ಕೊಲಿಜಿಯಂ ಸಭೆ ರದ್ದುಪಡಿಸಲು ನಿರಾಕರಿಸಿದ ಸಿಜೆಐ ಬೋಬ್ಡೆ

Update: 2021-04-08 07:17 GMT

ಹೊಸದಿಲ್ಲಿ: ಸುಪ್ರೀಂಕೋರ್ಟ್‍ಗೆ ನ್ಯಾಯಾಧೀಶರುಗಳ ಹೆಸರುಗಳನ್ನು ಶಿಫಾರಸು ಮಾಡಲು ಗುರುವಾರ ನಡೆಯಲಿರುವ ನಿಗದಿತ ಸಭೆಯನ್ನು ರದ್ದುಗೊಳಿಸದಿರಲು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ನಿರ್ಧರಿಸಿದ್ದಾರೆ.

ಎರಡು ದಿನಗಳ ಹಿಂದೆ ಮುಂದಿನ ಸಿಜೆಐ ಆಗಿ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ನೇಮಕಮಾಡುವ ಅಧಿಸೂಚನೆಯ ನಂತರವೂ ಸುಪ್ರೀಂಕೋರ್ಟ್‍ನ ಇಬ್ಬರು ಸಹೋದ್ಯೋಗಿಗಳು ಬೋಬ್ಡೆ ಅವರು ಕೊಲಿಜಿಯಂ ಸಭೆ ನಡೆಸುವ ಸಮಯವನ್ನು ಪ್ರಶ್ನಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಎಪ್ರಿಲ್ 6ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಸ್ಟಿಸ್ ಎನ್.ವಿ.ರಮಣ ಅವರನ್ನು ಮುಂದಿನ ಸಿಜೆಐ ಆಗಿ ನೇಮಿಸಿದ್ದರು.ಜಸ್ಟಿಸ್ ರಮಣ ಎಪ್ರಿಲ್ 24ರಂದು ದೇಶದ 48ನೇ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಆದಾಗ್ಯೂ ಪ್ರಸ್ತುತ ಸಿಜೆಐ ತನ್ನ ಅಧಿಕಾರವರದಿಯ ಅಂತ್ಯದ ವೇಳೆ ಕೊಲಿಜಿಯಂ ಸಭೆ ಕರೆಯುವುದನ್ನು ತಡೆಯುವ ಕಾರ್ಯವಿಧಾನ ಏನೂ ಇಲ್ಲ.

ಸುಪ್ರೀಂಕೋರ್ಟ್ ಸದ್ಯ 6 ಹುದ್ದೆಗಳು ಖಾಲಿ ಇದೆ. ಸಿಜೆಐ ಬೋಬ್ಡೆ ಸೇರಿದಂತೆ ಮೂವರು ನ್ಯಾಯಾಧೀಶರು ಈ ವರ್ಷ ನಿವೃತ್ತಿಯಾಗಲಿದ್ದಾರೆ. ಆದರೆ ಸಿಜೆಐ ಬೋಬ್ಡೆ ಸುಪ್ರೀಂಕೋಟ್ ್ನಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರಕ್ಕೆ ಯಾವುದೇ ಶಿಫಾರಸುಗಳನ್ನು ಮಾಡಿಲ್ಲ. 

ಸುಪ್ರೀಂಕೋರ್ಟ್‍ಗೆ ನ್ಯಾಯಾಧೀಶರನ್ನು ಶಿಫಾರಸು ಮಾಡುವ ಕೊಲಿಜಿಯಂ ಐವರು ನ್ಯಾಯಾಧೀಶರನ್ನು ಒಳಗೊಂಡಿದೆ. ಸಿಜೆಐ ಬೋಬ್ಡೆ ಹಾಗೂ ನ್ಯಾಯಮೂರ್ತಿ ರಮಣರಲ್ಲದೆ, ಪ್ರಸ್ತುತ ಇದರಲ್ಲಿ ನ್ಯಾಯಮೂರ್ತಿಗಳಾದ ರೊಹಿಂಗ್ಟನ್ ನಾರಿಮನ್, ಯುಯು ಲಲಿತ್ ಹಾಗೂ ಎಎಂ ಖಾನ್ವಿಲ್ಕರ್ ಇದ್ದಾರೆ. ಹೈಕೋರ್ಟ್‍ಗೆ ನೇಮಕಾತಿಗಳನ್ನು ಪರಿಗಣಿಸುವ ಕೊಲಿಜಿಯಂ ಎಪ್ರಿಲ್ 5ರಂದು ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News