ಅಭಿವೃದ್ಧಿ ಎಂದರೆ ಭೂಸಂಪನ್ಮೂಲಗಳ ಶೋಷಣೆಯೇ?

Update: 2021-03-27 19:30 GMT

ಗ್ರಾನೈಟ್ ದಂಧೆ ಎಗ್ಗಿಲ್ಲದೆ ನಾಡಿನಾದ್ಯಂತ ಎಲ್ಲೆಲ್ಲೂ ನಡೆಯುತ್ತಿದ್ದು ಅದಕ್ಕೆ ಕಡಿವಾಣ ಹಾಕುವುದು ಅಷ್ಟು ಸುಲಭದ ಮಾತಲ್ಲ. ನಮ್ಮ ರಾಜಕಾರಣ ಮತ್ತು ಸಾಮಾಜಿಕ ವ್ಯವಸ್ಥೆ ಬದಲಾಗದಿದ್ದಲ್ಲಿ ಅದು ಸಾಧ್ಯವಾಗದ ಮಾತು. ಈ ಗ್ರಾನೈಟ್ ಬೆಟ್ಟಗುಡ್ಡಗಳು ಸಾಮಾನ್ಯವಾಗಿ ಸರಕಾರಿ ಜಮೀನುಗಳಲ್ಲಿ, ಕಾಡುಮೇಡುಗಳಲ್ಲಿ ಇರುವುದರಿಂದ ಅವುಗಳನ್ನು ಒಡೆದು ಸಾಗಿಸುವುದು ಸುಲಭ. ಯಾವ ಕ್ವಾರಿಗೆ ಅಪ್ಪಣೆ ಇದೆ? ಯಾವುದಕ್ಕೆ ಇಲ್ಲ? ಎನ್ನುವುದು ಸಾರ್ವಜನಿಕರಿಗೆ ಮಾಹಿತಿ ದೊರಕುವುದಿಲ್ಲ. ಆದರೆ ಸಂಬಂಧಪಟ್ಟ ವಿಭಾಗಗಳಿಗೆ ಎಲ್ಲವೂ ಗೊತ್ತಿರುತ್ತದೆ. ಆಯಾ ವಿಭಾಗಗಳ ಅಧಿಕಾರಿಗಳು, ಪಟ್ಟಭದ್ರಹಿತಾಸಕ್ತಿಗಳು ಕೈಜೋಡಿಸಿದಾಗ ಕಳ್ಳರ ಕೆಲಸ ಸುಲಭವಾಗಿಬಿಡುತ್ತದೆ.


ಹೊಲ ಗದ್ದೆ ಜಲಾನಯನ ಮತ್ತು ನದಿ ಪಾತ್ರಗಳಲ್ಲಿ ಕೊನೆಗೆ ಸಮುದ್ರ ದಂಡೆಗಳಲ್ಲೂ ಮರಳನ್ನು ತೆಗೆದು ಖಾಲಿ ಮಾಡಲಾಗುತ್ತಿದೆ. ಈ ಕೆಲಸ ಎರಡು ರೀತಿಯಲ್ಲಿ ನಡೆಯುತ್ತದೆ. ಒಂದು ಸರಕಾರ ಅಪ್ಪಣೆ ಕೊಡುವ ಕಾನೂನಿನ ಮೂಲಕ, ಇನ್ನೊಂದು ಯಾವ ಭಯವೂ ಇಲ್ಲದೆ ನಡೆಸುವ ಹಗಲು ದರೋಡೆ/ಕಳ್ಳತನದ ಮೂಲಕ. ಈ ಎರಡೂ ಪ್ರಕ್ರಿಯೆಗಳು ಎಲ್ಲಾ ರೀತಿಯ ಕೆಲಸಗಳಲ್ಲೂ ಎಲ್ಲಾ ಕಾಲಕ್ಕೂ ಜೊತೆಜೊತೆಯಾಗಿಯೇ ನಡೆಯುತ್ತಿರುವುದು ಈಗ ಮುಕ್ತ ರಹಸ್ಯವಾಗಿದೆ. ಹೆಚ್ಚೆಚ್ಚು ಮರಳು ತೆಗೆಯುತ್ತಾ ಹೋದರೆ ಜಲ ಮೂಲಗಳಿಗೆ ಧಕ್ಕೆಯಾಗುತ್ತದೆ ಎನ್ನುವ ದೂರುಗಳನ್ನು ಕೇಳಿದ ಸರಕಾರ, ಮರಳು ಮತ್ತು ಗೋಡೆಗಳಿಗೆ ಪ್ಲಾಸ್ಟರಿಂಗ್ ಮಾಡುವ ಸ್ಥಳದಲ್ಲಿ ಗ್ರಾನೈಟ್ ಕಲ್ಲುಪುಡಿ (ಎಂ-ಸ್ಯಾಂಡ್) ಮತ್ತು ಗ್ರಾನೈಟ್ ಧೂಳನ್ನು (ಪಿ-ಸ್ಯಾಂಡ್) ಉಪಯೋಗಿಸುವ ತಂತ್ರಜ್ಞಾನ ಬಂದ ಮೇಲೆ ಗ್ರಾನೈಟ್ ಕ್ವಾರಿಗಳಿಗೆ ಲೀಸಿಗೆ ಕೊಡುವ ಕಾನೂನು ತಂದಿತು.

