ಕೋವಿಡ್‌ ರೋಗಿಗಳನ್ನು, ವೈದ್ಯರನ್ನು ಅಪಮಾನಿಸಿದ ರಾಮ್ ದೇವ್‌ ವಿರುದ್ಧ‌ ಭಾರತೀಯ ವೈದ್ಯಕೀಯ ಸಂಘದಿಂದ ದೂರು ದಾಖಲು

Update: 2021-05-10 12:21 GMT

ಜಲಂಧರ್: ಯೋಗ ಗುರು ಬಾಬಾ ರಾಮದೇವ್  ಅವರು ಆಕ್ಸಿಜನ್ ಅಗತ್ಯವಿರುವ ಕೋವಿಡ್ ಸೋಂಕಿತರನ್ನು ವ್ಯಂಗ್ಯವಾಡಿದ್ದಾರೆಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಉಪಾಧ್ಯಕ್ಷ ಡಾ ನವಜೋತ್ ಸಿಂಗ್ ದಹಿಯಾ ಅವರು  ಕಳೆದ ಶನಿವಾರ ಜಲಂಧರ್ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದಾರೆ.

"ಸೋಂಕಿತರಿಗೆ ಸರಿಯಾಗಿ ಉಸಿರಾಡಲು ತಿಳಿದಿಲ್ಲ ಹಾಗೂ ಆಕ್ಸಿಜನ್ ಕೊರತೆಯ ಕುರಿತು ಋಣಾತ್ಮಕತೆಯನ್ನು ಹರಡುತ್ತಿದ್ದಾರೆ" ಎಂದು ಬಾಬಾ ರಾಮದೇವ್ ಅವರು ಹೇಳುತ್ತಿರುವ ವೀಡಿಯೋ ಈಗಾಗಲೇ ವೈರಲ್ ಆಗಿದೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭ ಚುನಾವಣಾ ರ್ಯಾಲಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ಈ ಹಿಂದೆ 'ಸೂಪರ್ ಸ್ಪ್ರೆಡ್ಡರ್' ಎಂದು  ಬಣ್ಣಿಸಿದ್ದ ದಹಿಯಾ ಅವರು ರಾಮದೇವ್ ವಿರುದ್ಧದ ದೂರಿನಲ್ಲಿ ಅವರು ವೈದ್ಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ, ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಕೋವಿಡ್ ಸೋಂಕಿತರಲ್ಲಿ  ಚಿಕಿತ್ಸೆ ಕುರಿತು ಭಯ ಹುಟ್ಟಿಸಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

"ಕೋವಿಡ್ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗಬಾರದು, ಬದಲು ತಮ್ಮ ಸಲಹೆಯಂತೆ ಕೋವಿಡ್ ಗುಣಪಡಿಸಿಕೊಳ್ಳಬೇಕು. ಯಾರಿಗಾದರೂ ಆಕ್ಸಿಜನ್ ಮಟ್ಟ ಕಡಿಮೆಯಾದರೆ ಅಂತಹವರು ಅನುಲೋಮ ವಿಲೋಮ ಪ್ರಾಣಾಯಾಮ ಮತ್ತು ಕಪಾಲ್ ಭತಿ ಪ್ರಾಣಾಯಾಮ ಮಾಡಬೇಕು ಎಂದು  ಬಾಬಾ ರಾಮದೇವ್ ಹೇಳುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ  ಪ್ರಸಾರವಾಗಿದೆ. 

"ಕೋವಿಡ್ ಚಿಕಿತ್ಸೆ ಕುರಿತಂತೆ ಸರಕಾರ ನೀಡಿರುವ ಮಾರ್ಗಸೂಚಿಗೆ ವಿರುದ್ಧವಾಗಿ ಅವರು  ಸಲಹೆ ನೀಡಿದ್ದಾರೆ" ಎಂದು ಮೂಳೆ ತಜ್ಞರಾಗಿರುವ ಡಾ ದಹಿಯಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಹಾಗೂ ರಾಮದೇವ್ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ 2005 ಹಾಗೂ ಸಾಂಕ್ರಾಮಿಕ ರೋಗ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

 ಕೋವಿಡ್ ಸೋಂಕಿತರನ್ನು ಪತಂಜಲಿಯ ಯೋಗಪೀಠಕ್ಕೆ ದಾಖಲಿಸುವ ಸಂಚು ರಾಮದೇವ್ ಅವರದ್ದು ಎಂದು ಡಾ. ದಹಿಯಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News