ಕೋವಿಡ್ 3ನೇ ಅಲೆ ಮಕ್ಕಳಿಗೆ ಮಾರಕವೇ? ಸರಕಾರ ಸಿದ್ಧವಾಗಿದೆಯೇ?
ಕೋವಿಡ್-19 ಮಹಾಮಾರಿಯ ಮೂರನೇ ಅಲೆಯು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಭಾರೀ ಪರಿಣಾಮ ಬೀರಲಿದೆ. ಹಾಗಾಗಿ ಮಕ್ಕಳ ಆರೈಕೆಗಾಗಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ 16 ಸದಸ್ಯರನ್ನು ಒಳಗೊಂಡ ತಜ್ಞರ ಸಮಿತಿ ರಾಜ್ಯ ಸರಕಾರವನ್ನು ಎಚ್ಚರಿಸಿದೆ.
ಕೊರೋನ ಮೂರನೇ ಅಲೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಮಿತಿ, 91 ಪುಟಗಳ ಮಧ್ಯಂತರ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಮತ್ತು ಶಿಫಾರಸುಗಳನ್ನು ಮಾಡಿದೆ. ಆ ಶಿಫಾರಸಿನ ಪ್ರಕಾರ, ರಾಜ್ಯದಲ್ಲಿ ಸುಮಾರು 3 ಲಕ್ಷದ 40 ಸಾವಿರ ಮಕ್ಕಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ತಜ್ಞರ ಸಮಿತಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಅಲ್ಲದೆ, ರಾಜ್ಯಾದ್ಯಂತ ಸುಮಾರು 94 ಸಾವಿರ ಹಾಸಿಗೆಗಳನ್ನು ಮಕ್ಕಳಿಗಾಗಿಯೇ ಸಿದ್ಧಮಾಡಿಟ್ಟುಕೊಳ್ಳಲು ಸಮಿತಿ ಸೂಚಿಸಿದೆ. ಬೆಂಗಳೂರು ಒಂದರಲ್ಲಿಯೇ 3,677 ಹಾಸಿಗೆಗಳ ಅವಶ್ಯಕತೆಯಿದ್ದು, ಅದರಲ್ಲಿ 1,838 ಐಸಿಯು ಮತ್ತು ಎಚ್‌ಡಿಯು (ಹೈ ಡಿಪೆಂಡೆನ್ಸಿ ಯೂನಿಟ್) ಹಾಸಿಗೆಗಳು ಇರಬೇಕಾಗುತ್ತವೆ ಎಂದು ಹೇಳಿದೆ. ಇದಲ್ಲದೆ ಹೆಚ್ಚುವರಿಯಾಗಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 7,353 ಹಾಸಿಗೆಗಳು ಬೇಕಾಗುತ್ತವೆ ಎಂದು ಸಮಿತಿ ಶಿಫಾರಸು ಮಾಡಿದೆ.
