ಆಕ್ಸಿಜನ್‌ ಕೊರತೆ ಆರೋಪ: ಆಸ್ಪತ್ರೆಯ ಐಸಿಯುನಲ್ಲಿದ್ದ ಏಳು ರೋಗಿಗಳು ಒಂದೇ ದಿನ ಮೃತ್ಯು

Update: 2021-04-13 08:25 GMT
ಸಾಂದರ್ಭಿಕ ಚಿತ್ರ

ಮುಂಬೈ: ಮುಂಬೈಯಿಂದ ಸುಮಾರು 60 ಕಿಮೀ ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ನಲ ಸೋಪರ ಎಂಬಲ್ಲಿರುವ ವಿನಾಯಕ ಆಸ್ಪತ್ರೆಯಲ್ಲಿ ಸೋಮವಾರ ಒಂದೇ  ದಿನ ಏಳು ಮಂದಿ ರೋಗಿಗಳ  ಸಾವು ಮೃತರ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್‍ಗಳ ಕೊರತೆ ಜತೆಗೆ ನಿರ್ವಹಣಾ ವೈಫಲ್ಯವೇ ಈ ಸಾವುಗಳಿಗೆ ಕಾರಣವೆಂದು ಆರೋಪಿಸಲಾಗುತ್ತಿದೆ.

ಎಲ್ಲಾ ಏಳು ಸಾವುಗಳು ವಸಾಯಿ-ವಿರಾರ್ ಮುನಿಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿರುವ ಈ ಆಸ್ಪತ್ರೆಯ ಐಸಿಯುವಿನಲ್ಲಿ ಸಂಭವಿಸಿದೆ.

ಈ ಎಲ್ಲಾ ಏಳು ಮಂದಿಯ ಸ್ಥಿತಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಗಂಭೀರವಾಗಿತ್ತೆಂದು ಆಸ್ಪತ್ರೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಆಕ್ಸಿಜನ್ ಕೊರತೆ ಹಾಗೂ ವೈದ್ಯರ ನಿರ್ಲಕ್ಷ್ಯವೇ ಸಾವುಗಳಿಗೆ ಕಾರಣ ಎಂದು ಮೃತರ ಸಂಬಂಧಿಕರು ದೂರುತ್ತಿದ್ದಾರೆ.

ಸೋಮವಾರ ಸಂಜೆ ಆಸ್ಪತ್ರೆಯ ಆವರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಕ್ರೋಶಿತ ಜನರು ಸೇರಿದ್ದರಲ್ಲದೆ ಸೌಲಭ್ಯಗಳ ಕೊರತೆಯಿದೆ ಎಂದು ಮುಂಚಿತವಾಗಿಯೇ ತಿಳಿಸಿದ್ದರೆ ಬೇರೆ ಆಸ್ಪತ್ರೆಗಳಿಗೆ  ರೋಗಿಗಳನ್ನು ಸಾಗಿಸಬಹುದಾಗಿತ್ತು ಎಂದು ಹೇಳಿದ್ದಾರೆ.

ಮೃತಪಟ್ಟವರಲ್ಲಿ ಹೆಚ್ಚಿನವರು ವೃದ್ಧರಾಗಿದ್ದರು ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನೆದುರಿಸುತ್ತಿದ್ದರು ಎಂದು ಆಸ್ಪತ್ರೆ ಹೇಳಿದೆ.

ವಸಾಯಿ-ವಿರಾರ್ ಮುನಿಸಿಪಾಲಿಟಿ ವ್ಯಾಪ್ತಿಯ ಆಸ್ಪತ್ರೆಗಳು ಆಕ್ಸಿಜನ್ ಕೊರತೆ ಎದುರಿಸುತ್ತಿವೆ ಎಂದು ಹೇಳಲಾಗಿದ್ದು ಸೂಕ್ತ ಏರ್ಪಾಟು ಮಾಡುವಂತೆ ಅಲ್ಲಿನ ಮೇಯರ್ ರಾಜೀವ್ ಪಾಟೀಲ್ ಮಾಡಿದ್ದ ಮನವಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ   ಕಂಡು ಬಂದಿತ್ತು. ಸ್ಥಳೀಯ ಶಾಸಕ ಕ್ಷಿತಿಜ್ ಠಾಕುರ್  ಅವರು ಪ್ರಧಾನಿ ಕಚೇರಿಯನ್ನೂ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದು ಪ್ರದೇಶದಲ್ಲಿ 7000ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ ಹಾಗೂ 3000ಕ್ಕೂ ಅಧಿಕ ಮಂದಿಗೆ ಪ್ರತಿದಿನ ಆಮ್ಲಜನಕ ಅಗತ್ಯವಿದೆ ಎಂದು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News