ಹೆಚ್ಚುವರಿ ಆಕ್ಸಿಜನ್ ಹೊಂದಿರುವ ದೇಶದ ಏಕೈಕ ರಾಜ್ಯ ಕೇರಳ: ಇದು ಸಾಧ್ಯವಾಗಿದ್ದಾದರೂ ಹೇಗೆ?
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವಂತೆಯೇ ತೀವ್ರ ಆಕ್ಸಿಜನ್ ಕೊರತೆಯನ್ನೂ ಎದುರಿಸುತ್ತಿವೆ. ಆದರೆ ಅತ್ಯಗತ್ಯವಾಗಿರುವ ಆಮ್ಲಜನಕವನ್ನು ತನ್ನ ಅಗತ್ಯತೆಗಿಂತಲೂ ಹೆಚ್ಚು ಉತ್ಪಾದಿಸುತ್ತಿರುವ ಏಕೈಕ ರಾಜ್ಯ ಕೇರಳವಾಗಿದೆ. ಕೇರಳ ತನ್ನ ಅಗತ್ಯತೆಗಳನ್ನು ಪೂರೈಸುವುದರ ಜತೆಗೆ ತಮಿಳುನಾಡು. ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೂ ಆಮ್ಲಜನಕ ಪೂರೈಸುತ್ತಿದೆ.
ಪೆಟ್ರೋಲಿಯಂ ಎಂಡ್ ಎಕ್ಸ್ ಪ್ಲೋಸಿವ್ಸ್ ಸೇಫ್ಟಿ ಆರ್ಗನೈಝೇಶನ್ ಬಳಿ ಇರುವ ಅಂಕಿ ಅಂಶಗಳ ಪ್ರಕಾರ ಕೇರಳ ಪ್ರತಿ ದಿನ 199 ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸುತ್ತಿದೆ. ರಾಜ್ಯದ ಕೋವಿಡ್ ರೋಗಿಗಳಿಗೆ ಇದರ ಪೈಕಿ 35 ಮೆಟ್ರಿಕ್ ಟನ್ ಹಾಗೂ ಇತರ ರೋಗಿಗಳಿಗೆ 45 ಮೆಟ್ರಿಕ್ ಟನ್ ಆಮ್ಲಜನಕ ಪ್ರತಿ ದಿನ ಅಗತ್ಯವಿದೆ.
ರಾಜ್ಯದ ಒಟ್ಟು ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಪ್ರತಿ ದಿನ 204 ಮೆಟ್ರಿಕ್ ಟನ್ ಆಗಿದೆ. ರಾಜ್ಯದ ಪ್ರಮುಖ ಆಮ್ಲಜನಕ ಉತ್ಪಾದನಾ ಸಂಸ್ಥೆಗಳು ಇನೋಕ್ಸ್ (149 ಮೆಟ್ರಿಕ್ ಟನ್), ಕೇರಳ ಮಿನರಲ್ಸ್ ಎಂಡ್ ಮೆಟಲ್ಸ್ (6 ಮೆಟ್ರಿಕ್ ಟನ್). ಕೊಚ್ಚಿನ್ ಶಿಪ್ ಯಾರ್ಡ್ (5.4 ಮೆಟ್ರಿಕ್ ಟನ್), ಬಿಪಿಸಿಎಲ್ (0.322 ಮೆಟ್ರಿಕ್ ಟನ್) ಆಗಿವೆ. ರಾಜ್ಯದಲ್ಲಿರುವ 11 ಏರ್ ಸೆಪರೇಶನ್ ಯುನಿಟ್‍ಗಳೂ ಪ್ರತಿ ದಿನ 44 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸುತ್ತಿವೆ.
ರಾಜ್ಯ ಸದ್ಯ ಶೇ100ರಷ್ಟು ಆಮ್ಲಜನಕ ಉತ್ಪಾದಿಸುತ್ತಿಲ್ಲ ಆದರೆ ಅಗತ್ಯ ಬಿದ್ದರೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು, ರಾಜ್ಯದಲ್ಲಿ ಸಿಲಿಂಡರ್ ತುಂಬಿಸಲು 11 ಎಎಸ್‍ಯು ಘಟಕಗಳಿವೆ ಎಂದು ಪೆಟ್ರೋಲಿಯಂ ಎಂಡ್ ಎಕ್ಸ್‍ಪ್ಲೋಸಿವ್ಸ್ ಸೇಫ್ಟಿ ಆರ್ಗನೈಝೇಶನ್‍ನ ಅಧಿಕಾರಿ ಆರ್ ವೇಣುಗೋಪಾಲ್ ತಿಳಿಸುತ್ತಾರೆ. ರಾಜ್ಯದ ಪಾಲಕ್ಕಾಡ್‍ನಲ್ಲಿ ಎಎಸ್‍ಯು ಸ್ಥಾವರವೊಂದನ್ನೂ ಸ್ಥಾಪಿಸಲಾಗುತ್ತಿದ್ದು ಇಲ್ಲಿ ಪ್ರತಿ ದಿನ 4 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯವಿರಲಿದೆ.
ಕೇಂದ್ರ ಸರಕಾರ ಕೇರಳಕ್ಕೆ ಪ್ರೆಶರ್ ಸ್ವಿಂಗ್ ಎಡ್‍ಸಾಪ್ರ್ಶನ್ ಸಿಸ್ಟಮ್ ಕೂಡ ಅಲ್ಲಿನ ಕೊಟ್ಟಾಯಂ, ಎರ್ಣಾಕುಳಂ ಹಾಗೂ ತ್ರಿಶೂರು ಮೆಡಿಕಲ್ ಕಾಲೇಜುಗಳಿಗೆ ಒದಗಿಸಿದ್ದು ಇವುಗಳ ಜೋಡಣೆ ಕೆಲಸ ಪೂರ್ಣಗೊಂಡ ನಂತರ ಅಲ್ಲಿ ಆಕ್ಸಿಜನ್ ಉತ್ಪಾದನೆ ಆರಂಭಿಸಬಹುದಾಗಿದೆ.
ಸದ್ಯ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಏರಿಕೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಕೋವಿಡ್ ರೋಗಿಗಳಿಗಾಗಿ ಈ ತಿಂಗಳಾಂತ್ಯದೊಳಗಾಗಿ ಪ್ರತಿ ದಿನ 56.35 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಅಷ್ಟೇ ಅಲ್ಲದೆ ಕೋವಿಡ್ ಮೊದಲನೇ ಅಲೆ ನಂತರ ಕೇರಳದಲ್ಲಿ ಐಸಿಯು ಬೆಡ್‍ಗಳ ಸಂಖ್ಯೆ ಹೆಚ್ಚಿಸಲಾಗಿದೆಯಲ್ಲದೆ ವೆಂಟಿಲೇಟರ್‍ಗಳ ಸಂಖ್ಯೆಯನ್ನೂ ದ್ವಿಗುಣಗೊಳಿಸಲಾಗಿದೆ. ರಾಜ್ಯದಲ್ಲಿ 9,735 ಐಸಿಯು ಬೆಡ್‍ಗಳಿದ್ದು ಇವುಗಳಲ್ಲಿ 999ರಲ್ಲಿ ರೋಗಿಗಳಿದ್ದಾರೆ. ಒಟ್ಟು 3,776 ವೆಂಟಿಲೇಟರ್‍ಗಳ ಪೈಕಿ ಕೇವಲ 277 ವೆಂಟಿಲೇಟರ್‍ಗಳು ಸದ್ಯ ರೋಗಿಗಳಿಗೆ ಬಳಕೆಯಾಗುತ್ತಿದೆ.