ಕೋವಿಡ್ ತಜ್ಞರ ಪ್ರಕಾರ ಕೋವಿಡ್ ಮೊದಲನೇ ಅಲೆ ಹೆಚ್ಚಾಗಿ 60 ವರ್ಷದ ಮೇಲ್ಪಟ್ಟ ವೃದ್ಧರನ್ನು ಕಾಡಿ, ಕಂಗೆಡಿಸಿತ್ತು. ಆ ಅಲೆಯಲ್ಲಿ ಶೇ.3ರಷ್ಟು ಮಕ್ಕಳನ್ನು ಬಲಿ ಪಡೆದಿತ್ತು ಹಾಗೂ ಎರಡನೇ ಅಲೆಯಲ್ಲಿ 40 ವರ್ಷಕ್ಕಿಂತ ಕೆಳಗಿನ ಮಧ್ಯವಯಸ್ಕರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಅಪಾರ ಸಾವು-ನೋವಿಗೂ ಕಾರಣವಾಗಿತ್ತು. ಈ ಅಲೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮಕ್ಕಳನ್ನು ಹೆಚ್ಚಾಗಿ ಬಾಧಿಸಿತ್ತು. ಹಾಗಾಗಿ ತಜ್ಞರ ಅಧ್ಯಯನ ವರದಿಗಳು ಹೇಳುವ ಪ್ರಕಾರ, ಕೋವಿಡ್ ಮೂರನೇ ಅಲೆ, ಹಿಂದಿನ ಎರಡು ಅಲೆಗಿಂತ ಭಯಾನಕವಾಗಿದ್ದು ಅಕ್ಟೋಬರ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದಿದ್ದಾರೆ. ಅಲ್ಲದೆ, ಅದು ನಿರ್ದಿಷ್ಟವಾಗಿ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಒತ್ತಿ ಹೇಳಲಾಗುತ್ತಿದೆ. ಮಕ್ಕಳ ಆರೋಗ್ಯವಾದ್ದರಿಂದ, ಭವಿಷ್ಯದ ಜನಾಂಗವನ್ನು ಬಲಿಷ್ಠವಾಗಿ ರೂಪಿಸುವ ಜವಾಬ್ದಾರಿ ಸರಕಾರ ಮತ್ತು ಜನತೆಯ ಮೇಲಿರುವುದರಿಂದ, ಈ ಬಗ್ಗೆ ಸರಕಾರ ವಿಶೇಷ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಾಲ್ಕು ತಿಂಗಳ ಮುಂಚಿತವಾಗಿಯೇ ಸಮಿತಿ ಸೂಚನೆ ನೀಡಿದೆ.
ಇದಕ್ಕೆ ಪೂರಕವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಳೆದ ಒಂದು ತಿಂಗಳಲ್ಲಿ 50 ಸಾವಿರ ಮಕ್ಕಳಿಗೆ ಕೋವಿಡ್ ಸೋಂಕು ತಗಲಿದ್ದು, ಈ ಪೈಕಿ 44 ಮಕ್ಕಳು ಸಾವನ್ನಪ್ಪಿದ್ದಾರೆ. ತಜ್ಞರ ಸಮಿತಿ ಅಂತಿಮ ವರದಿ ಆಧರಿಸಿ 45 ದಿನಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.
ಆದರೆ ಸರಕಾರ ಎರಡನೇ ಅಲೆಗೆ ಹಾಕಿದ್ದ ನಿರ್ಬಂಧವನ್ನು ಜುಲೈ 5ರಿಂದ ಸಂಪೂರ್ಣವಾಗಿ ತೆರವುಗೊಳಿಸಲು ನಿರ್ಧರಿಸಿದೆ. ಈಗಲೇ ವಾಣಿಜ್ಯ-ವ್ಯವಹಾರಗಳು ಚುರುಕುಗೊಳ್ಳುತ್ತಿವೆ. ಸಾರ್ವಜನಿಕ ಸಾರಿಗೆ, ಜನಸಂದಣಿ ಹೆಚ್ಚಾಗುತ್ತಿದೆ. ಜನಜೀವನ ಮಾಮೂಲಿನ ಹಂತಕ್ಕೆ ಬರುತ್ತಿದೆ. ಎಲ್ಲೋ ಕೆಲವರು ಮಾತ್ರ ಲಸಿಕೆ ಹಾಕಿಸಿಕೊಳ್ಳುವ, ಮಾಸ್ಕ್ ಧರಿಸುವ, ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಪಾಲಿಸುತ್ತಿದ್ದಾರೆ. ದೇಶಕ್ಕೆ ಕೋವಿಡ್ ಕಾಲಿಟ್ಟು ಒಂದೂವರೆ ವರ್ಷವಾದರೂ, ಹೆಚ್ಚಿ ನ ಪಾಲು ಜನಕ್ಕೆ ಇನ್ನೂ ಲಸಿಕೆಯೇ ಲಭ್ಯವಾಗಿಲ್ಲ. ಅದರಲ್ಲೂ ಮಕ್ಕಳ ವಿಷಯಕ್ಕೆ ಬಂದರೆ, 2ರಿಂದ 16 ವಯೋಮಾನದವರಿಗೆ ಯಾವ ಲಸಿಕೆ ನೀಡಬೇಕು ಎಂಬುದೇ ಸರಕಾರದ ಮಟ್ಟದಲ್ಲಿ ಇನ್ನೂ ಅಂತಿಮವಾಗಿಲ್ಲ.
