ಸೌದಿ: ಮಹಿಳಾ ಹಕ್ಕುಗಳ ಹೋರಾಟಗಾರ್ತಿಗೆ 6 ವರ್ಷ ಜೈಲು

Update: 2020-12-28 16:12 GMT
ಫೋಟೊ ಕೃಪೆ: twitter

ರಿಯಾದ್ (ಸೌದಿ ಅರೇಬಿಯ), ಡಿ. 28: ಸೌದಿ ಅರೇಬಿಯದ ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಲುಜೈನ್ ಅಲ್-ಹಜ್ಲೂಲ್‌ಗೆ ಭಯೋತ್ಪಾದನೆ ನಿಗ್ರಹ ಕಾನೂನೊಂದರ ಅಡಿಯಲ್ಲಿ ಸೋಮವಾರ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಅವರು ಎರಡೂವರೆ ವರ್ಷಗಳಿಂದಲೂ ಜೈಲಿನಲ್ಲಿದ್ದಾರೆ. ಅವರ ಬಂಧನವನ್ನು ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಗುಂಪುಗಳು, ಅಮೆರಿಕ ಕಾಂಗ್ರೆಸ್‌ನ ಸದಸ್ಯರು ಮತ್ತು ಯುರೋಪಿಯನ್ ಯೂನಿಯನ್ ಸಂಸದರು ಖಂಡಿಸಿದ್ದಾರೆ.

ಬದಲಾವಣೆಗಾಗಿ ಹೋರಾಟ ನಡೆಸಿದ, ವಿದೇಶಿ ಕಾರ್ಯಸೂಚಿಯನ್ನು ಅನುಸರಿಸಿದ ಹಾಗೂ ಸಾರ್ವಜನಿಕ ವ್ಯವಸ್ಥೆಯನ್ನು ಹಾಳುಗೆಡಹುವುದಕ್ಕಾಗಿ ಇಂಟರ್‌ನೆಟ್ ಬಳಸಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ.

ಲುಜೈನ್ ವಿರುದ್ಧದ ಆರೋಪ ಸಾಬೀತಾಗಿದೆ ಎಂಬ ನಿರ್ಧಾರಕ್ಕೆ ಸೌದಿ ಅರೇಬಿಯದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಬಂದಿದೆ ಎಂದು ಸೌದಿ ಅರೇಬಿಯದ ಸರಕಾರ ಪರ ಮಾಧ್ಯಮ ‘ಸಬ್ಕ್’ ವರದಿ ಮಾಡಿದೆ.

ಲುಜೈನ್ ಮತ್ತು ಇತರ ಕೆಲವು ಸೌದಿ ಮಹಿಳೆಯರು, ವಾಹನ ಚಾಲನೆ ಮಾಡುವ ಹಕ್ಕು ಬೇಕೆಂದು ಹಾಗೂ ಪುರುಷ ರಕ್ಷಕ ಕಾನೂನನ್ನು ರದ್ದುಪಡಿಸಬೇಕೆಂದು ಸಾರ್ವಜನಿಕವಾಗಿ ಕರೆ ನೀಡಿದ್ದರು.

2018ರಲ್ಲಿ ಸೌದಿ ಮಹಿಳೆಯರಿಗೆ ವಾಹನ ಚಾಲನೆ ಹಕ್ಕನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News