ಮಂಡಲ್ ಚಳವಳಿ ಮತ್ತು ಸಾಮಾಜಿಕ ನ್ಯಾಯದ ಅಂತಿಮ ದಿನಗಳು

Update: 2020-11-02 19:30 GMT

ಲಾಲೂ ಪ್ರಸಾದ್ ಯಾದವ್‌ರ ಸಾಮಾಜಿಕ ನ್ಯಾಯ ಮತ್ತು ಸೆಕ್ಯುಲರಿಸಂ ಇಂದು ತೇಜಸ್ವಿ ಯಾದವ್ ಅವರಿಗೆ ಹೊರೆಯಾಗಿರುವ ಈ ಸಂಕೀರ್ಣ ರಾಜಕಾರಣದ ವಿಚಿತ್ರ ತಿರುವುಗಳು ಪರಿಣಿತ ರಾಜಕೀಯ ಶಾಸ್ತ್ರಜ್ಞರನ್ನೂ ತಬ್ಬಿಬ್ಬುಗೊಳಿಸಿದೆ. ಬಿಹಾರ ಚುನಾವಣಾ ಫಲಿತಾಂಶ ಏನೇ ಬರಲಿ, ಆದರೆ ಲಾಲೂ ಯುಗ ನೇಪಥ್ಯಕ್ಕೆ ಜಾರಿಕೊಂಡಿರುವುದಂತೂ ದಿಟ. ಸೆಕ್ಯುಲರಿಸಂ ರಾಜಕಾರಣಕ್ಕೆ ದೊಡ್ಡ ಹೊಡೆತ ಬೀಳುವುದೂ ಸಹ ವಾಸ್ತವ. ಆದರೆ ಪರ್ಯಾಯವಾಗಿ ತೇಜಸ್ವಿ ಯಾದವ್ ಲೆಗಸಿ ಏನು? ಇದು ಸ್ವತಃ ಅವರಿಗೇ ಗೊತ್ತಿರುವಂತಿಲ್ಲ. ಲಾಲೂ ಪ್ರಸಾದ್ ಯಾದವ್‌ಗೆ ಎಲ್ಲಾ ಮಿತಿಗಳ ನಡುವೆ ವಿಮೋಚನೆ ರಾಜಕಾರಣದ ತಾತ್ವಿಕತೆ ಅರಿವಿತ್ತು. ಆದರೆ ತೇಜಸ್ವಿ ಯಾದವ್ ಕಾಲದಲ್ಲಿ ಇದರ ಭವಿಷ್ಯವೂ ಡೋಲಾಯಮಾನವಾಗಿದೆ.


ಗತಕಾಲದ ಪ್ರಮಾದಗಳಿಂದ ಪಾಠ ಕಲಿಯದಿದ್ದರೆ ಇತಿಹಾಸವು ಕಠೋರವಾಗಿ ನಿರ್ಣಯಿಸುತ್ತದೆ ಎನ್ನುವುದು ರೂಢಿಗತ ಹೇಳಿಕೆ. 1990ರಲ್ಲಿ ಆಗಿನ ಪ್ರಧಾನ ಮಂತ್ರಿ ವಿ.ಪಿ.ಸಿಂಗ್ ಉದ್ಯೋಗ ಮತ್ತು ಶೈಕ್ಷಣಿಕ ವಲಯದಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27 ಪ್ರಮಾಣದ ಮೀಸಲಾತಿ ನಿಗಿದಿಪಡಿಸುವ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಆದೇಶ ಹೊರಡಿಸಿ ರಾಜಕೀಯವಾದ ದಿಟ್ಟ ನಿರ್ಧಾರ ತೆಗೆದುಕೊಂಡರು. ರಾಜಕೀಯ ತಜ್ಞ ಜೆಫರ್‌ಲಾಟ್ ಇದನ್ನು ‘‘ಮೌನ ಕ್ರಾಂತಿ’’ ಎಂದು ಕರೆದರು. ಆಗ ಮಂಡಲ್ ಸಾಮಾಜಿಕ ನ್ಯಾಯದ ಕ್ರಾಂತಿಯ ವಿರುದ್ಧ ಬಿಜೆಪಿ ಕಮಂಡಲದ ಮತಾಂಧ ರಾಜಕೀಯವನ್ನು ಪ್ರತಿಕ್ರಾಂತಿಯ ರೂಪದಲ್ಲಿ ದೇಶದಲ್ಲಿ ಪ್ರಚಾರ ಮಾಡತೊಡಗಿತ್ತು. ಇದು ದಮನಿತರ ವಿರುದ್ಧ ಸೇಡಿನ ಸ್ವರೂಪದಲ್ಲಿತ್ತು. ಇದರ ಭಾಗವಾಗಿ ಬಹುಸಂಖ್ಯಾತ ಮತೀಯವಾದವನ್ನು ಧ್ರುವೀಕರಣಗೊಳಿಸಲು ರಥಯಾತ್ರೆ ಪ್ರಾರಂಭಿಸಿದ ಅಡ್ವಾಣಿಯವರನ್ನು 23, ಅಕ್ಟೋಬರ್ 1990ರಂದು ಬಿಹಾರದ ಸಮಷ್ಟಿಪುರದಲ್ಲಿ ತಡೆದು ನಿಲ್ಲಿಸಿದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅಡ್ವಾಣಿಯವರನ್ನು ಬಂಧಿಸಿದರು. ಈ ಬಂಧನವು ಸಾಮಾಜಿಕ ನ್ಯಾಯ ವರ್ಸಸ್ ಹಿಂದುತ್ವ ರಾಜಕಾರಣದ ಸಂಘರ್ಷಕ್ಕೆ ನಾಂದಿ ಹಾಡಿತು.

ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಹಿಂದುತ್ವದ ಮತಾಂಧತೆಯ ವಿರುದ್ಧ ಮೊಳಗಿಸಿದ ಸಾಮಾಜಿಕ ನ್ಯಾಯದ ಕಹಳೆ ಸೈದ್ಧ್ದಾಂತಿಕ ಸ್ಪಷ್ಟ್ಟತೆಯಿಂದ ಕೂಡಿತ್ತು. ಸೆಕ್ಯುಲರ್ ಆಗಿತ್ತು. ಬಹುಸಂಖ್ಯಾತ ಮತೀಯತೆಯ ವಿರುದ್ಧ ಲಾಲೂ ಪ್ರಸಾದ್ ಯಾದವ್ ಕಟ್ಟಿದ ಸಬಲ್ಟ್ರಾನ್ ಸಂಘಟನೆ ರಾಜಕೀಯವಾಗಿ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿತು. ಮಂಡಲ್ ಪೂರ್ವ ದಿನಗಳಲ್ಲಿನ ಕಾಂಗ್ರೆಸ್ ಆಡಳಿತದಲ್ಲಿ ಮೇಲ್ಜಾತಿಗಳು, ಜಮೀನ್ದಾರರ ಪ್ರಾಬಲ್ಯದ ಅಟ್ಟಹಾಸದಲ್ಲಿ ಮತ್ತು ಬ್ರಾಹ್ಮಣ್ಯ-ಫ್ಯೂಡಲಿಸಂನ ಶಕ್ತಿಕೇಂದ್ರದ ದೌರ್ಜನ್ಯದ ಕಾರಣಕ್ಕೆ ಅಲ್ಲಿನ ವಂಚಿತ ಸಮುದಾಯಗಳು ಅಕ್ಷರಶಃ ನಲುಗಿ ಹೋಗಿದ್ದವು. ಮಂಡಲ್ ನಂತರದ ಕಾಲದಲ್ಲಿ ಮಧ್ಯ ಜಾತಿಗಳು ಅದರಲ್ಲೂ ಯಾದವ್ ಜಾತಿ ಇಡೀ ಅಧಿಕಾರ ರಾಜಕಾರಣವನ್ನು ತಮ್ಮ ಹತೋಟಿಗೆ ಪಡೆದುಕೊಂಡವು. ವೈ-ಎಂ ಎಂದು ಕರೆಯಲ್ಪಡುವ ಯಾದವ-ಮುಸ್ಲಿಮ್ ಜನಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಹ ಲಾಲೂ ಪ್ರಸಾದ್ ಯಾದವ್ ಮಾದರಿಯ ರಾಜಕಾರಣಕ್ಕೆ ವರವಾಯಿತು. ಲಾಲೂ ಮಾದರಿಯ ಸಾಮಾಜಿಕ ನ್ಯಾಯದ ಪ್ರಯೋಗಗಳು ಮೇಲ್ಜಾತಿಗಳ, ಮಧ್ಯಮವರ್ಗಗಳ ಬೂರ್ಜ್ವಾ, ಸ್ವಾರ್ಥ, ಜಾತಿವಾದಿ ಚಿಂತನೆಗೆ ತೀವ್ರ ಹೊಡೆತ ಕೊಟ್ಟಿತು.

