ಅಲ್ಪಸಂಖ್ಯಾತರೊಂದಿಗೆ ಸಂವಾದ

Update: 2020-12-07 19:30 GMT

ಮುಸ್ಲಿಮರಾಗಲಿ ಇತರ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರಾಗಲಿ ಈ ದೇಶದ ಎರಡನೇ ದರ್ಜೆಯ ನಾಗರಿಕರಲ್ಲ. ಅವರು ದೇಶದ ಎಲ್ಲಾ ನಾಗರಿಕರಿಗೆ ಸಮಾನವಾದ ನಾಗರಿಕರು. ಹೀಗಾಗಿ, ಅವರು ‘ಧಾರ್ಮಿಕ ಅಲ್ಪಸಂಖ್ಯಾತರು’ ಎಂಬ ಚಿಪ್ಪಿನೊಳಗೆ ಜೀವಿಸುವುದನ್ನು ತಿರಸ್ಕರಿಸಬೇಕು. ತಮ್ಮ ಬಗ್ಗೆ ಯಾರೇ ಅಪಚಾರದ ಮಾತುಗಳನ್ನು ಆಡಿದಾಗ, ಭಾರತದ ಸಮಾನ ನಾಗರಿಕ ಎಂಬ ನೆಲೆಯಿಂದ ಆ ಅಪಚಾರದ ಮಾತುಗಳನ್ನು ದೃಢತೆಯಿಂದ, ಸಂವಿಧಾನ ನೀಡಿರುವ ಶಕ್ತಿಯೊಂದಿಗೆ ಪ್ರತಿಕ್ರಿಯೆ ನೀಡಬೇಕು.


ಧಾರ್ಮಿಕ ಅಲ್ಪಸಂಖ್ಯಾತರ ವಿಷಯದಲ್ಲಿ ರಾಜ್ಯ ಸರಕಾರ ಹೇಗೆ ಕ್ರಮಬದ್ಧವಾಗಿ ನಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದೆ ಎಂಬುದನ್ನು ಡಾ.ರಝಾಕ್ ಉಸ್ತಾದ್, ರಾಯಚೂರು ಇವರು ಮನಗಾಣುವಂತೆ ತಿಳಿಸಿದ್ದಾರೆ (‘ವಾರ್ತಾಭಾರತಿ’ ದಿನಾಂಕ 4 ಡಿಸೆಂಬರ್ 2020). ಇದು ನಿಜಕ್ಕೂ ಸಮಾಜದ ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತರ ಕಣ್ಣು ತೆರೆಸುವಂತಿದೆ. ಇದೊಂದು ಅಪರೂಪದ ಪ್ರತಿಕ್ರಿಯೆ. ಈ ಲೇಖನ ಒಳಗೊಂಡಿರುವ ಚಿಂತನಾ ರೀತಿಯು ಮುಸ್ಲಿಂ ಸಮುದಾಯವನ್ನು ಪ್ರಭಾವಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಗೆ ಅನ್ಯಾಯ ಆದಾಗ, ಪ್ರತಿಯೊಂದು ಸಮುದಾಯ ಸಾಂವಿಧಾನಿಕ ರೀತಿ-ನೀತಿಯಲ್ಲಿ ದೃಢವಾದ ಧ್ವನಿಯನ್ನು ಎತ್ತುವುದು ಅವಶ್ಯ; ಹೀಗೆ ಧ್ವನಿ ಎತ್ತುವುದು ಪ್ರತಿಯೊಂದು ಸಮುದಾಯದ ಹಕ್ಕು; ಇದನ್ನು ಚಲಾಯಿಸುವುದು ಪ್ರತಿಯೊಂದು ಸಮುದಾಯದ ಕರ್ತವ್ಯ.

ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಮುಸ್ಲಿಮರು ಶೇ. 80ಕ್ಕೂ ಹೆಚ್ಚಿನ ಪ್ರಮಾಣವನ್ನು ಹೊಂದಿದ್ದಾರೆ. ಇತರ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ನಿಜಕ್ಕೂ ನೇತೃತ್ವ ನೀಡಬೇಕಾಗಿರುವ ಜನಸಂಖ್ಯಾ ಹೊಣೆಗಾರಿಕೆಯನ್ನು ಮುಸ್ಲಿಮರೇ ಹೊಂದಿದ್ದಾರೆ. ಹಾಗಾಗಿ ಅವರನ್ನು ಉದ್ದೇಶಿಸಿ, ಸಂವಿಧಾನಪರ ಜವಾಬ್ದಾರ ನಾಗರಿಕನಾಗಿ ನಾನು ಈ ಸಂವಾದಕ್ಕೆ ಮುಂದಾಗಿರುವೆ.

