ದ್ವೇಷ ರಾಜಕೀಯದ ವಿರುದ್ಧ ನನ್ನ ಹೋರಾಟ: ಸಸಿಕಾಂತ್ ಸೆಂಥಿಲ್

Update: 2020-11-18 05:43 GMT

ದೇಶದಲ್ಲಿ ತಾಂಡವವಾಡುತ್ತಿರುವ ದ್ವೇಷ ರಾಜಕೀಯ ವಿರುದ್ಧ ಹೋರಾಟವೇ ನನ್ನ ಪ್ರಬಲ ಗುರಿ. ಅದಕ್ಕಾಗಿ ಜನಪರ ಚಳವಳಿಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಈ ಉದ್ದೇಶಕ್ಕಾಗಿ ಸ್ವಾತಂತ್ರ ಚಳವಳಿಯ ಇತಿಹಾಸ ಹೊಂದಿ ರುವ, ಜಾತ್ಯತೀತ ಸಿದ್ಧಾಂತ ಹೊಂದಿರುವ ಕಾಂಗ್ರೆಸ್ ಪಕ್ಷ ನನ್ನ ಪ್ರಥಮ ಆಯ್ಕೆಯಾಗಿ ಆ ಪಕ್ಷ ಸೇರಿದ್ದೇನೆ. ಇದು ಮಾಜಿ ಐಎಎಸ್ ಅಧಿಕಾರಿ, ಜನಪರ ಹೋರಾಟ ಗಾರ ಸಸಿಕಾಂತ್ ಸೆಂಥಿಲ್‌ರ ಮನದ ಮಾತು.

ದಕ್ಷ, ಜನಪರ ಐಎಎಸ್ ಅಧಿಕಾರಿ ಎಂಬ ಖ್ಯಾತಿ ಗಳಿಸಿದ್ದ ಸಸಿಕಾಂತ್ ಹಠಾತ್ತನೆ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದವರು. ಬಳಿಕ ಜನಪರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಸೆಂಥಿಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮತ್ತೊಮ್ಮೆ ಅಚ್ಚರಿ ಹುಟ್ಟಿಸಿದ್ದಾರೆ. ಈ ಕುರಿತು ಝೂಮ್ ಆ್ಯಪ್ ಮೂಲಕ ‘varthabharati.in’ನ ‘ನೇರಾನೇರ’ ಸಂದರ್ಶನದಲ್ಲಿ ಸಸಿಕಾಂತ್ ಸೆಂಥಿಲ್ ಮನಬಿಚ್ಚಿ ಮಾತನಾಡಿದ್ದಾರೆ.

ಇದ್ದಕ್ಕಿದ್ದಂತೆ ಕಾಂಗ್ರೆಸ್ ಸೇರಿಬಿಟ್ಟಿದ್ದೀರಿ. ಈ ಸೇರ್ಪಡೆ ಹಠಾತ್ ಬೆಳವಣಿಗೆಯೇ ಅಥವಾ ರಾಜಕೀಯ ಪ್ರವೇಶಕ್ಕಾಗಿಯೇ ಹುದ್ದೆಗೆ ರಾಜೀನಾಮೆ ನೀಡಿದ್ದೀರಾ?