ಆರಂಭದ ವರ್ಷಗಳಲ್ಲಿ ಶೋಷಿತ ಸಮುದಾಯಗಳಿಗೆ ತಲೆ ಎತ್ತಿ ನಿಲ್ಲುವಂತಹ ಘನತೆ ಕೊಟ್ಟಿತು. ಆರ್ಥಿಕ ವ್ಯವಸ್ಥೆ ದಾರಿ ತಪ್ಪಿದರೂ ಸಹ ತಳ ಸಮುದಾಯಗಳ ಪ್ರತಿನಿಧೀಕರಣದ ಕಾರಣಕ್ಕೆ ಅದು ಸಹಜ ಎಂದು ನಂಬಲಾಯಿತು. ಆದರೆ ಮುಂದಿನ ದಿನಗಳಲ್ಲಿ ಈ ಸೈದ್ಧಾಂತಿಕ ಸಂಘರ್ಷ ನಿಜವಾದ ಅರ್ಥದಲ್ಲಿ ಮತ್ತು ಪ್ರಜಾತಾಂತ್ರಿಕವಾಗಿ ತಲುಪಬೇಕಾದ ದಿಕ್ಕಿನಲ್ಲಿ ಮುಂದುವರಿಯಲಿಲ್ಲ. ಇದೇ ಕಾಲಘಟ್ಟದಲ್ಲಿ ಈ ಮಾದರಿಯ ರಾಜಕಾರಣವು ಬಿಹಾರ ಒಳಗೊಂಡಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮಧ್ಯ ಜಾತಿಗಳ ಪ್ರಾಬಲ್ಯವನ್ನು ಹೆಚ್ಚಿಸಿತು. ದಲಿತರು ಹಾಗೂ ಅತಿ ಹಿಂದುಳಿದ ಜಾತಿಗಳು (ಗದಾರಿಯಾ, ಕುಶವಾ, ತೇಲಿಸ್, ಲೋಧಿ, ನಿಶದ್ ಮುಂತಾದ ಸಮುದಾಯಗಳು) ಅಸ್ತಿತ್ವವನ್ನು ಕಳೆದುಕೊಂಡು ಅವರಲ್ಲಿ ಆತಂಕ, ಅಭದ್ರತೆ, ಅನಾಥ ಪ್ರಜ್ಞೆ ಮೂಡಿಸಿತು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯಾದವ ಜಾತಿಯ ಪ್ರಾಬಲ್ಯವು ದಲಿತರಿಗೆ ದುಸ್ವಪ್ನವಾಯಿತು. ಆದರೆ ಯಾವ ಮೇಲ್ಜಾತಿಗಳನ್ನು ನಿಯಂತ್ರಿಸಲು ಮತ್ತು ಅಂಬೇಡ್ಕರ್‌ರ ಆಶಯವಾದ ‘ಪ್ರಾತಿನಿಧ್ಯ- ಸಬಲೀಕರಣ-ವಿಮೋಚನೆ’ಗಳನ್ನು ಜಾರಿಗೊಳಿಸಲು ಸಾಮಾಜಿಕ ನ್ಯಾಯವನ್ನು ಬಳಸಿಕೊಳ್ಳಲಾಯಿತೋ ಅದೇ ಸಮೀಕರಣವು ಹತೋಟಿ ಕಳೆದುಕೊಂಡು, ತನ್ನ ಮೂಲ ಆಶಯದಿಂದ ಕಳಚಿಕೊಂಡು ಲಯ ತಪ್ಪಿತಮ್ಮ ಕಾಲ ಬುಡದಲ್ಲಿ ಕುಸಿಯುತ್ತಿರುವುದನ್ನು ಲಾಲೂ ಪ್ರಸಾದ್ ಯಾದವ್ ಅರಿಯಲಿಲ್ಲ ಅಥವಾ ನಿರ್ಲಕ್ಷಿಸಿದರು. ಇದಕ್ಕಾಗಿ ಅವರ ಪಕ್ಷ ಮತ್ತು ಸಾಮಾಜಿಕ ನ್ಯಾಯದ ರಾಜಕಾರಣ ಭಾರೀ ಬೆಲೆ ತೆರಬೇಕಾಯಿತು. ಇದು ದೇಶದ ಸೆಕ್ಯುಲರ್ ರಾಜಕಾರಣಕ್ಕೂ ಹಿನ್ನಡೆಯಾಯಿತು.