ಇದಕ್ಕಿಂತ ಇನ್ನೂ ಭೀಕರವಾದ ಸಂಗತಿ ಎಂದರೆ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಕತೆ. ಪ್ರತಿ ಜಿಲ್ಲೆಯಲ್ಲಿ 2ರಿಂದ 3 ಸಾವಿರ ಮಕ್ಕಳು ಅಪೌಷ್ಟಿಕತೆ ಯಿಂದ ನರಳುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರೇ ಒಪ್ಪಿಕೊಂಡಿದ್ದಾರೆ. ಇಂತಹ ಮಕ್ಕಳು ಸಹಜವಾಗಿಯೇ ಬಡಕುಟುಂಬದ ವರಾಗಿರುತ್ತಾರೆ. ಆರ್ಥಿಕವಾಗಿ ದುರ್ಬಲರಾಗಿರುತ್ತಾರೆ. ಇವರಿಗೆ ಒಂದೊತ್ತಿನ ಊಟಕ್ಕೇ ಗತಿ ಇಲ್ಲವೆಂದರೆ, ಸಿಗುವ ಅಲ್ಪಸ್ವಲ್ಪ ಆಹಾರದಲ್ಲಿ ಪೌಷ್ಟಿಕತೆಯೇ ಸಿಗದಿದ್ದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗದಿದ್ದರೆ, ಅಕಸ್ಮಾತ್ ಇಂತಹ ಬಡಕುಟುಂಬಕ್ಕೆ ಸೋಂಕು ತಗಲಿದರೆ ಆಸ್ಪತ್ರೆ, ಔಷಧಿ, ಚಿಕಿತ್ಸೆ ಸಿಕ್ಕರೂ ಬದುಕಿಸುವುದು ಭಾರೀ ಕಷ್ಟದ ಕೆಲಸವಾಗುತ್ತದೆ ಎಂದು ಮಕ್ಕಳು ತಜ್ಞರು ಹೇಳುತ್ತಾರೆ.
ಅಮೆರಿಕ ಮತ್ತು ಬ್ರಿಟನ್ ದೇಶಗಳು ಫೈಝರ್ ಮತ್ತು ಬಯೋಎನ್‌ಟೆಕ್ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಕೊರೋನ ರೋಗನಿರೋಧಕ ಲಸಿಕೆಯನ್ನು ಈಗಾಗಲೇ ಮಕ್ಕಳಿಗೆ ನೀಡಿವೆ. ನಮ್ಮ ದೇಶದಲ್ಲಿ ಈ ಕ್ಷಣದವರೆಗೂ ಈ ಕಂಪೆನಿಯ ಈ ಲಸಿಕೆಯನ್ನು ಕೊಡಲಾಗುತ್ತದೆ ಎಂದು ಅಧಿಕೃತವಾಗಿ ಹೇಳಿಲ್ಲ. ಕ್ಲಿನಿಕಲ್ ಪರೀಕ್ಷೆ ಅಂತಿಮಗೊಳಿಸಿ, ಉತ್ಪಾದನೆಗೆ ಅನುಮತಿ ನೀಡುವುದು, ಖರೀದಿಸಿ ರಾಜ್ಯಗಳಿಗೆ ರವಾನಿಸುವುದು, ಅದು ಮಕ್ಕಳಿಗೆ ಬಳಕೆಯಾಗುವುದು ದೂರದ ಮಾತು ಎನ್ನುತ್ತಾರೆ ಮಕ್ಕಳ ತಜ್ಞರು.
