ಆಶಾವಾದಕ್ಕೆ ಕೆಲವು ತಳಹದಿಗಳು

Update: 2021-07-07 06:16 GMT

ಭಾಗ- 25

ಫೆಲೆಸ್ತೀನ್ ಜನತೆಯ ವಿಮೋಚನಾ ಹೋರಾಟಕ್ಕೆ ಸದ್ಯ ಭೂಮಿಯ ಯಾವುದಾದರೂ ಭಾಗದಿಂದ ನೈಜ ನೆರವು ಸಿಗುವ ನಿರೀಕ್ಷೆ ಇದ್ದರೆ ಅದು ಯುರೋಪ್ ಮತ್ತು ಅಮೆರಿಕದಿಂದ - ಅಲ್ಲಿಯ ಜಾಗೃತ ಜನತೆಯಿಂದ ಮತ್ತು ಅವರು ಸಂಘಟಿಸಲಿರುವ ಸಾಮೂಹಿಕ ಒತ್ತಡದಿಂದ.

   ಹೀಗೆಂದಾಗ ಅನೇಕರಿಗೆ ಅದನ್ನು ನಂಬಲಾಗುವುದಿಲ್ಲ. ಯುರೋಪ್ ಮತ್ತು ಅಮೆರಿಕದವರೆಂದರೆ ಅವರೆಲ್ಲ ಹುಟ್ಟಿನಿಂದಲೇ ಇಸ್ರೇಲ್‌ನ ಪರ ಮತ್ತು ಮುಸ್ಲಿಮರ ವಿರುದ್ಧ ಪಕ್ಷಪಾತಿಗಳಾಗಿರುತ್ತಾರೆ ಎಂಬ ಪೂರ್ವಗ್ರಹ ಹೆಚ್ಚಿನೆಲ್ಲ ಮುಸ್ಲಿಮ್ ಸಮಾಜಗಳಲ್ಲಿ ಕಂಡು ಬರುವುದುಂಟು. ಇದಕ್ಕೆ ಕಾರಣ ಇಸ್ರೇಲ್ - ಫೆಲೆಸ್ತೀನ್ ವಿಷಯದಲ್ಲಿ ಪಶ್ಚಿಮದ ಸರಕಾರಗಳು ತಾಳುತ್ತ ಬಂದಿರುವ ಶುದ್ಧ ಆತ್ಮವಂಚನೆಯ ಧೋರಣೆ. ಇಸ್ರೇಲ್ ಬಗ್ಗೆ ವಿಪರೀತ ವಾತ್ಸಲ್ಯ ತೋರುತ್ತಾ, ಅದು ಎಷ್ಟು ದೊಡ್ಡ ಅನ್ಯಾಯವೆಸಗಿದರೂ ಹೆಚ್ಚೆಂದರೆ ಔಪಚಾರಿಕವಾಗಿ ಮಾತ್ರ ಅದನ್ನು ಖಂಡಿಸಿ, ಫೆಲೆಸ್ತೀನ್‌ನ ಸಂತ್ರಸ್ತರಿಗೆ ಒಂದಿಷ್ಟು ಆರ್ಥಿಕ ನೆರವು ನೀಡಿ, ಉಳಿದಂತೆ, ಇಸ್ರೇಲ್‌ನ ಬೆಂಬಲಕ್ಕೆ ನಿಲ್ಲುವುದು-ಇದುವೇ ಆ ಸರಕಾರಗಳು ಬಹುಕಾಲದಿಂದ ತಾಳುತ್ತಾ ಬಂದಿರುವ ನಿಲುವು. ಆದರೆ ಈ ವ್ಯಕ್ತ ದೃಶ್ಯದ ಹಿಂದೆ ಹಲವು ಅವ್ಯಕ್ತ ಸತ್ಯಗಳು ಅಡಗಿವೆ. ನಿಜವಾಗಿ, ಇಸ್ರೇಲ್ ಅನ್ನು ಬೆಂಬಲಿಸುವ ವಿಷಯದಲ್ಲಿ ಪಶ್ಚಿಮದ ಕೆಲವು ಸರಕಾರಗಳು ತೋರುವಂತಹ ಅಮಿತೋತ್ಸಾಹವು, ಅಲ್ಲಿನ ಸಮಾಜಗಳಲ್ಲಿನ ಜನಾಭಿಪ್ರಾಯವನ್ನು ಖಂಡಿತ ಪ್ರತಿನಿಧಿಸುವುದಿಲ್ಲ. ಈ ವಿಷಯದಲ್ಲಿ ಅಲ್ಲಿನ ಸರಕಾರಗಳ ಧೋರಣೆ ಮತ್ತು ಜನಸಾಮಾನ್ಯರ ನಿಲುವಿನ ನಡುವೆ ಬಹಳಷ್ಟು ಅಂತರವಿದೆ. ಪಶ್ಚಿಮದ ಹೆಚ್ಚಿನೆಲ್ಲ ದೇಶಗಳಲ್ಲಿ ತಳಮಟ್ಟದಲ್ಲಿ ಮುಸ್ಲಿಮ್ ವಿರೋಧಿ ಪೂರ್ವಗ್ರಹಕ್ಕಿಂತ ಯಹೂದಿ ವಿರೋಧಿ ಪೂರ್ವಗ್ರಹವು ಹೆಚ್ಚು ಆಳವಾಗಿ ಬೇರೂರಿದೆ. ಕುರುಡಾಗಿ ಯಹೂದಿಗಳನ್ನು ಸಂಶಯಿಸುವವರು ಹಾಗೂ ದ್ವೇಷಿಸುವವರು ಪಶ್ಚಿಮದ ಹಲವೆಡೆ ಗಣ್ಯಸಂಖ್ಯೆಯಲ್ಲಿ ಕಂಡು ಬರುತ್ತಾರೆ. ತಾತ್ಕಾಲಿಕವಾಗಿ, ಇಸ್ರೇಲ್ ಮತ್ತು ಝಿಯೋನಿಸ್ಟ್ ಮಾಧ್ಯಮಗಳ ಅಬ್ಬರದ ಪ್ರಚಾರಗಳಿಂದ ಪ್ರಭಾವಿತರಾಗಿ ಅನೇಕ ಮಂದಿ ಇಸ್ರೇಲ್‌ನ ಬೆಂಬಲಿಗರಾಗಿ ಮಾರ್ಪಟ್ಟಿರಬಹುದು. ಅಥವಾ ಕನಿಷ್ಠ ಪಕ್ಷ ಇಸ್ರೇಲ್ ಕುರಿತು ತಮ್ಮ ಸರಕಾರದ ನಿಲುವು ಸರಿ ಎಂದು ನಂಬಿರಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗುತ್ತಿದೆ.