ಸಂಘ ಪರಿವಾರದ ಮತಾಂಧರೊಂದಿಗೆ ಎಂದಿಗೂ ಅಧಿಕಾರ ಹಂಚಿಕೊಳ್ಳದ ಲಾಲೂ ಪ್ರಸಾದ್ ಯಾದವ್ ಮಾದರಿಯ ಅಪ್ಪಟ ಸೆಕ್ಯುಲರ್ ರಾಜಕಾರಣವು ಸಾಮಾಜಿಕ ನ್ಯಾಯದ ರಚನಾತ್ಮಕ ಹೋರಾಟದಲ್ಲಿ ಮುಖ್ಯ ಅಂಶವಾದ ಅಧಿಕಾರದ ಸಮಾನ ಹಂಚಿಕೆ ಮತ್ತು ತಳ ಸಮುದಾಯಗಳ ಪ್ರಾತಿನಿಧೀಕರಣ ವಿಷಯದಲ್ಲಿ ನಿರಂತರತೆ ಮತ್ತು ಪಾರದರ್ಶಕತೆ ಕಂಡುಕೊಳ್ಳಲು ಎಡವಿತು. ಲಾಲೂ ಪ್ರಸಾದ್ ಯಾದವ್ ಪ್ರಭುತ್ವದ ನೆಲೆಯಿಂದ ಸಾಮಾಜಿಕ ನ್ಯಾಯ ಸಂಘಟನೆ ಮುಂಚೂಣಿಯಲ್ಲಿದ್ದರೂ ಸಹ ಅದೇ ಪ್ರಭುತ್ವದ ಪ್ರಬಲ ಮಧ್ಯ ಜಾತಿಗಳ ಪರವಾದ ನೀತಿಗಳಿಂದಾಗಿ ಇದರ ನಿಜದ ಹಕ್ಕುದಾರರಾದ ಅಂಚಿನಲ್ಲಿರುವ ಸಮುದಾಯಗಳು ಮತ್ತಷ್ಟು ದುರ್ಬಲಗೊಂಡವು. ಇದೊಂದು ವಿಪರ್ಯಾಸ. ಇದರ ಜೊತೆಗೆ ಜಂಗಲ್‌ರಾಜ್, ವಂಶಾಡಳಿತ, ಭ್ರಷ್ಟಾಚಾರ ಎಂಬ ಗುರುತರವಾದ ಆರೋಪಗಳೂ ಸಹ ಲಾಲೂ ಪ್ರಸಾದ್ ಯಾದವ್‌ರನ್ನು ಮತ್ತಷ್ಟು ಕಳಂಕಿತಗೊಳಿದವು. ಇತಿಹಾಸದ ತಪ್ಪುಗಳಿಂದ ಪಾಠ ಕಲಿಯದ ಲಾಲೂ ಪ್ರಸಾದ್ ಯಾದವ್ ಅವರು ರಾಜಕೀಯವಾಗಿ ಸತತವಾಗಿ ಸೋಲುತ್ತಲೇ ಹೋದರು.

ಗಟ್ಟಿ ತಳಪಾಯವಿಲ್ಲದ ಈ ಮಾದರಿಯ ಕಾರಣಕ್ಕೆ ಲಾಲೂ ಪ್ರಸಾದ್ ಯಾದವ್ ಅವರ ವೋಟ್ ಬ್ಯಾಂಕ್ ಆಗಿದ್ದ ಮುಸ್ಲಿಮ್ ಸಮುದಾಯವೂ ಸಹ ಸಂತ್ರಸ್ತರಾಗಿರುವುದರ ಒಂದು ಉದಾಹರಣೆ ನೋಡೋಣ. ಬಿಹಾರದಲ್ಲಿ ಮುಸ್ಲಿಮ್ ಸಮುದಾಯದ ಜನಸಂಖ್ಯೆ ಶೇ. 16ರಷ್ಟಿದ್ದರೆ ಇವರಲ್ಲಿ ಶೇ. 20 ಪ್ರಮಾಣದಲ್ಲಿ ಮೇಲ್ಜಾತಿಯವರು (ಬಿಹಾರ ಜನಸಂಖ್ಯೆಯಲ್ಲಿ ಶೇ. 3), ಶೇ.80 ಪ್ರಮಾಣದಲ್ಲಿ ಹಿಂದುಳಿದ ವರ್ಗದ ಮುಸ್ಲಿಮರಿದ್ದಾರೆ. (ಬಿಹಾರ ಜನಸಂಖ್ಯೆಯಲ್ಲಿ ಶೇ.13). ಅಂದರೆ 2015ರ ಚುನಾವಣೆಯಲ್ಲಿ ಮೇಲ್ಜಾತಿ ಮುಸ್ಲಿಮರ 18 ಶಾಸಕರು ಆಯ್ಕೆಯಾದರೆ (ಶೇ. 