ಇಲ್ಲ, ನಾನು ರಾಜೀನಾಮೆ ನೀಡಿದ್ದು, ರಾಜಕೀಯ ಪ್ರವೇಶಕ್ಕಾಗಿ ಅಲ್ಲ. ಈ ಕುರಿತು ನನ್ನ ಪತ್ರದಲ್ಲೇ ನಾನು ಅಂದು ಸ್ಪಷ್ಟಪಡಿಸಿದ್ದೆ. ದೇಶದಲ್ಲಿ ಫ್ಯಾಶಿಸಂ ದಾಳಿಯಾಗುತ್ತಿದ್ದು, ಆ ಆತಂಕದಿಂದ ನಾನು ರಾಜೀನಾಮೆ ನೀಡಿದ್ದೆ. ಭವಿಷ್ಯದಲ್ಲಿ ಆ ಫ್ಯಾಶಿಸಂ ದಾಳಿ ಯಾವ ರೀತಿ ಮುಂದುವರಿಯಲಿದೆ ಎಂಬ ಅನುಮಾನ ನನ್ನನ್ನು ಕಾಡಿತ್ತು. ಅಂತಹ ಪರಿಸ್ಥಿತಿಯಲ್ಲಿ ನನ್ನ ಪಾತ್ರವೇನು ಎಂದು ನಾನು ಯೋಚಿಸಿದ್ದೆ. ಹಾಗಾಗಿ ನಾನು ಸರಕಾರದ ಭಾಗವಾಗಿದ್ದುಕೊಂಡು ಸರಕಾರ ಹೇಳಿದ್ದನ್ನೇ ಅನುಷ್ಠಾನಗೊಳಿಸುವುದು ಸರಿ ಅನ್ನಿಸಲಿಲ್ಲ. ಹಾಗೆ ರಾಜೀನಾಮೆ ನೀಡಿ, ಜನಪರ ಚಳವಳಿಗಳಲ್ಲಿ ನನ್ನನ್ನು ತೊಡಗಿಸಿಕೊಂಡೆ. ಇದನ್ನು ಎದುರಿಸಲು ಆ ಸಂದರ್ಭದಲ್ಲಿ ಯಾವುದೇ ರಾಜಕೀಯ ಪಕ್ಷ ಮುಂದೆ ಬಂದಿರಲಿಲ್ಲ. ಆ ಸಮಯದಲ್ಲಿ ಜನಪರ ಚಳವಳಿಯ ಮೂಲಕ ಈ ದಾಳಿಯನ್ನು ತಳ್ಳುವ ಪ್ರಯತ್ನ ನನ್ನದಾಗಿತ್ತು. ಅದರಲ್ಲಿ ಸಾಕಷ್ಟು ಯಶಸ್ವಿ ಆಗಿದ್ದೇವೆ ಎಂದು ನನಗನ್ನಿಸುತ್ತದೆ. ಈಗ ಇದಕ್ಕೆ ರಾಜಕೀಯ ಪರಿಹಾರದ ಅಗತ್ಯವಿದೆ ಎಂಬುದು ಮನದಟ್ಟಾಗಿದೆ. ಆ ಪ್ರಯತ್ನದಲ್ಲಿ ಯಾವ ಪಕ್ಷ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ ಎಂದು ಆಲೋಚಿಸಿದಾಗ ನನಗೆ ಕಂಡಿದ್ದು ಕಾಂಗ್ರೆಸ್ ಪಕ್ಷ. ನನ್ನ ರಾಜೀನಾಮೆ, ಜನಪರ ಚಳವಳಿ ಇದೀಗ ಪಕ್ಷ ಸೇರುವ ಉದ್ದೇಶ ಎಲ್ಲವೂ ಒಂದೇ.

ನೀವು ರಾಷ್ಟ್ರಮಟ್ಟದಲ್ಲಿ ಒಂದು ಚಳವಳಿ ಕಟ್ಟುತ್ತೀರಿ ಎಂದು ನಂಬಲಾಗಿತ್ತು. ನೀವೂ ಅದೇ ರೀತಿ ಹಲವು ಬಾರಿ ಹೇಳಿದ್ದಿರಿ. ಆದರೆ ಈಗ ಈ ಹೆಜ್ಜೆ ಇಟ್ಟಿದ್ದು ಚಳವಳಿ ರೂಪಿಸಲು ಬೇಕಾದ ಶ್ರಮ, ತಾಳ್ಮೆ, ತ್ಯಾಗ ಇತ್ಯಾದಿ ನಿಮಗೆ ಇಲ್ಲ ಎಂದು ತೋರಿಸುವುದಿಲ್ಲವೇ ?

ನಾನು ಇನ್ನೂ ಜನಪರ ಚಳವಳಿಯಿಂದ ಹೊರಗೆ ಬಂದಿಲ್ಲ. ನನ್ನ ಆದ್ಯತೆಯೇ ಅದು, ಅದರಲ್ಲೇ ಮುಂದುವರಿಯಲಿದ್ದೇನೆ. ಪಕ್ಷ ಸೇರ್ಪಡೆಯ ನನ್ನ ಈ ಹೆಜ್ಜೆ ಅದರ ಒಂದು ತಾರ್ಕಿಕ ವಿಸ್ತರಣೆ ಎಂದೇ ಭಾವಿಸಿದ್ದೇನೆ. ನಮ್ಮ ಉದ್ದೇಶ ಫ್ಯಾಶಿಸಂ ಸೋಲಿಸುವುದು. ಅದಕ್ಕೆ ಉತ್ತಮ ಅಸ್ತ್ರ ಸದ್ಯದ ಮಟ್ಟಿಗೆ ರಾಜ ಕೀಯ. ಇದು ತಾಳ್ಮೆಗಿಂತಲೂ ಮುಖ್ಯವಾಗಿ ಸರಿಯಾದ ಆಯ್ಕೆ ಎಂಬುದು ನನ್ನ ಅನಿಸಿಕೆ.

