ಬಾಬರಿ ಮಸೀದಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ನ್ಯಾಯಾಧೀಶ ಸುರೇಂದ್ರ ಯಾದವ್ ಉಪ-ಲೋಕಾಯುಕ್ತರಾಗಿ ನೇಮಕ
ಹೊಸದಿಲ್ಲಿ: ಕಳೆದ ವರ್ಷ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತೀರ್ಪು ನೀಡಿರುವ ನಿವೃತ್ತ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ಸೋಮವಾರ ಉತ್ತರಪ್ರದೇಶದ ಉಪ-ಲೋಕಾಯುಕ್ತರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು ಎಂದು indianexpress.com ವರದಿ ಮಾಡಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಯಾದವ್ 1992ರ ಡಿಸೆಂಬರ್ 6ರಂದು ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್. ಕೆ. ಅಡ್ವಾಣಿ, ಎಂ.ಎಂ.ಜೋಶಿ, ಉಮಾ ಭಾರತಿ ಹಾಗೂ ಕಲ್ಯಾಣ್ ಸಿಂಗ್ ಸಹಿತ ಎಲ್ಲ 32 ಆರೋಪಿಗಳನ್ನು 2020ರ ಸೆಪ್ಟಂಬರ್ 20ರಂದು ಖುಲಾಸೆಗೊಳಿಸಿದ್ದರು.
ರಾಜ್ಯಪಾಲರು ಎಪ್ರಿಲ್ 6ರಂದು ಯಾದವ್ ಅವರನ್ನು ಉತ್ತರಪ್ರದೇಶದ ಮೂರನೇ ಲೋಕಾಯುಕ್ತರಾಗಿ ನೇಮಿಸಿದ್ದಾರೆ. ಸೋಮವಾರ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಲೋಕಾಯುಕ್ತ ಸಂಜಯ್ ಮಿಶ್ರಾ ಅವರಿಂದ ಯಾದವ್ ಅವರು ಉಪ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶಂಭು ಸಿಂಗ್ ಯಾದವ್ ಹಾಗೂ ದಿನೇಶ್ ಕುಮಾರ್ ಸಿಂಗ್ ಅವರನ್ನು ಕ್ರಮವಾಗಿ 2016 ಹಾಗೂ 2020ರಲ್ಲಿ ಉಪ ಲೋಕಾಯುಕ್ತರನ್ನಾಗಿ ನೇಮಿಸಲಾಗಿತ್ತು. ಉಪ ಲೋಕಾಯುಕ್ತರ ಅಧಿಕಾರದ ಅವಧಿ 8 ವರ್ಷ.