7.4), ಹಿಂದುಳಿದ ವರ್ಗದ ಮುಸ್ಲಿಮರ 6 ಶಾಸಕರು ಆಯ್ಕೆಯಾಗಿದ್ದಾರೆ (ಶೇ. 2.6). ಇದೇ ರೀತಿ ಮೇಲ್ಜಾತಿ ಹಿಂದುಳಿದ ವರ್ಗಗಳಾದ ಯಾದವ, ಕುರ್ಮಿ-ಕೋಯಿರಿ, ಬನಿಯಾಗಳು ಮಂಡಲ್ ನಂತರದ ರಾಜಕಾರಣದಲ್ಲಿ ಬಹುಸಂಖ್ಯೆಯಲ್ಲಿ ಅಧಿಕಾರ ಕೇಂದ್ರವನ್ನು ಕಬ್ಜಾ ಮಾಡಿಕೊಂಡಿದ್ದರು. ಆದರೆ ಬಿಹಾರ ಜನಸಂಖ್ಯೆಯ ಶೇ.25 ಪ್ರಮಾಣದಲ್ಲಿರುವ ಅತಿ ಹಿಂದುಳಿದ ಜಾತಿಗಳು (ಇಬಿಸಿ) ಈ ಮಂಡಲ್ ನಂತರದ ಮಧ್ಯ ಜಾತಿಗಳ ಮೇಲಾಟದಲ್ಲಿ ಅಧಿಕಾರದಿಂದ ವಂಚಿತರಾದರು. ಸಾಮಾಜಿಕವಾಗಿ ಇವರನ್ನು ‘ಪಂಚಪಾಣಿಯ’ ಎಂದು ಕರೆದು ಅವಮಾನಿಸಿದರು. ಸಂಪೂರ್ಣವಾಗಿ ಅತಂತ್ರರಾದ ತಳ ಸಮುದಾಯಗಳು, ದಲಿತರು ಲಾಲೂ ವಿರುದ್ಧ ಬಂಡಾಯವೇಳುವ ಮನಸ್ಥಿತಿಯಲ್ಲಿದ್ದಾಗಲೇ ಇವರ ರಕ್ಷಕನಂತೆ ನಿತೀಶ್ ಕುಮಾರ್ ಉದ್ಭವಿಸಿದರು. ಇಲ್ಲಿಂದ ಬಿಹಾರ ರಾಜಕಾರಣವು ಮತ್ತೊಂದು ತಿರುವಿಗೆ ಹೊರಳಿಕೊಂಡಿತು.

ಲಾಲೂ ಪ್ರಸಾದ್ ಯಾದವ್‌ರ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳದ ಸೆಕ್ಯುಲರಿಸಂ ರಾಜಕಾರಣಕ್ಕೆ ಬದಲಿಯಾಗಿ ಅವಕಾಶವಾದಿ ರಾಜಕಾರಣವನ್ನು ಉದ್ಘಾಟಿಸಿದ ನಿತೀಶ್ ಕುಮಾರ್ ಇದಕ್ಕೆ ಪರ್ಯಾಯ ಸಾಮಾಜಿಕ ನ್ಯಾಯ ಎಂದು ನಾಮಕರಣ ಮಾಡಿಕೊಂಡರು. ಪತ್ರಕರ್ತ ವರ್ಗೀಸ್ ಅವರು ‘‘ನಿತೀಶ್ ಕುಮಾರ್ ತನ್ನನ್ನು ಮಾರುಕಟ್ಟೆ ಕಾಲಘಟ್ಟದ ಮಂಡಲ್‌ವಾದಿ ಎಂದು ಕರೆದುಕೊಂಡರು. ಆದರೆ ಮಾರುಕಟ್ಟೆಯೊಂದಿಗಿನ ಒಡನಾಟವು ಬಂಡವಾಳ ಹೂಡಿಕೆಯನ್ನು ತಂದುಕೊಡಲಿಲ್ಲ, ನಗರೀಕರಣವೂ ಸಾಧಿಸಲಿಲ್ಲ, ಆದರೆ ಪಶ್ಚಿಮ ಮತ್ತು ದಕ್ಷಿಣ ರಾಜ್ಯಗಳಿಗೆ ಕಾರ್ಮಿಕರ ರಫ್ತು ಮಾತ್ರ ಹೆಚ್ಚಾಯಿತು. ಲಾಲೂ, ಪಾಸ್ವಾನ್ ಮಾದರಿಯ ರಾಜಕಾರಣದ ಕಾರಣಕ್ಕೆ ಹೊರಗುಳಿದಿದ್ದ ಅತಿ ಹಿಂದುಳಿದ ವರ್ಗಗಳು ಮತ್ತು ದಲಿತರು ನಿತೀಶ್ ಕುಮಾರ್‌ರಲ್ಲಿ ಹೊಸ ಭರವಸೆ ಕಂಡುಕೊಂಡರು. ಇದಕ್ಕೆ ತಕ್ಕನಾಗಿ ನಿತೀಶ್ ಮಾರುಕಟ್ಟೆ ಸ್ನೇಹಿ ಅಭಿವೃದ್ಧಿ ಕುರಿತು ಮಾತನಾಡತೊಡಗಿದರು. ಬಿಜೆಪಿಯ ಸಖ್ಯದೊಂದಿಗೆ ಮೇಲ್ಜಾತಿಗಳ ವೋಟೂ ಸಹ ಹರಿದು ಬಂದಿತು.’’ ಎಂದು ಬರೆಯುತ್ತಾರೆ. 2005ರಿಂದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿ ರುವ ನಿತೀಶ್ ಕುಮಾರ್ ಆಡಳಿತದಲ್ಲಿ ದಕ್ಷತೆ ತಂದರು ಎನ್ನುವುದರಲ್ಲಿ ಸತ್ಯಾಂಶವಿರಬಹುದು. ವೈಯಕ್ತಿಕವಾಗಿ ಭ್ರಷ್ಟರಲ್ಲ ಎನ್ನುವ ಪ್ರಚಾರವೂ ಸಹ ನಿತೀಶ್‌ಗೆ ವರವಾಯಿತು.

ಮೊದಲ ಮತ್ತು ಎರಡನೇ ಅವಧಿಗಳಲ್ಲಿ ವಿದ್ಯುತ್, ರಸ್ತೆ, ನೀರು ಎಲ್ಲರಿಗೂ ದೊರಕುವಂತೆ ಶ್ರಮಿಸಿದರು ಎನ್ನುವುದರಲ್ಲಿಯೂ ಹುರುಳಿರಬಹುದು. ಆದರೆ ಈ ಎಲ್ಲಾ ಬೆಳವಣಿಗೆಗಳಿಗೆ ನಿಖರವಾದ ಮತ್ತು ಕರಾರುವಾಕ್ಕಾದ ಸೂತ್ರಬಂಧವಿರಲಿಲ್ಲ. ಎಲ್ಲವೂ ಅಲ್ಲಲ್ಲಿ ತುಂಡರಿಸಿದಂತೆ ತೇಪೆ ಹಚ್ಚಿದಂತಿತ್ತು. ಸಮಗ್ರವಾಗಿರಲಿಲ್ಲ. ನಿತೀಶ್ ಅವರ ಹದಿನೈದು ವರ್ಷಗಳ ಆಡಳಿತವು ಬಿಹಾರ ರಾಜ್ಯದ ಬಡತನವನ್ನು ಕಡಿಮೆ ಮಾಡಲಿಲ್ಲ. ಮಾನವ ಸಂಪನ್ಮೂಲ ಸೂಚ್ಯಂಕವನ್ನು ಉತ್ತಮಗೊಳಿಸಲಿಲ್ಲ. ಅಪೌಷ್ಟಿಕತೆ ಕುಂಠಿತಗೊಳಿಸಲಿಲ್ಲ. ಇವರನ್ನು ನಂಬಿ ಮತ ಹಾಕಿದ ಅತಿ ಹಿಂದುಳಿದ ವರ್ಗ ಮತ್ತು ದಲಿತರ ಬದುಕು ಕೊಂಚವೂ ಹಸನಾಗಲಿಲ್ಲ. ಕಾರ್ಖಾನೆಗಳು ಸ್ಥಾಪನೆಗೊಳ್ಳಲಿಲ್ಲ. ಉದ್ಯೋಗ ಸೃಷ್ಟಿಯಾಗಲಿಲ್ಲ. ಕೋವಿಡ್ ನೋವಿನ ಸಂದರ್ಭದಲ್ಲಿ ಯಾವುದೇ ಪೂರ್ವತಯಾರಿ ಇಲ್ಲದೆ ಹೇರಿದ ಲಾಕ್‌ಡೌನ್ ಕಾರಣಕ್ಕೆ ಸುಮಾರು 26 ಲಕ್ಷ ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ. ಕಾಲ್ನಡಿಗೆಯಲ್ಲಿ ಬಿಹಾರಕ್ಕೆ ಮರಳಿದರು. ಈ ಸಂತ್ರಸ್ತರಿಗೆ ಸೂಕ್ತ ಭದ್ರತೆ, ಪರಿಹಾರ ಒದಗಿಸುವುದಲ್ಲಿ ನಿತೀಶ್ ದಯನೀಯವಾಗಿ ಸೋತರು. ನಿತೀಶ್ ಆಡಳಿತದ ಹದಿನೈದು ವರ್ಷಗಳಲ್ಲಿ ಸಾಮಾಜಿಕ ನ್ಯಾಯವು ಜಾರಿಗೊಳ್ಳಲಿಲ್ಲ, ಬಿಜೆಪಿಯ ಸಖ್ಯದ ಕಾರಣಕ್ಕೆ ಸೆಕ್ಯುಲರಿಸಂ ಸಹ ದುರ್ಬಲಗೊಂಡಿತು. ಈ ಎಲ್ಲಾ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅಸಾಧಾರಣವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ. ರಾಜಕೀಯ ಶಾಸ್ತ್ರಜ್ಞರ ಪ್ರಕಾರ ನಿತೀಶ್ ಕುಮಾರ್ ಭವಿಷ್ಯವು ಅಂಧಕಾರದಲ್ಲಿದೆ. ಇತಿಹಾಸದ ಚಕ್ರವು ಒಂದು ಸುತ್ತು ಸುತ್ತಿದೆ. ಮಂಡಲ್ ಚಳವಳಿಯ ಮೂವತ್ತು ವರ್ಷಗಳ ನಂತರ ಅದರ ಮುಂಚೂಣಿಯಲ್ಲಿದ್ದ, ಸಾಮಾಜಿಕ ನ್ಯಾಯಕ್ಕೆ ಹೊಸ ಆಯಾಮ ಕೊಡಲು ಶ್ರಮಿಸಿದ ಸೆಕ್ಯುಲರ್ ಲಾಲೂ ಇಂದು ದೈಹಿಕ ಅನಾರೋಗ್ಯದಿಂದ ನರಳುತ್ತಿದ್ದಾರೆ, ಜೈಲಿನಲ್ಲಿದ್ದಾರೆ. ಅವರ ಲೆಗಸಿಯನ್ನು ಹೊತ್ತುಕೊಂಡ ಮಗ ತೇಜಸ್ವಿ ಯಾದವ್ ಈ ಬಾರಿಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದ್ದಾರೆ. ಕ್ರಮೇಣ ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದಾರೆ. ಆಯ್ಕೆ ಮಾಡಿದರೆ ವಾರ್ಷಿಕವಾಗಿ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಉದ್ಯೋಗ, ಅಭಿವೃದ್ಧಿ ಕುರಿತು ಮಾತನಾಡುತ್ತಿದ್ದಾರೆ.

