ನಾಲ್ವರು ಮಹಿಳೆಯರನ್ನು ಅತ್ಯಾಚಾರಗೈದ ಆರೋಪ: ʼತಪಸ್ವಿ ಬಾಬಾʼ ಬಂಧನ

Update: 2021-05-25 16:19 GMT

ಜೈಪುರ: ನಾಲ್ವರು ಮಹಿಳೆಯರನ್ನು ಅತ್ಯಾಚಾರಗೈದ ಆರೋಪದಲ್ಲಿ ಜೈಪುರ ಪೊಲೀಸರು ಸ್ವಯಂಘೋಷಿತ ಬಾಬಾ ತಪಸ್ವಿ ಎಂಬಾತನನ್ನು ಮಂಗಳವಾರ ಬಂಧಿಸಿದ್ದಾರೆ ಎಂದು Newindianexpress ವರದಿ ಮಾಡಿದೆ. ಒಂದೇ ಕುಟುಂಬದ ಮೂವರು ಮಹಿಳೆಯರು ತಪಸ್ವಿ ಬಾಬಾ ಪ್ರಸಾದದ ಹೆಸರಿನಲ್ಲಿ ಗಾಂಜಾ ಸಂಬಂಧಿತ ವಸ್ತುಗಳನ್ನು ಬೆರೆಸಿ ನೀಡಿದ್ದು, ಬಳಿಕ ಅತ್ಯಾಚಾರ ಎಸಗಿದ್ದಾನೆಂದು ದೂರಿದ ಬೆನ್ನಲ್ಲಿ ಬಾಬಾನನ್ನು ಬಂಧಿಸಲಾಗಿದೆ.

ಆತನ ನೈಜ ಹೆಸರು ಯೋಗೇಂದ್ರ ಮೆಹ್ತಾ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿದ ಬಳಿಕ ಮೆಹ್ತಾ ನಾಪತ್ತೆಯಾಗಿದ್ದಾನೆ ಎಂದು ವರದಿ ತಿಳಿಸಿದೆ. 

ಯೋಗೇಂದ್ರ ಮೆಹ್ತಾ ಎಂಬಾತ ಈ ಹಿಂದೆ ತಪಸ್ವಿ ಬಾಬಾ ಎಂಬವರ ಹೆಸರನ್ನು ಹೈಜಾಕ್‌ ಮಾಡಿಕೊಂಡು ಅದೇ ಹೆಸರಿನಲ್ಲಿ ತಾನೂ ಆಶ್ರಮ ನಿರ್ಮಿಸಿದ್ದ ಎನ್ನಲಾಗಿದೆ. ಹತ್ತಕ್ಕೂ ಹೆಚ್ಚು ಮಹಿಳೆಯರು ಆತನ ಆಶ್ರಮದಲ್ಲಿ ತಂಗುತ್ತಿದ್ದರು ಎಂದು ತಿಳಿದು ಬಂದಿದೆ. ಮೊದಲು ಮತ್ತು ಬರುವ ಪ್ರಸಾದ ನೀಡಿ ಬಳಿಕ ಆತ ಅತ್ಯಾಚಾರ ಎಸಗಿದ್ದಾನೆಂದು 45 ವರ್ಷದ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಈ ವಿಚಾರವನ್ನು ಬಹಿರಂಗಪಡಿಸಿದರೆ ಕೊಲ್ಲುತ್ತೇನೆ ಎಂದು ಆತ ಬೆದರಿಸಿದ್ದಾಗಿ ಅದೇ ಕುಟುಂಬದ ಇನ್ನಿಬ್ಬರು ಮಹಿಳೆಯರು ಆರೋಪಿಸಿದ್ದಾರೆ. ಆತನ ಈ ಕೃತ್ಯಗಳಿಗೆ ಸಹಾಯಿಯಾಗಿ ಇನ್ನೋರ್ವ ಮಹಿಳೆಯೂ ಇದ್ದಾಳೆಂದು ಅವರು ಆರೋಪಿಸಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News