ಉಳಿತಾಯದ ಹಣವನ್ನು ಕೋವಿಡ್ ಕರ್ತವ್ಯದಲ್ಲಿರುವ ಪೊಲೀಸರಿಗೆ ದಾನ ನೀಡಿದ ಆರರ ಪೋರ
ಭುವನೇಶ್ವರ: ಈಗ ದೇಶಾದ್ಯಂತ ಕೊರೋನವೈರಸ್ ಜನರಲ್ಲಿ ಭಾರೀ ಭಯವನ್ನು ಉಂಟು ಮಾಡಿದ್ದರೂ ಮಕ್ಕಳು ಸೇರಿದಂತೆ ಕೆಲವರಲ್ಲಿರುವ ಉತ್ತಮ ಗುಣ ಹೊರಬರುವಂತೆ ಮಾಡಿದೆ. ಒಡಿಶಾದ ಆರು ವರ್ಷದ ಪೋರ ದೇವಾಂಕ್ ಅಗರ್ವಾಲ್ ಅವರು ನಗರದ ಪಿಗ್ಗಿ ಬ್ಯಾಂಕಿನಲ್ಲಿ ತಾನು ಉಳಿಸಿದ್ದ 11,000 ರೂ.ಗಳನ್ನು ಕೋವಿಡ್ ಕರ್ತವ್ಯದಲ್ಲಿದ್ದ ಪೊಲೀಸರಿಗೆ ದೇಣಿಗೆ ನೀಡಿದ್ದಾರೆ.
ಒಂದನೇ ತರಗತಿಯ ವಿದ್ಯಾರ್ಥಿ ದೇವಾಂಕ್ ತನ್ನ ಹೆತ್ತವರೊಂದಿಗೆ ಕಮಿಷನರೇಟ್ ಪೊಲೀಸ್ ಪ್ರಧಾನ ಕಚೇರಿಗೆ ತೆರಳಿ ತನ್ನ ಉಳಿತಾಯದ ಹಣಗಳನ್ನೆಲ್ಲ ಆಯುಕ್ತ ಎಸ್.ಕೆ.ಪ್ರಿಯದರ್ಶಿ ಅವರಿಗೆ ಬುಧವಾರ ಹಸ್ತಾಂತರಿಸಿದ್ದಾನೆ.
ಪೊಲೀಸ್ ಸಿಬ್ಬಂದಿಗೆ ವಿಶೇಷವಾಗಿ ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ಮಹಿಳಾ ಸಿಬ್ಬಂದಿಗೆ ಸಹಾಯ ಮಾಡಲು ಅವನು ತನ್ನ ಉಳಿತಾಯದಿಂದ ದೇಣಿಗೆ ನೀಡಿದ್ದಾನೆ ಎಂದು ದೇವಾಂಕ್ ಪೋಷಕರು ಹೇಳಿದರು
ಕರ್ತವ್ಯದಲ್ಲಿರುವಾಗ ಪೊಲೀಸ್ ಸಿಬ್ಬಂದಿ ಆಹಾರ ಎಲ್ಲಿ ತಿನ್ನುತ್ತಾರೆ ಎಂಬ ಪ್ರಶ್ನೆಯೂ ಸೇರಿದಂತೆ ತನ್ನ ತಂದೆಗೆ ಹಲವು ಪ್ರಶ್ನೆಗಳನ್ನು ಬಾಲಕ ಕೇಳುತ್ತಿರುತ್ತಾನೆ. ಬಾಲಕನು ದಾನ ಮಾಡಿದ ಮೊತ್ತವು ಮಹತ್ವದ್ದಾಗಿರದೆ ಇರಬಹುದು. ಆದರೆ ಕೊರೋನ ಸಮಯದಲ್ಲಿ ಜನರನ್ನು ಸುರಕ್ಷಿತವಾಗಿಡಲು ದಣಿವರಿಯಿಲ್ಲದೆ ಕೆಲಸ ಮಾಡುವವರಿಗೆ ಸಹಾಯ ಮಾಡುವ ಆತನ ಉದ್ದೇಶವನ್ನು ಇದು ಹೇಳುತ್ತದೆ.