ಜೈಲಿನಲ್ಲಿರುವ ಜಿ.ಎನ್ ಸಾಯಿಬಾಬಾರ ಪ್ರೊಫೆಸರ್ ಹುದ್ದೆಯನ್ನು ಕೊನೆಗೊಳಿಸಿದ ರಾಮ್ ಲಾಲ್ ಆನಂದ್ ಕಾಲೇಜು

Update: 2021-04-03 10:50 GMT

ಹೊಸದಿಲ್ಲಿ: ಮಾವೋವಾದಿಗಳ ಜತೆ ನಂಟು ಹೊಂದಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಗಡ್ಚಿರೊಲಿ ಜಿಲ್ಲೆಯ ಸೆಶನ್ಸ್ ನ್ಯಾಯಾಲಯದಿಂದ 2017ರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಪ್ರಸ್ತುತ ನಾಗ್ಪುರ್ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ದಿಲ್ಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನ ಸಹಾಯಕ ಪ್ರೊಫೆಸರ್ ಜಿ ಎನ್ ಸಾಯಿಬಾಬಾ ಅವರ ಪ್ರೊಫೆಸರ್‌ ಹುದ್ದೆಯನ್ನು ಸಂಸ್ಥೆಯು ಕೊನೆಗೊಳಿಸಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಕಾಲೇಜಿನ ಪ್ರಾಂಶುಪಾಲ ರಾಕೇಶ್ ಕುಮಾರ್ ಗುಪ್ತಾ ಆದೇಶ ಹೊರಡಿಸಿದ್ದು, ಮಾರ್ಚ್ 31ರಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಅಂತ್ಯಗೊಳಿಸಲಾಗಿದೆ ಹಾಗೂ ಮೂರು ತಿಂಗಳ ವೇತನವನ್ನು  ಅವರ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾಲೇಜಿನ ಸೇವೆಗೆ 2003ರಲ್ಲಿ ಸೇರ್ಪಡೆಗೊಂಡಿದ್ದ ಸಾಯಿಬಾಬಾ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ ನಂತರ 2014ರಲ್ಲಿ  ಅವರನ್ನು ವಜಾಗೊಳಿಸಲಾಗಿತ್ತು. ಅಂದಿನಿಂದ ಅವರ ಪತ್ನಿ ಹಾಗೂ ಪುತ್ರಿಗೆ ಅವರ ಅರ್ಧ ವೇತನ ದೊರೆಯುತ್ತಿತ್ತು. ಆದರೆ ಇದೀಗ ಅವರನ್ನು ಸೇವೆಯಿಂದಲೇ ಕಿತ್ತು ಹಾಕಲಾಗಿರುವುದರಿಂದ ಅವರ ಕುಟುಂಬ ಬಹಳಷ್ಟು ಸಮಸ್ಯೆ ಎದುರಿಸಲಿದೆ. ಸಾಯಿಬಾಬಾ ಅವರನ್ನು ಅಪರಾಧಿ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿ ಅವರ ಕುಟುಂಬ ಸಲ್ಲಿಸಿದ ಮೇಲ್ಮನವಿ ಬಾಂಬೆ ಹೈಕೋರ್ಟಿನಲ್ಲಿ ಇನ್ನೂ ಬಾಕಿಯಿರುವಾಗಲೇ ಅವರನ್ನು ಹುದ್ದೆಯಿಂದ ಕಿತ್ತು ಹಾಕಲಾಗಿರುವುದನ್ನು ಪ್ರಶ್ನಿಸುವುದಾಗಿ ಅವರ ಪತ್ನಿ ವಸಂತ ಹೇಳಿದ್ದಾರೆ.

ಶೇ 90ರಷ್ಟು ಅಂಗವೈಕಲ್ಯತೆಯಿಂದ ಬಳಲುತ್ತಿರುವ ಸಾಯಿಬಾಬಾ  ಹಾಗೂ ಇತರರ ವಿರುದ್ಧ ಕಠಿಣ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ವಯ ದೋಷಿಯೆಂದು ಗಡ್ಚಿರೊಲಿ ನ್ಯಾಯಾಲಯ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News