧ್ಯವಿಲ್ಲ. ಪರದೆಯ ಮೇಲೆ ಮೌಲ್ಯ ಮತ್ತು ನೀತಿಯನ್ನು ಬೋಧಿಸುವ ನಾಯಕ ನಟರು ನಿಜ ಜೀವನದಲ್ಲಿ ಆದರ್ಶಪ್ರಾಯರಾಗಿರುತ್ತಾರೆ ಎಂಬ ಕಲ್ಪನೆಗೆ ಮಾರುಕಟ್ಟೆಯ ಜಗುಲಿಯಲ್ಲಿ ಜಾಗವೇ ಇರುವುದಿಲ್ಲ.

ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಯುಗದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಎಲ್ಲ ವಾಮಮಾರ್ಗಗಳನ್ನೂ ಬಳಸಿಕೊಂಡೇ ಸಮಾಜದ ಎಲ್ಲ ವಲಯಗಳಲ್ಲೂ ತನ್ನ ನೆಲೆ ಕಂಡುಕೊಳ್ಳುತ್ತದೆ. ಬೃಹತ್ ಬಜೆಟ್ ಸಿನೆಮಾ ಎನ್ನುವ ಹೆಗ್ಗಳಿಕೆಯೊಂದಿಗೇ ಚಲನ ಚಿತ್ರಗಳು ಬಿಡುಗಡೆಯಾಗುವಾಗಲೇ ಈ ಕೋಟ್ಯಂತರ ರೂ.ಗಳ ಬಂಡವಾಳ ಹೂಡಿಕೆಗೆ ಪೂರಕವಾದ ಒಂದು ಭೂಮಿಕೆ ಸಿದ್ಧವಾಗಿದೆ ಎಂದು ನಾವು ಗ್ರಹಿಸಬಹುದು. ಆಡಳಿತ ವ್ಯವಸ್ಥೆಗೆ ಈ ಮಾರ್ಗದ ಮೂಲಕ ಒದಗಿಬರುವ ಮನರಂಜನಾ ತೆರಿಗೆ ಬೊಕ್ಕಸಕ್ಕೆ ಹೆಚ್ಚುವರಿ ಆದಾಯವನ್ನು ತಂದುಕೊಡುವುದರಿಂದ ಅಕ್ರಮ ಆಸ್ತಿಯಾಗಲೀ, ಅಕ್ರಮ ಸಂಪಾದನೆಯಾಗಲೀ ಕಾನೂನು ಬಾಹಿರ ಎನಿಸುವುದಿಲ್ಲ. ಕೆಲವು ಚಿತ್ರ ನಟರ, ನಿರ್ಮಾಪಕರ ಅಕ್ರಮ ಆಸ್ತಿಯ ಬಗ್ಗೆ ಜಗತ್ತೇ ಕುಸಿದುಹೋಗುವ ಹಾಗೆ ಅಬ್ಬರಿಸಿದ ಸುದ್ದಿಮನೆಗಳು ನಂತರ ಮೌನಕ್ಕೆ ಶರಣಾಗಿದ್ದು, ಆದಾಯ ತೆರಿಗೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಸಾರ್ವಜನಿಕರಿಗೆ ತಿಳಿಸದೆ ವಿಷಯವನ್ನೇ ಮುಚ್ಚಿಹಾಕಿದ್ದು, ಯಾರಿಗೂ ಯಾವುದೇ ಶಿಕ್ಷೆಯಾಗದಿರುವುದು ಇವೆಲ್ಲವನ್ನೂ ನೋಡಿದಾಗ ಬಂಡವಾಳದ ಮಹಾತ್ಮೆ ಮತ್ತು ಪ್ರಭಾವಳಿಯ ಆಳವನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಮಾರುಕಟ್ಟೆಯಲ್ಲಿ ಚಲಾವಣೆ ಪಡೆಯುವ ಗುಪ್ತ ನಿಧಿಯಂತೆ ಕಾಣುತ್ತಾರೆ. ಸ್ಟಾರ್ ವ್ಯಾಲ್ಯೂ ಅಥವಾ ತಾರಾ ಮೌಲ್ಯವೂ ಸಹ ಅಭಿನಯ ಸಾಮರ್ಥ್ಯಕ್ಕಿಂತಲೂ ಈ ಮಾರುಕಟ್ಟೆ ಮಾನದಂಡದಿಂದಲೇ ನಿರ್ಧಾರವಾಗುತ್ತದೆ. ಚಿತ್ರ ನಿರ್ಮಾಪಕರು ಬಂಡವಾಳ ಹೂಡುವ ಮುನ್ನ ಈ ಮಾನದಂಡಗಳನ್ನು ಆಧರಿಸಿಯೇ ವಿತರಕರನ್ನೂ ಅವಲಂಬಿಸಿರುತ್ತಾರೆ. ಹಾಗಾಗಿಯೇ ಹಲವಾರು ಚಿತ್ರಗಳಲ್ಲಿ ಹಿರಿಯ ನಟರನ್ನು ನೆಪಮಾತ್ರಕ್ಕೆ ಬಳಸಿಕೊಳ್ಳಲಾಗುತ್ತದೆ. ಅನೇಕ ಹಿರಿಯ ನಟ ನಟಿಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತದೆ. ಯಾವುದೇ ಸಾಮಾಜಿಕ ಸಂದೇಶವಿಲ್ಲದ, ಸಂವೇದನಾಶೀಲ ಆಶಯಗಳಿಲ್ಲದ ಚಿತ್ರಗಳಿಗೂ ಅತ್ಯುತ್ತಮ ಎಂದು ವಿಮರ್ಶೆ ಮಾಡುವ ಮೂಲಕ ಮಾರುಕಟ್ಟೆಗೆ ನೆರವಾಗುವ ವಿಮರ್ಶಕರ ದಂಡು ಹೆಚ್ಚಾಗಿಯೇ ಇದೆ. ಇದೇ ವೇಳೆ ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಸಂದೇಶಾತ್ಮಕ ಚಿತ್ರ ನಿರ್ಮಿಸುವವರು ಕೈಸುಟ್ಟುಕೊಳ್ಳಬೇಕಾಗುತ್ತದೆ.

