ಆರು ವಾರಗಳ ಬಳಿಕ ಮೊದಲ ಬಾರಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ

Update: 2021-05-28 06:05 GMT

ಹೊಸದಿಲ್ಲಿ: ಭಾರತದಲ್ಲಿ  ದೈನಂದಿನ ಪ್ರಕರಣಗಳಲ್ಲಿ ಇಳಿಮುಖವಾಗುವ ಪ್ರವೃತ್ತಿ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನದಲ್ಲಿ 1.86 ಲಕ್ಷ ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು  ದಾಖಲಾಗಿವೆ. 44 ದಿನಗಳಲ್ಲಿ ಮೊದಲ ಬಾರಿ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 2.75 ಕೋಟಿ ದಾಟಿದೆ.

ಸರಕಾರದ ಅಂಕಿ-ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 3,660 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ. 11 ದಿನಗಳ ನಂತರ ಸರಾಸರಿ ದೈನಂದಿನ ಸಾವುಗಳು 4,000 ಕ್ಕಿಂತ ಕಡಿಮೆಯಾಗಿದೆ. ಇದರೊಂದಿಗೆ, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ದೇಶದ ಒಟ್ಟು ಸಾವುಗಳು 3,18,895 ಕ್ಕೆ ತಲುಪಿದೆ.

ಸತತ 15 ನೇ ದಿನ ದೈನಂದಿನ ಚೇತರಿಕೆ ಸಂಖ್ಯೆಯು ದೈನಂದಿನ ಸೋಂಕುಗಳ ಸಂಖ್ಯೆಗಿಂತ ಹೆಚ್ಚಾಗಿದೆ.

ಕಳೆದ 24 ಗಂಟೆಗಳಲ್ಲಿ 2,59,459 ರೋಗಿಗಳು ಚೇತರಿಸಿಕೊಂಡಿದ್ದು,  ಭಾರತದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 90.34 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ಭಾರತದಲ್ಲಿ ಕೊರೋನದಿಂದ ಅತಿ ಹೆಚ್ಚು ಪೀಡಿತವಾದ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ 21,273 ಹೊಸ ಪ್ರಕರಣಗಳು ಹಾಗೂ  884 ರೋಗಿಗಳ ಸಾವು ದಾಖಲಾಗಿದೆ. ವೈರಸ್ ಹರಡುವುದನ್ನು ತಡೆಯಲು ತಮ್ಮ ಸರಕಾರ ಜೂನ್ 1 ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ತರಹದ ನಿರ್ಬಂಧಗಳನ್ನು ವಿಸ್ತರಿಸಲಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರು.

ಮಹಾರಾಷ್ಟ್ರದ ನಂತರ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ  ಉತ್ತರ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚು ಸೋಂಕುಗಳು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News