"ಇನ್ನು ನೀವು ಸೂಪರ್ ಸ್ಪ್ರೆ ಡರ್ ಧರಣಿ ಮಾಡಿ": ದೇಶಾದ್ಯಂತ ಧರಣಿ ಮಾಡುವ ಬಿಜೆಪಿ ಹೇಳಿಕೆಗೆ ವಿಪಕ್ಷಗಳ ತಿರುಗೇಟು

Update: 2021-05-04 08:11 GMT
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ

ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ವಿಜಯದ ಬಳಿಕ ಟಿಎಂಸಿ ಕಾರ್ಯಕರ್ತರು ವ್ಯಾಪಕ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಆಪಾದಿಸಿ ಮೇ 5ರಂದು ದೇಶವ್ಯಾಪಿ ಧರಣಿ ನಡೆಸುವುದಾಗಿ ಬಿಜೆಪಿ ಘೋಷಿಸಿರುವುದನ್ನು ವಿಪಕ್ಷಗಳು ಕಟುವಾಗಿ ಟೀಕಿಸಿದೆ.

ಈ ಕುರಿತಾದಂತೆ ಟ್ವೀಟ್ ಮಾಡಿದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ, "ಹೌದು, ನಮಗೆ ಸೂಪರ್ ಸ್ಪ್ರೆಡರ್ ಧರಣಿಗಳು ದೇಶಾದ್ಯಂತ ಬೇಕು. ಏಕೆಂದರೆ ಸ್ಪಷ್ಟವಾಗಿ ಬಿಜೆಪಿಗೆ ದೇಶದಲ್ಲಿ ಸಾಕಷ್ಟು ಕೋವಿಡ್ ಪ್ರಕರಣಗಳು ಇಲ್ಲ ಅಲ್ಲವೇ?" ಎಂದು ಬಿಜೆಪಿಗೆ ಕುಟುಕಿದ್ದಾರೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ನರೇಂದ್ರ ಮೋದಿ ಮತ್ತು ಅಮಿತ್ ಶಾರಿಗೆ ಧರಣಿಯ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ್ದಾರೆ. "ನಿಮ್ಮ ಅಸಮರ್ಥತೆಯ ಕಾರಣದಿಂದ ದೇಶದಲ್ಲಿ ನಡೆಯುತ್ತಿರುವ ಸಾವುನೋವುಗಳ ವಿರುದ್ಧ ಭಾರತೀಯರೆಲ್ಲರೂ ಧರಣಿ ನಡೆಸುವ ಸಾಧ್ಯತೆ ಇದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

"ನಿಮ್ಮ ಸೋಲನ್ನು ಒಪ್ಪಿಕೊಳ್ಳಿ, ಈಗಲಾದರೂ ದೇಶದ ಆರೋಗ್ಯ ಪರಿಸ್ಥಿತಿಯ ಕುರಿತು ಗಮನ ಹರಿಸಿ, ನೀವೊಬ್ಬ ಮಾಜಿ ಆರೋಗ್ಯ ಸಚಿವ ಎನ್ನುವುದು ನೆನಪಿರಲಿ" ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರಿಗೆ ಸಲಹೆ ನೀಡಿದ್ದಾರೆ.

ಧರಣಿ ವೇಳೆ ಎಲ್ಲ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಬಿಜೆಪಿ ಹೇಳಿಕೊಂಡಿದೆ. ಕೋವಿಡ್-19 ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಹಲವು ಚುನಾವಣಾ ರ್ಯಾಲಿಗಳನ್ನು ನಡೆಸಿದ ರಾಜಕೀಯ ಪಕ್ಷಗಳ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು, ಕಳೆದ 24 ಗಂಟೆಗಳಲ್ಲಿ 3.68 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, 3400ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮಂದಿ ಮುಖಂಡರು ಪಶ್ಚಿಮ ಬಂಗಾಳದಲ್ಲಿ ನಡೆಸಿದ ರಾಜಕೀಯ ರ್ಯಾಲಿಗಳೇ ವ್ಯಾಪಕ ಸೋಂಕು ಹರಡುವಿಕೆಗೆ ಕಾರಣ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರೋಡ್‌ಶೋ ಮತ್ತು ರ್ಯಾಲಿಗಳಲ್ಲಿ ಸಾವಿರಾರು ಮಂದಿ ಮಾಸ್ಕ್ ಧರಿಸದೇ ಭಾಗವಹಿಸಿರುವುದು ಮತ್ತು ಸುರಕ್ಷಿತ ಅಂತರದ ನಿಯಮಗಳನ್ನು ಉಲ್ಲಂಘಿಸಿದ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News