ನೀವು ಹೇಳುತ್ತಿದ್ದ ಚಳವಳಿ, ಸಾಮಾಜಿಕ ಬದಲಾವಣೆ ಇತ್ಯಾದಿಗೂ ಕಾಂಗ್ರೆಸ್ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲಿರುವುದು ಅಧಿಕಾರಕ್ಕಾಗಿ ಹೋರಾಟ, ಹಿಂಬಾಲಕರ ಹಾರಾಟ ಇತ್ಯಾದಿ. ಅಲ್ಲಿದ್ದು ಚಳವಳಿ ಕಟ್ಟುವುದು, ಬದಲಾವಣೆ ತರುವುದು ಹೇಗೆ ?

ಕಾಂಗ್ರೆಸ್ ಸುಮಾರು 80 ವರ್ಷಗಳಿಂದೀಚೆಗೆ ರಾಜ ಕೀಯ ಪಕ್ಷವಾಗಿ ಅಸ್ತಿತ್ವದಲ್ಲಿದೆ. ಅಷ್ಟು ಸಮಯದಲ್ಲಿ ಪಕ್ಷ ಅಸ್ತಿತ್ವದಲ್ಲಿರುವಾಗ ಸ್ಥಳೀಯವಾಗಿ ಕೆಲವರು ನಾಯಕತ್ವ ವಹಿಸಿಕೊಂಡು ಅವರದ್ದೇ ರೀತಿಯಲ್ಲಿ ರಾಜಕೀಯ ಮಾಡಿಕೊಂಡು ಸಾಗಿದ್ದಾರೆ. ಆದರೆ ಕಾಂಗ್ರೆಸ್‌ನ ಮೂಲ ಸಿದ್ಧಾಂತ ಇಂತಹ ಎಲ್ಲ ಸಣ್ಣಪುಟ್ಟ ವಿಚಾರ, ಸಮಸ್ಯೆಗಳನ್ನು ನಿವಾರಿಸಿ ಮುಂದೆ ಸಾಗುತ್ತದೆ ಎನ್ನುವುದು ನನ್ನ ವಿಶ್ವಾಸ. ಮುಂದಿನ ಕಾಲಘಟ್ಟದಲ್ಲಿ ಜನಪರ ಚಳವಳಿಯನ್ನು ಪಕ್ಷದಲ್ಲಿ ಕಾಣಬಹುದು ಎಂಬುದು ನನ್ನ ಅನಿಸಿಕೆ.

► ಅಣ್ಣಾಮಲೈ ರಾಜಕೀಯ ಅಧಿಕಾರಕ್ಕಾಗಿ ಬಿಜೆಪಿ ಸೇರಿದರು, ಸಸಿಕಾಂತ್ ಅಂಥವರಲ್ಲ ಎಂದು ಪ್ರಗತಿಪರರು ಹೇಳಿದರು. ಆದರೆ ಈಗ ನಿಮಗೂ, ಅವರಿಗೂ ಏನು ವ್ಯತ್ಯಾಸವಿದೆ? 

ನಾವಿಬ್ಬರೂ ಪ್ರತ್ಯೇಕ ವ್ಯಕ್ತಿಗಳು. ನಾವಿಬ್ಬರೂ ಉತ್ತಮ ಸ್ನೇಹಿತರು. ನಮ್ಮಿಬ್ಬರ ಸಿದ್ಧಾಂತಗಳ ಬಗ್ಗೆ ಭಾರೀ ವ್ಯತ್ಯಾಸಗಳಿವೆ. ವ್ಯಕ್ತಿಗತವಾಗಿ ನಮ್ಮಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅವರ ಬಗ್ಗೆ ನಾನೇನು ಹೇಳುವುದು ಸರಿಯಲ್ಲ. ಆದರೆ ನನ್ನ ಬಗ್ಗೆ ಹೇಳುವುದಾದರೆ, ನಾನು ಈ ನಿರ್ಧಾರ ಕೈಗೊಳ್ಳಲು ಕಾರಣ ಜನ ಚಳವಳಿಯನ್ನು ವಿಸ್ತರಿಸುವುದು, ಜನರನ್ನು ಒಗ್ಗೂಡಿಸುವುದು. ದಲಿತ ಸಂಘಟನೆಗಳು, ಎಡಪಕ್ಷಗಳ ಜನಪರ ಚಳವಳಿಯಲ್ಲೂ ನಾನು ಇರಲು ಬಯಸುತ್ತೇನೆ. ಎಲ್ಲಿ ಅಗತ್ಯವಿದೆಯೋ ಅಲ್ಲಿ ನಾನು ಇರಲು ಇಷ್ಟಪಡುತ್ತೇನೆ.

ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಾಗುತ್ತಿರುವ ಪಲ್ಲಟ, ಭಾರೀ ಸಂಖ್ಯೆಯಲ್ಲಿ ಪಕ್ಷಾಂತರಿಗಳಾಗುತ್ತಿರುವುದನ್ನು ಕಂಡಾಗ ನೀವು ಪ್ರತಿಪಾದಿಸುವ ಸಂವಿಧಾನದ ಆಶಯಗಳಿಗೆ ಅಲ್ಲಿ ಬೆಲೆ ಇದೆ ಅನ್ನಿಸುತ್ತಿದೆಯೇ ?

ದೇಶದಲ್ಲಿ ಜಾತ್ಯತೀತ, ಜನಪರ ಸಿದ್ಧಾಂತಗಳನ್ನು ನಂಬುವವರೇ ಹೆಚ್ಚಿ ದ್ದಾರೆ. ಹಾಗಾಗಿ ಬೆಲೆ ಖಂಡಿತಾ ಇದೆ. ಆ ಸಿದ್ಧಾಂತವನ್ನು ಬಿಟ್ಟು ದ್ವೇಷದ ರಾಜಕೀಯ ಮಾಡುವವರು ಬಹಳ ಕಡಿಮೆ. ಯಾವ ಸಂದರ್ಭದಲ್ಲಿ ತಾನು ಎಲ್ಲಿರಬೇಕು ಎಂದು ಆಲೋಚಿಸುವವರು ಕಾಂಗ್ರೆಸ್ ಪಕ್ಷದಲ್ಲಿ ದ್ದುಕೊಂಡು ಏನೂ ಪ್ರಯೋಜನವಾಗದು. ಸಿದ್ಧಾಂತದಲ್ಲಿ ವಿಶ್ವಾಸ ವಿರಿಸಿ ಉಳಿಯುವವರು ಮಾತ್ರ ಪಕ್ಷದಲ್ಲಿದ್ದರೆ ಸಾಕು. ಕನಿಷ್ಠ 10 ಜನ ಪಕ್ಷದಲ್ಲಿದ್ದು, ಹೋರಾಟ ಮಾಡಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ. ಪಕ್ಷದ ಸಿದ್ಧಾಂತ, ಇತಿಹಾಸ ನಮಗೆ ಹೋರಾಡುವ ಸ್ಥೈರ್ಯವನ್ನು ನೀಡುತ್ತದೆ. ಸಿದ್ಧಾಂತ ಯಾವತ್ತೂ ದುರ್ಬಲ ಆಗುವುದಿಲ್ಲ.

► ಪಕ್ಷದಲ್ಲಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವುದಾಗಿ ಹೇಳಿಕೊಂಡಿರುವ ನೀವು ಐಎಎಸ್ ಸೇವೆಯಲ್ಲಿದ್ದುಕೊಂಡೇ ಅದಕ್ಕಿಂತ ಉತ್ತಮವಾಗಿ ಜನ ಸೇವೆ ಮಾಡಬಹುದಿತ್ತಲ್ಲವೇ?

