ಟ್ವಿಟರ್‌ ನೋಟಿಸ್‌ ಬಳಿಕ ವ್ಯಂಗ್ಯಚಿತ್ರಕಾರ ಮಂಜುಲ್ ರನ್ನು ಸೇವೆಯಿಂದ ಅಮಾನತುಗೊಳಿಸಿದ ನೆಟ್‍ವರ್ಕ್ 18

Update: 2021-06-11 18:42 GMT

 ಹೊಸದಿಲ್ಲಿ,ಜೂ.21: ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ಮಂಜುಲ್ ಜೊತೆಗಿನ ಗುತ್ತಿಗೆ ಒಪ್ಪಂದವನ್ನು ನೆಟ್ವರ್ಕ್18 ಕೊನೆಗೊಳಿಸಿರುವುದಾಗಿ ಸ್ಕ್ರೋಲ್.ಇನ್ ವರದಿ ಮಾಡಿದೆ. ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ಮಂಜುಲ್ ಅವರ ಟ್ವಿಟ್ಟರ್ ಖಾತೆಯ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಭಾರತದ ಸರಕಾರದಿಂದ ತನಗೆ ಕಾನೂನು ಮನವಿ ಬಂದಿದೆಯೆಂದು ಇತ್ತೀಚೆಗೆ ಟ್ವಿಟ್ಟರ್ ಮಾಹಿತಿ ನೀಡಿತ್ತು. ಇದಾದ ಕೆಲವೇ ದಿನಗಳ ಬಳಿಕ ನೆಟ್ವಕ್18 ಮಂಜುಲ್ ಜೊತೆಗಿನ ಒಡಂಬಡಿಕೆಯನ್ನು ರದ್ದುಪಡಿಸಿದೆ.
   ‌
ಮಂಜುಲ್ ಅವರು ರಿಲಾಯನ್ಸ್ ಇಂಡಸ್ಟ್ರೀಸ್ ಒಡೆತನದ ನೆಟ್ವರ್ಕ್ 18 ಮಾಧ್ಯಮ ಸಂಸ್ಥೆಯಲ್ಲಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
   
ಇದಕ್ಕೂ ಮುನ್ನ ಖ್ಯಾತ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರು ವ್ಯಂಗ್ಯಚಿತ್ರಕಾರ ಸತೀಶ್ಆಚಾರ್ಯ ರಚಿಸಿದ್ದ ವ್ಯಂಗ್ಯಚಿತ್ರವನ್ನು ಶೇರ್ ಮಾಡಿದ್ದಕ್ಕಾಗಿ ತನಗೆ ಟ್ವಿಟ್ಟರ್ನಿಂದ ನೋಟಿಸ್ ಬಂದಿರುವುದಾಗಿ ನ್ಯಾಯವಾದಿ ಪ್ರಶಾಂತ್ ಭೂಷಣ್ ಗುರುವಾರ ತಿಳಿಸಿದ್ದರು. ತನ್ನ ಟ್ವೀಟ್ ಭಾರತದ ಕಾನೂನಿನ ಉಲ್ಲಂಘನೆಯಾಗಿದೆ ಎಂದು ತನಗೆ ಟ್ವಿಟ್ಟರ್ ಮಾಹಿತಿ ನೀಡಿದೆಯೆಂದು ಅವರು ಹೇಳಿದ್ದಾರೆ.
  
ಜೂನ್ 4ರಂದು ಮಂಜುಲ್ ಅವರು ತಾನು ಟ್ವಿಟ್ಟರ್ನಿಂದ ಇಮೇಲ್ ಮೂಲಕ ಪಡೆದ ನೋಟಿಸನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸರಕಾರವು ಮಂಜಲ್ ಅವರ ನಿರ್ದಿಷ್ಟ ಟ್ವೀಟ್ ಬದಲಿಗೆ ಅವರ ಪ್ರೊಫೈಲ್ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕೆಂದು ಟ್ವಿಟ್ಟರ್ಗೆ ಆಗ್ರಹಿಸಿದೆ.
 
ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟ್ಟರ್ ಕಳುಹಿಸಿರುವ ಇಮೇಲ್ ನೋಟಿಸನ್ನು ಹಂಚಿಕೊಂಡಿರುವ ಮಂಜುಲ್ ಅವರು ‘ಜೈ ಹೋ ಮೋದಿ ಜಿ ಕೀ ಸರ್ಕಾರ್ ಕಿ ’ ಎಂದು ಟ್ವೀಟ್ ಮಾಡಿದ್ದಾರೆ.ತಾನು ಪ್ರಕಟಿಸಿರುವ ಯಾವ ಟ್ವೀಟ್ನಿಂದ ಸಮಸ್ಯೆಯಾಗಿದೆ ಎಂಬುದನ್ನು ಮೋದಿ ಸರಕಾರ ತಿಳಿಸಿರೆೆ ಒಳ್ಳೆಯದಿತ್ತೆಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಕೊರೋನ ಎರಡನೆ ಅಲೆಯು ಸೃಷ್ಟಿಸಿರುವ ವಿನಾಶಕಾರಿ ಪರಿಸ್ಥಿತಿ ಹಾಗೂ ಮಂದಗತಿಯಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನದ ಕುರಿತಾದ ವ್ಯಂಗ್ಯಚಿತ್ರವನ್ನು ಪ್ರಕಟಿಸಿರುವುದು ಕೇಂದ್ರದ ಕೆಂಗಣ್ಣಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
     
ಗುರುವಾರದಂದು ಪ್ರಶಾಂತ್ ಭೂಷಣ್ ಅವರು ಕೂಡಾ ಸತೀಶ್ ಆಚಾರ್ಯರ ವಿವಾದಾತ್ಮಕ ವ್ಯಂಗ್ಯಚಿತ್ರವನ್ನು ಶೇರ್ ಮಾಡಿದ್ದಕ್ಕಾಗಿ ತಾನು ಟ್ವಿಟ್ಟರ್ ಇಮೇಲ್ ಮೂಲಕ ಕಳುಹಿಸಿರುವ ನೋಟಿಸ್ನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. ದೇಶದ್ರೋಹವೇ ? ಅಥವಾ ಬ್ಯಾಂಕುಗಳನ್ನು ಲೂಟಿ ಮಾಡುವ ವಿರುದ್ಧದ ಕಾನೂನೇ ಹೀಗೆ ಯಾವ ಕಾನೂನಿನಡಿ ಕ್ರಮಗಳನ್ನು ಕೈಗೊಳ್ಳುವಿರಿ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಸಲ ಕೋರಿಕೆಯ ಮೇರೆಗೆ ಪ್ರಶಾಂತ್ ಭೂಷಣ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂದು ಭೂಷಣ್ ಅವರು ಶೇರ್ಮಾಡಿರುವ ಟ್ವಿಟ್ಟರ್ ನ ಇಮೇಲ್ ನಲ್ಲಿ ತಿಳಿಸಲಾಗಿದೆ.

ಈ ವರ್ಷದ ಏಪ್ರಿಲ್ ತಿಂಗಳೊಂದರಲ್ಲೇ ಕೇಂದ್ರ ಸರಕಾರದ ಆದೇಶದ ಮೇರೆಗೆ 52 ಟ್ವೀಟ್ಗಳನ್ನು ಟ್ವಟ್ಟರ್ ತೆಗೆದುಹಾಕಿತ್ತು. ಈ ವಿವಾದಾತ್ಮಕ ಟ್ವೀಟ್ಗಳು ಸುಳ್ಲು ಸುದ್ದಿಗಳನ್ನು ಹರಡುತ್ತಿವೆಯೆಂದು ಕೇಂದ್ರ ಸರಕಾರದ ಆರೋಪವಾಗಿದೆ.ಆದರೆ ಈ ಟ್ವೀಟ್ಗಳಲ್ಲಿ ಹೆಚ್ಚಿನವು ಕೊರೋನ ಎರಡನೆ ಅಲೆಯ ನಿರ್ವಹಣೆಯಲ್ಲಿ ಕೇಂದ್ರದ ವೈಫಲ್ಯವನ್ನು ಟೀಕಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News