"ನನ್ನ ಸಹೋದರನಿಗೆ ಆಸ್ಪತ್ರೆಯಲ್ಲಿ ಬೆಡ್‌ ಬೇಕಾಗಿದೆ": ಟ್ವೀಟ್‌ ಮಾಡಿದ ಕೇಂದ್ರ ಸಚಿವ ವಿಕೆ ಸಿಂಗ್‌

Update: 2021-04-18 11:23 GMT

ಹೊಸದಿಲ್ಲಿ: "ನನ್ನ ಸಹೋದರನಿಗೆ ಆಸ್ಪತ್ರೆಯಲ್ಲೊಂದು ಬೆಡ್‌ ಬೇಕಾಗಿದೆ" ಎಂದು ಟ್ವಿಟರ್‌ ನಲ್ಲಿ ಕೇಂದ್ರ ಸಚಿವ ಜನರಲ್‌ ವಿಕೆ ಸಿಂಗ್‌ ಪೋಸ್ಟ್ ಮಾಡಿದ್ದು, ಬಳಿಕ ತಮ್ಮ ಟ್ವೀಟ್‌ ಡಿಲೀಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ.‌ ಒಬ್ಬ ಕೇಂದ್ರ ಸಚಿವರ ಪರಿಸ್ಥಿತಿ ಹೀಗಿರಬೇಕಾದರೆ, ಜನ ಸಾಮಾನ್ಯರು ಏನು ಮಾಡಬೇಕು ಎಂಬ ಪ್ರಶ್ನೆಗಳು ಉದ್ಭವಿಸಿದ ಬೆನ್ನಲ್ಲೇ ಟ್ವೀಟ್‌ ಡಿಲೀಟ್‌ ಮಾಡಿ ಸಿಂಗ್‌ ಸ್ಪಷ್ಟನೆ ನೀಡಿದ್ದಾರೆ.

 "ಗಾಝಿಯಾಬಾದ್‌ ನ ಆಸ್ಪತ್ರೆಗಳಲ್ಲಿ ನನ್ನ ಸಹೋದರನಿಗೆ ಬೆಡ್‌ ನ ಆವಶ್ಯಕತೆಯಿದೆ ಎಂದು ಬರೆದು ಜಿಲ್ಲಾಡಳಿತವನ್ನು ಟ್ಯಾಗ್‌ ಮಾಡಿದ್ದರು. ಕೇಂದ್ರ ಸಚಿವರ ಸಂಬಂಧಿಯೇ ಹೀಗೆ ಪರದಾಡುತ್ತಿದ್ದರೆ ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು? ಇದು ಆಡಳಿತ ವೈಫಲ್ಯವನ್ನು ಸೂಚಿಸುತ್ತದೆ ಎಂದು ಹಲವರ ಪ್ರತಿಕ್ರಿಯೆ ವ್ಯಕ್ತವಾದ ಕೂಡಲೇ ಪೋಸ್ಟ್‌ ಡಿಲೀಟ್‌ ಮಾಡಲಾಗಿದೆ.

"ನಾನು ನನ್ನ ಸ್ವಂತ ಸಹೋದರನಿಗಾಗಿ ಕೇಳಿದ್ದಲ್ಲ. ನನಗೆ ಬಂದಿದ್ದ ಸಂದೇಶವನ್ನು ಮಾನವೀಯತೆಯ ದೃಷ್ಟಿಯಿಂದ ಟ್ವಿಟರ್‌ ನಲ್ಲಿ ಪ್ರಕಟಿಸಿದ್ದೇನೆ" ಎಂದು ಹೇಳಿಕೆ ನೀಡಿದ್ದಾರೆ. ಆದರೂ, ಕೇಂದ್ರ ಸಚಿವರು ಟ್ವಿಟರ್‌ ನಲ್ಲಿ ಸಹಾಯ ಕೇಳುವಂತಹಾ ಪರಿಸ್ಥಿತಿಗೆ ಬಂದಿರುವುದು ಶೋಚನೀಯ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News