ಐಎಎಸ್ ಅಧಿಕಾರಿಯಾಗಿದ್ದುಕೊಂಡು ನಾನು ಸರಕಾರದ ಎಲ್ಲ ಜನಪರ ಯೋಜನೆಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಬಹುದು. ಸೇವೆ ಮಾಡಬಹುದು. ಆದರೆ ಸರಕಾರ ತನ್ನ ಪಾಲಿಸಿಯನ್ನೇ ಬದಲಾಯಿಸಿಕೊಂಡರೆ, ಸರಕಾರ ತನ್ನ ಚಿಂತನೆಯನ್ನೇ ಬದಲಾಯಿಸಿಕೊಂಡಾಗ ನನಗೆ ಸೇವೆ ಮಾಡಲು ಸಾಧ್ಯವಿಲ್ಲ. ನಾನು ರಾಜೀನಾಮೆ ನೀಡಿದಾಗ ಪತ್ರದಲ್ಲೇ ಈ ಬಗ್ಗೆ ಸ್ಪಷ್ಟಪಡಿಸಿದ್ದೆ, ಮುಂಬರುವ ದಿನಗಳು ಮತ್ತಷ್ಟು ಸವಾಲುಭರಿತ ಎಂದು ಹೇಳಿದ್ದೆ. ಇದೀಗ ಕಾಂಗ್ರೆಸ್ ಪಕ್ಷಕ್ಷೆ ಸೇರಿದ್ದರೂ ನಾನು ನನ್ನ ಜನಪರ ಹೋರಾಟದಲ್ಲಿ ಭಾಗಿಯಾಗಿ ಅದನ್ನು ಮುಂದುವರಿಸುತ್ತಿದ್ದೇನೆ.

► ರಾಹುಲ್ ಗಾಂಧಿ ಪಾರ್ಟ್ ಟೈಂ ರಾಜಕಾರಣಿ ಎಂಬ ಆರೋಪವಿದೆ. ಮೋದಿ, ಅಮಿತ್ ಶಾ ಅಂಥವರ ವಿರುದ್ಧ ಹೀಗೆ ರಾಜಕಾರಣ ಮಾಡಿ ಗೆಲ್ಲಲು ಸಾಧ್ಯವೇ? 

ಇವೆಲ್ಲ ಆರೋಪಗಳಷ್ಟೆ. 2019ರ ಚುನಾವಣೆಯಲ್ಲಿ ಪಕ್ಷದ ಸೋಲಿನ ಸಂದರ್ಭ ರಾಹುಲ್ ಗಾಂಧಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದ ಅವರ ಪತ್ರದಲ್ಲಿ ಅವರ ಆಂತರಿಕ ಚಿಂತನೆಯನ್ನು ಅರಿಯಬಹುದು. ದೇಶವನ್ನು, ದೇಶದ ಆಡಳಿತ ಯಂತ್ರವನ್ನು ಫ್ಯಾಶಿಸಂ ಶಕ್ತಿಗಳು ಆವರಿಸಿಕೊಂಡಿರುವಾಗ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಬಗ್ಗೆ ನನಗೆ ದ್ವೇಷವಿಲ್ಲ. ಆದರೆ ಈ ದೇಶದ ಬಗ್ಗೆ ಬಿಜೆಪಿಯ ಚಿಂತನೆಯ ವಿರುದ್ಧ ನನ್ನ ಉಸಿರು ಇರುವವರೆಗೆ ಹೋರಾಟ ಮಾಡುವುದಾಗಿ ಹೇಳಿದ್ದರು. ನನ್ನ ಪ್ರಕಾರ ಅವರು ದೇಶದಲ್ಲಾಗುತ್ತಿರುವ ಬದಲಾವಣೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಇದು ಕೇವಲ ರಾಜ ಕೀಯ ಪ್ರಶ್ನೆಯಲ್ಲ. ಇದು ದೇಶದ ಭವಿಷ್ಯದ ವಿಷಯ. ನಮ್ಮ ಎದುರಿನ ಸಮಸ್ಯೆಯನ್ನು ರಾಜಕೀಯವಾಗಿ ನಾನು ನೋಡದೆ ಮಾನವೀಯ ನೆಲೆಯಲ್ಲಿ ನೋಡುತ್ತಿದ್ದೇನೆ. ಈ ನೆಲೆಯಲ್ಲಿ ನಾನು ರಾಹುಲ್ ಗಾಂಧಿಯ ನಾಯಕತ್ವವನ್ನೂ ನೋಡುತ್ತಿದ್ದೇನೆ. ಅವರ ವಿರುದ್ಧ ಸಾಕಷ್ಟು ಅಪಪ್ರಚಾರಗಳು ವಿಪಕ್ಷದಿಂದ ನಡೆದಿವೆ. ಆದರೆ ಯಾವತ್ತೂ ಆ ಶಕ್ತಿಗಳೆದುರು ಅವರು ಎದೆಗುಂದದೆ, ಧೈರ್ಯದಿಂದ ಎದುರಿಸಿ ಮುಂದೆ ಸಾಗುತ್ತಿದ್ದಾರೆ.