1990ರ ನಂತರ ಕ್ರೀಡಾ ಕ್ಷೇತ್ರದಲ್ಲೂ ಇದೇ ಸಮಸ್ಯೆ ತಲೆದೋರಿದ್ದನ್ನು ಇಲ್ಲಿ ಸ್ಮರಿಸಬಹುದು. ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಮುಂತಾದ ಅಕ್ರಮಗಳಿಗೆ ಐಪಿಎಲ್ ಮೂಲಕ ಮಾನ್ಯತೆಯನ್ನು ನೀಡಲಾಯಿತು. ಅನೇಕ ಪ್ರತಿಭಾವಂತ ಕ್ರಿಕೆಟ್ ಪಟುಗಳು ಅವಕಾಶವಂಚಿತರಾದರು. ಬಂಡವಾಳವೇ ಕ್ರಿಕೆಟ್ ಮೈದಾನವನ್ನು ನಿಯಂತ್ರಿಸಲಾರಂಭಿಸಿದ ಮೇಲೆ ಆಟದ ಸ್ವರೂಪವೇ ಬದಲಾಯಿತು. ಈಗ ಚಿತ್ರರಂಗ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ಡ್ರಗ್ ಮಾಫಿಯಾ ಒಂದು ಆಯಾಮವಷ್ಟೇ. ಯುವ ಪೀಳಿಗೆಗೆ, ನವ ಪೀಳಿಗೆಗೆ ಒಂದು ಆದರ್ಶಪ್ರಾಯ ಸಂದೇಶ ನೀಡುವಂತಹ ಬೆರಳೆಣಿಕೆಯಷ್ಟು ಚಿತ್ರಗಳು ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಸರಿಲ್ಲದಂತೆ ಮರೆಯಾಗಿಬಿಡುತ್ತವೆ. ಪ್ರಶಸ್ತಿಗಾಗಿ ಪ್ರತಿಷ್ಠಿತರ, ಪ್ರಭಾವಿ ವ್ಯಕ್ತಿಗಳಿಗೆ ದುಂಬಾಲು ಬೀಳುವ ಪರಂಪರೆಗೆ ಬಂಡವಾಳ ಮತ್ತು ಮಾರುಕಟ್ಟೆ ಹೊಸ ಸ್ಪರ್ಶ ನೀಡಿರುವುದನ್ನು ಗಮನಿಸಬಹುದು. ಚಲನ ಚಿತ್ರೋತ್ಸವಗಳಲ್ಲಿ ಅವಕಾಶ ಪಡೆಯಲು ಹಲವು ಉತ್ತಮ ಚಿತ್ರಗಳ ನಿರ್ಮಾಪಕರು ಹರಸಾಹಸ ಪಟ್ಟಿರುವುದನ್ನೂ ನೋಡಿದ್ದೇವೆ.