ಒಂದೇ ಒಂದು ಸಮಾಧಾನಕರ ಸಂಗತಿ ಎಂದರೆ ಎಂಐಎಸ್-ಐ (Multisystem inflammatory syndrome in children)ಸೋಂಕಿತ ಮಕ್ಕಳಿಗೆ ರೋಗನಿರೋಧಕ ಲಸಿಕೆಯಾಗಿ ಸದ್ಯಕ್ಕೆ ಐವಿಐಜಿ (Intravenous immunoglobulin)ಯನ್ನು ಬಳಸಲಾಗು ತ್ತಿದೆ. ಅದು ಒಂದು ಎಂಎಲ್‌ಗೆ ಮೂರೂವರೆ ಸಾವಿರ ರೂಪಾಯಿ. ಅದು ಕೂಡ ಮಕ್ಕಳ ತೂಕ-ಒಂದು ಕೆಜಿಗೆ 2 ಎಂಎಲ್ ಲೆಕ್ಕದಂತೆ ನೋಡಿ ಕೊಡಬೇಕಾಗುತ್ತದೆ. ಇದರ ಬೆಲೆಯನ್ನು ಬಡವರು ಭರಿಸುವುದು ಸಾಧ್ಯವೇ ಇಲ್ಲ. ಕೊನೆ ಪಕ್ಷ ನಮ್ಮ ಸರಕಾರಗಳಾದರೂ ಈ ಔಷಧಿಯನ್ನು ಸಂಗ್ರಹಿಸಿಟ್ಟುಕೊಂಡರೆ, 3ನೇ ಅಲೆ ಮಕ್ಕಳಿಗೆ ಅಪ್ಪಳಿಸಿದರೂ, ಕೊಂಚ ಮಟ್ಟಿಗೆ ನಿಯಂತ್ರಿಸಬಹುದು. ಮಕ್ಕಳನ್ನು ಸಾವಿನ ದವಡೆಯಿಂದ ಪಾರು ಮಾಡಬಹುದು ಎನ್ನುತ್ತಾರೆ ಮಕ್ಕಳ ಜ್ಞರಾದ ಡಾ.ಆಶಾ ಬೆನಕಪ್ಪನವರು.
ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಅವಲೋಕಿಸಿದ ಕೇಂದ್ರ ಸರಕಾರ ದ್ವಿತೀಯ ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಕೇಂದ್ರದ ಕ್ರಮವನ್ನು ಹಲವು ರಾಜ್ಯಗಳು ಅನುಸರಿಸಿವೆ. ಆದರೆ ನಮ್ಮ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸೋಮವಾರ ಎಸೆಸೆಲ್ಸಿ ಪರೀಕ್ಷೆ ದಿನಾಂಕ ಘೋಷಿಸಿದ್ದಾರೆ. ಪರೀಕ್ಷೆಗೆ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಪ್ಯಾರಾ ಮೆಡಿಕಲ್ ಸ್ಟಾಫ್, ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗವನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇವರ ಜೊತೆಗೆ ಜಿಲ್ಲಾಧಿಕಾರಿ, ಎಸ್ಪಿ, ಸಿಇಒ, ವಿದ್ಯಾರ್ಥಿಗಳ ಪೋಷಕರೂ ಸೇರಿದರೆ, ಸರಿಸುಮಾರು 10 ಲಕ್ಷಕ್ಕಿಂತಲೂ ಹೆಚ್ಚಾಗುವ ಅಂದಾಜಿದೆ.
ಇಷ್ಟೇ ಅಲ್ಲದೆ, ‘ಜುಲೈ 1 ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಆನ್‌ಲೈನ್‌ಗೆ ಅವಕಾಶ ನೀಡಲಾಗಿದೆ. ಮಕ್ಕಳು ಕಲಿಕೆಯಿಂದ ವಂಚಿತರಾಗದಿರಲು ಕ್ರಿಯಾ ಯೋಜನೆ ಯನ್ನು ರೂಪಿಸಬೇಕೆನ್ನುವುದು ಎಲ್ಲರ ಒಲವಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ. ವಿಷಯ ಪರಿಣಿತರು, ಸರಕಾರದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಮಕ್ಕಳ ತಜ್ಞರು ಸೇರಿದಂತೆ ಈ ಬಗ್ಗೆ ನಿರಂತರವಾದ ಸಲಹೆಗಳನ್ನು ನೀಡುವ ಶಿಕ್ಷಣ ‘ಟಾಸ್ಕ್ ಫೋರ್ಸ್’ ರಚೆ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದಿದ್ದಾರೆ.