►  ಯುರೋಪ್ ಮತ್ತು ಅಮೆರಿಕದಲ್ಲಿ ಕಣ್ಣು ತೆರೆಯುತ್ತಿರುವ ಹೊಸ ಪೀಳಿಗೆ

 27 ಸದಸ್ಯ ರಾಷ್ಟ್ರಗಳಿರುವ ಯುರೋಪಿಯನ್ ಒಕ್ಕೂಟದ ಎಲ್ಲ ದೇಶಗಳು ಇಸ್ರೇಲ್ - ಫೆಲೆಸ್ತೀನ್ ಬಿಕ್ಕಟ್ಟಿನ ಕುರಿತಂತೆ ಒಕ್ಕೊರಲಿನಿಂದ ಸ್ಪಷ್ಟವಾಗಿ ಒಂದು ಸಮಾನ ತೀರ್ಮಾನಕ್ಕೆ ಬರಲು ಕೆಲವು ವರ್ಷಗಳ ಸಮಯ ಬೇಕಾದೀತು. ವಿಶೇಷವಾಗಿ ಯಹೂದಿಗಳ ಸಾಮೂಹಿಕ ಹತ್ಯಾಕಾಂಡದಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸಿದ್ದ ದೇಶಗಳು ತಮ್ಮ ಅಪರಾಧ ಪ್ರಜ್ಞೆಯಿಂದ ಹೊರ ಬರುವುದಕ್ಕೆ ಇನ್ನಷ್ಟು ಸಮಯ ತಗಲ ಬಹುದು. ಆದರೆ ಆ ನಿಟ್ಟಿನಲ್ಲಿ ಪ್ರಯಾಣ ಖಂಡಿತ ಆರಂಭವಾಗಿದೆ. ಇಸ್ರೇಲ್ ವಿಷಯದಲ್ಲಿ ಈಗಾಗಲೇ ಹೆಚ್ಚಿನೆಲ್ಲ ಯುರೋಪಿಯನ್ ದೇಶಗಳು ಅಮೆರಿಕಕ್ಕಿಂತ ತುಂಬಾ ಭಿನ್ನವಾದ ನಿಲುವನ್ನು ತಾಳಲು ಆರಂಭಿಸಿವೆ. ಈ ವರ್ಷ ಜಗತ್ತಿನ ಕಣ್ಣ ಮುಂದೆಯೇ ಇಸ್ರೇಲ್ ಪಡೆಗಳು ಫೆಲೆಸ್ತೀನ್ ನಾಗರಿಕರ ಮೇಲೆ ನಡೆಸಿದ ದಾಳಿಗಳ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳ ಮೂಲಕ ಯೂರೋಪಿನ ಜನರಿಗೆ ತಲುಪಿದಾಗ ಅವರಲ್ಲಿ ಅನೇಕರು ಆ ಕುರಿತು ಆಘಾತ ಪ್ರಕಟಿಸಿದ್ದಾರೆ. ನಾವೇಕೆ ಈ ಅನ್ಯಾಯವನ್ನು ಬೆಂಬಲಿಸುತ್ತಿದ್ದೇವೆ? ಎಂದು ಪ್ರಶ್ನಿಸುವವರ ಸಂಖ್ಯೆ ಹೆಚ್ಚುತ್ತಿದೆ.

