ಜಿದ್ದಾ ಬಂದರಿನ ಸಮೀಪ ಸಿಂಗಾಪುರದ ತೈಲ ಹಡಗಿನಲ್ಲಿ ಸ್ಫೋಟ
ರಿಯಾದ್ (ಸೌದಿ ಅರೇಬಿಯ), ಡಿ. 14: ಸೌದಿ ಅರೇಬಿಯದ ಬಂದರು ನಗರ ಜಿದ್ದಾ ಸಮೀಪದ ಸಮುದ್ರದಲ್ಲಿ ಸೋಮವಾರ ಸಿಂಗಾಪುರದ ತೈಲ ಟ್ಯಾಂಕರ್ ಹಡಗಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಹಡಗಿನ ಮಾಲೀಕರು ಹೇಳಿದ್ದಾರೆ.
‘ಬಿಡಬ್ಲ್ಯು ರೈನ್’ ಹಡಗಿನಲ್ಲಿ ಸಂಭವಿಸಿದ ಸ್ಫೋಟದ ಹೊಣೆಯನ್ನು ಈವರೆಗೆ ಯಾವುದೇ ಗುಂಪು ವಹಿಸಿಕೊಂಡಿಲ್ಲ. ಆದರೆ, ಸೌದಿ ಅರೇಬಿಯದ ನೆರೆ ದೇಶ ಯೆಮನ್‌ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೌದಿ ನೆಲೆಗಳ ಮೇಲಿನ ತಮ್ಮ ದಾಳಿಯನ್ನು ಹೆಚ್ಚಿಸಿರುವ ನಡುವೆಯೇ ಈ ಸ್ಫೋಟ ಸಂಭವಿಸಿದೆ. ಯೆಮನ್‌ನ ಬಂಡುಕೋರರ ವಿರುದ್ಧ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆ ಐದು ವರ್ಷಗಳಿಂದ ಸೇನಾ ಕಾರ್ಯಾಚರಣೆ ನಡೆಸುತ್ತಿದೆ.
‘‘ಬಿಡಬ್ಲ್ಯು ರೈನ್ ಹಡಗು ಜಿದ್ದಾದ ಕರಾವಳಿಯಲ್ಲಿರುವಾಗ ಬಾಹ್ಯ ಮೂಲವೊಂದರಿಂದ ಅದರ ಮೇಲೆ ಸ್ಫೋಟಕ ಎಸೆಯಲಾಗಿದೆ. ಪರಿಣಾಮವಾಗಿ ಹಡಗಿನಲ್ಲಿ ಸ್ಫೋಟ ಸಂಭವಿಸಿದೆ ಹಾಗೂ ಬಳಿಕ ಬೆಂಕಿ ಕಾಣಿಸಿಕೊಂಡಿದೆ’’ ಎಂದು ಹಡಗಿನ ಮಾಲೀಕ ಸಂಸ್ಥೆಯಾದ ಸಿಂಗಾಪುರದ ಹಡಗು ಕಂಪೆನಿ ಹಫ್ನಿಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಹಡಗಿನ ಸಿಬ್ಬಂದಿಯು ತೀರದ ಅಗ್ನಿಶಾಮಕ ಸಲಕರಣೆಗಳು ಮತ್ತು ಟಗ್ ದೋಣಿಗಳ ಮೂಲಕ ಬೆಂಕಿಯನ್ನು ನಂದಿಸಿದ್ದಾರೆ. ಹಡಗಿನ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’’ ಎಂದಿದೆ.
ಸೋಮವಾರ ಮಧ್ಯರಾತ್ರಿ ಕಳೆದ ಬಳಿಕ ಸ್ವಲ್ಪವೇ ಹೊತ್ತಿನಲ್ಲಿ ಸ್ಫೋಟ ಸಂಭವಿಸಿದ್ದು, ಹಡಗಿನ ಬುಡಕ್ಕೆ ಹಾನಿಯಾಗಿದೆ ಎಂದು ಹಫ್ನಿಯ ತಿಳಿಸಿದೆ. ತೈಲ ಸೋರಿಕೆಯಾಗಿರುವ ಸಾಧ್ಯತೆಯನ್ನೂ ಅದು ತಳ್ಳಿಹಾಕಿಲ್ಲ.
ಸೌದಿ ಅರೇಬಿಯದ ದಕ್ಷಿಣದ ಶುಖೈಖ್ ಬಂದರಿನ ಸಮೀಪದ ಸಮುದ್ರದಲ್ಲಿ ಕಳೆದ ತಿಂಗಳು ಗ್ರೀಸ್‌ನ ತೈಲ ಟ್ಯಾಂಕರೊಂದರಲ್ಲಿಯೂ ಸ್ಫೋಟ ಸಂಭವಿಸಿತ್ತು.