ಬಾಬಾಸಾಹೇಬ ಅಂಬೇಡ್ಕರ್: ಕೊನೆಯ ರಾತ್ರಿಯ ಅನನ್ಯ ಕರ್ತವ್ಯ
ನಟರಾಜ್ ಹುಳಿಯಾರ್
ಬಾಬಾಸಾಹೇಬರು ತಮ್ಮ ಹದಿಹರೆಯದ ಶುರುವಿನಲ್ಲಿ ಆರಂಭಿಸಿದ ಬೌದ್ಧ ಹುಡುಕಾಟ ಡಿಸೆಂಬರ್ 6ರ ರಾತ್ರಿ ಅವರು ಕೊನೆಯ ಉಸಿರೆಳೆಯುವವರೆಗೂ ಮುಂದುವರಿದೇ ಇತ್ತು. ತಾವು ಬದುಕಿನಲ್ಲಿ ಕೈಗೆತ್ತಿಕೊಂಡ ಮಹತ್ವದ ಕೆಲಸವೊಂದನ್ನು ಮುಗಿಸುವ ಸಂಕಲ್ಪಅವರ ಕೊನೆಯ ಗಳಿಗೆಯವರೆಗೂ ಜೀವಂತವಾಗಿತ್ತು. ಬಾಬಾಸಾಹೇಬರ ಈ ಅನನ್ಯ ಕಾಯಕ ಪ್ರಜ್ಞೆ ಹಾಗೂ ಬದ್ಧತೆ ನಮ್ಮೆಲ್ಲರಿಗೂ ಅನುದಿನದ ಸ್ಫೂರ್ತಿಯಾಗಲಿ.
1956ನೇ ಇಸವಿಯ ಡಿಸೆಂಬರ್ 5ರ ರಾತ್ರಿ 12 ಗಂಟೆಯ ಹೊತ್ತಿಗೆ ಬಾಬಾಸಾಹೇಬ ಅಂಬೇಡ್ಕರ್ ಅವರ ಮನೆಯಿಂದ ಹೊರಟ ಅವರ ಪ್ರೀತಿಯ ಶಿಷ್ಯ ನಾನಕ್ ಚಂದ್ ರತ್ತುವಿಗೆ ಬಾಬಾಸಾಹೇಬರ ಸಾವಿನ ಸೂಚನೆಗಳೇನೂ ಕಂಡಿರಲಿಲ್ಲ. ಆದರೆ ನಾಲ್ಕು ತಿಂಗಳ ಕೆಳಗೆ ಅಂಬೇಡ್ಕರ್ ನಿರಾಶರಾಗಿ ಕಣ್ಣೀರು ಹಾಕುತ್ತಾ ಮಾತಾಡುತ್ತಿದ್ದುದನ್ನು ಕಂಡ ರತ್ತುವಿಗೆ ಅವರ ಕೊನೆಯ ದಿನಗಳು ಹತ್ತಿರವಿದ್ದಂತೆ ಕಂಡಿದ್ದವು. ಆ ಕಾಲದಲ್ಲಿ ಅಂಬೇಡ್ಕರ್ ಸದಾ ದುಃಖದಲ್ಲಿ ಮುಳುಗಿರುತ್ತಿದ್ದುದನ್ನು ನೋಡುತ್ತಿದ್ದ ರತ್ತು ಅಳುಕುತ್ತಾ ಕೇಳಿದರು: ‘‘ಸರ್, ಈಚೆಗೆ ತಾವು ಯಾಕಿಷ್ಟು ದುಃಖಿಯಾಗಿರು ತ್ತೀರಿ? ಆಗಾಗ ಅಳುತ್ತಿರುತ್ತೀರಿ. ಹೀಗೆ ಕೇಳುತ್ತಿರುವುದಕ್ಕೆ ಕ್ಷಮೆಯಿರಲಿ ಸರ್. ಆದರೆ ದಯವಿಟ್ಟು ನಿಮ್ಮ ದುಃಖಕ್ಕೆ ಕಾರಣವೇನು, ಹೇಳಿ.’’
