ಬೌದ್ಧ ಧರ್ಮ ಮತ್ತು ಮಾಂಸಾಹಾರ
ಬೌದ್ಧ ಧರ್ಮದ ಕುರಿತು ಇರುವ ಒಂದು ಅಪಪ್ರಚಾರವೆಂದರೆ ಬೌದ್ಧ ಧರ್ಮಕ್ಕೆ ಸೇರಿದವರು ಮಾಂಸಾಹಾರ ತಿನ್ನುವ ಹಾಗಿಲ್ಲ, ಹಾಗೆ ಹೀಗೆ ಎಂದು.
ಯಾಕೆ ಹೀಗೆ ಅಂದರೆ ಬೌದ್ಧ ಧರ್ಮ ಎಂದಾಕ್ಷಣ ಎಲ್ಲರೂ ಅಹಿಂಸೆ ಮತ್ತು ಭಿಕ್ಕುಗಳು ಮಾಂಸವನ್ನು ಕಡ್ಡಾಯವಾಗಿ ತ್ಯಜಿಸಬೇಕು ಎಂದುಕೊಳ್ಳುತ್ತಾರೆ ಎಂಬುದು. ಅಂದಹಾಗೆ ಇದು ತಪ್ಪುಕಲ್ಪನೆ. ವಾಸ್ತವ ಏನೆಂದರೆ ಸ್ವತಃ ಗೌತಮ ಬುದ್ಧರೇ ಮಾಂಸಾಹಾರಕ್ಕೆ ಅನುಮತಿ ನೀಡಿದ್ದರು. ಹೌದು, ಇದು ನಿಜ. ಭಿಕ್ಕುಗಳು ಶುದ್ಧ ಎಂದು ಪರಿಗಣಿಸಲ್ಪಟ್ಟಿದ್ದ ಮೂರು ಬಗೆಯ ಮಾಂಸವನ್ನು ಸೇವಿಸಬಹುದಿತ್ತು. ತದನಂತರ ಐದು ಬಗ್ಗೆಯ ಮಾಂಸಕ್ಕೂ ಕೂಡ ಇದನ್ನು ವಿಸ್ತರಿಸಲಾಯಿತು.
ಈ ವಿಚಾರದ ಉಲ್ಲೇಖವನ್ನು ನಾವು ಕ್ರಿ.ಶ.629ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಚೀನಾದ ಬೌದ್ಧ ಯಾತ್ರಿಕ ಹ್ಯೂ ಯೆನ್ ತ್ಸಾಂಗ್‌ನ ಬರಹಗಳಲ್ಲಿ ಕಾಣಬಹುದು. ಹ್ಯೂ ಯೆನ್ ತ್ಸಾಂಗ್ ಭಿಕ್ಕುಗಳು ಸೇವಿಸಬಹುದಾದ ಮೂರು ಬಗೆಯ ಈ ಮಾಂಸವನ್ನು ‘ಸ್ಯಾನ್ ಚಿಂಗ್’ ಎಂದಿದ್ದಾನೆ. ಹಾಗೆಯೇ ಥಾಮಸ್ ವಾಲ್ಟೇರ್ ಎಂಬವರು ಹ್ಯೂ ಯೆನ್ ತ್ಸಾಂಗ್ ಬರಹಗಳ ಆಧಾರಿತ ತಮ್ಮ ಕೃತಿಯೊಂದರಲ್ಲಿ ಭಿಕ್ಕುಗಳು ಮಾಂಸಾಹಾರ ತಿನ್ನಲು ಆರಂಭಿಸಿದ ಕತೆಯನ್ನು ಉಲ್ಲೇಖಿಸುತ್ತಾರೆ. ಆ ಕತೆಯನ್ನು ಡಾ.ಅಂಬೇಡ್ಕರ್‌ರವರು ತಮ್ಮ ‘ದಿ ಅನ್‌ಟಚಬಲ್ಸ್’ ಕೃತಿಯಲ್ಲಿ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂಪುಟ 7, ಪು.347) ಪ್ರಸ್ತಾಪಿಸಿದ್ದಾರೆ. ಆ ಕತೆ ಹೀಗಿದೆ.