ಅಂದರೆ, ನಗರ ಪ್ರದೇಶದ, ಆರ್ಥಿಕ ವಾಗಿ ಸಬಲರಾದ ಮಕ್ಕಳಿಗೆ ಆಲ್‌ಲೈನ್ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಶಿಕ್ಷಣ ಸಚಿವರು, ಗ್ರಾಮೀಣ ಭಾಗದ, ಬಡ ವರ, ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಲಿಕೆಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗದೆ ಕೈ ಚೆಲ್ಲಿದ್ದಾರೆ. ಹಾಗೆಯೇ ಗ್ರಾಮೀಣ ಭಾಗದ, ಬಡ ವರ್ಗದ ಶಾಲೆ ಗಳನ್ನು ಆರಂಭಿಸಲು ಟಾಸ್ಕ್ ಫೋರ್ಸ್ ಮೊರೆ ಹೋಗಿದ್ದಾರೆ.
ಹಾಗಾದರೆ, ಎದುರಾಗಬಹುದಾದ ಮೂರನೆಯ ಅಲೆಗೆ ಮಕ್ಕಳೇ ಬಲಿಪಶುಗಳು ಎಂದು ತಜ್ಞರು ಹೇಳುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲವೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜೂ. 28ರಂದು ಶಿಕ್ಷಣ ಸಚಿವರು ಹಾಗೂ ಆರೋಗ್ಯ ಸಚಿವರ ನಡುವೆ ಸಮನ್ವಯತೆಯ ಕೊರತೆಯಿಂದಾಗಿ, ತದ್ವಿರುದ್ಧ ಹೇಳಿಕೆಗಳು, ಗೊಂದಲಗಳು, ಸಮಜಾಯಿಷಿಗಳು ಸಿಡಿದು ಸುದ್ದಿಯಾಗಿದ್ದು, ಸರಕಾರದ ಮೇಲಿಟ್ಟ ಜನರ ನಂಬಿಕೆಯನ್ನು ಹುಸಿಗೊಳಿಸುತ್ತಿವೆ. ಮುಖ್ಯಮಂತ್ರಿ, ಮಂತ್ರಿಗಳು ವಿಧಾನಸೌಧದಲ್ಲಿ ಕೂತು ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ಕೊಡಬಹುದು. ಆದರೆ ಎಷ್ಟು ಜನ ಅಧಿಕಾರಿಗಳು ಸಚಿವರ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತಾರೆ, ಕಾರ್ಯರೂಪಕ್ಕಿಳಿಸುತ್ತಾರೆ ಎನ್ನುವುದೇ ಸದ್ಯದ ಪ್ರಶ್ನೆ. ಯಾಕೆಂದರೆ 2ನೇ ಕೋವಿಡ್ ಅಲೆ ಯಲ್ಲಿ ಸರಕಾರ ಹೀಗೆಯೇ ದಿನಕ್ಕೆ ಹತ್ತಾರು ಆದೇಶಗಳನ್ನು ಬಿಡುಗಡೆ ಮಾಡುತ್ತಿತ್ತು. ಆದರೆ ವಾಸ್ತವ ಸ್ಥಿತಿ ಬೇರೆಯೇ ಇತ್ತು. ಪರಿಸ್ಥಿತಿ ಕೈ ಮೀರಿ ಹೋಗಿ ಜನ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ, ರೆಮ್‌ಡೆಸಿವಿರ್ ಇಂಜೆಕ್ಷನ್, ಐಸಿಯು ಸಿಗದೆ ಹೆಣವಾಗಿದ್ದು, ಹೆಣ ಸುಡಲು ಸ್ಮಶಾನಗಳ ಮುಂದೆ ಆ್ಯಂಬುಲೆನ್ಸ್‌ಗಳು ಕ್ಯೂನಲ್ಲಿ ನಿಂತಿದ್ದು, ಇಡೀ ಕರ್ನಾಟಕವೇ ಕಣ್ಣೀರಿನಲ್ಲಿ ಮುಳುಗಿದ್ದು ಇನ್ನೂ ಜನತೆಯ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ. ಈಗಿರುವಾಗಲೇ ಪರೀಕ್ಷೆ ನಡೆಸಲು, ಸ್ಕೂಲ್ ತೆರೆಯಲು, ಮಕ್ಕಳ ಮಂದೆ ಮಾಡಲು ಮುಂದಾಗುವುದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
ಕೇಂದ್ರದ ಸಿದ್ಧತೆ ಕೇಳಿದ ಸುಪ್ರೀಂ
ನ್ಯಾಯಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕೊರೋನ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರ ವರದಿ ಹೇಳಿದೆ. ಈ ಬಗ್ಗೆ ಕೇಂದ್ರ ಸರಕಾರ ಯಾವ ರೀತಿ ಸಿದ್ಧವಾಗಿದೆ, ಮಕ್ಕಳ ಸೋಂಕು ಎದುರಿಸಲು ಎಂತಹ ಕ್ರಮ ಕೈಗೊಳ್ಳಲಿದೆ ಎಂಬುದನ್ನು ನ್ಯಾಯಪೀಠಕ್ಕೆ ತಿಳಿಸಬೇಕು ಹಾಗೂ ಆ ವೇಳೆಗೆ ಎಲ್ಲರಿಗೂ ವ್ಯಾಕ್ಸಿನೇಷನ್ ನೀಡುವುದು ಮುಗಿಯಬೇಕು ಎಂದು ಜೂ.26ರಂದು ಆದೇಶಿಸಿದೆ.
ಕೊರೋನ ವೈರಸ್ ತಡೆಗೆ ಭಾರತೀಯ ಔಷಧ ಕಂಪೆನಿಯಾದ ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ‘ಝೈಕೋವ್-ಡಿ’ ಲಸಿಕೆಯನ್ನು 12ರಿಂದ 18 ವರ್ಷದ ವಯಸ್ಸಿನವರಿಗೆ ಶೀಘ್ರ ನೀಡಲು ಆರಂಭಿಸಲಾಗುತ್ತದೆ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದಲ್ಲದೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ಗೆ ಕೂಡ 2ರಿಂದ 18 ವರ್ಷ ವಯಸ್ಸಿನವರ ಮೇಲೆ ಲಸಿಕಾ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ ಎಂದು ಅದು ಹೇಳಿದೆ.
ಜೊತೆಗೆ ಕೋವಿಶೀಲ್ಡ್ ಉತ್ಪಾದಿಸುತ್ತಿರುವ ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಾವ್ಯಾಕ್ಸ್ ಎಂಬ ಲಸಿಕೆ ಉತ್ಪಾದನೆಯಲ್ಲಿ ನಿರತವಾಗಿದೆ. ಈ ಲಸಿಕೆಯು 18 ವರ್ಷಕ್ಕಿಂತ ಕಡಿಮೆ ವಯೋಮಾನದವರನ್ನು ಸೋಂಕಿನಿಂದ ಕಾಪಾಡುವ ಸಾಮರ್ಥ್ಯ ಹೊಂದಿದೆ, ಮುಂದಿನ ಸೆಪ್ಟಂಬರ್ ಹೊತ್ತಿಗೆ ಭಾರತದಲ್ಲಿ ಕೋವಾವ್ಯಾಕ್ಸ್ ಬಿಡುಗಡೆ ಮಾಡುವುದಾಗಿ ಕಂಪೆನಿ ಹೇಳಿಕೊಂಡಿದೆ.
ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು
ಜ್ವರ, ಕೆಮ್ಮು, ಗಂಟಲು ನೋವು, ಶೀತ, ಅತಿಸಾರ ಮತ್ತು ವಾಂತಿಯಂತಹ ಕೆಲ ಸೋಂಕಿನ ಲಕ್ಷಣಗಳು ಕಾಣಿಸಬಹುದು. 10 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಲ್ಲಿ ತಲೆನೋವು, ಮೈಕೈ ನೋವು ಮತ್ತು ದೌರ್ಬಲ್ಯದ ಲಕ್ಷಣಗಳು ಕಂಡುಬಂದು, ರುಚಿ-ವಾಸನೆ ಕಂಡುಹಿಡಿಯಲು ಕಷ್ಟವಾಗ ಬಹುದು. ಇದೇ ಕಾರಣದಿಂದ ಈ ಮಕ್ಕಳು ಊಟ ಮಾಡಲು ನಿರಾಕರಿಸಬಹುದು. ಚರ್ಮದ ಮೇಲೆ ಗಂದೆಗಳಾಗಿ ಉರಿ ಉಂಟಾಗಬಹುದು. ನಾಲಗೆ ಸ್ಟ್ರಾ ಬೆರಿಯಂತೆ ಕೆಂಪಗಾಗಬಹುದು. ಈ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಮಕ್ಕಳ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆ, ಸೂಚನೆ ಪಡೆದು ತಪಾಸಣೆಗೊಳಗಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಮಕ್ಕಳನ್ನು ಸೋಂಕಿನಿಂದ ಸಂರಕ್ಷಿಸುವುದು ಹೇಗೆ?
► ಮಕ್ಕಳಿಗೆ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಕೈಗಳ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು. ಆ
► ರೋಗ್ಯಕರ ಆಹಾರ ಸೇವನೆ, ಉತ್ತಮ ಜೀವನಶೈಲಿಯನ್ನು ಮಕ್ಕಳಲ್ಲಿ ರೂಢಿಸಿ ಆಂತರಿಕ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡುವುದು.
► ಮನೆಯ ವಯಸ್ಕರೆಲ್ಲ ಲಸಿಕೆ ಪಡೆದು, ಮಕ್ಕಳಿಗೆ ರಕ್ಷಾ ಕವಚ ನಿರ್ಮಿಸಿ ಅವರನ್ನು ಸೋಂಕಿನಿಂದ ರಕ್ಷಿಸುವುದು.
► ಮನೆಯಲ್ಲೇ ಆಟ-ಪಾಠಗಳ ವ್ಯವಸ್ಥೆ ಮಾಡುವುದು. ಮಾಲ್, ಮಳಿಗೆ, ಜಾತ್ರೆ, ಮದುವೆ, ಸಮಾರಂಭಗಳಿಗೆ ಹೋಗುವುದನ್ನು ತಪ್ಪಿಸುವುದು.
► ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವ ಲಸಿಕೆಗಳನ್ನು ಹಾಕಿಸುವುದು. ಮಕ್ಕಳ ಔಷಧಿ, ಆಸ್ಪತ್ರೆ, ಚಿಕಿತ್ಸೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
► ಆರೋಗ್ಯ ಇಲಾಖೆ ಹಾಗೂ ಸರಕಾರ ಪ್ರತಿ ತಾಲೂಕು ಕೇಂದ್ರಕ್ಕೆ ಐವಿಐಜಿ 100 ವಯಲ್‌ಗಳನ್ನು, ಜಿಲ್ಲಾ ಕೇಂದ್ರಕ್ಕೆ 1,000 ವಯಲ್‌ಗಳನ್ನು, ಬೆಂಗಳೂರು ನಗರಕ್ಕೆ 25 ಸಾವಿರ ವಯಲ್‌ಗಳನ್ನು ಮುಂಚಿತವಾಗಿಯೇ ದಾಸ್ತಾನು ಮಾಡುವುದು.
► ಮಕ್ಕಳ ತಜ್ಞ ವೈದ್ಯರು ಮತ್ತು ನರ್ಸ್‌ಗಳ ಕೊರತೆ ತುಂಬಲು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು ಹಾಗೂ ಪ್ರತಿ ಆಸ್ಪತ್ರೆಯಲ್ಲಿಯೂ ಬೆಡ್‌ಗಳನ್ನು ಕಡ್ಡಾಯವಾಗಿ ಮೀಸಲಿಡುವಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.