ಕೊರೋನ ಆತಂಕಿತರಿಗೆ ಆತ್ಮಸ್ಥೈರ್ಯ ತುಂಬುವ ‘ಕೊರೋನ ಹೆದರದಿರೋಣ’

Update: 2020-09-25 19:30 GMT

ನಾಡಿನ ಜನತೆ ಕೊರೋನ ಸೋಂಕಿಗೆ ಬಲಿಯಾಗಿರುವುದಕ್ಕಿಂತ ಅದರ ವದಂತಿಗಳಿಗೆ ಬಲಿಯಾಗಿರುವುದೇ ಹೆಚ್ಚು. ಕೊರೋನದ ಕುರಿತಂತೆ ಜನರ ಮಾಹಿತಿ ಕೊರತೆಯನ್ನೇ ಬಂಡವಾಳ ಮಾಡಿಕೊಂಡ ಬೃಹತ್ ಆಸ್ಪತ್ರೆಗಳು, ರಾಜಕಾರಣಿಗಳು ಸಾಕಷ್ಟು ಲಾಭ ಮಾಡಿಕೊಂಡರು. ಹೇರಿದ ಲಾಕ್‌ಡೌನ್ ಅಂತೂ ಅಘೋಷಿತ ಆರ್ಥಿಕ ತುರ್ತುಪರಿಸ್ಥಿತಿಯಾಗಿ ಜನರನ್ನು ಕಾಡಿತು. ಇಂತಹ ಸಂದರ್ಭದಲ್ಲಿ, ಕೊರೋನದ ಕುರಿತಂತೆ ಜನರಲ್ಲಿ ಜಾಗೃತಿಯನ್ನು ಬಿತ್ತಿದವರಲ್ಲಿ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರಮುಖರು.

ರಾಜಕಾರಣಿಗಳ ಬೇಜವಾಬ್ದಾರಿ, ವೈದ್ಯರ ಸ್ವಾರ್ಥ, ಜನರ ವೌಢ್ಯ ಮೊದಲಾದವುಗಳ ಬಗ್ಗೆ ಜಾಗೃತಿಯನ್ನು ಬಿತ್ತುತ್ತಾ ಬಂದರು. ಕೊರೋನ ಮಾರಣಾಂತಿಕ ಕಾಯಿಲೆಯೆಂದು ಸರಕಾರದ ನೇತೃತ್ವದಲ್ಲೇ ಪ್ರಚಾರ ನಡೆಯುತ್ತಿರುವಾಗ, ಅದು ಮಾರಣಾಂತಿಕ ಅಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು. ಈ ನಿಟ್ಟಿನಲ್ಲಿ ಅವರು ಬರೆದ ಲೇಖನಗಳ ಸಂಗ್ರಹವೂ ಪ್ರಕಟವಾಯಿತು. ‘ಕೊರೋನ ಹೆದರದಿರೋಣ’ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ ಮತ್ತು ಡಾ. ಬಾಲಸರಸ್ವತಿ ಪಣಂಬೂರು ಇವರು ಜೊತೆಯಾಗಿ ಬರೆದಿರುವ ಕೃತಿ. ಕೊರೋನದಿಂದ ದಾರಿಗೆಟ್ಟ ಜನರಿಗೆ ಈ ಕೃತಿ ದಾರಿ ದೀಪವಾಗಿದೆ.
  
ಈ ಕೃತಿಯಲ್ಲಿ ಒಟ್ಟು 18 ಲೇಖನಗಳಿವೆ. ಆರಂಭದಲ್ಲಿ ಫ್ಲೂ ಮತ್ತು ಕೊರೋನದ ನಡುವಿನ ನಂಟನ್ನು ಕೃತಿ ಪರಿಚಯಿಸುತ್ತದೆ. ಬಳಿಕ ಕೊರೋನ ಎಂದರೆ ಏನು ಎನ್ನುವುದನ್ನು ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ದಕ್ಕುವಂತೆ ಲೇಖಕರು ವಿವರಿಸುತ್ತಾರೆ. ಕೊರೋನದ ಇತಿಹಾಸ, ವಿಶ್ವವ್ಯಾಪಿಯಾದ ಬಗೆ, ಕೊರೋನದ ರೋಗ ಲಕ್ಷಣಗಳು, ಈ ಸೋಂಕಿನ ಗಂಭೀರ ಪರಿಣಾಮಗಳು, ಸೋಂಕಿಗೆ ಸಂಬಂಧಿಸಿದ ಪರೀಕ್ಷೆ, ರೋಗ ಲಕ್ಷಣಗಳಿದ್ದರೆ ವೈದ್ಯರ ಸಹಾಯವೇ ಇಲ್ಲದೆ ನಿವಾರಿಸುವ ಬಗೆ, ಕೊರೋನ ಚಿಕಿತ್ಸೆಗೆ ಸರಕಾರದ ಮಾರ್ಗ ಸೂಚಿಗಳು ಮೊದಲಾದ ಅಂಶಗಳನ್ನು ಕೃತಿ ಚರ್ಚಿಸುತ್ತದೆ. ಇದೇ ಸಂದರ್ಭದಲ್ಲಿ ಕೊರೋನ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯಬಹುದೇ, ಬೇಡವೇ ಎನ್ನುವ ಪರವಿರೋಧಗಳನ್ನು ಮುಂದಿಟ್ಟು ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ.