ಈ ಕಾನೂನಿನಿಂದ ಕೋಟಿಕೋಟಿ ವರ್ಷಗಳಿಂದ ಭೂಮಿಯ ಮೇಲೆ ಆರಾಮವಾಗಿ ಗಾಳಿ, ಬೆಳಕು, ಮಳೆಯ ಆನಂದವನ್ನು ಅನುಭವಿಸುತ್ತಿದ್ದ ಬೆಟ್ಟಗುಡ್ಡಗಳು ತೀವ್ರವಾದ ತೊಂದರೆಗೆ ಸಿಲುಕಿಕೊಂಡವು. ಇದಕ್ಕೆ ಮುಂಚೆ ಈ ಬೆಟ್ಟಗುಡ್ಡಗಳು ಭೂಮಿಯ ಮೇಲೆ ಸಂತೋಷವಾಗಿ ಕಾಲ ಕಳೆಯುತ್ತಿದ್ದವು ಎಂದೇನೂ ಅಲ್ಲ. ನಾಲ್ಕಾರು ಸಾವಿರ ವರ್ಷಗಳಿಂದ ಈಚೆಗೆ ಮನುಷ್ಯನಾದವನು ಈ ಗ್ರಾನೈಟ್ ಗುಡ್ಡಗಳಿಗೆ ಬೆಂಕಿ ಹಚ್ಚಿ ಬಂಡೆಗಳನ್ನು ಸೀಳಿ ತೆಗೆದು ಗುಡಿಗುಂಡಾರಗಳು, ಕೋಟೆ, ಸ್ಮಾರಕಗಳು, ಮನೆಮಠ, ಬಂಗಲೆಗಳನ್ನು ಕಟ್ಟಿಕೊಳ್ಳುತ್ತಲೇ ಬಂದಿರುವನು. ಆದರೆ ಅದು ಅಷ್ಟೊಂದು ನೋವಿನ ಸಂಗತಿಯಾಗಿರಲಿಲ್ಲ. ಆದರೆ ಇತ್ತೀಚೆಗೆ ಎಂ-ಸ್ಯಾಂಡ್, ಪಿ-ಸ್ಯಾಂಡ್ ಉತ್ಪಾದನೆ ಮಾಡಲು ಸರಕಾರ ಯಾವಾಗ ಅನುಮತಿ ಕೊಟ್ಟಿತೋ ಅಲ್ಲಿಂದ ಈ ಬೆಟ್ಟಗುಡ್ಡಗಳಿಗೆ ಎಲ್ಲೆಲ್ಲಿಯೂ ನೋವು ಕಾಣಿಸಿಕೊಂಡಿದೆ.
ಆದರೆ ಸರಕಾರ ಗ್ರಾನೈಟ್ ಕ್ವಾರಿಗಳನ್ನು ಮಾಡುವಾಗ ಮುಖ್ಯರಸ್ತೆ, ಹಳ್ಳಿ-ಪಟ್ಟಣ, ದೇವಾಲಯ/ಸ್ಮಾರಕಗಳಿಂದ ಅರ್ಧ ಕಿ.ಮೀ. ದೂರವಾದರೂ ಇರಲೇಬೇಕು ಎನ್ನುತ್ತದೆ. ಆದರೆ ಇದರಿಂದ ಸಮಸ್ಯೆಗಳೇನೂ ನಿವಾರಣೆಯಾಗುವುದಿಲ್ಲ.

ಭೂಮಿಯ ಮೇಲೆ ಬೆಟ್ಟಗುಡ್ಡಗಳ ನೆಲಸಮ ಮಾಡುವಿಕೆ ಎಲ್ಲಿಯೇ ನಡೆಯಲಿ ಅದು ಜಗತ್ತಿನ ಸಾರ್ವತ್ರಿಕ ಪರಿಸರ ಸಮಸ್ಯೆಯಾಗುತ್ತದೆ. ನಮ್ಮ ದೇಶದಲ್ಲಿ ಸರಕಾರಿ ಕಾನೂನುಗಳೆಂದರೆ ರಾಜಕಾರಣಿಗಳು, ಅಧಿಕಾರಿಗಳು, ಹಣವಂತರು ಯಾವ ರೀತಿ ಅದನ್ನು ಪಾಲಿಸುತ್ತಾರೆ ಎನ್ನುವುದು ವಿಶೇಷವಾಗಿ ಇಲ್ಲಿ ವಿವರಿಸುವ ಅವಶ್ಯಕತೆ ಇಲ್ಲ. ನರ ದುರಾಸೆ, ಅದ್ದೂರಿ ಬದುಕು, ಕೊಳ್ಳುಬಾಕತನ, ಹೇರಳ ಹಣ ಕೊಳ್ಳೆ ಹೊಡೆದು ಗುಡ್ಡೆಹಾಕುವ ದಂಧೆ ಜನರನ್ನು ಹುಚ್ಚರನ್ನಾಗಿಸಿದೆ. ಇದರಿಂದ ಜಗತ್ತಿನಾದ್ಯಂತ ಹೆಚ್ಚೆಚ್ಚು ಭೂಸಂಪನ್ಮೂಲಗಳು ಖಾಲಿಯಾಗಲು ಕಾರಣವಾಗಿದೆ. ದೇಶದ ಅಭಿವೃದ್ಧಿಗೆ ಎಲ್ಲವೂ ಬೇಕು. ಆದರೆ ಅದಕ್ಕೊಂದು ಹಂತದಲ್ಲಿ ಕಡಿವಾಣ ಇರಲೇಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಮನುಷ್ಯನು ಮರು ಸೃಷ್ಟಿಸಲಾರ. ಒಮ್ಮೆ ಖಾಲಿಯಾದರೆ ಅದು ಎಂದೆಂದಿಗೂ ಮುಗಿದಂತೆ. ಈ ಪ್ರಕ್ರಿಯೆಯಲ್ಲಿ ಭೂಮಿಯ ಮೇಲಿನ ಸಂಪನ್ಮೂಲಗಳು ಖಾಲಿಯಾದಲ್ಲಿ ಅರಣ್ಯಗಳು, ಜೀವವೈವಿಧ್ಯ, ಫಲವತ್ತಾದ ಮಣ್ಣು-ನೀರು ಮಾಲಿನ್ಯವಾಗಿ ಭೂಮಿ ಬರಡು ಗ್ರಹವಾಗುತ್ತದೆ. ಪ್ರಸ್ತುತ ಈ ಕಾರಣಗಳಿಂದ ಅಳಿವಿನ ಅಂಚಿನಲ್ಲಿರುವ ಪಕ್ಷಿ-ಪ್ರಾಣಿಗಳ ಸ್ಥಳಕ್ಕೆ ಕೊನೆಗೆ ಮನುಷ್ಯನೂ ಬಂದು ನಿಲ್ಲುತ್ತಾನೆ.

ಗ್ರಾನೈಟ್ ಕ್ವಾರಿಗಳ ಬಗ್ಗೆ ಹೇಳಬೇಕೆಂದರೆ, ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಎರಡು ಜಿಲೆಟಿನ್ ಸ್ಫೋಟಗಳ ನಂತರ ಅನೇಕ ರೀತಿಯ ಕಾನೂನುಬಾಹಿರ ವಿಷಯಗಳನ್ನು ಮಾಧ್ಯಮಗಳು ಹೊರಗೆಡವಿದವು. ಜನಸಾಮಾನ್ಯರು ಮತ್ತು ಪರಿಸರ ಪ್ರೇಮಿಗಳು ಈ ವಿಷಯಗಳ ಬಗ್ಗೆ ಪ್ರತಿಭಟನೆ ತೋರಿಸಿದರು. ಆದರೆ ನಮ್ಮ ದುರದೃಷ್ಟವೆಂದರೆ ಅದೆಲ್ಲ ನಿಧಾನವಾಗಿ ತನಗೆ ತಾನೇ ಸತ್ತುಹೋಗುತ್ತದೆ. ಕಾನೂನುಬಾಹಿರ ಕೆಲಸಗಳು ಸ್ವಲ್ಪಕಾಲ ಸ್ಥಗಿತಗೊಂಡು ಮತ್ತೆ ಅದೇ ರೀತಿ ಎಗ್ಗಿಲ್ಲದೆ ಮುನ್ನಡೆಯುತ್ತವೆ. ಮತ್ತೆ ಮಾಧ್ಯಮಗಳು, ಜನರು ಕಣ್ಣುಮುಚ್ಚಿಕೊಂಡು ಇನ್ನೊಂದು ಅವಘಡ ನಡೆಯುವವರೆಗೂ ನಿದ್ದೆಗೆ ಜಾರಿಕೊಳ್ಳುತ್ತಾರೆ. ಮರಳು ತೆಗೆಯುವುದಾಗಲಿ, ಗ್ರಾನೈಟ್ ಕ್ವಾರಿಗಳನ್ನು ಮಾಡುವುದಾಗಲಿ ಒಂದು ಹಂತದ ನಿಯಂತ್ರಣದವರೆಗೂ ಅದು ನಡೆಯುತ್ತದೆ. ಆದರೆ ಯಾವುದೇ ಭೂಸಂಪನ್ಮೂಲವನ್ನು ಬೇಕಾಬಿಟ್ಟಿ ಶೋಷಣೆ ಮಾಡುವುದರಿಂದ ಅನೇಕ ಸಮಸ್ಯೆಗಳು ತಲೆದೋರುತ್ತವೆ. ವೈಜ್ಞಾನಿಕ ಮತ್ತು ಅವೈಜ್ಞಾನಿಕ ಎಂಬ ಪದಗಳನ್ನು ಪದೇಪದೇ ಬಳಸಲಾಗುತ್ತದೆ. ಯಾವುದೇ ಒಂದು ಸಂಪನ್ಮೂಲವನ್ನು ಖಾಲಿ ಮಾಡುವುದೆಂದರೆ ಅದನ್ನು ಮುಗಿಸುವುದೇ ಆಗಿದೆ. ಏಕೆಂದರೆ ಅದನ್ನು ನಾವು ಮರು ಉತ್ಪಾದನೆ ಮಾಡುವುದು ಸಾಧ್ಯವಿಲ್ಲದ ಮಾತು. ಗ್ರಾನೈಟ್ ಕ್ವಾರಿಗಳಿಂದ ಗ್ರಾನೈಟ್ ಒಮ್ಮೆ ತೆಗೆದುಬಿಟ್ಟರೆ ಅಲ್ಲಿಗೆ ಅದು ಮುಗಿದಂತೆ. ಆದರೆ ಮರಳು ನಿಕ್ಷೇಪಗಳು ಮಾತ್ರ ನೈಸರ್ಗಿಕ ಪ್ರಕ್ರಿಯೆಗಳಿಂದ ಸ್ವಲ್ಪಮಟ್ಟಿಗೆ ಮರು ಉತ್ಪತ್ತಿಯಾಗುತ್ತಿರುತ್ತದೆ.

ಗ್ರಾನೈಟ್ ದಂಧೆ ಎಗ್ಗಿಲ್ಲದೆ ನಾಡಿನಾದ್ಯಂತ ಎಲ್ಲೆಲ್ಲೂ ನಡೆಯುತ್ತಿದ್ದು ಅದಕ್ಕೆ ಕಡಿವಾಣ ಹಾಕುವುದು ಅಷ್ಟು ಸುಲಭದ ಮಾತಲ್ಲ. ನಮ್ಮ ರಾಜಕಾರಣ ಮತ್ತು ಸಾಮಾಜಿಕ ವ್ಯವಸ್ಥೆ ಬದಲಾಗದಿದ್ದಲ್ಲಿ ಅದು ಸಾಧ್ಯವಾಗದ ಮಾತು. ಈ ಗ್ರಾನೈಟ್ ಬೆಟ್ಟಗುಡ್ಡಗಳು ಸಾಮಾನ್ಯವಾಗಿ ಸರಕಾರಿ ಜಮೀನುಗಳಲ್ಲಿ, ಕಾಡುಮೇಡುಗಳಲ್ಲಿ ಇರುವುದರಿಂದ ಅವುಗಳನ್ನು ಒಡೆದು ಸಾಗಿಸುವುದು ಸುಲಭ. ಯಾವ ಕ್ವಾರಿಗೆ ಅಪ್ಪಣೆ ಇದೆ? ಯಾವುದಕ್ಕೆ ಇಲ್ಲ? ಎನ್ನುವುದು ಸಾರ್ವಜನಿಕರಿಗೆ ಮಾಹಿತಿ ದೊರಕುವುದಿಲ್ಲ. ಆದರೆ ಸಂಬಂಧಪಟ್ಟ ವಿಭಾಗಗಳಿಗೆ ಎಲ್ಲವೂ ಗೊತ್ತಿರುತ್ತದೆ. ಆಯಾ ವಿಭಾಗಗಳ ಅಧಿಕಾರಿಗಳು, ಪಟ್ಟಭದ್ರಹಿತಾಸಕ್ತಿಗಳು ಕೈಜೋಡಿಸಿದಾಗ ಕಳ್ಳರ ಕೆಲಸ ಸುಲಭವಾಗಿಬಿಡುತ್ತದೆ. ಕ್ವಾರಿಗಳಲ್ಲಿ ಗ್ರಾನೈಟ್ ಕಲ್ಲುಗಳನ್ನು ಪುಡಿ ಮಾಡುವುದರಿಂದ ಸುತ್ತಲಿನ ಪರಿಸರಕ್ಕೆ ಅನೇಕ ರೀತಿಯಲ್ಲಿ ಧಕ್ಕೆಯಾಗುತ್ತದೆ. ಕೃಷಿ, ಅಂತರ್ಜಲ-ಜಲಮೂಲಗಳು ಮತ್ತು ಜೀವವೈವಿಧ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ಲಕ್ಷಾಂತರ ವರ್ಷಗಳಿಂದ ಸಂಗ್ರಹವಾಗಿರುವ ಅಂತರ್ಜಲದ ಜಲಮೂಲಗಳು ಪಲಾಯನವಾಗಬಹುದು ಅಥವಾ ಇನ್ನೂ ಆಳಕ್ಕೆ ಹೋಗಬಹುದು. ಕ್ವಾರಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಫಲವತ್ತಾದ ಮಣ್ಣು ಮಾಲಿನ್ಯಗೊಳ್ಳುವುದರ ಜೊತೆಗೆ ಮಣ್ಣು ಸವಕಳಿಯಾಗುತ್ತದೆ.

ಕಲ್ಲುಗಳಿಂದ ಬಿಡುಗಡೆಯಾಗುವ ಕೆಲವು ವಿಷಧಾತುಗಳು ಮಣ್ಣು, ನೀರು ಮತ್ತು ಗಾಳಿಯಲ್ಲಿ ಸೇರಿಕೊಂಡು ಮನುಷ್ಯ-ಪ್ರಾಣಿಗಳ ದೇಹ ಸೇರುತ್ತದೆ. ಮನುಷ್ಯನ ಆರೋಗ್ಯದ ಮೇಲೂ ಅದು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ಮುಖ್ಯವಾಗಿ ಕ್ವಾರಿಗಳಲ್ಲಿ ಕೆಲಸ ಮಾಡುವವರು ಶ್ವಾಸಕೋಶಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಬಹುಬೇಗನೆ ತುತ್ತಾಗುತ್ತಾರೆ. ಒಟ್ಟಿನಲ್ಲಿ ಅಭಿವೃದ್ಧಿ ಎಂದರೆ ಭೂಸಂಪನ್ಮೂಲಗಳ ಶೋಷಣೆ ಅಥವಾ ಜನರು ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿರುವ ಕೆಲಸ ಎನ್ನಬಹುದೇನೊ?

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News