ಬುದ್ಧರ ಕಾಲದಲ್ಲಿ ವೈಶಾಲಿ ನಗರದಲ್ಲಿ ಸಿಹ ಎಂಬ ಒಬ್ಬ ಸೇನಾಧಿಪತಿಯಿದ್ದ. ಬೌದ್ಧ ಧರ್ಮದ ಅನುಯಾಯಿಯಾಗಿದ್ದ ಆತ ಇಬ್ಬರು ಭಿಕ್ಕು ಸಹೋದರರನ್ನು ತುಂಬಾ ಪ್ರಗತಿಪರ ಧೋರಣೆಯಿಂದ ಬೆಂಬಲಿಸುತ್ತಿದ್ದ ಮತ್ತು ಆ ಇಬ್ಬರು ಸಹೋದರ ಭಿಕ್ಕುಗಳಿಗೆ ತಿನ್ನಲು ಉತ್ತಮವಾದ ಮಾಂಸಾಹಾರವನ್ನು ನೀಡುತ್ತಿದ್ದ. ಅಂದಹಾಗೆ ಹೀಗೆ ಈ ಇಬ್ಬರು ಭಿಕ್ಕು ಸಹೋದರರು ತಮಗೋಸ್ಕರವೇ ವಿಶೇಷವಾಗಿ ಮಾಡಲ್ಪಡುತ್ತಿದ್ದ ಮಾಂಸಾಹಾರವನ್ನು ತಿನ್ನುತ್ತಿದ್ದ ವಿಷಯ ಇತರ ಭಿಕ್ಕುಗಳಿಗೆ ತಿಳಿಯಿತು. ಈ ನಿಟ್ಟಿನಲ್ಲಿ ಕೋಪಗೊಂಡ ಆ ಭಿಕ್ಕುಗಳು ಈ ಘಟನೆಯನ್ನು ಬುದ್ಧನ ಗಮನಕ್ಕೆ ತಂದರು. ಹಾಗೆ ಬುದ್ಧ ಆ ಇಬ್ಬರು ಸೋದರ ಭಿಕ್ಕುಗಳನ್ನು ಸಭೆಗೆ ಕರೆಸಿದ.
ಸಭೆಯಲ್ಲಿ ಬುದ್ಧ ಆ ಇಬ್ಬರು ಭಿಕ್ಕು ಸಹೋದರರಿಗೆ ‘‘ನಿಮಗೋಸ್ಕರ ಎಂದೇ ಕೊಲ್ಲಲ್ಪಟ್ಟ ಮತ್ತು ಹಾಗೆ ಕೊಲ್ಲುವುದನ್ನು ನೀವು ನೋಡಿದ ಯಾವುದೇ ಪ್ರಾಣಿಗಳನ್ನು ನೀವು ತಿನ್ನುವ ಹಾಗಿಲ್ಲ’’ ಎಂದು ಹೇಳಿದ. ಹಾಗೆ ಹೇಳುತ್ತ ಬುದ್ಧ ಆ ಇಬ್ಬರು ಭಿಕ್ಕು ಸಹೋದರರಿಗೆ ಬದಲಿಗೆ ಕಾನೂನುಬದ್ಧ ಶುದ್ಧ ಮಾಂಸವನ್ನು ಸೇವಿಸಬಹುದು ಎಂದು ಅನುಮತಿ ನೀಡಿದ. ಕಾನೂನುಬದ್ಧ ಅಂದರೆ ಪ್ರಾಣಿಗಳ ಹತ್ಯೆಯನ್ನು ಭಿಕ್ಕುಗಳು ನೋಡಿಲ್ಲದ, ಅವುಗಳ ಹತ್ಯೆಯ ಬಗ್ಗೆ ಕೇಳದಿರದ ಮತ್ತು ತಮಗೋಸ್ಕರವೇ ಅವುಗಳನ್ನು ಹತ್ಯೆಗೈಯಲಾಗಿದೆ ಎಂದು ಭಿಕ್ಕುಗಳು ಅನುಮಾನಪಡದಿರದ ಮಾಂಸ ಎಂದರ್ಥ. ಮುಂದುವರಿದು ಪಾಳಿ ಭಾಷೆಯಲ್ಲಿ ಮತ್ತು ಸ್ಸು ಫೆನ್ ವಿನಯ (ಪಿಟಕ)ದಲ್ಲಿರುವಂತೆ ಸಿಹ ಎಂಬ ಆ ಸೇನಾಧಿಪತಿ ಬುದ್ಧರು ಮತ್ತು ಇತರ ಸಹೋದರರಿಗೆ ತಿನ್ನಲು ಬೆಳಗಿನ ಉಪಾಹಾರ ನೀಡಿದ. ಬೆಳಗಿನ ಆ ಉಪಾಹಾರಕ್ಕೆ ಒಂದು ದೊಡ್ಡ ಹೋರಿಯನ್ನು ಕತ್ತರಿಸಲಾಗಿತ್ತು. ಉಪಾಹಾರದ ನಂತರ ಬುದ್ಧರು ಮೂರು ನಿಬಂಧನೆಗಳ ಆಧಾರದ ಮೇಲೆ ಶುದ್ಧ ಮೀನು ಮತ್ತು ಶುದ್ಧ ಮಾಂಸ ಯಾವುದು ಎಂದು ಹೊಸ ನಿಯಮ ರೂಪಿಸಿದರು. ಹಾಗೆಯೇ ಭಿಕ್ಕುಗಳು ತಿನ್ನಲು ಅನುಮತಿಸಲಾದ ಆ ಮಾಂಸವನ್ನು ‘‘ಮೂರು ಶುದ್ಧ’’ ಅಥವಾ ‘‘ಮೂರು ಶುದ್ಧ ಬಗೆಯ ಮಾಂಸ’’ ಎಂದು ಕರೆಯಲಾಯಿತು. ಮೂರು ಶುದ್ಧ ಎಂದರೆ ‘‘ನೋಡದ, ಕೇಳದ, ಅನುಮಾನಕ್ಕೆ ಆಸ್ಪದವಿಲ್ಲದ’’ ಎಂದಾಗಿದೆ. ಚೀನಾ ಭಾಷೆಯ ಅನುವಾದದಲ್ಲಿ ಇದನ್ನು ‘‘ನನ್ನ ದೃಷ್ಟಿಯಲ್ಲಿ ನೋಡದೆ ಇರದ, ಕೇಳಲ್ಪಡದಿರದ, ಅನುಮಾನಕ್ಕೆ ಅವಕಾಶವಿಲ್ಲದ’’ ಎನ್ನಲಾಯಿತು. ಅಂದಹಾಗೆ ಇದರ ನಂತರ ಇನ್ನೂ ಎರಡು ಬಗೆಯ ಮಾಂಸವನ್ನು ಕಾನೂನುಬದ್ಧ ಎಂದು ಈ ಪೆಟ್ಟಿಗೆ ಸೇರಿಸಲಾಯಿತು. ಅವುಗಳೆಂದರೆ ‘‘ಸ್ವಾಭಾವಿಕ ಸಾವಿಗೀಡಾದ ಪ್ರಾಣಿಗಳ ಮಾಂಸ’’ ಮತ್ತು ‘‘ಪಕ್ಷಿ ಮತ್ತು ಪ್ರಾಣಿಗಳಿಂದ ಬೇಟೆಯಾಡಲ್ಪಟ್ಟ ಮಾಂಸ’’.
ಈ ರೀತಿ ಈ ಐದು ಬಗೆಯ ಮಾಂಸವನ್ನು ಬೌದ್ಧರು ತಮ್ಮ ಇಚ್ಛಾನುಸಾರ ಆಹಾರವಾಗಿ ಸೇವಿಸಬಹುದು ಎಂದು ಘೋಷಿಸಲಾಯಿತು. ಒಟ್ಟಾರೆ ಬೌದ್ಧರು ಸೇವಿಸಬಹುದಾದ ಐದು ಬಗೆಯ ಈ ಮಾಂಸಕ್ಕೆ ‘ಸ್ಯಾನ್ ಚಿಂಗ್’ ಎನ್ನಲಾಯಿತು.