ಹಿರಿಯರನ್ನು, ಅನ್ಯ ರೋಗಗಳುಳ್ಳವರನ್ನು ಕೊರೋನ ಸೋಂಕಿನಿಂದ ರಕ್ಷಿಸುವ ಬಗೆ, ಹೊಸ ಕೊರೋನ ಸೋಂಕಿಗೆ ಲಸಿಕೆಗಳು, ಹೊಸ ಕೊರೋನ ವೈರಸ್‌ನಿಂದ ಮುಕ್ತಿ ಸಾಧ್ಯವೇ?, ಮೃತರಾದವರ ಅಂತಿಮ ಸಂಸ್ಕಾರದ ಬಗೆ ಹೇಗೆ? ಎನ್ನುವ ಕುರಿತಂತೆ ಸಮಗ್ರ ವಿವರಗಳನ್ನು ಕೃತಿ ನೀಡುತ್ತದೆ. ಇದು ಬರೀ ವೈದ್ಯಕೀಯ ಮಾಹಿತಿಗಳುಳ್ಳ ಕೃತಿಯಲ್ಲ. ಒಂದು ರೋಗವನ್ನು ಮುಂದಿಟ್ಟು ಕೊಂಡು ನಡೆಯುತ್ತಿರುವ ರಾಜಕೀಯಗಳನ್ನೂ ಅವರು ಕೃತಿಯಲ್ಲಿ ಚರ್ಚಿಸುತ್ತಾರೆ. ರೋಗವನ್ನು ಗೆಲ್ಲುವ ಸಂದರ್ಭದಲ್ಲಿ ಎದುರಾಗುವ ಮಾನವೀಯ ಸವಾಲುಗಳನ್ನು ಎದುರಿಸುವ ಬಗೆಯನ್ನು ಲೇಖಕರು ವಿವರಿಸುತ್ತಾರೆ. ದೇಶದ ಆರೋಗ್ಯದ ಕುರಿತಂತೆ ಸರಕಾರ ತನ್ನ ಚಿಂತನೆಗಳನ್ನು ತಿದ್ದಿಕೊಳ್ಳುವುದಕ್ಕೆ ಕೃತಿ ಕರೆ ನೀಡುತ್ತದೆ.

‘ಸಾಂಕ್ರಾಮಿಕ ಕಾಯಿಲೆಗಳಂತಹ ಆಪತ್ಕಾಲದಲ್ಲಿ ಯಾವ ಉಪಯೋಗಕ್ಕೂ ಬಾರದ ಆಯುಷ್ ಪದ್ಧತಿಗಳ ಮೇಲೆ ಹಣವನ್ನು ವ್ಯಯಿಸುತ್ತಿರುವ ಬಗ್ಗೆ ಮರು ಚಿಂತನೆಯಾಗ ಬೇಕು’ ಎಂದು ಆಗ್ರಹಿಸುವ ಲೇಖಕರು, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಮಾಹಿತಿ, ಆರ್ಥಿಕ ಪ್ರಗತಿಗಳೆಲ್ಲವೂ ಎಷ್ಟೇ ಆಗಿರಲಿ, ಅವು ಮನುಷ್ಯರಲ್ಲಿ ಒಳ್ಳೆಯತನವನ್ನು, ಉಳಿದೆಲ್ಲದರ ಬಗ್ಗೆ ಸಹಾನುಭೂತಿಯನ್ನು, ವೈಜ್ಞಾನಿಕ ಮನೋವೃತ್ತಿಯನ್ನು, ನಿತ್ಯ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯ ವಿವೇಚನೆಗಳಿಂದ ಎದುರಿಸುವ ಸಾಮರ್ಥ್ಯವನ್ನು ಉಂಟು ಮಾಡುವ ಖಾತರಿಯಿಲ್ಲ ಎನ್ನುವುದಕ್ಕೆ ಹೊಸ ಕೊರೋನ ಸೋಂಕು ಅತ್ಯುತ್ತಮ ನಿದರ್ಶನವಾಗಿದೆ ಎಂದು ಲೇಖಕರು ವಿಷಾದ ವ್ಯಕ್ತಪಡಿಸುತ್ತಾರೆ. ಕೊರೋನ ಸೋಂಕಿನ ವಿವಿಧ ಆಯಾಮಗಳನ್ನು ತೆರೆದಿಡುವ ಈ ಕೃತಿ, ಕೊರೋನ ಆತಂಕ ಕಾಲದಲ್ಲಿ ಜನರ ಪಾಲಿಗೆ ರೋಗನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ.

ನವ ಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 152. ಮುಖಬೆಲೆ 150 ರೂಪಾಯಿ. ಆಸಕ್ತರು 080- 22161900 ದೂರವಾಣಿಯನ್ನು ಸಂಪರ್ಕಿಸಬಹುದು.

-ಕಾರುಣ್ಯ

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News