ಕಾಂಗ್ರೆಸ್‌ನ ಹೈಕ ಮಾಂಡ್ ಸಂಸ್ಕೃತಿಯಲ್ಲಿ ಕೆಲಸ ಮಾಡಲು ಮಾನ ಸಿಕವಾಗಿ ಸಿದ್ಧವಾಗಿದ್ದೀರಾ? ಪಕ್ಷದೊಳಗಿನ ರಾಜಕೀಯವನ್ನು ಹೇಗೆ ನಿಭಾಯಿಸುತ್ತೀರಿ ?

ನಾನೇನು ಪಕ್ಷದ ಸೀಟು ಯಾರಿಗೆ ಸಿಗಬೇಕು ಎಂದೆಲ್ಲಾ ಚಿಂತನೆ ಮಾಡುತ್ತಿಲ್ಲ. ನಾನು ಬಹಳಷ್ಟು ಸಾಗಬೇಕಿದೆ. ಜನ ಚಳವಳಿಯ ಭಾಗವಾಗಿ ನಾನು ಬಹಳಷ್ಟು ಜನರನ್ನು ಭೇಟಿಯಾಗಬೇಕು. ನೋಡಬೇಕು, ಮಾತನಾಡಬೇಕು. ಕಾಂಗ್ರೆಸ್ ಪಕ್ಷದ ಸ್ವಾತಂತ್ರ ಅವಧಿಯ ಜನಪರ ಚಳವಳಿಯ ಕಿಚ್ಚನ್ನು ಮತ್ತೆ ಹಳ್ಳಿ ಹಳ್ಳಿಗಳಲ್ಲಿ ಕಟ್ಟುವ ಅಭಿಪ್ರಾಯ ಇದೆ. ಹಾಗಾಗಿ ಪಕ್ಷದ ಮೇಲೆ ಯಾರಿದ್ದಾರೆ, ಅವರ ಆಲೋಚನೆಗಳೇನು ಎಂಬ ಬಗ್ಗೆ ನನಗೆ ಅಗತ್ಯವಿಲ್ಲ. ನಾನು ದೇಶದ ಹಳ್ಳಿ ಹಳ್ಳಿಗೂ ಪ್ರಯಾಣಿಸಬೇಕಿದೆ. ಜನಪರ ಹೋರಾಟಗಾರರು, ಸಂಘ- ಸಂಸ್ಥೆಗಳು ಕೈಜೋಡಿಸುತ್ತಾರೆ, ಇತರ ರಾಜಕೀಯ ಪಕ್ಷಗಳು ಕೈಜೋಡಿಸುತ್ತಾರೆ. ಎಲ್ಲರೂ ಜತೆಯಾಗಿ ದ್ವೇಷ ರಾಜಕಾರಣವನ್ನು ದೇಶದಿಂದ ಹೊರಗೋಡಿಸಬೇಕೆಂಬುದು ನನ್ನ ಆಶಯ. ದ್ವೇಷ ರಾಜಕಾರಣ ಹೋಗಬೇಕಾದರೆ ಈ ನಿಟ್ಟಿನಲ್ಲಿ ಹೋರಾಡಬಲ್ಲ ಪ್ರಥಮ ಪಕ್ಷ ಕಾಂಗ್ರೆಸ್ ಎಂಬುದು ನನ್ನ ಬಲವಾದ ನಂಬಿಕೆ.

ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡಬಹುದಾದ ಪಕ್ಷ ಕಾಂಗ್ರೆಸ್ ಅಂದಿದ್ದೀರಿ. ಅಸ್ತಿತ್ವ ಇರುವುದೇ ಕಾಂಗ್ರೆಸ್‌ನ ಸಾಧನೆ ಅಂತ ಆ ಪಕ್ಷದ ಬಗ್ಗೆ ಇರುವ ಟೀಕೆ. ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ?

ಫ್ಯಾಶಿಸಂ ಎನ್ನುವ ಸಮಸ್ಯೆಯನ್ನು ದೇಶದ ಹಳ್ಳಿಹಳ್ಳಿ ಯಲ್ಲೂ ಎದುರಿಸಬೇಕಾಗುತ್ತದೆ. ಹಾಗಿರುವಾಗ ಯಾವ ಪಕ್ಷ ದೇಶಾದ್ಯಂತ ವಿಸ್ತರಿಸಿಕೊಂಡಿರುವುದೋ ಆ ಪಕ್ಷದ ಆಯ್ಕೆ ಪ್ರಮುಖವಾಗಿತ್ತು. ಕಾಂಗ್ರೆಸ್ ಸ್ವತಂತ್ರ ಚಳವಳಿಯ ಪಕ್ಷ. ಸ್ವತಂತ್ರ ಚಳವಳಿಯಿಂದಲೇ ಅದು ಪಕ್ಷವಾಗಿ ಬಳಿಕ ಮಾರ್ಪಟ್ಟಿದ್ದು. ಹಾಗಾಗಿ ಸ್ವತಂತ್ರ ಚಳವಳಿ ಹಾಗೂ ಕಾಂಗ್ರೆಸ್‌ನ ಸಿದ್ಧಾಂತದಲ್ಲಿ ಬದಲಾವಣೆ ಆಗಿಲ್ಲ. ತಮಿಳುನಾಡಿನಲ್ಲಿ ನೋಡುವುದಾದರೆ ಅಲ್ಲಿ ಕಾಂಗ್ರೆಸ್ ಬಲ ಹೊಂದಿಲ್ಲ. ಅಲ್ಲಿ ದ್ರಾವಿಡ ಪಕ್ಷಗಳೇ ಪ್ರಬಲ ವಾಗಿವೆ. ನಿಜ, ಕಾಂಗ್ರೆಸ್‌ನಲ್ಲಿನ ಜನ, ರಾಜಕಾರಣಿಗಳು, ನಾಯಕತ್ವ ಬದಲಾಗಿರಬಹುದು. ಆದರೆ ಸಿದ್ಧಾಂತ ಯಾವತ್ತೂ ಬದಲಾಗಿಲ್ಲ. ಸಂವಿಧಾನದ ಆಶಯಗಳನ್ನು ಹೊತ್ತ, ಸ್ವಾತಂತ್ರ ಚಳವಳಿಯಿಂದ ಬಂದ ಸಿದ್ಧಾಂತ ಕಾಂಗ್ರೆಸ್ ಪಕ್ಷದ್ದು. ಹಾಗಾಗಿ ಈ ಸಿದ್ಧಾಂತದ ಜತೆಗೆ ನನ್ನನ್ನು ಸೇರ್ಪಡೆಗೊಳಿಸುವುದು ನನ್ನ ಅಭಿಪ್ರಾಯಕ್ಕೆ ಸೂಕ್ತ. ಇನ್ನೂ 2-3 ವರ್ಷಗಳಲ್ಲಿ ಈ ಸಿದ್ಧಾಂತದ ತುರ್ತು ಅಗತ್ಯವನ್ನು ಎಲ್ಲರಿಗೂ ತಿಳಿಸಿ ಎಲ್ಲರನ್ನೂ ಒಂದು ವೇದಿಕೆಯಡಿ ತರಬಹುದೇ ಎಂಬುದು ನನ್ನ ಮುಂದಿನ ಸವಾಲು.

ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿದೆ. ಪಕ್ಷದೊಳಗಿಂದಲೇ ನಾಯಕತ್ವದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಏನು ಹೇಳುತ್ತೀರಿ?

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಸೋಲಾ ಗಿದೆ ಎಂದು ನಾನು ಹೇಳುವುದಿಲ್ಲ. ನಾನು ಕಂಡುಕೊಂಡ ಧನಾತ್ಮಕ ವಿಷಯಗಳೆಂದರೆ, ಎಡಪಕ್ಷಗಳು ಈ ಬಾರಿ 16 ಕ್ಷೇತ್ರದಲ್ಲಿ ಜಯ ಗಳಿಸಿವೆ. ಹಿಂದಿನ ಚುನಾವಣೆಯಲ್ಲಿ 3 ಸ್ಥಾನ ಮಾತ್ರ ಹೊಂದಿದ್ದವು. ಎಡಪಕ್ಷಗಳ ಬಗ್ಗೆ ಜನರಲ್ಲಿ ಒಲವು ಇದೆ. ಹಾಗಾಗಿ ಅವರಿಗೆ ಹೆಚ್ಚಿನ ಸ್ಥಾನ ನೀಡಲಾಗಿತ್ತು. ಸ್ವಂತ ಪಕ್ಷಗಳು ಮುಂದೆ ಬಂದು ಪ್ರಗತಿಪರ ಶಕ್ತಿಯಾಗಿ ಹೊರಹೊಮ್ಮಬೇಕಿದೆ. ಬಿಹಾರದಲ್ಲಿ ಆರ್‌ಜೆಡಿಯನ್ನು ಜನ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿದ್ದಾರೆ. ಬಿಹಾರದ ಚುನಾವಣೆ ಇದೊಂದು ಸಾಂಖ್ಯಿಕ ಜಯವೇ ಹೊರತು ಇದು ವೌಲ್ಯದ ಜಯ ಅಲ್ಲ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ದೇಶಾದ್ಯಂತ ಬದಲಾವಣೆ ತರುವುದು ಸಾಧ್ಯವೇ?