ಚಣ ಸುಮ್ಮನಿದ್ದ ಬಾಬಾಸಾಹೇಬರ ಕಂಠ ಬಿರಿದು ಹೊರಬಿದ್ದ ಮಾತುಗಳ ಸಾರ ಇದು: ‘‘ನನ್ನ ಮೊದಲ ಚಿಂತೆ- ನನ್ನ ಬದುಕಿನ ಉದ್ದೇಶ ಇನ್ನೂ ಈಡೇರಿಲ್ಲ; ನನ್ನ ಜನ ಇನ್ನಿತರ ಸಮುದಾಯಗಳ ಜನರೊಡನೆ ಸಮಾನವಾಗಿ ರಾಜಕೀಯ ಅಧಿಕಾರ ಹಂಚಿಕೊಂಡು ಆಳುವ ವರ್ಗವಾಗುವುದನ್ನು ಕಾಣಬೇಕೆಂದು ನಾನು ಬಯಸಿದ್ದೆ. ಅನಾರೋಗ್ಯ ನನ್ನೆಲ್ಲ ಚಟುವಟಿಕೆಗಳನ್ನು ಕುಂಠಿತಗೊಳಿಸಿದೆ. ನಾನು ಈತನಕ ಸಾಧಿಸಿದ ಅಷ್ಟಿಷ್ಟು ಗುರಿಗಳಿಂದಾಗಿ ಅನುಕೂಲ ಪಡೆದಿರುವ ವಿದ್ಯಾವಂತರು ದಮನಕ್ಕೊಳಗಾದ ತಮ್ಮ ಅಣ್ಣತಮ್ಮಂದಿರ ಬಗ್ಗೆ ಅನುಕಂಪ ತೋರಿಸುತ್ತಿಲ್ಲ. ಇವತ್ತಿಗೂ ಹಳ್ಳಿಗಳಲ್ಲಿ ಯಾತನೆ ಪಡುತ್ತಾ, ಒಂದಿಷ್ಟೂ ಆರ್ಥಿಕ ಬದಲಾವಣೆ ಕಾಣದ ಆ ಬೃಹತ್ ಅನಕ್ಷರಸ್ಥ ಸಮುದಾಯಕ್ಕಾಗಿ ನಾನು ಕೆಲಸ ಮಾಡಬೇಕೆಂದುಕೊಂಡಿದ್ದೆ. ಆದರೆ ನನ್ನ ಬದುಕು ಮುಗಿಯತೊಡಗಿದೆ... ನನ್ನ ಬಹುಮುಖ್ಯ ಪುಸ್ತಕಗಳಾದ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಪ್ರಾಚೀನ ಇಂಡಿಯಾದಲ್ಲಿ ಕ್ರಾಂತಿ-ಪ್ರತಿಕ್ರಾಂತಿ, ಹಿಂದೂ ಧರ್ಮದ ಒಗಟುಗಳು ಇವನ್ನೆಲ್ಲ ಬರೆದು ಮುಗಿಸಲು ಆಗುತ್ತಿಲ್ಲ. ನಾನು ತೀರಿಕೊಂಡ ಮೇಲೆ ಇವನ್ನು ಯಾರೂ ಪ್ರಕಟಿಸಲಾರರು ಎಂಬುದು ನನ್ನನ್ನು ಚಿಂತೆಗೀಡು ಮಾಡಿದೆ... ನಾನು ಬದುಕಿರುವಾಗಲೇ ದಲಿತ ವರ್ಗಗಳ ಚಳವಳಿಯನ್ನು ನಡೆಸಲು ಮುಂದೆ ಬರುವ ವ್ಯಕ್ತಿಗಳನ್ನು, ಅದನ್ನು ಮುಂದೆಯೂ ನಡೆಸಬಲ್ಲವರನ್ನು ಹುಡುಕುತ್ತಿದ್ದೇನೆ. ಅಂತಹ ಯಾರೊಬ್ಬರೂ ಕಾಣುತ್ತಿಲ್ಲ... ನಾನು ಈ ದೇಶದ, ಈ ಜನರ ಸೇವೆ ಮಾಡಬೇಕೆಂದು ಹೊರಟಿದ್ದೆ. ಆದರೆ ಇಷ್ಟೊಂದು ಜಾತಿಪೀಡಿತ ವಾದ, ಪೂರ್ವಗ್ರಹಗಳಿರುವ ದೇಶದಲ್ಲಿ ಹುಟ್ಟುವುದೇ ಪಾಪ... ಈ ದೇಶ ಎಂತಹ ಪ್ರಪಾತಕ್ಕೆ ಬೀಳತೊಡಗಿದೆ...’’