2018 ರಲ್ಲಿ ಸಿಎನ್ನೆನ್ (CNN)     ಪ್ರಾಯೋಜಕತ್ವದಲ್ಲಿ ಕಾಮ್ ರೆಸ್ (ComRes) ಸಂಸ್ಥೆಯವರು ಒಂದು ಸಮೀಕ್ಷೆ ನಡೆಸಿದ್ದರು. ಯೂರೋಪಿನ 7 ಪ್ರಮುಖ ದೇಶಗಳ ವಿವಿಧ ಜನವರ್ಗಗಳನ್ನು ಪ್ರತಿನಿಧಿಸುವ 7,000 ಮಂದಿಯನ್ನು ಒಳಗೊಂಡ ಈ ಸಮೀಕ್ಷೆಯಲ್ಲಿ ಎಷ್ಟು ಮಂದಿ ಇಸ್ರೇಲ್ ಪರ ಅಭಿಪ್ರಾಯ ತಾಳಿದ್ದಾರೆಂದು ಅರಿಯುವ ಪ್ರಯತ್ನ ನಡೆದಿತ್ತು. ಈ ಸಮೀಕ್ಷೆಯಿಂದ ಒಂದು ವಿಷಯ ಬಹಳ ಸ್ಪಷ್ಟವಾಗಿ ಪ್ರಕಟವಾಯಿತು. 65 ವರ್ಷದ ಆಸುಪಾಸಿನ ವಯೋಮಾನದವರಲ್ಲಿ 57ಶೇ. ಮಂದಿ ಇಸ್ರೇಲ್ ಪರವಾದ ನಿಲುವು ತಾಳಿದ್ದರು. ಆದರೆ ಸರಾಸರಿ 35 ವರ್ಷ ವಯಸ್ಸಿನವರಲ್ಲಿ ಕೇವಲ 32ಶೇ. ಮಂದಿ ಮಾತ್ರ ಇಸ್ರೇಲ್ ಬಗ್ಗೆ ಸದಭಿಪ್ರಾಯ ಉಳ್ಳವರಾಗಿದ್ದರು. ಅಂದರೆ ಇಸ್ರೇಲ್ ಕುರಿತು ಹೊಸ ಪೀಳಿಗೆಯ ಅಭಿಪ್ರಾಯ ಹಿಂದಿನ ಪೀಳಿಗೆಗಿಂತ ತೀರಾ ಭಿನ್ನವಾಗಿತ್ತು. 2021ರ ಮೇ ತಿಂಗಳ ಘಟನಾವಳಿಗಳು ಫೆಲೆಸ್ತೀನ್ ಕುರಿತು ಜನರ ಸಹಾನುಭೂತಿಯನ್ನು ಬಹಳಷ್ಟು ಹೆಚ್ಚಿಸಿವೆ.

ಯುರೋಪಿನಲ್ಲಿ ಎಷ್ಟೋ ಕಡೆ, ಸರಕಾರಗಳು ಸಾಂಪ್ರದಾಯಿಕವಾಗಿ ಇಸ್ರೇಲನ್ನು ಬೆಂಬಲಿಸುತ್ತಾ ಬಂದಿದ್ದರೂ ಸಮಾಜದಲ್ಲಿ, ಜನಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಹೊಸ ಪೀಳಿಗೆಯವರು ಇಸ್ರೇಲ್‌ನ ದೌರ್ಜನ್ಯ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಆ ಸಮಾಜಗಳಲ್ಲೀಗ ಇಸ್ರೇಲ್- ಫೆಲೆಸ್ತೀನ್ ಬಿಕ್ಕಟ್ಟಿನ ಕುರಿತಾದ ಸಂವಾದಗಳಲ್ಲಿ ವರ್ಣಭೇದ, ಸಾಮೂಹಿಕ ಹತ್ಯಾಕಾಂಡ, ಜನಾಂಗೀಯ ಶುದ್ಧೀಕರಣ ಮುಂತಾದ ಪದಗಳು ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ಬರುತ್ತಿವೆ.

ಅಮೆರಿಕದಲ್ಲೂ ಇಸ್ರೇಲ್‌ನ ಕ್ರೌರ್ಯಗಳ ವಿರುದ್ಧ ಅಸಮಾಧಾನ ವೃದ್ಧಿಸುತ್ತಿದೆ. 2019ರಲ್ಲಿ ಮೇರಿ ಲ್ಯಾಂಡ್ ವಿಶ್ವವಿದ್ಯಾಲಯದ ವತಿಯಿಂದ ನಡೆಸಲಾದ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಂತೆ, ಅಲ್ಲಿನ ಡೆಮೋಕ್ರಾಟ್ ಪಕ್ಷದಲ್ಲಿ 66ಶೇ. ಮಂದಿ ಇಸ್ರೇಲ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತಾರೆ. ಇಸ್ರೇಲ್ ಪಾಲಿಗೆ ಸದಾ ಹೆತ್ತಾತಾಯಿಯಂತಿರುವ ರಿಪಬ್ಲಿಕನ್ ಪಕ್ಷದೊಳಗೂ 23ಶೇ. ಮಂದಿ, ಇಸ್ರೇಲ್ ವಿರುದ್ಧ ವಿವಿಧ ಬಗೆಯ ದಿಗ್ಬಂಧನಗಳನ್ನು ಹೇರಬೇಕೆಂಬ ನಿಲುವು ತಾಳಿದ್ದಾರೆ. ಟ್ರಂಪ್ ಸೋಲು ನಿಜವಾಗಿ ಜನಾಭಿಪ್ರಾಯವು ಇಸ್ರೇಲ್ ವಿರುದ್ಧ ಹಾಗೂ ಫೆಲೆಸ್ತೀನ್ ಪರ ವಾಲುತ್ತಿರುವುದರ ಸೂಚನೆಯಾಗಿದೆ. ಈ ವರ್ಷ ಮೇ ತಿಂಗಳಲ್ಲಿ ಅಮೆರಿಕದ ಬಹುತೇಕ ಹೆಚ್ಚಿನೆಲ್ಲ ಭಾಗಗಳಲ್ಲಿ ದೊಡ್ಡ ಸಂಖ್ಯೆಯಲ್ಲಿಜನರು ಬೀದಿಗಿಳಿದು ಇಸ್ರೇಲ್ ಅನ್ನು ಖಂಡಿಸಿ ಫೆಲೆಸ್ತೀನ್ ಜನತೆಗೆತಮ್ಮ ಬೆಂಬಲ ಪ್ರಕಟಿಸಿದ್ದಾರೆ. ಇಂತಹ ಪ್ರತಿಭಟನೆಗಳು ಹಿಂದೆಯೂನಡೆದಿವೆಯಾದರೂ ಈಬಾರಿಯ ಪ್ರತಿಭಟನೆಯಲ್ಲಿ ಪಾಲುಗೊಂಡವರ ಸಂಖ್ಯೆ ಮತ್ತು ಅವರ ತೀರಾ ವಿಭಿನ್ನ ಹಿನ್ನೆಲೆ ಇಸ್ರೇಲ್ ಪರ ಗುಂಪುಗಳನ್ನು ಕಳವಳಕ್ಕೀಡು ಮಾಡುವ ಸ್ವರೂಪದಲ್ಲಿತ್ತು. ಈ ಬಾರಿ ಬೀದಿಗಿಳಿದವರಲ್ಲಿ ಅರಬ್ ಹಿನ್ನೆಲೆಯವರಿಗಿಂತ ಅಮೆರಿಕನ್ ಹಿನ್ನೆಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಎದ್ದು ಕಾಣುತ್ತಿದ್ದರು. ಹಲವೆಡೆ ಸಂಪ್ರದಾಯವಾದಿ ಯಹೂದಿಗಳೇ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ಸಾಮಾನ್ಯವಾಗಿ ರಾಜಕೀಯ ವಿಷಯಗಳ ಕುರಿತು ಮಾತನಾಡಲು ನಿರಾಕರಿಸುವ ಅನೇಕ ಕಲಾವಿದರು, ಉದ್ಯಮಿಗಳು ಮತ್ತು ವಿವಿಧ ಸಾಮುದಾಯಿಕ ಗುಂಪುಗಳ ನಾಯಕರು ಗಟ್ಟಿಯಾಗಿ ಮಾತನಾಡಿದ್ದಾರೆ. ಹೆಚ್ಚಿನ ಕರಿಯ ಸಂಘಟನೆಗಳು ಅಸಾಮಾನ್ಯ ಉತ್ಸಾಹದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಬಾರಿ ತೀರಾ ಭಿನ್ನ ಹಿನ್ನೆಲೆಯ ಹಲವು ಗುಂಪುಗಳು ಇಸ್ರೇಲ್ ವಿರುದ್ಧ ಒಂದು ದೀರ್ಘಕಾಲೀನ ಹೋರಾಟಕ್ಕಾಗಿ ಪರಸ್ಪರ ಕೈಜೋಡಿಸಿವೆ.

► ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆಗಳು

ಈ ಜಗತ್ತಿನಲ್ಲಿ ಯಾವ ಬಿಕ್ಕಟ್ಟೂ ಶಾಶ್ವತವಲ್ಲ. ಎಷ್ಟು ಸಂಕೀರ್ಣವಾಗಿರುವ ಬಿಕ್ಕಟ್ಟು ಕೂಡಾ ಬಗೆಹರಿಯುವ ಸಾಧ್ಯತೆ ಇದೆ. ಆದರೆ ಅದಕ್ಕೆ ಕೆಲವು ಶರತ್ತುಗಳಿವೆ. ಉದಾ:

ಪರಸ್ಪರ ಘರ್ಷಣೆಯಲ್ಲಿ ತೊಡಗಿರುವ ಎರಡೂ ಪಕ್ಷಗಳು ಪ್ರಾಮಾಣಿಕವಾಗಿ ಪರಿಹಾರ ಬಯಸಬೇಕು ಮತ್ತು ನ್ಯಾಯ ಇಲ್ಲದೆ ಶಾಂತಿ ಇಲ್ಲ ಎಂಬ ವಿಶ್ವ ಮಾನ್ಯ ಮೂಲ ಸೂತ್ರವನ್ನು ಒಪ್ಪಿಕೊಳ್ಳಬೇಕು. ಪರಿಹಾರವು, ಕೇವಲ ತಾತ್ಕಾಲಿಕ ಯುದ್ಧವಿರಾಮದ ಸ್ವರೂಪದ್ದಾಗಲಿ, ಸಮಸ್ಯೆಯ ಮೂಲವನ್ನು ಕಡೆಗಣಿಸುವ ತೇಪೆ ಸ್ವರೂಪದ್ದಾಗಲಿ ಆಗಿರಬಾರದು. ಹಾಗೆಯೇ, ದುರ್ಬಲ ಪಕ್ಷದ ಅಸಹಾಯಕತೆಯನ್ನು ಶೋಷಿಸಿ ಅವರ ಮೇಲೆ ಒಂದು ಏಕಪಕ್ಷೀಯ ಸೂತ್ರವನ್ನು ಬಲವಂತವಾಗಿ ಹೇರುವ ರೂಪದಲ್ಲಿರಬಾರದು. ಶಾಂತಿ ಒಪ್ಪಂದವು ಎರಡೂ ಕಡೆಯ ತೀವ್ರವಾದಿಗಳನ್ನು ಬದಿಗಿಟ್ಟು, ಎರಡೂ ಕಡೆಯ ಜನಸಾಮಾನ್ಯರ ನಡುವೆ ಮಾನ್ಯತೆ ಇರುವ ಗುಂಪುಗಳ ನಡುವೆ ನಡೆಯಬೇಕು.

