ಜಾತಿ, ಜನಾಂಗೀಯ ನಿಂದನೆ: ಎಂದು ಕೊನೆ?
ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಫುಟ್ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತ ಬೆನ್ನಲ್ಲೇ ಅಭಿಮಾನಿಗಳು ಮೂವರು ಕಪ್ಪುವರ್ಣೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ನಿಂದಿಸಿದ ಸಾವಿರಾರು ಮೆಸೇಜ್‌ಗಳು ಹರಿದಾಡಿದವು.
ಐದು ಪೆನಾಲ್ಟಿ ಶೂಟೌಟ್‌ಗಳಲ್ಲಿ ಆರಂಭಿಕ ಎರಡು ಪ್ರಯತ್ನಗಳಲ್ಲಿ ನಾಯಕ ಹ್ಯಾರಿ ಕೇನ್ ಹಾಗೂ ಹ್ಯಾರಿ ಮಾಗುಯಿರ್ ಗೋಲು ಬಾರಿಸಿದ್ದರು. ಆ ನಂತರ ಮೂವರು ಕಪ್ಪುವರ್ಣೀಯ ಆಟಗಾರರಾದ ಮಾರ್ಕಸ್ ರಶ್ ಫೋರ್ಡ್, ಜಡೊನ್ ಸ್ಯಾಂಚೊ ಹಾಗೂ ಬುಕಾಯೊ ಸಾಕಾ ಪೆನಾಲ್ಟಿ ಸಿಡಿಸಲು ವಿಫಲರಾಗಿದ್ದರು.
ಆ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ ವಿರುದ್ಧ ವಿಶ್ವಾದ್ಯಂತ ಪ್ರತಿಭಟನೆ ವ್ಯಕ್ತವಾಯಿತಲ್ಲದೆ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಜನಾಂಗೀಯ ನಿಂದನೆಯನ್ನು ಖಂಡಿಸಿದರು.
ಅತ್ತ ಇಂಗ್ಲೆಂಡ್‌ನಲ್ಲಿ ಕರಿಯರೆಂಬ ಕಾರಣಕ್ಕಾಗಿ, ಮೈಯ ಬಣ್ಣವನ್ನು ಮುಂದುಮಾಡಿ ಮನುಷ್ಯರನ್ನು ನಿಂದಿಸುವ, ಅವಮಾನಿಸುವ ವಿಷಾದನೀಯ ಘಟನೆ ನಡೆದರೆ ಇತ್ತ ಭಾರತದಲ್ಲಿ ಮನುಷ್ಯರ ಜಾತಿಯನ್ನು ಗುರಿ ಮಾಡಿ ಅವಮಾನಿಸುವ, ನಿಂದಿಸುವ ಅನಿಷ್ಟ ಕ್ರಮ ಶತಮಾನಗಳಿಂದ ನಡೆದು ಬಂದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಈ ನಾಡಿನಲ್ಲಿ ಗರಿಗೆದರಿದ ವರ್ಣ /ಜಾತಿ ನಿಂದನೆ ಕುರಿತು ಬರೆಯುತ್ತಿದ್ದೇನೆ. ಅರ್ಜಿ ಹಾಕದೆ, ಆಕಸ್ಮಿಕ ಘಟನೆಯಾಗಿ ಒಂದು ಜಾತಿ/ಮತ/ಧರ್ಮದಲ್ಲಿ ಜನಿಸುವ ಒಬ್ಬ ವ್ಯಕ್ತಿಯನ್ನು ನಿಂದಿಸುವುದರ ಹಿಂದೆ ಇರುವ ಮನೋಧರ್ಮ ಹಾಗೂ ದಮನಕಾರಿ ಪ್ರವೃತ್ತಿಯನ್ನು ನಾವು ವಿಶ್ಲೇಷಿಸಿ ಅರ್ಥ ಮಾಡಿಕೊಳ್ಳಬೇಕಾಗಿದೆ.