ಮುಸ್ಲಿಮರಾಗಲಿ ಇತರ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರಾಗಲಿ ಈ ದೇಶದ ಎರಡನೇ ದರ್ಜೆಯ ನಾಗರಿಕರಲ್ಲ. ಅವರು ದೇಶದ ಎಲ್ಲಾ ನಾಗರಿಕರಿಗೆ ಸಮಾನವಾದ ನಾಗರಿಕರು. ಹೀಗಾಗಿ, ಅವರು ‘ಧಾರ್ಮಿಕ ಅಲ್ಪಸಂಖ್ಯಾತರು’ ಎಂಬ ಚಿಪ್ಪಿನೊಳಗೆ ಜೀವಿಸುವುದನ್ನು ತಿರಸ್ಕರಿಸಬೇಕು. ತಮ್ಮ ಬಗ್ಗೆ ಯಾರೇ ಅಪಚಾರದ ಮಾತುಗಳನ್ನು ಆಡಿದಾಗ, ಭಾರತದ ಸಮಾನ ನಾಗರಿಕ ಎಂಬ ನೆಲೆಯಿಂದ ಆ ಅಪಚಾರದ ಮಾತುಗಳನ್ನು ದೃಢತೆಯಿಂದ, ಸಂವಿಧಾನ ನೀಡಿರುವ ಶಕ್ತಿಯೊಂದಿಗೆ ಪ್ರತಿಕ್ರಿಯೆ ನೀಡಬೇಕು.

ಮುಸ್ಲಿಮರನ್ನು ಅರ್ಥಮಾಡಿಕೊಂಡ ರೀತಿಯಲ್ಲಿ, ನನಗೆ ಅಲ್ಲಿ ಎಚ್ಚೆತ್ತ ನಾಗರಿಕರ ಗುಂಪು, ಸಂವಿಧಾನದಿಂದ ಶಕ್ತಿಯನ್ನು ಪಡೆದುಕೊಂಡ ಗುಂಪು, ಇಡೀ ಸಮಾಜದ ಹಿತದ ಭಾಗವಾಗಿ ಮುಸ್ಲಿಂ ಸಮುದಾಯದ ಹಿತ ಕುರಿತು ದೃಢವಾಗಿ ಮಾತನಾಡುವ ಗುಂಪು ಕಾಣುತ್ತಿಲ್ಲ. ಇದನ್ನು ನಾನು ಟೀಕೆಯ ರೂಪದಲ್ಲಿ ಹೇಳದೆ, ನನ್ನ ಸಹ ನಾಗರಿಕರ ಜವಾಬ್ದಾರಿಯನ್ನು ನೆನಪಿಸುವ ಸೋದರಭಾವದಿಂದ ಹೇಳುತ್ತಿರುವೆ.

ಪ್ರಸ್ತುತ, ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಅನ್ಯಾಯ, ಅಪಚಾರ ನಡೆದಾಗ ಸಮುದಾಯದ ಒಳಗಿನಿಂದಲೇ ಸಕಾಲಕ್ಕೆ, ಸದಾಶಯದ ಮತ್ತು ಹೊಣೆಗಾರಿಕೆಯ ಪ್ರತಿಕ್ರಿಯೆಗಳು ಬರುವುದು ಬಹಳ ಕಡಿಮೆ. ಧರ್ಮದ ವಿಷಯ ಬಂದಾಗ, ಸಮುದಾಯದಲ್ಲಿನ ಧಾರ್ಮಿಕ ಗುಂಪು ಪ್ರತಿಕ್ರಿಯೆ ನೀಡುತ್ತದೆ, ಅಷ್ಟೇ. ಇದು, ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಮಾತನಾಡುವುದು ಇಲ್ಲ ಎಂದೇ ಹೇಳಬೇಕು. ಇಂತಹ ಹೊತ್ತಿನಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಮಾತನಾಡಲು ಮುಂದಾಗುವುದು ವಿವಿಧ ಪಕ್ಷಗಳಲ್ಲಿ ಇರುವ ರಾಜಕೀಯ ನಾಯಕರು; ಇವರನ್ನು ಹೊರತುಪಡಿಸಿ, ಮುಸ್ಲಿಂ ಸಮುದಾಯದಲ್ಲಿ ಜಾಗೃತ, ಜವಾಬ್ದಾರಿಯುತ ನಾಗರಿಕ ಗುಂಪು (ಸಿವಿಲ್ ಸೊಸೈಟಿ) ಇದೆ ಎಂಬುದೇ ಗೊತ್ತಾಗುವುದಿಲ್ಲ; ಏಕೆಂದರೆ, ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ವಿಷಯಗಳಿಗೆ ಸಂಬಂಧಿಸಿ, ಧ್ವನಿ ಎತ್ತುವ ನಾಗರಿಕ ಗುಂಪುಗಳು ಪ್ರಜಾಪ್ರಭುತ್ವದಲ್ಲಿ ಲಭ್ಯ ಇರುವ ಸ್ಥಳಾವಕಾಶವನ್ನು ಬಳಸಿಕೊಂಡಿರುವ ಉದಾಹರಣೆಗಳು ಅತಿ ಕಡಿಮೆ.