ಎರಡೂ ಕಡೆಯವರು ತಾವು ತಮ್ಮ ಆಂತರಿಕ ಪ್ರೇಕ್ಷಕರನ್ನು ಮೆಚ್ಚಿಸಲು ಘೋಷಿಸಿಕೊಂಡಿರುವ ಅಮಿತಾಕಾಂಕ್ಷೆಯ ಅಜೆಂಡಾಗಳನ್ನು ತೊರೆದು, ಐತಿಹಾಸಿಕ ಮತ್ತು ಸಮಕಾಲೀನ ವಾಸ್ತವಗಳನ್ನು ಮುಂದಿಟ್ಟುಕೊಂಡು ಪ್ರಾಯೋಗಿಕ ಹಾಗೂ ವ್ಯಾವಹಾರಿಕ ಪರಿಹಾರಗಳನ್ನು ಮುಕ್ತವಾಗಿ ಪರಿಗಣಿಸಬೇಕು. ಅಂತರ್‌ರಾಷ್ಟ್ರೀಯ ಸಮುದಾಯವು ಒಬ್ಬರ ಪಾಲಿಗೆ ತಾಯಿ ಮತ್ತು ಇನ್ನೊಬ್ಬರ ಪಾಲಿಗೆ ಹಂತಕನಾಗದೆ, ನ್ಯಾಯೋಚಿತ ಆಯ್ಕೆಗಳನ್ನು ಮುಂದಿಡಬೇಕು.

ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ವರೆಗೆ ಹಲವಾರು ಪರಿಹಾರ ಸೂತ್ರಗಳು ಮುಂದೆ ಬಂದಿವೆ. ಆ ಪೈಕಿ ‘ಏಕ ರಾಷ್ಟ್ರ’ ಸೂತ್ರ ಮತ್ತು ‘ದ್ವಿರಾಷ್ಟ್ರ’ ಸೂತ್ರಗಳು ಅತ್ಯಧಿಕವಾಗಿ ಚರ್ಚಿಸಲ್ಪಟ್ಟಿವೆ. ‘ಏಕ ರಾಷ್ಟ್ರ’ ಸೂತ್ರ ಅಂದರೆ ಸದ್ಯ ಇಸ್ರೇಲ್ ಅಧೀನದಲ್ಲಿರುವ ಸಂಪೂರ್ಣ ಪ್ರದೇಶದಲ್ಲಿ ಯಹೂದಿಗಳು ಮತ್ತು ಅರಬಿಗಳಿಗೆ ಸಮಾನ ಸ್ಥಾನಮಾನವಿರುವ ಒಂದು ಪ್ರಜಾಸತ್ತಾತ್ಮಕ ಸರಕಾರವನ್ನು ಸ್ಥಾಪಿಸುವುದು ಮತ್ತು ಒಂದು ಸೆಕ್ಯುಲರ್ ಸಂವಿಧಾನದ ಅಡಿಯಲ್ಲಿ ಚುನಾಯಿತ ಪ್ರತಿನಿಧಿಗಳು ಆಡಳಿತ ನಡೆಸುವುದು. ಪ್ರಸ್ತುತ ಏಕ ರಾಷ್ಟ್ರ ಸೂತ್ರವನ್ನು ಒಪ್ಪಲು ಇಸ್ರೇಲ್ ಮತ್ತು ಯಹೂದಿ ಬಹುಸಂಖ್ಯಾತರು ಖಂಡಿತ ತಯಾರಿಲ್ಲ. ಅದಕ್ಕೆ ಒಪ್ಪಿದರೆ, ಬಹಳ ಕಷ್ಟಪಟ್ಟು ನಿರ್ಮಿಸಲಾಗಿರುವ ಜಗತ್ತಿನ ಏಕಮಾತ್ರ ಯಹೂದಿ ರಾಷ್ಟ್ರವೇ ಇಲ್ಲವಾಗಿ ಬಿಡುತ್ತದೆ ಮತ್ತು ಪ್ರಜಾಸತ್ತೆಯಲ್ಲಿ ಎಲ್ಲವೂ ಬಹುಮತದ ಆಧಾರದಲ್ಲಿ ತೀರ್ಮಾನವಾಗುವುದರಿಂದ ಅರಬ್ ಬಾಹುಳ್ಯದ ಮುಂದೆ ಯಹೂದಿಗಳು ಅಲ್ಪ ಸಂಖ್ಯಾತರಾಗಿ ಮಾರ್ಪಟ್ಟು ತಮ್ಮ ಪ್ರಾಬಲ್ಯ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಅವರ ಆಶಂಕೆ. ‘ದ್ವಿರಾಷ್ಟ್ರ’ ಸೂತ್ರವೆಂದರೆ ಸದ್ಯ ಇಸ್ರೇಲ್ ಅಧೀನದಲ್ಲಿರುವ ಭೂಭಾಗವನ್ನು ವಿಭಜಿಸಿ ಒಂದು ಭಾಗವನ್ನು ಯಹೂದಿಗಳಿಗೆ ಮತ್ತು ಇನ್ನೊಂದು ಭಾಗವನ್ನು ಅರಬರಿಗೆ ನೀಡಿ ಅಕ್ಕ ಪಕ್ಕದಲ್ಲೇ ಎರಡು ಸ್ವತಂತ್ರ, ಸಾರ್ವಭೌಮ ದೇಶಗಳನ್ನು ಸ್ಥಾಪಿಸುವುದು. ಮೇಲ್ನೋಟಕ್ಕೆ ತುಂಬಾ ಸರಳ ಹಾಗೂ ವ್ಯಾವಹಾರಿಕವೆಂಬಂತೆ ಕಾಣುವ ಈ ಸೂತ್ರಕ್ಕೆ ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳೊಳಗೆ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಸಾಕಷ್ಟು ಬೆಂಬಲ ಕಂಡು ಬರುತ್ತದೆ. ಆದರೆ ಭೂಮಿಯ ಯಾವ ಭಾಗಗಳು ಪ್ರಸ್ತುತ ಎರಡು ದೇಶಗಳ ಪೈಕಿ ಯಾವ ದೇಶಕ್ಕೆ ಸೇರಬೇಕು ಎಂಬೊಂದು ಭಾರೀ ಸಂಕೀರ್ಣ ಪ್ರಶ್ನೆ ಇದೆ. ಎರಡೂ ಕಡೆಯವರು ಅಪಾರ ಔದಾರ್ಯದ ನಿಲುವು ತಾಳದಿದ್ದರೆ ಇದು ಎಂದೂ ಬಗೆಹರಿಸಲಾಗದ ಯಕ್ಷ ಪ್ರಶ್ನೆಯಾಗಿಯೇ ಉಳಿಯಲಿದೆ.

ಕಳೆದ ಏಳು ದಶಕಗಳ ಅವಧಿಯಲ್ಲಿ ಫೆಲೆಸ್ತೀನ್‌ನಿಂದ ಹೊರ ದಬ್ಬಲ್ಪಟ್ಟು ಜಗತ್ತಿನ ವಿವಿಧ ದೇಶಗಳಲ್ಲಿ ಆಶ್ರ ಪಡೆದಿರುವ ಲಕ್ಷಾಂತರ ಫೆಲೆಸ್ತೀನಿಗಳ ಪುನರ್ವಸತಿಯ ಪ್ರಶ್ನೆ ಪ್ರಸ್ತುತ ಎರಡೂ ಸೂತ್ರಗಳ ಪಾಲಿಗೆ ಒಂದು ದೊಡ್ಡ ಸವಾಲಾಗಿದೆ.

► ತದ್ವಿರುದ್ಧ ಚರಮ ಸೀಮೆಗಳು

ಜಗತ್ತಿನ ಎಲ್ಲ ಶಾಂತಿಪ್ರಿಯರನ್ನು ಕಳವಳಕ್ಕೆ ಕೆಡವಿರುವಫೆಲೆಸ್ತೀನ್- ಇಸ್ರೇಲ್ ಬಿಕ್ಕಟ್ಟಿನ ಪರಿಹಾರದ ಹಾದಿಯಲ್ಲಿ ಎರಡು ದೊಡ್ಡ ತೊಡಕುಗಳಿವೆ.

ಮೊದಲನೆಯದಾಗಿ, ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಿದ್ದರೆ ಎರಡೂ ಬಣಗಳ ನೈಜ ಪ್ರತಿನಿಧಿಗಳನ್ನು ಗುರುತಿಸುವುದು ಅನಿವಾರ್ಯವಾಗಿದ್ದು, ಸದ್ಯ ಈ ವಿಷಯದಲ್ಲಿ ಎರಡೂ ಕಡೆ ಬಹಳಷ್ಟು ಗೊಂದಲ ಮತ್ತು ಅಸ್ಪಷ್ಟತೆ ಇದೆ. ಇಸ್ರೇಲ್‌ನ ಯಹೂದಿ ಸಮುದಾಯ ಸೈದ್ಧಾಂತಿಕ ಹಾಗೂ ರಾಜಕೀಯವಾಗಿ ತುಂಬಾ ವಿಚ್ಛಿದ್ರವಾಗಿದೆ. ಅಲ್ಲಿನ ಹೆಚ್ಚಿನೆಲ್ಲ ಬಣಗಳು ಮೂಲತಃ ಝಿಯೋನಿಝಮ್‌ಗೆ ನಿಷ್ಠವಾಗಿದ್ದರೂ ಧರ್ಮದೊಳಗಿನ ಆಂತರಿಕ ವಿವಾದಗಳ ಆಧಾರದಲ್ಲಿ ಹಾಗೂ ಝಿಯೋನಿಝಮ್‌ನ ವ್ಯಾಖ್ಯೆ, ವಿಶ್ಲೇಷಣೆ ಇತ್ಯಾದಿಗಳ ಆಧಾರದಲ್ಲಿ ಅಲ್ಲಿ ಹತ್ತಾರು ಪಂಥ, ಉಪಪಂಥಗಳು ತಲೆ ಎತ್ತಿದ್ದು ಅವುಗಳ ನಡುವೆ ತೀವ್ರ ಪೈಪೋಟಿ ಇದೆ. ಇತ್ತೀಚೆಗಷ್ಟೇ ಕೇವಲ ಎರಡು ವರ್ಷಗಳಲ್ಲಿ ನಾಲ್ಕು ಮಹಾ ಚುನಾವಣೆಗಳನ್ನು ನಡೆಸಿ ಅನುಭವವಿರುವ ದೇಶ ಅದು. ಇದು ಇಂದು ನಿನ್ನೆಯ ಬೆಳವಣಿಗೆಯೇನಲ್ಲ. 1969ರಲ್ಲಿ ಇಸ್ರೇಲ್ ಪ್ರಧಾನಿಯಾಗಿದ್ದ ಗೋಲ್ದಾ ಮೀರ್, ಒಮ್ಮೆ ತಮ್ಮ ಕಾಲದ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರೊಡನೆ ಮಾತನಾಡುತ್ತ, ನೀವು 15 ಕೋಟಿ ಅಮೆರಿಕನ್ನರ ಅಧ್ಯಕ್ಷರಾದರೆ ನಾನು ಇಸ್ರೇಲಿನ 60 ಲಕ್ಷ ಪ್ರಧಾನ ಮಂತ್ರಿಗಳ ಪ್ರಧಾನಮಂತ್ರಿಯಾಗಿದ್ದೇನೆ ಎನ್ನುವ ಮೂಲಕ ಇಸ್ರೇಲ್‌ನಲ್ಲಿ ಜನಮತ ಎಷ್ಟು ಛಿದ್ರವಾಗಿದೆ ಎಂಬುದನ್ನು ಸೂಚಿಸಿದ್ದರಂತೆ.