ಜಾತಿ ನಿಂದನೆ, ಒಂದು ಜಾತಿಯ ನೆಲೆಯಲ್ಲಿ ದುರ್ಬಲ (vulnerable) ಮನುಷ್ಯನೊಬ್ಬನಿಗೆ ಸಬಲರಾದ ಸ್ವತಃ ಮನುಷ್ಯರೇ ಮಾಡುವ ಅವಮಾನ ಹಾಗೂ ಅದರ ಹಿಂದಿರುವ ನಿಂದನೆಯ ಮನಃಶಾಸ್ತ್ರದ ಬಗ್ಗೆ ಯೋಚಿಸುತ್ತ ಹೋದಾಗ, ‘ಮೇರಾ ಭಾರತ್ ಮಹಾನ್’ ಎಂದು ನಾವು ಅಬ್ಬರಿಸುವ, 3,000 ಜಾತಿಗಳು ಹಾಗೂ 25,000ಕ್ಕೂ ಹೆಚ್ಚು ಉಪಜಾತಿಗಳಿರುವ ಈ ದೇಶದಲ್ಲಿ ಜಾತಿಯ ಕಬಂಧಬಾಹುಗಳು ನಾವು ಸರಳೀಕರಿಸಬಹುದಾದಷ್ಟು ಸರಳವಲ್ಲ ಎಂದು ಗೊತ್ತಾಗುತ್ತದೆ. 2,000ಕ್ಕೂ ಹೆಚ್ಚು ಬ್ರಾಹ್ಮಣ ಉಪಜಾತಿಗಳಿರುವ ಈ ಭವ್ಯ ಭಾರತದಲ್ಲಿ ಯಾವುದೇ ಒಂದು ಜಾತಿಯನ್ನು ಏಕಜಾತಿಯಾಗಿ ಗ್ರಹಿಸುವಷ್ಟರಲ್ಲಿ ಅದರೊಳಗಿರುವ ಹಲವು ರೀತಿಯ ಒಳ/ಕೆಳ/ತಳ ಜಾತಿಗಳು ಗೋಚರಿಸುತ್ತವೆ (ಇದು ಏಕತೆಯಲ್ಲಿ ವಿವಿಧತೆ, ವಿವಿಧತೆಯಲ್ಲಿ ಏಕತೆ ಎಂದಷ್ಟು ಸುಲಭದ ಗ್ರಹಿಕೆಯಲ್ಲ.) ಮತ್ತು ಒಳ, ಶ್ರೇಣೀಕೃತ ಉಪ-ಜಾತಿಗಳಿಗೆ ಸೇರಿದ ಮನುಷ್ಯ ಪ್ರಾಣಿಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪರಸ್ಪರ ‘ಗುರ್’ ಎನ್ನುತ್ತ ಬದುಕುವುದು, ಪರಸ್ಪರ ತದಕುವುದು ಕಾಣಿಸುತ್ತದೆ. ಬ್ರಾಹ್ಮಣ ಜಾತಿಯ ಒಳ/ಉಪಜಾತಿಗಳ ನಡುವಿನ ಸೂಕ್ಷ್ಮ್ಮಾತಿಸೂಕ್ಷ್ಮ ತಾರತಮ್ಯ, ನಿಂದನೆ, ನಯನುಡಿಯ ಅವಮಾನಕಾರಿ ಮಾತುಗಳನ್ನು ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲದಿಂದ ಕಂಡು ಕೇಳಿ ಅನುಭವಿಸಿದ್ದ ಸಾಕ್ಷಿಪ್ರಜ್ಞೆಯಾಗಿ ನಾನು ಜಾತಿನಿಂದನೆಯನ್ನು ಗಮನಿಸುತ್ತ ಬಂದಿದ್ದೇನೆ. ಈ ಒಳಸುಳಿಗಳ ಚಕ್ರವ್ಯೆಹ ಎಲ್ಲ ಜಾತಿಗಳಲ್ಲೂ ಕಂಡುಬರುವ ಸಾಮಾನ್ಯ ಅಂಶ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
‘ಜಾತಿನಿಂದನೆ’ ಎಂದಾಗ ನಾವು ಶಾಬ್ದಿಕವಾದ (verbal) ನಿಂದನೆಯನ್ನು ಮಾತ್ರ ಗಮನಿಸುತ್ತೇವೆ. ಅ-ಶಾಬ್ದಿಕವಾದ (non-verbal), ಸೂಚ್ಯ ಹಾಗೂ ಆಂಗಿಕ ಅವಮಾನದ ರೂಪಗಳನ್ನು, ನಿಂದನೆಯನ್ನು ಗಮನಿಸುವುದಿಲ್ಲ. ಜಾತಿಯನ್ನು ಆರ್ಥಿಕವಾಗಿ ತೀರ, ದುರ್ಬಲವಾದ ಒಂದು ವರ್ಗ ಎಂದು ಪರಿಗಣಿಸಿದಾಗ ಸಮಾಜದ ವಿವಿಧ ವಲಯಗಳಲ್ಲಿ ಸಂಘ-ಸಂಸ್ಥೆಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಜಾತ್ಯತೀತವಾದ ನಿಂದನೆಯ ಸ್ತರಗಳು ಕಾಣಿಸುತ್ತವೆ. ಇಂದಿನ ಕಾರ್ಪೊರೇಟ್ ರಂಗದಲ್ಲಿ, ಪ್ರತಿಷ್ಠಿತ/‘ರಾಷ್ಟ್ರೀಯ ಮಹತ್ವ’ ಇರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುವ ಮನುಷ್ಯ ತನ್ನ ವೇತನದ ಮತ್ತು ಅದಕ್ಕೆ ಸಂವಾದಿಯಾದ ಹುದ್ದೆಯ ನೆಲೆಯಲ್ಲಿ ಅನುಭವಿಸುವ ನಿಂದನೆಯ ಹಿಂದಿರುವ ಹಿಂಸೆಯ ತಣ್ಣನೆಯ ಬಿಸಿ ಅನುಭವಿಸಿದವನಿಗಷ್ಟೇ ಗೊತ್ತು. ಬೆಂಗಳೂರಿನ ಒಂದು ದೊಡ್ಡ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಎಂಬಿಎ ಪದವೀಧರ ಲಂಚ್‌ವೇಳೆ ಸಂಸ್ಥೆಯ ವೈದ್ಯರು ಉಪಾಹಾರ ಸೇವಿಸುವ ಸ್ಥಳದಲ್ಲಿ ಕುಳಿತು ವೈದ್ಯರೊಡನೆ ಮಾತನಾಡುತ್ತ ತನ್ನ ಲಂಚ್ ಬಾಕ್ಸ್ ತೆರೆಯುತ್ತಿದ್ದ. ಅಷ್ಟರಲ್ಲಿ ಸಂಸ್ಥೆಯ ಅಧಿಕಾರಿಯೊಬ್ಬಳು ಬಂದು ‘‘ನೀವು ಇಲ್ಲಿ ಕುಳಿತು ಕೊಳ್ಳುವುದಲ್ಲ, ಅಲ್ಲಿ...’’ ಎಂದು ಇನ್ನೊಂದು ಜಾಗತೋರಿಸಿದಳು. ಡಿ.ವಿ.ಜಿ.ಯವರು ‘ಸಂಸ್ಕೃತಿ’ಯಲ್ಲಿ ಹೇಳುವ ‘ಸ್ವಸ್ಥಾನಪರಿಜ್ಞಾನ’ ಮಾಡಿಸಿದಳು!
ನಾನೊಮ್ಮೆ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುವಾಗ, ಪ್ರಯಾಣಿಕರನ್ನು ಕರೆದೊಯ್ಯುವ ಬಸ್‌ನಲ್ಲಿ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಕ್ರೂರ ಗಂಭೀರ ಮುಖಭಾವದ ಯುವ ಅಧಿಕಾರಿಯೊಬ್ಬ ಕಾಲು ಮೇಲೆ ಕಾಲು ಹಾಕಿ ಆತನ ಶೂ ನನ್ನ ತೊಡೆಗೆ ತಾಗುವಂತೆ ಕುಳಿತಿದ್ದ. ಆತನ ಹುದ್ದೆಯ ಆರ್ಥಿಕ ಸಬಲತೆ ಅವನ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆತನ uncivil ವರ್ತನೆಯಲ್ಲಿ ತನ್ನ ಪಕ್ಕದಲ್ಲಿ ಕೂತವನನ್ನು ಅಲಕ್ಷಿಸುವ, ಅವಮಾನಿಸುವ, ಸೂಚ್ಯವಾಗಿ ನಿಂದಿಸುವ ಇರಾದೆ ಕಾಣಿಸುತ್ತಿತ್ತು. ನಾನು ಅವನತ್ತ ತಿರುಗಿ ತುಸು ದಿಟ್ಟಿಸಿ ನೋಡಿದ ಮೇಲಷ್ಟೆ ಆತನಿಗೆ ‘ಸ್ವಸ್ಥಾನಪರಿಜ್ಞಾನ’ದ ಅರಿವಾಯಿತು.
ಹೀಯಾಳಿಸುವ, ಬಯ್ಯುವ (abuse), ಹೀನಾಯಿಸಿ ಮಾತಾಡಿ ಮಾಡುವ ಯಾವುದೇ ರೀತಿಯ ಪ್ರತ್ಯಕ್ಷ/ಪರೋಕ್ಷ ನಿಂದನೆಯ ಹಿಂದೆ (ಯಾವುದೇ ಜಾತಿಗೆ ಸೇರಿದ) ಅವಮಾನಿಸುವಾತನ ಜಾತಿಯ ಅಧಿಕಾರ ಮದ ಮತ್ತು ಯಜಮಾನಿಕೆಯ ದರ್ಪ, ಮೇಲರಿಮೆ ಇರುತ್ತದೆ. ಅವಮಾನ, (ವಿಶೇಷವಾಗಿ ