ಎಂ.ಕೆ. ಸ್ಟಾಲಿನ್ ಅಳಿಯನ ನಿವಾಸ ಸೇರಿದಂತೆ ನಾಲ್ಕು ಸ್ಥಳಗಳ ಮೇಲೆ ಐಟಿ ದಾಳಿ

Update: 2021-04-02 17:32 GMT

ಹೊಸದಿಲ್ಲಿ.2: ಡಿಎಂಕೆ ವರಿಷ್ಠ ಎಂ.ಕೆ.ಸ್ಟಾಲಿನ್ ಅವರ ಅಳಿಯ ಶಬರೀಶನ್ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ದಾಳಿಗಳನ್ನು ನಡೆಸಿದ್ದಾರೆ. ಚೆನ್ನೈನಲ್ಲಿ ಶಬರೀಶನ್ ಒಡೆತನದ ನಾಲ್ಕು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು.

 ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಹಣದ ಹರಿದಾಟದ ಬಗ್ಗೆ ಮಾಹಿತಿಗಳನ್ನು ಪಡೆದ ಬಳಿಕ ಆದಾಯ ತೆರಿಗೆ ಇಲಾಖೆ ಈ ದಾಳಿಗಳನ್ನು ನಡೆಸಲಾಗಿದೆ ಎನ್ನಲಾಗಿದೆ. ಶಬರೀಶನ್ ಅವರಿಗೆ ಬೆಂಬಲ ವ್ಯಕ್ತಪಡಿಸಲು ಡಿಎಂಕೆ ನಾಯಕರು ಮತ್ತು ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಅವರ ನಿವಾಸದ ಬಳಿ ಸೇರಿದ್ದರು.

ಗುರುವಾರ ಕೊಯಮತ್ತೂರಿನಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಸ್ಟಾಲಿನ್ ಪುತ್ರ ಉದಯನಿಧಿ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಸಂಪತ್ತಿನಲ್ಲಿ ಅಗಾಧ ಏರಿಕೆಯನ್ನು ಪ್ರಶ್ನಿಸಿದ್ದರು. ಇದರ ಮರುದಿನವೇ ಸ್ಟಾಲಿನ್ ಪಾಳಯದ ಮುಖ್ಯ ತಂತ್ರನಿಪುಣ ಎಂದು ಪರಿಗಣಿಸಲಾಗಿರುವ ಶಬರೀಶನ್ ನಿವಾಸದ ಮೇಲೆ ದಾಳಿ ನಡೆದಿದೆ.

ಸ್ಟಾಲಿನ್ ಪುತ್ರಿ ಸೆಂಥಾಮರೈ ಅವರು ಶಬರೀಶನ್ ಜೊತೆ ವಾಸವಿರುವ ಚೆನ್ನೈ ಹೊರವಲಯದ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದು ಎ.6ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಡಿಎಂಕೆ ಪ್ರಮುಖರ ವಿರುದ್ಧದ ಎರಡನೇ ದಾಳಿಯಾಗಿದೆ. ಕಳೆದ ವಾರ ಡಿಎಂಕೆ ಅಭ್ಯರ್ಥಿ ಇ.ವಿ.ವೇಲು ಅವರ ತಿರುವಣ್ಣಾಮಲೈ ನಿವಾಸದ ಮೇಲೆ ದಾಳಿ ನಡೆದಿತ್ತು. ಸ್ಟಾಲಿನ್ ಅವರು ಕ್ಷೇತ್ರದಲ್ಲಿ ವೇಲು ಪರ ಪ್ರಚಾರದಲ್ಲಿ ತೊಡಗಿದ್ದ ಸಮಯದಲ್ಲಿಯೇ ಈ ದಾಳಿ ನಡೆದಿತ್ತು.

ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದಲೂ ಚುನಾವಣೆ ಸಂದರ್ಭಗಳಲ್ಲಿ ಪ್ರತಿಪಕ್ಷಗಳಿಗೆ ಬೆದರಿಕೆಯೊಡ್ಡಲು ಸರಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುವುದು ಅದರ ಪದ್ಧತಿಯಾಗಿದೆ ಎಂದು ಡಿಎಂಕೆ ವಕ್ತಾರ ಸಿ.ರವೀಂದ್ರನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News