ಅತ್ತ ಫೆಲೆಸ್ತೀನ್ ಪಾಳಯದಲ್ಲೂ ಹಲವು ಗುಂಪುಗಳು ಪರಸ್ಪರರನ್ನೇ ಪರಮ ಶತ್ರುಗಳಾಗಿ ಕಾಣುತ್ತಾ ತದ್ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿವೆ. ಅಲ್ಲಿ ಫತಹ್ ಮತ್ತು ಹಮಾಸ್ ಎಂಬ ಎರಡು ಪ್ರಮುಖ ಹಾಗೂ ಹಳೆಯ ಪ್ರತಿಸ್ಪರ್ಧಿಗಳಲ್ಲದೆ ಇನ್ನೂ ಹತ್ತಾರು ಪಕ್ಷ ಪಂಗಡಗಳಿವೆ. ಈ ಪಕ್ಷಗಳ ಬೆಂಬಲಿಗ ದೇಶಗಳ ಪಟ್ಟಿ ಕೂಡ ಭಿನ್ನವಾಗಿದೆ. ಫೆಲೆಸ್ತೀನ್‌ನ ಆಂತರಿಕ ರಾಜಕೀಯ ಬಿಕ್ಕಟ್ಟಿನ ಪರಿಹಾರಕ್ಕಾಗಿ ಈ ವರ್ಷ ಫೆಬ್ರವರಿಯಲ್ಲಿ ಕೈರೋದಲ್ಲಿ ನಡೆದ ಮಾತುಕತೆಯಲ್ಲಿ 14 ಪಂಗಡಗಳು ಭಾಗವಹಿಸಿದ್ದವು. ಇಷ್ಟೆಲ್ಲಾ ಪಂಗಡಗಳಿರುವ ಒಂದು ಪಾಳಯದ ಜೊತೆ ಮಾತುಕತೆ ನಡೆಸಬೇಕಿದ್ದರೆ ಅವರ ಪೈಕಿ ಯಾರನ್ನು ಪ್ರತಿನಿಧಿಯಾಗಿ ಪರಿಗಣಿಸಬೇಕೆಂಬ ಜಟಿಲ ಪ್ರಶ್ನೆ ಎದುರಾಗುತ್ತದೆ. ಸದ್ಯ ಹಮಾಸ್ ಪಂಗಡವು ಫೆಲೆಸ್ತೀನ್ ಜನತೆಯ ಮಧ್ಯೆ ಅತ್ಯಧಿಕ ಮಾನ್ಯತೆ ಇರುವ ಪಂಗಡ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಹಿಂದೊಮ್ಮೆ ಫತಹ್ ಪಕ್ಷ ಮತ್ತು ಅದರ ಮಾತೃ ಸಂಸ್ಥೆಯಾದ ಪಿಎಲ್‌ಒ ಜನಪ್ರಿಯವಾಗಿದ್ದಾಗ ಅವುಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಹೆಸರಿಸಿದ್ದ ಇಸ್ರೇಲ್ ಮತ್ತು ಅಮೆರಿಕ ಇದೀಗ ಆ ಕಿರೀಟವನ್ನು ಹಮಾಸ್ ತಲೆಗೆ ಕಟ್ಟಿದೆ. ಹಮಾಸ್ ಅನ್ನು ಫೆಲೆಸ್ತೀನ್ ಪ್ರತಿನಿಧಿಯೆಂದು ಅಂಗೀಕರಿಸಿ ಅದರ ಜೊತೆ ಮಾತುಕತೆ ಆರಂಭಿಸಬೇಕಿದ್ದರೆ ಆ ಕಿರೀಟವನ್ನು ಕಿತ್ತೊಗೆಯ ಬೇಕಾಗುತ್ತದೆ.