ನಾನು ಓರ್ವ ಪಕ್ಕಾ ರಾಜಕಾರಣಿಯಂತೆ ಒಂದು ರಾಜ್ಯಕ್ಕೆ, ಜಿಲ್ಲೆಗೆ ಸೀಮಿತಗೊಳ್ಳಲು ಬಯಸುವುದಿಲ್ಲ. ನಮ್ಮ ಚಿಂತನೆಯನ್ನು ಹೊಂದಿರುವವರು, ದ್ವೇಷ ರಾಜಕಾರಣದ ಗಂಭೀರತೆಯನ್ನು ಅರಿತವರು ಅಧಿಕಾರಕ್ಕೆ ಬರುವಲ್ಲಿ ನಾನು ಹೆಗಲು ಕೊಡಬಯಸುತ್ತೇನೆ. ಹಾಗಾಗಿ ಈ ನಿಲುವಿನಲ್ಲಿ ಯಶಸ್ವಿಯಾಗುತ್ತೇನೋ ಗೊತ್ತಿಲ್ಲ. ಆದರೆ ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆ.

► ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ?

ನನಗೆ ಅಂತಹ ಯಾವುದೇ ಉದ್ದೇಶ ಇಲ್ಲ. ಆ ಉದ್ದೇಶ ನನ್ನದಾದರೆ ನಾನು ಒಂದು ಸಣ್ಣ ಪ್ರದೇಶಕ್ಕೆ ಮಾತ್ರವೇ ಸೀಮಿತಗೊಳ್ಳುತ್ತೇನೆ. ನಾನು ದೇಶಾದ್ಯಂತ ಕೆಲಸ ಮಾಡಲು ಆಸೆ ಹೊಂದಿರುವಾಗ, ಎಲ್ಲರನ್ನೂ ಒಂದೇ ವೇದಿಕೆಯಡಿ ಸೇರಿಸಬೇಕೆಂದಿರುವಾಗ ನನ್ನ ಜವಾಬ್ದಾರಿ ಬಹಳಷ್ಟಿದೆ. ಅದಕ್ಕಾಗಿ ನಾನು ಬಹಳಷ್ಟು ಶ್ರಮ ವಹಿಸಬೇಕಿದೆ, ಆಲೋಚಿಸಬೇಕಿದೆ. ತಮಿಳುನಾಡಿನಲ್ಲಿ ನನ್ನನ್ನು ಬಹಳಷ್ಟು ಮಂದಿ ಪ್ರಶ್ನಿಸುತ್ತಿದ್ದಾರೆ. ಅಣ್ಣಾಮಲೈ ಸ್ಪರ್ಧೆಗಿಳಿದರೆ ನೀವು ಅವರ ವಿರುದ್ಧ ಸ್ಪರ್ಧಿಸುತ್ತೀರಾ? ಆ ತರಹದ ಸ್ಪರ್ಧೆ ಇಲ್ಲ. ನನ್ನದು ಏನಿದ್ದರೂ ಸಿದ್ಧಾಂತದ ಜತೆಗಿನ ಹೋರಾಟ. ನಾನು ನಂಬಿಕೆ ಇರಿಸಿದ ಸಿದ್ಧಾಂತ ನನ್ನಿಂದ ಏನಾದರೂ ಮಾಡಬೇಕೆಂದು ಬಯಸಿದರೆ, ಅದಕ್ಕೆ ಹಿಂದೇಟು ಹಾಕುವವನೂ ಅಲ್ಲ.

Full View

Writer - ಸಂದರ್ಶನ: ಸತ್ಯಾ ಕೆ.

contributor

Editor - ಸಂದರ್ಶನ: ಸತ್ಯಾ ಕೆ.

contributor

Similar News