ಕೋವಿಡ್‌ ಸಂಕಷ್ಟದ ಮಧ್ಯೆ ಜನತೆಗೆ ಭರವಸೆಯ ಬೆಳಕಾದ ಮಹಾರಾಷ್ಟ್ರದ ಕಿರಿಯ ಶಾಸಕ ಝೀಶಾನ್‌ ಸಿದ್ದೀಕ್‌

Update: 2021-04-18 14:57 GMT

 ಮುಂಬೈ: ಮಹಾರಾಷ್ಟ್ರವು ರಾಜ್ಯವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಗೆ ತತ್ತರಿಸಿದೆ. ಈಗಾಗಲೇ ರಾಜ್ಯದ ಹಲವಾರು ಆಸ್ಪತ್ರೆಗಳಲ್ಲಿ ಬೆಡ್‌, ಆಕ್ಸಿಜನ್‌ ಸೇರಿದಂತೆ ಹಲವಾರು ಅತ್ಯಗತ್ಯ ವಸ್ತುಗಳ ಕೊರತೆ ಎದುರಾಗಿದ್ದು, ಪರಿಸ್ಥೀತಿ ಚಿಂತಾಜನಕವಾಗಿದೆ. 

ಪರಿಸ್ಥಿತಿ ಈಗಾಗಲೇ ತಾರಕಕ್ಕೇರಿದ್ದು, ಇನ್ನೂ ಸಂದಿಗ್ಧ ಪರಿಸ್ಥಿತಿಯನ್ನೆದುರಿಸಲಿದೆ ಎಂದು ತಿಳಿದು ಬಂದಿದೆ. ಈ ನಡುವೆ ಮಹಾರಾಷ್ಟ್ರದ ಅತೀ ಕಿರಿಯ ಶಾಸಕ ಎಂದೇ ಖ್ಯಾತಿ ಪಡೆದಿರುವ ಕಾಂಗ್ರೆಸ್‌ ನಾಯಕ ಝೀಶಾನ್‌ ಸಿದ್ದೀಕ್‌ ಸಾಂಕ್ರಾಮಿಕದ ನಡುವೆಯೂ ಜನರನ್ನು ತಲುಪುತ್ತಿದ್ದು, ಅಗತ್ಯ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಮೂಲಕ ಜನರ ನಡುವೆ ಭರವಸೆಯ ಬೆಳಕಾಗಿ ಮಾರ್ಪಟ್ಟಿದ್ದಾರೆ. 

ಬಾಂದ್ರಾ(ಪೂರ್ವ) ಕ್ಷೇತ್ರದ ಶಾಸಕರಾಗಿರುವ ಝೀಶಾನ್‌, ತಮ್ಮ ಸುಸಜ್ಜಿತ ತಂಡದೊಂದಿಗೆ ಜನಸಾಮಾನ್ಯರ ಬವಣೆಗಳಿಗೆ ದನಿಯಾಗುತ್ತಿದ್ದಾರೆ. ಆಸ್ಪತ್ರೆಗಳಿಗೆ ದಾಖಲಿಸುವುದು, ಸರಿಯಾದ ಚಿಕಿತ್ಸೆ ನೀಡುವುದು, ಲಸಿಕೆ ನೀಡುವುದು, ಆಕ್ಸಿಜನ್‌ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡುತ್ತಿದ್ದಾರೆ.

28ರ ಹರೆಯದ ಝೀಶಾನ್‌ ಸಿದ್ದೀಕ್‌ ರ ಟ್ವಿಟರ್‌ ಟೈಮ್‌ ಲೈನ್‌ ನಲ್ಲಿ ಸಂಪೂರ್ಣವಾಗಿ ಜನಸಾಮಾನ್ಯರ ಮನವಿಗಳೇ ತುಂಬಿಕೊಂಡಿವೆ.   ಝೀಶಾನ್‌ ಟ್ವಿಟರ್‌ ಅನ್ನು ತಮ್ಮ ಸೇವೆಯ ಪ್ರಮುಖ ಮಾಧ್ಯಮವನ್ನಾಗಿಸಿದ್ದಾರೆ. ಜನರಿಗೆ ಸಹಾಯದ ಅವಶ್ಯಕತೆಯಿದ್ದರೆ ಟ್ವಿಟರ್‌ ಮೂಲಕ ಟ್ಯಾಗ್‌ ಮಾಡುವುದು ಅಥವಾ ಸಂದೇಶಗಳನ್ನು ಕಳುಹಿಸಿದರೆ ಕೂಡಲೇ ಅವರು ತಮ್ಮ ತಂಡದೊಂದಿಗೆ ಕಾರ್ಯಪ್ರವೃತ್ತರಾಗುತ್ತಾರೆ. ಇವರು ಮಾತ್ರವಲ್ಲದೇ ಯುವ ಕಾಂಗ್ರೆಸ್‌ ನ ಶ್ರೀನಿವಾಸ್‌ ಬಿವಿ ಹಾಗೂ ಇನ್ನಿತರ ನಾಯಕರೂ ತಮ್ಮ ಸಹಾಯಹಸ್ತ ಚಾಚುತ್ತಿದ್ದಾರೆ.

ದೇಶವು ಕೋವಿಡ್‌ ಎರಡನೇ ಅಲೆಗೆ ಸಂಪೂರ್ಣವಾಗಿ ತತ್ತರಿಸುವ ಪರಿಸ್ಥಿತಿಗೆ ಬಂದು ತಲುಪಿದರೂ ಪಶ್ಚಿಮ ಬಂಗಾಳದ ಚುನಾವಣೆಯಲ್ಲೇ ನೇತಾರರು ಮಗ್ನರಾಗಿದ್ದಾರೆ. ಜನಸಾಮಾನ್ಯರಿಗೆ, ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಸರಕಾರದೊಂದಿಗೆ ಸಂಪರ್ಕದಲ್ಲಿರಲು ಕಷ್ಟದಾಯಕವಾಗಿರುವ ಈ ಸಂದರ್ಭದಲ್ಲಿ ಝೀಶಾನ್‌ ಸಿದ್ದೀಕ್‌ ಸೇರಿದಂತೆ ಹಲವಾರು ಯುವ ನಾಯಕರು ಸಾಮಾಜಿಕ ತಾಣದಾದ್ಯಂತ ಪೀಡಿತರಿಗೆ ನೆರವಾಗುತ್ತಿದ್ದಾರೆ. ಇಂತಹಾ ನೆರವುಗಳಿಂದ ದೇಶದಾದ್ಯಂತ ಕೋವಿಡ್‌ ನಿಯಂತ್ರಣ ಮಾಡಲು ಸಾಧ್ಯವಿಲ್ಲದಿದ್ದರೂ ವೈಯಕ್ತಿಕ ಮಟ್ಟದಲ್ಲಿ ಹಲವರಿಗೆ ಇದು ಸಹಕಾರಿಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News