ಎರಡನೆಯದಾಗಿ, ಎರಡೂ ಕಡೆಯಲ್ಲಿ ಕಂಡು ಬರುವ ವಿಪರೀತ ಆದರ್ಶವಾದಿ, ಭಾವುಕ ಮತ್ತು ಭ್ರಾಮಕ ನಿಲುವುಗಳು ಯಾವುದೇ ಪರಿಹಾರದ ನಿಟ್ಟಿನಲ್ಲಿರುವ ಅತಿದೊಡ್ಡ ತೊಡಕಾಗಿ ಪರಿಣಮಿಸಿದ್ದು ಯಾವುದೇ ರಾಜಿ ಪ್ರಕ್ರಿಯೆಯು ಒಂದಿಂಚಿನಷ್ಟು ಕೂಡಾ ಮುನ್ನಡೆಯದಂತೆ ನೋಡಿಕೊಂಡಿವೆ. ಒಂದು ಕಡೆ ಇಸ್ರೇಲ್‌ನಲ್ಲಿ ಒಂದು ಬಲಿಷ್ಠವರ್ಗವು ‘ಗ್ರೇಟರ್ ಇಸ್ರೇಲ್’ ಎಂಬ ಭ್ರಮೆಯನ್ನು ಬೆನ್ನಟ್ಟುತ್ತಿದೆ. ಬೈಬಲ್‌ನ ಹಳೆಯ ಒಡಂಬಡಿಕೆಯಲ್ಲಿ ಯಹೂದಿಗಳಿಗೆಂದು ದೇವರು ವಾಗ್ದಾನ ಮಾಡಿರುವ ಸಾಮ್ರಾಜ್ಯವನ್ನು ಸ್ಥಾಪಿಸುವುದು ಅವರ ಗುರಿಯಾಗಿದೆ. ಅವರ ಕನಸಿನ ‘ಗ್ರೇಟರ್ ಇಸ್ರೇಲ್’ ಇರಾಕ್, ಈಜಿಪ್ಟ್, ಸಿರಿಯಾ, ಜೋರ್ಡನ್, ಸೌದಿ ಅರೇಬಿಯಾ ಮತ್ತು ಲೆಬನಾನ್ ದೇಶಗಳ ಬಹುಭಾಗವನ್ನು ಒಳಗೊಳ್ಳುವಷ್ಟು ವಿಶಾಲವಾಗಿದೆ. ಅಮೆರಿಕದ ದೂರಗಾಮಿ, ವಿಸ್ತರಣವಾದಿ ಅಜೆಂಡಾದಲ್ಲಿ ಪ್ರಸ್ತುತ ಕನಸಿಗೆ ಮಹತ್ವದ ಸ್ಥಾನವಿದೆ. ಕಳೆದ ಶತಮಾನದ ಆರಂಭದಲ್ಲಿ ಒಂದು ತಮಾಷೆಯ ರೂಪದಲ್ಲಿ ಚರ್ಚೆಗೆ ಬರುತ್ತಿದ್ದ ‘ಗ್ರೇಟರ್ ಇಸ್ರೇಲ್’ ಕನಸು, ಇತ್ತೀಚಿನ ದಶಕಗಳ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಹಳ ಗಂಭೀರ ಸ್ವರೂಪವನ್ನು ಪಡೆದುಕೊಂಡಿವೆ. ಬಿಕ್ಕಟ್ಟನ್ನು ಬಗೆಹರಿಸುವ ಬದಲು ಅದನ್ನು ನೂರಾರು ಪಟ್ಟು ಜಟಿಲಗೊಳಿಸಲು ಉತ್ಸುಕರಾಗಿರುವ ಇಂತಹ ಕನಸುಗಳ ಪೋಷಕರು ಸಹಜವಾಗಿಯೇ ಶಾಂತಿ ಪ್ರಕ್ರಿಯೆಯ ಪಾಲಿಗೆ ದೊಡ್ಡ ಸವಾಲಾಗಿರುತ್ತಾರೆ.

 ಆ ಕಡೆ ಫೆಲೆಸ್ತೀನ್‌ ನಲ್ಲಿ ಮತ್ತು ಅರಬ್ ದೇಶಗಳಲ್ಲಿ ಕೂಡಾ ಒಂದು ದೊಡ್ಡ ವರ್ಗವು ಇನ್ನೊಂದು ಚರಮ ಸೀಮೆಯಲ್ಲಿ ನಿಂತಿದೆ. ಈಗಲೂ ಅವರು ಇಸ್ರೇಲ್ ಎಂಬ ಸರಕಾರದ ಅಸ್ತಿತ್ವಕ್ಕೆ ಮನ್ನಣೆ ನೀಡಲು ಸಾಧ್ಯವಿಲ್ಲ ಎಂಬ ತಮ್ಮ ಹಳೆಯ ನಿಲುವಿಗೆ ಅಂಟಿ ಕೊಂಡಿದ್ದಾರೆ. ‘ಗ್ರೇಟರ್ ಇಸ್ರೇಲ್’ ಎಂಬ ಸ್ವಪ್ನವು ಯಹೂದಿಗಳನ್ನು ಯಾವುದೇ ಮಾತುಕತೆಯಿಂದ ತಡೆದಿಡುವಂತೆ, ನಾವು ಇಸ್ರೇಲ್‌ನ ಅಸ್ತಿತ್ವವನ್ನೇ ಸಕ್ರಮವೆಂದು ಒಪ್ಪುವುದಿಲ್ಲ ಎಂಬ ಫೆಲೆಸ್ತೀನಿಗಳ ಹಠವು ಕೂಡಾ ಮಾತುಕತೆಯನ್ನು ಅಸಾಧ್ಯಗೊಳಿಸಿದೆ. ಹಮಾಸ್‌ನಂತಹ ಆದರ್ಶವಾದಿ ಪಕ್ಷಗಳು ತಾತ್ಕಾಲಿಕವಾಗಿಯಾದರೂ 1967 ರ ಯುದ್ಧಕ್ಕಿಂತ ಮುಂಚಿನ ಇಸ್ರೇಲ್ ಗಡಿಗಳನ್ನು ಮಾನ್ಯ ಮಾಡಿದರೆ ‘ದ್ವಿರಾಷ್ಟ್ರ’ ಸೂತ್ರ ಸಹಿತ ಯಾವುದೇ ಸೂತ್ರದ ಕುರಿತು ಮಾತುಕತೆಗೆ ಒಂದು ಕನಿಷ್ಠ ಬುನಾದಿಯಾದರೂ ಲಭ್ಯವಾಗುತ್ತದೆ.

Writer - ಎ.ಎಸ್. ಪುತ್ತಿಗೆ

contributor

Editor - ಎ.ಎಸ್. ಪುತ್ತಿಗೆ

contributor

Similar News