ಇಂಗ್ಲೆಂಡ್‌ನಲ್ಲಿ ರಿಷಭ್ ಪಂತ್ ಗೆ ಕೊರೋನ ಪಾಸಿಟಿವ್: ವರದಿ

Update: 2021-07-15 08:19 GMT

ಹೊಸದಿಲ್ಲಿ: ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಇಂಗ್ಲೆಂಡ್‌ನಲ್ಲಿ ಕೊರೋನ ಪಾಸಿಟಿವ್ ಆಗಿದ್ದಾರೆ ಎಂದು ಮೂಲಗಳು ಗುರುವಾರ NDTVಗೆ ತಿಳಿಸಿವೆ.

ಪಂತ್ ಎಂಟು ದಿನಗಳ ಹಿಂದೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು,ಅವರಲ್ಲಿ  ಕೊರೋನದ ಯಾವುದೇ ಗುಣ ಲಕ್ಷಣ ಇರಲಿಲ್ಲ ಎನ್ನಲಾಗಿದೆ.

ವಿಕೆಟ್ ಕೀಪರ್ ಪಂತ್ ಉಳಿದ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಡರ್ಹಾಮ್ ಗೆ ಪ್ರಯಾಣಿಸಿಲ್ಲ, ಭಾರತ  ತಂಡವು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ಅಭ್ಯಾಸ ಪಂದ್ಯವನ್ನು ಆಡಲು ಸಜ್ಜಾಗಿದೆ.

ಪಂತ್ ಮೇ 13 ರಂದು ಕೋವಿಡ್ ಲಸಿಕೆಯ ತನ್ನ ಮೊದಲ ಡೋಸ್ ಅನ್ನು  ತೆಗೆದುಕೊಂಡಿದ್ದರು. ಇತ್ತೀಚೆಗೆ ತನ್ನ ಸ್ನೇಹಿತರೊಂದಿಗೆ ಲಂಡನ್‌ನ ವೆಂಬ್ಲಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಹಾಗೂ  ಜರ್ಮನಿ ನಡುವೆ ನಡೆದ ಯುರೋ 2020 ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದ್ದರು.

ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸಿದ ನಂತರ ಟೀಮ್ ಇಂಡಿಯಾ ಆಟಗಾರರಿಗೆ 20 ದಿನಗಳ ವಿರಾಮ ನೀಡಲಾಗಿತ್ತು.

"ಹೌದು, ಓರ್ವ ಆಟಗಾರನಿಗೆ ಕೊರೋನ ಪಾಸಿಟಿವ್ ಆಗಿದೆ. ಆದರೆ ಕಳೆದ ಎಂಟು ದಿನಗಳಿಂದ ಆತ ಪ್ರತ್ಯೇಕವಾಗಿದ್ದಾನೆ. ಅವನು ಯಾವುದೇ ಹೋಟೆಲ್‌ನಲ್ಲಿ ತಂಡದೊಂದಿಗೆ ಇರಲಿಲ್ಲ. ಆದ್ದರಿಂದ ಬೇರೆ ಯಾವ ಆಟಗಾರನು ಕೊರೋನದಿಂದ ಬಾಧಿತವಾಗಿಲ್ಲ’’ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಸಿದ್ಧತೆಯ ಭಾಗವಾಗಿ ಟೀಮ್ ಇಂಡಿಯಾ ಡರ್ಹಾಮ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲು ಸಜ್ಜಾಗಿದೆ. ಅಭ್ಯಾಸ ಪಂದ್ಯವು ಜುಲೈ 20 ರಿಂದ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News