ನಿರಂಜನಿ ಅಖಾಡದ ಕನಿಷ್ಠ 17 ಸಾಧುಗಳಿಗೆ ಕೊರೋನ ಪಾಸಿಟಿವ್
ಹರಿದ್ವಾರ, ಎ. 16: ಇಲ್ಲಿನ ನಿರಂಜನಿ ಅಖಾಡದಲ್ಲಿ ಆಯೋಜಿಸಲಾದ ಸಾಮೂಹಿಕ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯಲ್ಲಿ ಅಖಾಡದ ಕಾರ್ಯದರ್ಶಿ ರವೀಂದ್ರ ದಾಸ್ ಪುರಿ ಸೇರಿದಂತೆ ಕನಿಷ್ಠ 17 ಸಾಧುಗಳಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.
ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಕುಂಭಮೇಳದಿಂದ ಶನಿವಾರ ನಿರ್ಗಮಿಸಲಾಗುವುದು ಎಂದು ರವೀಂದ್ರ ದಾಸ್ ಪುರಿ ಅವರು ಹೇಳಿಕೆ ನೀಡಿದ ಒಂದು ದಿನದ ಬಳಿಕ ನಡೆಸಲಾದ ಪರೀಕ್ಷೆಯಲ್ಲಿ ಸಾಧುಗಳಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಹಲವು ಸಾಧುಗಳಿಗೆ ಶೀತ ಹಾಗೂ ಜ್ವರ ಕಂಡು ಬಂದ ಬಳಿಕ ನಿರಂಜನಿ ಅಖಾಡದಲ್ಲಿ ಸಾಮೂಹಿಕ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿ 17 ಸಾಧುಗಳಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕೊರೋನ ಸೊಂಕಿನಿಂದ ಉಸಿರಾಟದ ತೊಂದರೆ ಎದುರಿಸಿದ ಬಳಿಕ ಮಹಾಂತ ಮನೀಶ್ ಭಾರತಿ ಅವರನ್ನು ಇಂದು ಬೆಳಗ್ಗೆ ಏಮ್ಸ್ ಋಷಿಕೇಶ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ತಾನು ಕೊರೋನ ಸೋಂಕಿಗೆ ಒಳಗಾಗಿದ್ದೇನೆ ಹಾಗೂ ಸ್ವಯಂ ಐಸೋಲೇಷನ್ಗೆ ಒಳಗಾಗಿದ್ದೇನೆ ಎಂದು ರವೀಂದ್ರ ದಾಸ್ ಪುರಿ ಅವರು ಹೇಳಿದ್ದಾರೆ.
ಅಖಿಲ ಭಾರತೀಯ ಅಖಾಡ ಪರಿಷದ್ ನ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಈಗಾಗಲೇ ಕೊರೋನ ಸೋಂಕಿಗೆ ಒಳಗಾಗಿ ಋಷಿಕೇಷದ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.