ಪಶ್ಚಿಮಬಂಗಾಳ: ಟಿಎಂಸಿ ಕಾರ್ಯಕರ್ತನ ಇರಿದು ಹತ್ಯೆ
ಕೋಲ್ಕತಾ, ಮೆ 4: ಪಶ್ಚಿಮಬಂಗಾಳದ ಪರ್ಬಾ ವರ್ಧಮಾನ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೋರ್ವರನ್ನು ಇರಿದು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕೇಟುಗ್ರಾಮದ ಅಗರ್ಧಾಂಗ ಪ್ರದೇಶದ ತೃಣಮೂಲ ಕಾಂಗ್ರೆಸ್‌ನ ಪಂಚಾಯತ್ ಸದಸ್ಯ ಶ್ರೀನಿವಾಸ ಘೋಷ್ (54) ಅವರು ಸೋಮವಾರ ರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ಬಿಜೆಪಿ ಸದಸ್ಯರೆಂದೇ ಹೇಳಲಾದ ವ್ಯಕ್ತಿಗಳು ಇರಿದು ಹತೈಗೈದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಇನ್ನೂ ಮೂವರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹತ್ಯೆ ಆರೋಪವನ್ನು ಬಿಜೆಪಿ ನಿರಾಕರಿಸಿದೆ. ಈ ಘಟನೆಗೂ ತನ್ನ ಸದಸ್ಯನಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಬಿಜೆಪಿ ಹೇಳಿದೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗದೆ ಎಂದು ಪೊಲೀಸರು ತಿಳಿಸಿದ್ದಾರೆ.