ಲಕ್ಷದ್ವೀಪ ವಿವಾದ: ಪ್ರಸ್ತಾವಿತ ಕಾನೂನು ಜಾರಿಗೆ ತಡೆ ಹೇರಲು ಕೇರಳ ಹೈಕೋರ್ಟ್ ನಿರಾಕರಣೆ

Update: 2021-05-28 18:48 GMT

ತಿರುವನಂತಪುರಂ, ಮೇ 28: ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ  ಶಾಸನ 2021ರ ಜಾರಿಗೆ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ ಎಂದು ವರದಿಯಾಗಿದೆ. 

ಸ್ಥಳೀಯರು ಹಾಗೂ ವಿಪಕ್ಷಗಳಿಂದ ಭಾರೀ ವಿರೋಧ ಎದುರಾಗಿರುವ, ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಪ್ರಸ್ತಾವಿಸಿದ ಪ್ರಸ್ತಾವನೆಗಳಲ್ಲಿ ಈ ಕರಡು ಶಾಸನವೂ ಸೇರಿದೆ. ಲಕ್ಷದ್ವೀಪದಲ್ಲಿ ಭೂಮಿ ಬಳಕೆಯ ಸ್ವರೂಪದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶದ ಈ ಕರಡು ಶಾಸನದ ಜಾರಿಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ಕೆಪಿ ನೌಶಾದ್ ಆಲಿ ಕೇರಳ ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದರು. 

ಶುಕ್ರವಾರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಎಂಆರ್ ಅನಿತಾ ಅವರಿದ್ದ ನ್ಯಾಯಪೀಠ, ಇದು ಕಾರ್ಯನೀತಿಗೆ ಸಂಬಂಧಿಸಿರುವ ವಿಷಯವಾದ್ದರಿಂದ ಪ್ರಸ್ತಾವಿತ ಕಾಯ್ದೆ ಜಾರಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.  ಮತ್ತು, ಅರ್ಜಿಗೆ ಎರಡು ವಾರದೊಳಗೆ ಪ್ರತಿಕ್ರಿಯಿಸುವಂತೆ ಲಕ್ಷದ್ವೀಪ ಆಡಳಿತಕ್ಕೆ ಸೂಚಿಸಿತು.

ಪರಿಶಿಷ್ಟ ಜನಾಂಗದವರು ಹೊಂದಿರುವ ಸಣ್ಣ ಜಮೀನು ಅಥವಾ ಆಸ್ತಿಯನ್ನು ರದ್ದುಗೊಳಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು  ಹೊಸ ನಿಯಮವು ಆಡಳಿತಕ್ಕೆ ಅಧಿಕಾರ ನೀಡಿದೆ. ಇದು ಸಂವಿಧಾನದಲ್ಲಿ ಉಲ್ಲೇಖಿಸಿರುವ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಮತ್ತು ಕೇಂದ್ರ ಸರಕಾರದಡಿ ಕಾರ್ಯನಿರ್ವಹಿಸುವ ಲಕ್ಷದ್ವೀಪ ಆಡಳಿತಕ್ಕೆ ಅಪಾರ ಅಧಿಕಾರ ನೀಡುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಇದರ ಜೊತೆಗೆ, ಸಾರ್ವಜನಿಕರಿಗೆ ತಿಳಿಯಪಡಿಸದೆ ಒಬ್ಬ ವ್ಯಕ್ತಿಯನ್ನು 1 ವರ್ಷ ಬಂಧನದಲ್ಲಿಡಲು ಅವಕಾಶ ನೀಡುವ ಸಮಾಜ ವಿರೋಧಿ ಚಟುವಟಿಕೆ ತಡೆ ಕಾಯ್ದೆಯನ್ನು ರದ್ದುಗೊಳಿಸುವಂತೆಯೂ ಆಗ್ರಹಿಸಲಾಗಿದೆ. 

ಈ ಮಧ್ಯೆ, ಹೊಸ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಪಟೇಲ್, ಇದು ಲಕ್ಷದ್ವೀಪದ ಅಭಿವೃದ್ಧಿಯ ಉದ್ದೇಶದ ಹಾಗೂ ಜನರಿಗೆ ನೆರವಾಗುವ ಪ್ರಯತ್ನ ಎಂದು ಹೇಳಿದ್ದಾರೆ. ಸಮಾಜ ವಿರೋಧಿ ಚಟುವಟಿಕೆ ತಡೆ ಕಾಯ್ದೆಯನ್ನು ಸಮರ್ಥಿಸಿಕೊಂಡಿರುವ ಲಕ್ಷದ್ವೀಪದ ಕಲೆಕ್ಟರ್ ಎಸ್ ಅಕ್ಸರ್ ಆಲಿ , ಇತರ ರಾಜ್ಯಗಳಂತೆಯೇ ಲಕ್ಷದ್ವೀಪದಲ್ಲೂ ಆಂತರಿಕ ಭದ್ರತೆ ಪ್ರಮುಖ ಸಮಸ್ಯೆಯಾಗಿದೆ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಹೊಸ ಕಾಯ್ದೆಗಳನ್ನು ವಿರೋಧಿಸುತ್ತಿವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News