ಇಸ್ರೋ ಬೇಹುಗಾರಿಕೆ ಪ್ರಕರಣ: ಮುಂದಿನ ವಾರ ವಿಚಾರಣೆ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಎ. 5: ಖುಲಾಸೆಗೊಂಡ ಹಾಗೂ ಸುಪ್ರೀಂ ಕೋರ್ಟ್ ಅಂತಿಮವಾಗಿ 50 ಲಕ್ಷ ರೂ. ಪರಿಹಾರ ನೀಡಿದ ಇಸ್ರೋ ವಿಜ್ಞಾನಿ ನಂಬಿ ನಾರಾಯಣ ಅವರಿಗೆ ಸಂಬಂಧಿಸಿದ 1994ರ ಬೇಹುಗಾರಿಕೆ ಪ್ರಕರಣದಲ್ಲಿ ತಪ್ಪೆಸಗಿದ ಪೊಲೀಸ್ ಅಧಿಕಾರಿಗಳ ಕುರಿತು ಉನ್ನತ ಮಟ್ಟದ ಸಮಿತಿ ಸಲ್ಲಿಸಿದ ವರದಿ ಆಧರಿಸಿ ತುರ್ತು ವಿಚಾರಣೆ ನಡೆಸುವಂತೆ ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದೆ.
ಈ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮನವಿ ಮಾಡಿದರು. ಈ ಪ್ರಕರಣದ ವಿಚಾರಣೆಯನ್ನು ಮುಂದಿನ ವಾರ ನಡೆಸಲಾಗುವುದು ಎಂದು ಬೋಬ್ಡೆ ಹೇಳಿದರು. ಸಮಿತಿ ವರದಿ ಸಲ್ಲಿಸಿದೆ. ಇದನ್ನು ರಾಷ್ಟ್ರೀಯ ಪ್ರಕರಣ ಎಂದು ಪರಿಗಣಿಸಬೇಕು ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಹ್ಮಣೀಯನ್ ಅವರನ್ನು ಕೂಡ ಒಳಗೊಂಡ ಪೀಠದ ಮುಂದೆ ಮೆಹ್ತಾ ಹೇಳಿದರು. ಇದು ತುಂಬಾ ಮುಖ್ಯವಾದ ಪ್ರಕರಣ ಎಂಬುದು ನ್ಯಾಯಾಲಯಕ್ಕೆ ತಿಳಿದಿದೆ. ಆದರೆ, ತುಂಬಾ ತುರ್ತು ವಿಚಾರಣೆ ನಡೆಸಬೇಕಾದ ಪ್ರಕರಣವಲ್ಲ. ಈ ಪ್ರಕರಣದ ವಿಚಾರಣೆಯನ್ನು ನಾವು ಮುಂದಿನ ವಾರ ಕೈಗೆತ್ತಿಕೊಳ್ಳಲಿದ್ದೇವೆ ಎಂದು ಪೀಠ ಹೇಳಿತು.