ಸತತ ಎರಡನೇ ದಿನ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ
Update: 2021-05-05 07:30 GMT
ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಯ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯತಾಸ್ಥಿತಿ ಕಾಪಾಡಲಾಗಿದ್ದು, ಇದೀಗ ಚುನಾವಣೆಗಳು ಮುಗಿದ ಬಳಿಕ ಬೆಲೆಯೇರಿಕೆ ಪ್ರಾರಂಭವಾಗಿದೆ. ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದ್ದು, ಬುಧವಾರ ದರಗಳಲ್ಲಿ ಹೆಚ್ಚಳವಾಗಿದೆ.
ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 19 ಪೈಸೆ ಏರಿಸಲಾಗಿದ್ದು, ಡೀಸೆಲ್ ದರವನ್ನು 21 ಪೈಸೆ ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಗೆ 90.74ರೂ. ಇದ್ದು, ಡೀಸೆಲ್ 81.12ರೂ.ಗೆ ಲಭ್ಯವಾಗುತ್ತಿದೆ.
ದೇಶದಾದ್ಯಂತ ಪೆಟ್ರೋಲ್ ದರಗಳನ್ನು ಹೆಚ್ಚಿಸಲಾಗುತ್ತಿದ್ದು, ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ತೈಲ ಬೆಲೆಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ತೈಲ ಕಂಪೆನಿಗಳು ಒಟ್ಟು 18 ದಿನಗಳ ಕಾಲ ದರ ಪರಿಷ್ಕರಣೆಗೆ ವಿರಾಮ ನೀಡಿದ್ದು, ಇದೀಗ ಪರಿಷ್ಕರಣೆ ಪ್ರಾರಂಭಿಸಲಾಗಿದೆ.