ವಯಸ್ಕರಿಗೆ ಸಂಪೂರ್ಣ ಲಸಿಕೀಕರಣ: ಜಮ್ಮು ಕಾಶ್ಮೀರದ ಗ್ರಾಮದ ಸಾಧನೆ

Update: 2021-06-08 15:02 GMT

ಶ್ರೀನಗರ,ಜೂ.8: ಗ್ರಾಮದ ಎಲ್ಲಾ ವಯಸ್ಕರಿಗೆ ಕೋವಿಡ್ ಲಸಿಕೆ ನೀಡುವ ಮೂಲಕ ಜಮ್ಮು ಕಾಶ್ಮೀರದ ಬಂಡೀಪೋರ ಜಿಲ್ಲೆಯ ಸಣ್ಣ ಗ್ರಾಮವೊಂದು ರಾಷ್ಟ್ರೀಯ ದಾಖಲೆ ಸ್ಥಾಪಿಸಿದೆ. ಈ ಸಾಧನೆ ಮಾಡಿದ ದೇಶದ ಪ್ರಪ್ರಥಮ ಗ್ರಾಮ ಎಂಬ ಹಿರಿಮೆಗೆ ಪಾತ್ರವಾಗಿದೆ. ‌

ಬಂಡೀಪೋರಾದಿಂದ 28 ಕಿ.ಮೀ ದೂರದಲ್ಲಿರುವ ವೆಯಾನ್ ಎಂಬ ಗ್ರಾಮದಲ್ಲಿರುವ 362 ವಯಸ್ಕರಿಗೆ ಲಸಿಕೆ ನೀಡಲಾಗಿದೆ. ಈ ಗ್ರಾಮಕ್ಕೆ ವಾಹನ ಸಂಚರಿಸುವ ರಸ್ತೆ ಇರದ ಕಾರಣ ಗ್ರಾಮಸ್ಥರು ಕಾಲ್ನಡಿಗೆಯಲ್ಲಿಯೇ ಸುಮಾರು 18 ಕಿ.ಮೀ ಸಂಚರಿಸಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಈ ಗ್ರಾಮದಲ್ಲಿ ಹೆಚ್ಚಿನವರು ಜಾನುವಾರುಗಳನ್ನು ಸಾಕುತ್ತಾ ಅಲೆಮಾರಿಗಳಂತೆ ಬದುಕುವವರು. 

ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಹುಡುಕುತ್ತಾ ಜಾನುವಾರುಗಳ ಸಮೇತ ಊರಿನ ಹೊರಭಾಗದ ಬೆಟ್ಟಪ್ರದೇಶಗಳಿಗೆ ತೆರಳುತ್ತಾರೆ. ಈ ಗ್ರಾಮಕ್ಕೆ ಇಂಟರ್ನೆಟ್ ಸಂಪರ್ಕವೂ ಇಲ್ಲ. ಆದ್ದರಿಂದ ಆನ್ಲೈನ್ನಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲು ಇವರಿಂದ ಸಾಧ್ಯವಿಲ್ಲ. ಆದರೂ ಆರೋಗ್ಯ ಕಾರ್ಯಕರ್ತರು ಇಲ್ಲಿನ ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ್ದಾರೆ ಎಂದು ಬಂಡೀಪೋರಾದ ಮುಖ್ಯ ವೈದ್ಯಾಧಿಕಾರಿ ಬಶೀರ್ ಅಹ್ಮದ್ ಖಾನ್ ಹೇಳಿದ್ದಾರೆ. 

ಇಲ್ಲಿ ಲಸಿಕೀಕರಣ ಅಭಿಯಾನಕ್ಕೆ 10 ಅಂಶಗಳ ಕಾರ್ಯತಂತ್ರವಿರುವ ಜಮ್ಮು ಕಾಶ್ಮೀರ ಮಾದರಿಯನ್ನು ಆಯ್ದುಕೊಳ್ಳಲಾಗಿದೆ. ಲಸಿಕೆ ಪಡೆಯಲು ಆರಂಭದಲ್ಲಿ ಹಿಂಜರಿದರೂ ಈಗ ರಾಜ್ಯದಲ್ಲಿ 45 ವರ್ಷ ಮೀರಿದ ವರ್ಗದಲ್ಲಿ 70% ಲಸಿಕೀಕರಣ ಸಾಧಿಸಲಾಗಿದೆ. ಇದು ದೇಶದ ಸರಾಸರಿಗಿಂತ ಬಹುತೇಕ ದುಪ್ಪಟ್ಟು ಪ್ರಮಾಣವಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News