ಹಕ್ಕಿ ಜ್ವರದಿಂದ ಬಾಲಕ ಸಾವು: ದೇಶದಲ್ಲೇ ಮೊದಲು

Update: 2021-07-21 04:18 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸಾಮಾನ್ಯವಾಗಿ ಹಕ್ಕಿಗಳನ್ನು ಬಾಧಿಸುವ ಇನ್‍ಫ್ಲುಯೆನ್ಝಾ ವೈರಸ್ ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಪ್ರಕರಣ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ಯಲ್ಲಿ ವರದಿಯಾಗಿದೆ. ದೇಶದಲ್ಲಿ ಹಕ್ಕಿಜ್ವರದಿಂದ ಸಂಭವಿಸಿರುವ ಮೊದಲ ಸಾವು ಇದಾಗಿದೆ.

ಜುಲೈ 2ರಂದು ಎಐಐಎಂಎಸ್‍ಗೆ ದಾಖಲಾಗಿದ್ದ 11 ವರ್ಷದ ಬಾಲಕ ಮಂಗಳವಾರ ಮೃತಪಟ್ಟಿದ್ದು, ಹಕ್ಕಿಜ್ವರದಿಂದ ಸಾವು ಸಂಭವಿಸಿರುವುದು ದೃಢಪಟ್ಟಿದೆ. ಈ ಬಾಲಕನ ನಿಕಟ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡುವ ಕಾರ್ಯ ಮುಂದುವರಿದಿದೆ.

ಹರ್ಯಾಣದ ಈ ಬಾಲಕನನ್ನು ಅಧಿಕ ಜ್ವರ ಮತ್ತು ಕಫದ ಕಾರಣದಿಂದ ಜುಲೈ 2ರಂದು 
ಎಐಐಎಂಎಸ್‍ಗೆ ದಾಖಲಿಸಲಾಗಿತ್ತು. ಮೊದಲಿಗೆ ಬಾಲಕನಿಗೆ ಕೋವಿಡ್-19 ಸೋಂಕು ತಗುಲಿರಬೇಕು ಎಂದು ಯೋಚಿಸಿದ್ದೆವು. ಆದರೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂತು. ಆದರೆ ಆಳವಾದ ಸಂಶೋಧನೆ ಕೈಗೊಂಡಾಗ ಹಕ್ಕಿಜ್ವರಕ್ಕೆ ಕಾರಣವಾಗುವ ಇನ್‍ಫ್ಲುಯೆಂಜಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.

ಕಳೆದ ಹದಿನೈದು ವರ್ಷಗಳಿಂದ ಭಾರತದಲ್ಲಿ ಹಕ್ಕಿಜ್ವರ ಕಾಣಿಸಿಕೊಳ್ಳುತ್ತಿದ್ದು, ಮುಖ್ಯವಾಗಿ ಕೋಳಿಗಳನ್ನು ಬಾಧಿಸುತ್ತಿದೆ. ಆದಾಗ್ಯೂ ಈ ರೋಗದಿಂದ ಮನುಷ್ಯರು ಮೃತಪಟ್ಟಿರುವ ನಿದರ್ಶನ ಇದುವರೆಗೆ ವರದಿಯಾಗಿರಲಿಲ್ಲ. ಈ ಬೆಳವಣಿಗೆ ಸಾರ್ವಜನಿಕ ಆರೋಗ್ಯ ತಜ್ಞರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಈ ಬಾಲಕನ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದೆ. ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್‍ಗಳು ಮತ್ತು ಆರೋಗ್ಯ ಕಾರ್ಯಕರ್ತರು ಐಸೊಲೇಶನ್‍ಗೆ ಒಳಗಾಗುವಂತೆ ಸೂಚಿಸಲಾಗಿದೆ ಹಾಗೂ ಗಂಟಲು ಕೆರೆತ, ಸೀನುವಿಕೆ ಹಾಗೂ ಮೂಗಿನಿಂದ ಸ್ರಾವವಾಗುವ ಲಕ್ಷಣ ಕಂಡುಬಂದರೆ ತಕ್ಷಣ ವರದಿ ಮಾಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News