ತಮ್ಮ ಮಾತು ಕೇಳುತ್ತಾ ಕಣ್ಣೀರಿಡುತ್ತಿದ್ದ ರತ್ತುವಿಗೆ ಅಂಬೇಡ್ಕರ್ ಹೇಳಿದರು: ‘‘ಧೈರ್ಯ ತಂದುಕೋ. ಬದುಕು ಒಂದಲ್ಲ ಒಂದು ದಿನ ಮುಗಿಯಲೇಬೇಕು. ’’
ಇದಾದ ನಾಲ್ಕು ತಿಂಗಳ ನಂತರ, ಡಿಸೆಂಬರ್ 3ರಂದು, ಕಾಯಿಲೆಯಾಗಿ ಮಲಗಿದ್ದ ತಮ್ಮ ಕೈತೋಟದ ಮಾಲಿಯ ಆರೋಗ್ಯ ವಿಚಾರಿಸಲು ಅಂಬೇಡ್ಕರ್ ಅವನ ಮನೆಗೆ ಹೋಗಿದ್ದರು. ಸಾವಿನಂಚಿನಲ್ಲಿದ್ದ ಮಾಲಿಯ ಕಣ್ಣೀರು ಕಂಡ ಅಂಬೇಡ್ಕರ್ ರತ್ತುವಿಗೆ ಹೇಳಿದರು: ‘‘ನೋಡು, ಈ ಮನುಷ್ಯ ಸಾವಿನ ಕಲ್ಪನೆಯಿಂದ ಅಂಜಿಕೊಂಡಿದ್ದಾನೆ. ನನಗೆ ಸಾವಿನ ಭಯವೆಂಬುದಿಲ್ಲ. ಮರಣ ಯಾವಾಗಲಾದರೂ ಬರಲಿ, ನಾನು ಅದನ್ನು ಬರಮಾಡಿಕೊಳ್ಳಲು ಸಿದ್ಧನಿದ್ದೇನೆ.’’ ಇದಾದ ಎರಡು ದಿನಗಳ ನಂತರ, ಡಿಸೆಂಬರ್ 5ರ ಸಂಜೆ ಅಂಬೇಡ್ಕರ್ ಕೊಂಚ ಉದ್ವಿಗ್ನರಾಗಿದ್ದಂತೆ ರತ್ತುವಿಗೆ ಕಂಡಿತು. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಜೈನ ಸಮಾಜದ ನಾಯಕರು ಬಂದು ‘ಜೈನ ಔರ್ ಬುದ್ಧ’ ಪುಸ್ತಕವನ್ನು ಅಂಬೇಡ್ಕರರಿಗೆ ಕೊಟ್ಟು, ಅವರನ್ನು ಜೈನಸಭೆಯೊಂದಕ್ಕೆ ಆಹ್ವಾನಿಸಿ ಹೊರಟರು. ನಂತರ ರತ್ತು ಅಂಬೇಡ್ಕರ್‌ರ ದಣಿದ ಕಾಲುಗಳನ್ನು ಒತ್ತತೊಡಗಿದರು; ಚಣ ಬಿಟ್ಟು ಅವರ ತಲೆಗೆ ಎಣ್ಣೆ ಹಚ್ಚಿದರು. ಕೊಂಚ ಹಾಯೆನ್ನಿಸಿದಂತಾಗಿ, ಅಂಬೇಡ್ಕರ್ ಕಂಠದಿಂದ ಮೆಲುವಾಗಿ ಹೊರಟ ‘ಬುದ್ಧಂ ಶರಣಂ ಗಚ್ಛಾಮಿ’ ಪ್ರಾರ್ಥನೆ ಬರಬರುತ್ತಾ ಗಟ್ಟಿಯಾಗಿ ಕೇಳತೊಡಗಿತು. ಅವರ ಬಲಗೈ ಬೆರಳುಗಳು ಸೋಫಾದ ಮೇಲೆ ತಾಳ ಹಾಕುತ್ತಿದ್ದವು. ಅವರ ಇಚ್ಛೆಯಂತೆ ರತ್ತು ರೇಡಿಯೋಗ್ರಾಂನಲ್ಲಿ ‘ಬುದ್ಧಂ ಶರಣಂ ಗಚ್ಛಾಮಿ’ ಪ್ರಾರ್ಥನೆ ಹಾಕಿದರು. ಅಂಬೇಡ್ಕರ್ ಪ್ರಾರ್ಥನೆಗೆ ದನಿಗೂಡಿಸಿದರು. ಮೇಲೆದ್ದ ಅಂಬೇಡ್ಕರ್ ಕಪಾಟುಗಳಿಂದ ಹಲವು ಪುಸ್ತಕಗಳನ್ನು ತೆಗೆದುಕೊಂಡು, ಅವನ್ನು ಹಾಸಿಗೆಯ ಬಳಿಯ ಮೇಜಿನ ಮೇಲಿಡಲು ರತ್ತುವಿಗೆ ಹೇಳಿದರು. ಸ್ವಲ್ಪಊಟ ಮಾಡಿ, ಕೋಲೂರಿಕೊಂಡು ಮೇಲೆದ್ದ ಅಂಬೇಡ್ಕರ್ ಬಾಯಿಂದ ‘‘ಚಲ್ ಕಬೀರ್ ತೇರ ಭವಸಾಗರ್ ಡೇರಾ’’ ಎಂಬ ಕವಿ ಕಬೀರರ ಸಾಲು ತೇಲಿ ಬರುತ್ತಿತ್ತು. ‘‘ನಡೆ ಕಬೀರಾ ನಿನ್ನ ಭವಸಾಗರವು ಡೇರೆಯಂತೆ’’ ಎಂದು ಜೀವನಪಯಣದ ತಾತ್ಕಾಲಿಕತೆಯನ್ನು ಸೂಚಿಸುವ ಈ ಪದವನ್ನು ಗುಣುಗುಣಿಸುತ್ತಾ ಅವರ ಕಣ್ಣು ದಣಿವಿನಿಂದ ಮುಚ್ಚಿಕೊಳ್ಳತೊಡಗಿದ್ದವು. ಹೊರಡುವ ಮುನ್ನ ಅವರ ಗಮನ ಸೆಳೆಯಲು ರತ್ತು ಟೇಬಲ್ ಮೇಲಿದ್ದ ಪುಸ್ತಕಗಳನ್ನು ಸರಿಸಿದಾಗ ಅಂಬೇಡ್ಕರ್ ಕಣ್ತೆರೆದರು. ರಾತ್ರಿ 12 ಗಂಟೆಗೆ ತನ್ನ ಮನೆಗೆ ಹೊರಡಲು ರತ್ತು ಸೈಕಲೇರಿ ಗೇಟು ದಾಟುವಷ್ಟರಲ್ಲಿ ಅಡಿಗೆಯ ಸುದಾಮ ರತ್ತುವನ್ನು ಕರೆಯಲು ಓಡೋಡಿ ಬಂದ. ಮತ್ತೆ ಒಳಬಂದ ರತ್ತುವಿಗೆ ಅಂಬೇಡ್ಕರ್ ತಾವು ಬರೆದಿಟ್ಟಿದ್ದ ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಪುಸ್ತಕದ ಮುನ್ನುಡಿ ಹಾಗೂ ಪ್ರಸ್ತಾವನೆಗಳ ಟೈಪಾದ ಹಾಳೆಗಳನ್ನು, ಪತ್ರಗಳನ್ನು ತರಲು ಹೇಳಿದರು. ಅಡುಗೆಯ ಸುದಾಮ ಎಂದಿನಂತೆ ಕಾಫಿ ಫ್ಲಾಸ್ಕ್ ಹಾಗೂ ಸಿಹಿತಿಂಡಿಗಳನ್ನು ತಂದು ಹಾಸಿಗೆಯ ಬದಿಯಲ್ಲಿಟ್ಟ. ಅಂಬೇಡ್ಕರ್ ರತ್ತು ತಂದಿತ್ತ ಹಾಳೆಗಳು, ಪತ್ರಗಳನ್ನು ನೋಡುತ್ತಾ, ‘‘ಈಗ ಹೊರಡು. ಬೆಳಗ್ಗೆ ಬಂದು ಇವನ್ನೆಲ್ಲ ತಪ್ಪದೆ ಕಳಿಸಬೇಕು. ಇವನ್ನೆಲ್ಲ ರಾತ್ರಿಯೇ ಓದಿ ಮುಗಿಸುತ್ತೇನೆ.’’ ಎಂದರು. ಇದು ರತ್ತುವಿನ ಕಿವಿಗೆ ಬಿದ್ದ ಅಂಬೇಡ್ಕರ್ ಅವರ ಕೊನೆಯ ಮಾತು.
ಈ ವಿವರಗಳೆಲ್ಲ ರತ್ತು ಅವರ ನೆನಪುಗಳ ಪುಸ್ತಕದಲ್ಲಿವೆ. ಆ ರಾತ್ರಿ ಅಂಬೇಡ್ಕರ್ ತಮ್ಮ ಕೊನೆಯ ಮಹತ್ವದ ಕರ್ತವ್ಯವೊಂದನ್ನು ಮುಗಿಸಹೊರಟವರಂತೆ ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಪುಸ್ತಕಕ್ಕೆ ತಾವು ಬರೆದ ಮುನ್ನುಡಿ ಹಾಗೂ ಪ್ರಸ್ತಾವನೆ ಎರಡರ ಮೇಲೂ ಕಣ್ಣಾಡಿಸಿರಬಹುದು, ತಿದ್ದಿರಬಹುದು ಎಂದು ನಾವು ಊಹಿಸಬಹುದು. ಪುಸ್ತಕದ ಪ್ರಸ್ತಾವನೆ ಒಂದು ರೀತಿಯಲ್ಲಿ ಮುಗಿದಂತಿದೆ. ಆದರೆ ಅವರ ಅಪೂರ್ಣ ಮುನ್ನುಡಿ ಮಾತ್ರ ಮುಂದೆ ಎಷ್ಟೋ ವರ್ಷಗಳವರೆಗೂ ಅಚ್ಚಾಗಿರಲಿಲ್ಲ. ಆ ಮುನ್ನುಡಿಯ ಕೆಲವು ಮಾತುಗಳಿವು: ‘‘ನೀವು ಯಾಕೆ ಬೌದ್ಧಧರ್ಮದತ್ತ ವಾಲಿದ್ದೀರಿ?’’ ಎಂದು ಜನ ಆಗಾಗ ನನ್ನನ್ನು ಕೇಳುತ್ತಾರೆ. ಇದಕ್ಕೆ ನನ್ನ ನೇರ ಉತ್ತರ: ‘‘ನನ್ನ ಪ್ರಕಾರ ಬುದ್ಧನ ದಮ್ಮ ಶ್ರೇಷ್ಠ ಧರ್ಮ. ಬೇರಾವ ಧರ್ಮವನ್ನೂ ಈ ದಮ್ಮಕ್ಕೆ ಹೋಲಿಸಲಾಗದು. ವಿಜ್ಞಾನವನ್ನು ಬಲ್ಲ ಯಾವುದೇ ಮನುಷ್ಯನಿಗೆ ಧರ್ಮ ಬೇಕೆನ್ನಿಸಿದರೆ, ಅವನು ಆರಿಸಿಕೊಳ್ಳಲು ಬಯಸುವುದು ಬೌದ್ಧ ಧರ್ಮವನ್ನು ಮಾತ್ರ. ಕಳೆದ 35 ವಷರ್ಗಳಲ್ಲಿ ಎಲ್ಲ ಧರ್ಮಗಳನ್ನೂ ಅಧ್ಯಯನ ಮಾಡಿದ ಮೇಲೆ, ಈ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ. ನನಗೆ ಬುದ್ಧಿಸಂ ಕುರಿತ ಪ್ರೇರಣೆ ಎಲ್ಲಿಂದ ಬಂತು ಎನ್ನುವುದನ್ನು ಹೇಳಹೊರಟರೆ ಅದೇ ಒಂದು ಕತೆಯಾಗುತ್ತದೆ. ಅದು ಆದದ್ದು ಹೀಗೆ. ನಾನು ಇಂಗ್ಲಿಷ್ ಫೋರ್ತ್ ಸ್ಟ್ಯಾಂಡರ್ಡ್ ಪಾಸಾದಾಗ ನಮ್ಮ ಸಮುದಾಯದವರು ನನ್ನನ್ನು ಅಭಿನಂದಿಸಲು ಒಂದು ಸಭೆ ಏರ್ಪಡಿಸಲು ಹೊರಟಿದ್ದರು. ಈ ಹಂತಕ್ಕೆ ಏರಿದ ಸಮುದಾಯದ ಮೊದಲ ಹುಡುಗ ನಾನೆಂದು ಅವರಿಗೆಲ್ಲ ಹೆಮ್ಮೆ. ನಮ್ಮಪ್ಪಅದೆಲ್ಲ ಬೇಡವೆಂದರು. ಆಗ ನಮ್ಮ ಜನ ಆ ಕಾಲದ ದೊಡ್ಡ ಲೇಖಕರಾದ ಕೇಳುಸ್ಕರ್ ಅವರಿಂದ ಅಪ್ಪನಿಗೆ ಹೇಳಿಸಿದರು. ಕೇಳುಸ್ಕರ್ ಅವರೇ ಆ ಸಭೆಗೆ ಬಂದರು. ತಾವು ಬರೆದ ‘ಲೈಫ್ ಆಫ್ ಗೌತಮ ಬುದ್ಧ’ ಎಂಬ ಹೊಸ ಪುಸ್ತಕವನ್ನು ನನಗೆ ಕೊಟ್ಟರು. ಆ ಪುಸ್ತಕವನ್ನು ಅಪಾರ ಆಸಕ್ತಿಯಿಂದ ಓದಿದೆ; ಭಾವುಕನಾದೆ, ಪ್ರಭಾವಿತನಾದೆ...’’
‘‘...ನಮ್ಮಪ್ಪಯಾಕೆ ನಮಗೆ ಬೌದ್ಧಸಾಹಿತ್ಯದ ಪರಿಚಯ ಮಾಡಲಿಲ್ಲ ಎಂಬ ಪ್ರಶ್ನೆ ಆಗ ನನ್ನಲ್ಲಿ ಹುಟ್ಟಿತು. ಕೊನೆಗೆ ಅವರಿಗೆ ಹೇಳಿಯೇಬಿಟ್ಟೆ: ಯಾಕೆ ಮಹಾಭಾರತ, ರಾಮಾಯಣಗಳನ್ನೇ ಓದಲು ನಮ್ಮನ್ನು ಒತ್ತಾಯ ಮಾಡುತ್ತಿದ್ದಿರಿ? ಇವು ಬ್ರಾಹ್ಮಣರ, ಕ್ಷತ್ರಿಯರ ಹಿರಿಮೆಯನ್ನು ಒತ್ತಿ ಹೇಳುತ್ತವೆ; ಶೂದ್ರರ, ಅಸ್ಪಶ್ಯರ ಹೀನಸ್ಥಾನವನ್ನು ಪ್ರತಿಪಾದಿಸುತ್ತವೆ. ಅಪ್ಪನಿಗೆ ನನ್ನ ಮಾತಿನ ಧಾಟಿ ಇಷ್ಟವಾಗಲಿಲ್ಲ. ಮತ್ತೆ ಅಪ್ಪನಿಗೆ ಹೇಳಿದೆ: ‘ಭೀಷ್ಮ, ದ್ರೋಣ, ಕೃಷ್ಣರನ್ನು ನಾನು ಇಷ್ಟಪಡುವುದಿಲ್ಲ. ಭೀಷ್ಮ ಮತ್ತು ದ್ರೋಣರು ಬೂಟಾಟಿಕೆಯ ವ್ಯಕ್ತಿಗಳು. ತಾವು ಹೇಳಿದ್ದಕ್ಕೆ ವಿರುದ್ಧವಾದುದನ್ನು ಮಾಡುತ್ತಿದ್ದರು. ಕೃಷ್ಣ ಕಪಟದಲ್ಲಿ ನಂಬಿಕೆ ಇಟ್ಟಿದ್ದ; ರಾಮ ಶೂರ್ಪನಖಿ ಹಾಗೂ ವಾಲಿ-ಸುಗ್ರೀವ ಪ್ರಕರಣಗಳಲ್ಲಿ ನಡೆದುಕೊಂಡ ರೀತಿಯನ್ನು, ಸೀತೆಯನ್ನು ಕುರಿತ ರಾಮನ ಕ್ರೂರ ವರ್ತನೆಯನ್ನು ನಾನು ಇಷ್ಟಪಟ್ಟವನಲ್ಲ.’ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಅಪ್ಪಮಾತಾಡಲಿಲ್ಲ. ಸುಮ್ಮನಿದ್ದರು. ಮನೆಯಲ್ಲಿ ಒಂದು ದಂಗೆಯೆದ್ದಿದೆ ಎಂಬುದು ಅವರ ಅರಿವಿಗೆ ಬಂದಿತ್ತು...’’
‘‘ನಾನು ಬುದ್ಧನೆಡೆಗೆ ತಿರುಗಿದ್ದು ಹೀಗೆ; ದಾದಾ ಕೇಳುಸ್ಕರ್ ಅವರ ಪುಸ್ತಕದ ಮೂಲಕ. ನಾನು ಖಾಲಿ ತಲೆಯಲ್ಲಿ ಬುದ್ಧನೆಡೆಗೆ ತಿರುಗಲಿಲ್ಲ. ಅದಕ್ಕೊಂದು ಹಿನ್ನೆಲೆಯಿತ್ತು. ಬುದ್ಧನ ಸಾಹಿತ್ಯವನ್ನು ಓದುತ್ತಾ, ಇತರ ಧರ್ಮಗಳಿಗೂ ಇದಕ್ಕೂ ಇರುವ ಹೋಲಿಕೆ, ವ್ಯತ್ಯಾಸಗಳನ್ನು ಗಮನಿಸಿದೆ. ಬುದ್ಧ ಮತ್ತು ಅವನ ದಮ್ಮದ ಬಗೆಗಿನ ನನ್ನ ಆಸಕ್ತಿಯ ಮೂಲ ಇದು. ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಪುಸ್ತಕ ಬರೆಯಲು ಶುರು ಮಾಡಿದ ಕಾಲಕ್ಕೆ ನನ್ನ ಆರೋಗ್ಯ ಕೆಡತೊಡಗಿತ್ತು; ಸ್ಥಿತಿ ಈಗಲೂ ಹಾಗೇ ಇದೆ. ಕಳೆದ ಐದು ವರ್ಷಗಳಲ್ಲಿ ನನ್ನ ಆರೋಗ್ಯ ಹಲವು ಏರಿಳಿತಗಳನ್ನು ಕಂಡಿದೆ. ಎಷ್ಟೋ ಸಲ ನನ್ನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ, ವೈದ್ಯರು ನನ್ನನ್ನು ನಂದಿಹೋಗುತ್ತಿರುವ ಜ್ವಾಲೆ ಎಂದಿದ್ದೂ ಇದೆ. ಆದರೆ ನಂದಿಹೋಗುತ್ತಿರುವ ಜ್ವಾಲೆಗೆ ಮತ್ತೆ ಜೀವ ತುಂಬಿದ್ದು ನನ್ನ ಪತ್ನಿ ಮತ್ತು ಡಾ. ಮಲ್ವಂಕರ್ ಅವರ ವೈದ್ಯಕೀಯ ಕೌಶಲ್ಯ. ಈ ಪುಸ್ತಕವನ್ನು ಮುಗಿಸಲು ನೆರವಾದವರು ಅವರಿಬ್ಬರೇ.’’