ಯಡಿಯೂರಪ್ಪ ಸರಕಾರ ಅಲ್ಪಸಂಖ್ಯಾತ ಸಮುದಾಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್‌ಷಿಪ್ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಸಂಬಂಧಿಸಿ ಕೆಲವೊಂದು ನಕಾರಾತ್ಮಕ ಕ್ರಮಗಳನ್ನು ಕೈಗೊಂಡಿತು. ಅಂತಹ ಸಂದರ್ಭದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ 300 ಪ್ರತಿಭಟನೆಗಳಾದರೂ ನಡೆಯಬೇಕು; ಮುಸ್ಲಿಂ ಶಾಸಕರು ಈ ಕುರಿತು ಪತ್ರಿಕಾ ಹೇಳಿಕೆ ನೀಡಬೇಕು; ಮುಖ್ಯಮಂತ್ರಿಗೆ ಪತ್ರ ಬರೆಯಬೇಕು. ಇವರು ಬರೆಯದಿದ್ದರೆ, ಇವರ ಮೇಲೆ ಜಾಗೃತ ನಾಗರಿಕರ ಗುಂಪು ಒತ್ತಡ ಹೇರಬೇಕು.

ತಮ್ಮ ಅಭಿಪ್ರಾಯವನ್ನು, ವಿರೋಧವನ್ನು ವ್ಯಕ್ತಪಡಿಸುವ ಹಕ್ಕನ್ನು ಪ್ರಜಾಪ್ರಭುತ್ವ ವ್ಯವಸ್ಥೆಯು ಎಲ್ಲರಿಗೂ ನೀಡಿದೆ. ಮುಸ್ಲಿಮರು ಈ ಹಕ್ಕನ್ನು ಬಳಸಿಕೊಳ್ಳುವಲ್ಲಿ ಹಿಂದುಳಿದರೆ, ಅವರು ತಮಗೆ ಇರುವ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿರುವುದನ್ನು ಸಾಬೀತುಪಡಿಸುತ್ತದೆ. ‘‘ತಾವು ಪ್ರಗತಿಯ ದಾರಿಯಲ್ಲಿ ಸಾಗಲು ಹಿಂಜರಿಯುವವರಿಗೆ ಅಲ್ಲಾಹ್ ಕೂಡ ಸಹಾಯ ಮಾಡುವುದಿಲ್ಲ’’ ಎಂಬರ್ಥದ ಮಾತಿದೆ ಎಂಬುದನ್ನು ನಾನು ತಿಳಿದಿದ್ದೇನೆ. ಟಿಪ್ಪುಸುಲ್ತಾನ್ ವಿಷಯದಲ್ಲಿ, ಪ್ರವಾದಿಯವರ ವಿಷಯದಲ್ಲಿ, ಇಸ್ಲಾಂ ಧರ್ಮದ ವಿಷಯದಲ್ಲಿ ಅನ್ಯಾಯ-ಅಪಚಾರದ ಮಾತುಗಳು ಸಮಾಜದಲ್ಲಿ ಯಾವುದಾದರೂ ಮೂಲೆಯಿಂದ ಕೇಳಿ ಬಂದಾಗ, ಮುಸ್ಲಿಂ ಸಮುದಾಯವು ಗುಂಪುಗೂಡಿ ಪ್ರತಿಭಟಿಸಿದ್ದನ್ನು ನಾವು ನೋಡಿದ್ದೇವೆ. ಇದನ್ನು ‘ತಮ್ಮ ಕರ್ತವ್ಯ’ ಎಂದು ತಿಳಿದಿರುವ ಮುಸ್ಲಿಮರ ನಂಬಿಕೆಯನ್ನು, ನಿರ್ಣಯವನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಗೌರವಿಸಲೇಬೇಕು.

ಇದರೊಂದಿಗೆ, ನಮ್ಮಂತಹವರ ಅಪೇಕ್ಷೆ, ಮುಸ್ಲಿಂ ಸಮುದಾಯ ತನ್ನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಪ್ರಗತಿಯ ನಿಟ್ಟಿನಲ್ಲೂ ಕ್ರಿಯಾಶೀಲತೆಯನ್ನು ತೋರಬೇಕು ಎಂಬುದು. ಇಹಲೋಕದಲ್ಲಿ ಹಕ್ಕು, ನ್ಯಾಯ, ಗೌರವ, ವಿಶ್ವಾಸ ಪಡೆದುಕೊಂಡು, ನಮ್ಮ ಸಮಾಜದ ಹಿತವನ್ನು ಕಾಪಾಡುವಲ್ಲಿ ನಮ್ಮ ಕರ್ತವ್ಯವನ್ನು ನಿಭಾಯಿಸುತ್ತಾ ಜೀವಿಸುವುದೇ ಸಾರ್ಥಕ ಬದುಕು ಅಲ್ಲವೇ?

ನಿಜ, ಕೆಲವೊಮ್ಮೆ ಕವಿ ಘಾಲಿಬ್‌ರ ಸಾಲುಗಳು ‘‘ಕೋಯಿ ಉಮ್ಮೀದ್ ಬಾರ್ ನಹಿಂ ಆತಿ-ಕೊಯಿ ಸೂರತ್ ನಜರ್ ನಹಿಂ ಆತಿ’’ (ಆಸೆಗಳು ಈಡೇರಿಯಾವು ಎಂಬ ಭರವಸೆ ಕಾಣುತ್ತಿಲ್ಲ-ಕೈಹಿಡಿದು ನಡೆಸುವಂತಹವರ ಮುಖ ಕಾಣುತ್ತಿಲ್ಲ) ನೆನಪಾಗಿ, ನೈರಾಶ್ಯ ಕವಿದಂತಾಗುತ್ತದೆ. ಆದರೆ, ಇಂತಹ ನಿರಾಶೆಯ ಕತ್ತಲಿನಿಂದ ಆದಷ್ಟು ಶೀಘ್ರವಾಗಿ ನಮ್ಮನ್ನು ಬಿಡಿಸಿಕೊಂಡು, ಬೆಳಕಿನ ಕಡೆಗೆ ಹೊರಳುವ ಆತ್ಮವಿಶ್ವಾಸವನ್ನು ನಾವು ಮೂಡಿಸಿಕೊಳ್ಳಲೇಬೇಕು, ಅಲ್ಲವೇ?

ಹಾಗೆಯೇ, ನಮ್ಮ ಕಾಲದ ಜಾಗೃತ ಕವಿಗಳಲ್ಲಿ ಒಬ್ಬರಾದ ಜಾವೇದ್ ಅಖ್ತರ್ ಅವರ ‘‘ಮೈ ಜಾನತಾ ಹೂಂ ಕಿ ಖಾಮೋಶಿಮೆ ಹಿ ಮಸ್ಲಕಹತ್ ಹೈ-ಮಗರ್ ಯೆ ಮಸ್ಲೆಹತ್ ಮೇರೆ ದಿಲ್‌ಕೊ ಖಲ್ ರಹೀ ಹೈ’’ (ಮೌನವಹಿಸುವುದು ಜಾಣತನ ಇರಬಹುದು-ಆದರೆ, ಮೌನ ನನ್ನ ಹೃದಯವನ್ನು ಘಾಸಿಗೊಳಿಸುತ್ತದಲ್ಲ?) ಎಂಬ ಸಾಲುಗಳನ್ನೂ ನಾವು ನೆನಪಿಸಿಕೊಳ್ಳೋಣ.

ಇದು ಸುಮ್ಮನಿರುವ ಕಾಲವಲ್ಲ; ಇದು ಮುಸ್ಲಿಮರಿಗೆ ಮಾತ್ರ ಅನ್ವಯಿಸುವಂತಹ ಮಾತೇನಲ್ಲ. ಸಾರ್ವಜನಿಕ ಬದುಕಿನಲ್ಲಿ ಪಿಶಾಚಿಗಳ ಠೇಂಕಾರ, ಹೂಂಕಾರ ನಡೆದಿರುವಾಗ ಸಜ್ಜನರು, ಸಮಾಜಹಿತ ಚಿಂತಕರು ಮೌನ ಮುರಿಯಲೇಬೇಕಿದೆ. ಪ್ರಶ್ನೆ ಮಾಡಲೇಬೇಕಿದೆ. ಜನರನ್ನು ಒಗ್ಗೂಡಿಸಲೇಬೇಕಿದೆ.

ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಲ್ಲದ ವ್ಯಕ್ತಿಯಾಗಿ, ಸಾಕಷ್ಟು ಅಳುಕಿನಿಂದಲೇ ಈ ಸಂವಾದಕ್ಕೆ ಮುಂದಾಗಿದ್ದೇನೆ. ನನ್ನ ಕರ್ತವ್ಯವನ್ನು ಕಿಂಚಿತ್ ಮಾಡಿರುವುದಕ್ಕಾಗಿ ನೆಮ್ಮದಿಯಿಂದ ಉಸಿರಾಡುತ್ತೇನೆ.

Writer - ಮಂಗ್ಳೂರ ವಿಜಯ

contributor

Editor - ಮಂಗ್ಳೂರ ವಿಜಯ

contributor

Similar News