ಈ ಹಿನ್ನೆಲೆಯಲ್ಲೇ ಸ್ಯಾಂಡಲ್‌ವುಡ್ ಇಂದು ಕೊಳೆತು ನಾರುವಂತೆ ತೋರುತ್ತಿದೆ. ಕನ್ನಡ ಚಿತ್ರರಂಗಕ್ಕೆ ಮೌಲ್ಯಯುತ ಮಾರ್ಗದರ್ಶನ ನೀಡುವಂತಹ ಹಿರಿಯ ನಟರು ಇಲ್ಲವಾಗಿದ್ದಾರೆ. ಇರುವ ಕೆಲವು ಹಿರಿಯ ನಟರು ಮೌನ ವಹಿಸಿದ್ದಾರೆ ಅಥವಾ ಈ ಕಾಲಘಟ್ಟದಲ್ಲಿ ಇಂತಹವರ ಮೌಲ್ಯಯುತ ಮಾತುಗಳಿಗೆ ಕಿಮ್ಮತ್ತು ಇರುವುದಿಲ್ಲ ಎಂಬ ಸತ್ಯವನ್ನು ಈ ಹಿರಿಯರು ಅರಿತಿರಬೇಕು. ಸುದ್ದಿಮನೆಗಳಿಗೆ ನಾಯಕಿಯರನ್ನು ಬಣ್ಣಿಸುವಾಗ ದೊರೆಯುವ ಉಪಮೆಗಳು ವಕ್ರವಾಗಿಯೂ, ವಿಚಿತ್ರವಾಗಿಯೂ ಇರುವುದನ್ನು ನೋಡಿದರೆ ಮಹಿಳಾ ಸಂವೇದನೆಯೇ ಇಲ್ಲ ಎನ್ನುವುದು ಖಚಿತವಾಗುತ್ತದೆ. ಕನ್ನಡದ ಹಿರಿಯ ನಟಿಯರು ಈ ಕುರಿತು ಮಾತನಾಡದಿರುವುದು ಅಚ್ಚರಿ ಮೂಡಿಸುತ್ತದೆ. ಇಡೀ ಸ್ಯಾಂಡಲ್‌ವುಡ್ ತನ್ನ ಘಮಲು ಕಳೆದುಕೊಂಡಿರುವುದನ್ನು ಈ ಬೆಳವಣಿಗೆಗಳು ಸ್ಪಷ್ಟಪಡಿಸಿದೆ. ಇದು ಒಬ್ಬ ನಟಿಯ ಅಥವಾ ಮಾಹಿತಿ ನೀಡುವ ಮೂಲಕ ಮೌಲ್ಯದ ಚೌಕಟ್ಟಿನಲ್ಲಿ ಬಿಂಬಿಸಿಕೊಳ್ಳುವ ಕಲೆಯಿಲ್ಲದ ಕಲಾವಿದರ ಪ್ರಶ್ನೆಯಲ್ಲ. ಇದು ವ್ಯವಸ್ಥೆಯ ಪ್ರಶ್ನೆ.

ಇದು ಬಂಡವಾಳ ಮತ್ತು ಮಾರುಕಟ್ಟೆ ಲಾಭದ ಪ್ರಶ್ನೆ. ಇತ್ತೀಚಿನ ಚಿತ್ರಗಳಲ್ಲಿ ನಾಯಕ ಐದೂ ಬೆರಳುಗಳನ್ನು ಅಗಲಿಸಿ ಒಮ್ಮೆ ಮುಷ್ಟಿ ಬಿಗಿದರೆ ಖಳನಾಯಕನ ಸೇನಾನಿಗಳು ಗಗನ ಚುಂಬಿಸುವವರಂತೆ ಹಾರಿ ಮೈಲುಗಟ್ಟಲೆ ದೂರ ದೊಪ್ಪನೆ ಬೀಳುವ ದೃಶ್ಯವನ್ನು ಕಲ್ಪಿಸಿಕೊಂಡಾಗ, ಇದೊಂದು ರೂಪಕದಂತೆ ಕಾಣುತ್ತದೆ. ಬಂಡವಾಳದ ಮಾರುಕಟ್ಟೆಯನ್ನು ಈ ಮುಷ್ಟಿಯ ರೂಪದಲ್ಲಿ ಕಾಣಬಹುದು. ನೈಜ ಪ್ರತಿಭೆ ಹೊಂದಿರುವವರನ್ನು, ಅವಕಾಶವಂಚಿತರನ್ನು ನೆಲಕ್ಕುದುರುವ ಸೇನಾನಿಗಳ ರೂಪದಲ್ಲಿ ಕಾಣಬಹುದು. ಇವೆರಡರ ನಡುವೆ ಡ್ರಗ್ ಮಾಫಿಯಾ, ಭೂಗತ ಲೋಕ, ಮಾಫಿಯಾ ಅಡಗಿರುವುದನ್ನು ಕಾಣಲಾಗದಿದ್ದರೆ ಅದು ನಮ್ಮ ದೃಷ್ಟಿದೋಷವಷ್ಟೇ. ಮನರಂಜನೆ ಮಾರುಕಟ್ಟೆಯ ಸರಕಿನಂತೆ ಬಿಕರಿಯಾದಾಗ, ಮಾರುಕಟ್ಟೆಯ ಎಲ್ಲ ಕೊಳಚೆಯನ್ನೂ ಸಹಿಸಿಕೊಂಡೇ ಮುನ್ನಡೆಯಬೇಕಾಗುತ್ತದೆ. ಸ್ಯಾಂಡಲ್‌ವುಡ್ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News