ಅಂಬೇಡ್ಕರ್ ತಮ್ಮ ಕೊನೆಯ ರಾತ್ರಿ ಕಣ್ಣಾಡಿಸಿರಬಹುದಾದ ಈ ಮುನ್ನುಡಿಯ ಜೊತೆಗೇ ಈ ಪುಸ್ತಕದ ಪ್ರಸ್ತಾವನೆಯೂ ಇತ್ತು. ಈ ಪ್ರಸ್ತಾವನೆಯಲ್ಲಿ ಬೌದ್ಧ ಧರ್ಮವನ್ನು ಆರ್ಯರ ಸುಳ್ಳುಗಳಿಂದ ಬಿಡಿಸುವ ತಮ್ಮ ಬೌದ್ಧಿಕ ಪ್ರಯತ್ನ ಕುರಿತು ಅಂಬೇಡ್ಕರ್ ಹೇಳುತ್ತಾರೆ. ಕೊನೆಗೆ ಈ ಮಾತನ್ನೂ ಬರೆಯುತ್ತಾರೆ: ‘‘ಬೌದ್ಧಧರ್ಮವನ್ನು ಕುರಿತು ‘ಮಹಾಬೋಧಿ’ ಜರ್ನಲ್‌ನಲ್ಲಿ ಪ್ರಕಟವಾಗುತ್ತಿರುವ ಬರಹಗಳು ನಿಷ್ಕ್ರಿಯ ಓದುಗರನ್ನು ಮಾತ್ರ ತಲುಪುತ್ತಿರುವಂತಿವೆ... ನಾನು ಈ ಪುಸ್ತಕದಲ್ಲಿ ಎತ್ತಿರುವ ಪ್ರಶ್ನೆಗಳು ಓದುಗರನ್ನು ಪ್ರಶ್ನೆಗಳಿಗೆ ಪರಿಹಾರ ಹುಡುಕುವಂತೆ ಉತ್ತೇಜಿಸುತ್ತವೆಂದು ನಿರೀಕ್ಷಿಸುವೆ.’’
ಬಾಬಾಸಾಹೇಬ ಅಂಬೇಡ್ಕರ್ ಅವರು ಕೊನೆಯ ರಾತ್ರಿ ಕಣ್ಣಾಡಿಸಿದ ಪುಟಗಳ ಈ ಕೊನೆಯ ನಿರೀಕ್ಷೆ ಒಂದರ್ಥದಲ್ಲಿ ಸಫಲವಾಗಿದೆ. ‘ಬುದ್ಧ ಆ್ಯಂಡ್ ಹಿಸ್ ಧಮ್ಮ' ಪುಸ್ತಕ ಇಂಡಿಯಾದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಲಕ್ಷಾಂತರ ಓದುಗರು ಈ ಪ್ರಶ್ನೆಗಳಿಗೆ ಪರಿಹಾರ ಹುಡುಕುವಂತೆ ಪ್ರೇರೇಪಿಸಿದೆ. ಬಾಬಾಸಾಹೇಬರು ತಮ್ಮ ಹದಿಹರೆಯದ ಶುರುವಿನಲ್ಲಿ ಆರಂಭಿಸಿದ ಬೌದ್ಧ ಹುಡುಕಾಟ ಡಿಸೆಂಬರ್ 6ರ ರಾತ್ರಿ ಅವರು ಕೊನೆಯ ಉಸಿರೆಳೆಯುವವರೆಗೂ ಮುಂದುವರಿದೇ ಇತ್ತು. ತಾವು ಬದುಕಿನಲ್ಲಿ ಕೈಗೆತ್ತಿಕೊಂಡ ಮಹತ್ವದ ಕೆಲಸವೊಂದನ್ನು ಮುಗಿಸುವ ಸಂಕಲ್ಪಅವರ ಕೊನೆಯ ಗಳಿಗೆಯವರೆಗೂ ಜೀವಂತವಾಗಿತ್ತು. ಬಾಬಾಸಾಹೇಬರ ಈ ಅನನ್ಯ ಕಾಯಕ ಪ್ರಜ್ಞೆ ಹಾಗೂ ಬದ್ಧತೆ ನಮ್ಮೆಲ್ಲರಿಗೂ ಅನುದಿನದ ಸ್ಫೂರ್ತಿಯಾಗಲಿ.