ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಕಾರಣದಿಂದ ದಂಪತಿಯ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ:ಅಲಹಾಬಾದ್ ಹೈಕೋರ್ಟ್
ಪ್ರಯಾಗರಾಜ್,ಜೂ.12: ಅಂತರ್ಧರ್ಮೀಯ ವಿವಾಹವಾಗಿರುವ ದಂಪತಿಗೆ ರಕ್ಷಣೆಯನ್ನು ನೀಡುವಂತೆ ಪೊಲೀಸರಿಗೆ ನಿರ್ದೇಶ ನೀಡಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು, ತನ್ನನ್ನು ಬಲವಂತದಿಂದ ಮತಾಂತರಿಸಲಾಗಿದೆ ಎಂದು ಮಹಿಳೆಯು ಆರೋಪಿಸಿರದಿದ್ದರೆ ಇಸ್ಲಾಮ್ ಧರ್ಮಕ್ಕೆ ಆಕೆ ಮತಾಂತರಗೊಂಡಿದ್ದಾಳೆ ಎಂಬ ಕಾರಣದಿಂದ ದಂಪತಿಯ ಸ್ವಾತಂತ್ರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಎತ್ತಿ ಹಿಡಿದಿದೆ.
ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಯಶಿ ದೇವಿ (20) ಮತ್ತು ಗುಚ್ಛನ್ ಖಾನ್ (40) 2021,ಜ.11ರಂದು ಮದುವೆಯಾಗಿದ್ದು,ಮದುವೆಗೆ ಮುನ್ನ ಯಶಿ ದೇವಿ ಇಸ್ಲಾಮ್ಗೆ ಮತಾಂತರಗೊಂಡಿದ್ದಳು.
ತಮ್ಮ ವೈವಾಹಿಕ ಜೀವನದಲ್ಲಿ ಮತ್ತು ಸ್ವಾತಂತ್ರದಲ್ಲಿ ಹಸ್ತಕ್ಷೇಪ ಮಾಡದಂತೆ ತಮ್ಮ ಕುಟುಂಬಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಕೋರಿ ದಂಪತಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತಾವಿಬ್ಬರೂ ವಯಸ್ಕರಾಗಿದ್ದು,ತಮ್ಮ ಸ್ವಂತ ಇಚ್ಛೆಯ ಮೇರೆಗೆ ಮದುವೆಯಾಗಿರುವುದಾಗಿ ಅವರು ಅರ್ಜಿಯಲ್ಲಿ ತಿಳಿಸಿದ್ದರು.
ಲತಾ ಸಿಂಗ್ ವಿರುದ್ಧ ಉ.ಪ್ರದೇಶ ಸರಕಾರದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಸ್ತಾಪಿಸಿದ ನ್ಯಾ.ಸಲಿಲ್ ಕುಮಾರ ರಾಯ್ ಅವರು,ದಂಪತಿ ವಯಸ್ಕರಾಗಿದ್ದರೆ ಯಾವುದೇ ಹಸ್ತಕ್ಷೇಪವಿಲ್ಲದೆ ಶಾಂತಿಯುತವಾಗಿ ಬದುಕುವ ಹಕ್ಕು ಅವರಿಗೆ ಇದೆ ಎನ್ನುವುದನ್ನು ಕಾನೂನು ಸಮರ್ಥಿಸಿದೆ ಎಂದು ಹೇಳಿದರು.
ದಂಪತಿ ತಮ್ಮ ಜೀವಕ್ಕೆ ಮತ್ತು ಸ್ವಾತಂತ್ರಕ್ಕೆ ಬೆದರಿಕೆ ಎದುರಿಸುತ್ತಿದ್ದರೆ ಅಥವಾ ಕಿರುಕುಳಕ್ಕೊಳಗಾಗುತ್ತಿದ್ದರೆ ಅವರು ಮೊರಾದಾಬಾದ್ ಎಸ್ಎಸ್ಪಿಯವರನ್ನು ಸಂಪರ್ಕಿಸಬಹುದು ಮತ್ತು ಪೊಲೀಸರು ಕ್ರಮ ಕೈಗೊಳ್ಳಲು ಎಲ್ಲ ಅಗತ್ಯ ಮಾಹಿತಿಗಳು ಮತ್ತು ಪುರಾವೆಗಳನ್ನು ಒದಗಿಸಬೇಕು ಎಂದು ಹೇಳಿದ ನ್ಯಾಯಾಲಯವು, ವಯಸ್ಕ ಜೋಡಿ ಮದುವೆಯಾಗದೆ ಸಹಜೀವನ ನಡೆಸುತ್ತಿದ್ದರೆ ಅವರಿಗೆ ಸುರಕ್ಷತೆ ಒದಗಿಸಲು ಮದುವೆಯ ಪುರಾವೆ ಅಗತ್ಯವಿಲ್ಲ ಮತ್ತು ಸಂಬಂಧಿತ ಪೊಲೀಸ್ ಅಧಿಕಾರಿಯು ಅದಕ್ಕಾಗಿ ಒತ್ತಾಯಿಸುವಂತಿಲ್ಲ ಎಂದೂ ಸ್ಪಷ್ಟಪಡಿಸಿತು.