ಕೇವಲ ಯಾದವ-ಮುಸ್ಲಿಮರು ಮಾತ್ರವಲ್ಲ, ಲಾಲೂ ಪ್ರಸಾದ್ ಯಾದವ್‌ರಿಂದ ದೂರ ಸರಿದಿದ್ದ ಅತಿ ಹಿಂದುಳಿದ ಸಮುದಾಯಗಳೂ ಸಹ ತೇಜಸ್ವಿ ಕಡೆಗೆ ದೃಷ್ಟಿ ಬೀರುತ್ತಿದ್ದಾರೆ. ಅಚ್ಚರಿ ಫಲಿತಾಂಶ ಕೊಡಬಲ್ಲರು ಎನ್ನುವ ನಿರೀಕ್ಷೆಯೂ ಇವರ ಮೇಲಿದೆ. ಆದರೆ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಪಕ್ಷದಲ್ಲಿ ಲಾಲೂ ಲೆಗಸಿ ಕಣ್ಮರೆಯಾಗಿರುವುದು ಮತ್ತಷ್ಟು ಸಂಕೀರ್ಣತೆಯನ್ನು ಹುಟ್ಟು ಹಾಕಿದೆ. ಎಂತಹ ವೈರುಧ್ಯವೆಂದರೆ ತೇಜಸ್ವಿ ಯಾದವರ ಚುನಾವಣಾ ಸಮಾವೇಶಗಳಲ್ಲಿ, ಬ್ಯಾನರ್‌ಗಳಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಫೋಟೊಗಳು ಕಂಡುಬರುತ್ತಿಲ್ಲ. ತಮ್ಮ ಭಾಷಣಗಳಲ್ಲಿ ಉದ್ದೇಶಪೂರ್ವಕವಾಗಿಯೇ ಸಾಮಾಜಿಕ ನ್ಯಾಯದ ಕುರಿತು, ಮುಸ್ಲಿಮರ ಸಬಲೀಕರಣದ ಕುರಿತು ಮಾತನಾಡುತ್ತಿಲ್ಲ. ಲಾಲೂ ಪ್ರಸಾದ್ ಯಾದವ್‌ರ ಸಾಮಾಜಿಕ ನ್ಯಾಯ ಮತ್ತು ಸೆಕ್ಯುಲರಿಸಂ ಇಂದು ತೇಜಸ್ವಿ ಯಾದವ್ ಅವರಿಗೆ ಹೊರೆಯಾಗಿರುವ ಈ ಸಂಕೀರ್ಣ ರಾಜಕಾರಣದ ವಿಚಿತ್ರ ತಿರುವುಗಳು ಪರಿಣಿತ ರಾಜಕೀಯ ಶಾಸ್ತ್ರಜ್ಞರನ್ನೂ ತಬ್ಬಿಬ್ಬುಗೊಳಿಸಿದೆ. ಬಿಹಾರ ಚುನಾವಣಾ ಫಲಿತಾಂಶ ಏನೇ ಬರಲಿ, ಆದರೆ ಲಾಲೂ ಯುಗ ನೇಪಥ್ಯಕ್ಕೆ ಜಾರಿಕೊಂಡಿರುವುದಂತೂ ದಿಟ. ಸೆಕ್ಯುಲರಿಸಂ ರಾಜಕಾರಣಕ್ಕೆ ದೊಡ್ಡ ಹೊಡೆತ ಬೀಳುವುದೂ ಸಹ ವಾಸ್ತವ. ಆದರೆ ಪರ್ಯಾಯವಾಗಿ ತೇಜಸ್ವಿ ಯಾದವ್ ಲೆಗಸಿ ಏನು? ಇದು ಸ್ವತಃ ಅವರಿಗೇ ಗೊತ್ತಿರುವಂತಿಲ್ಲ. ಲಾಲೂ ಪ್ರಸಾದ್ ಯಾದವ್‌ಗೆ ಎಲ್ಲಾ ಮಿತಿಗಳ ನಡುವೆ ವಿಮೋಚನೆ ರಾಜಕಾರಣದ ತಾತ್ವಿಕತೆ ಅರಿವಿತ್ತು. ಆದರೆ ತೇಜಸ್ವಿ ಯಾದವ್ ಕಾಲದಲ್ಲಿ ಇದರ ಭವಿಷ್ಯವೂ ಡೋಲಾಯಮಾನವಾಗಿದೆ. ಕಡೆಗೂ ಸದ್ಯದ ಪರಿಸ್ಥಿತಿಯಲ್ಲಿ ಫ್ಯಾಶಿಸ್ಟ್ ರಾಜಕಾರಣ ಮಾಡುತ್ತಿರುವ ಬಿಜೆಪಿಯ ಸೋಲು ಪ್ರಥಮ ಆಯ್ಕೆಯಾಗಿದೆ. ಮಿಕ್ಕೆಲ್ಲ ಪ್ರಶ್ನೆಗಳೂ ಗೌಣವಾಗು ತ್ತ್ತಿವೆ. ಆದರೆ ಕನಿಷ್ಠ ಇದಾದರೂ ಸಾಧ್ಯವಾಗುತ್ತದೆಯೇ? ಬಿಹಾರ ಚುನಾವಣಾ ಫಲಿತಾಂಶಗಳು ಮುಂದಿನ ರಾಜಕಾರಣದ ದಿಕ್ಕನ್ನು ನಿರ್ಧರಿಸಬಲ್ಲದು ಎಂಬುದು ಮಾತ್ರ ಸದ್ಯದ ಸತ್ಯ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News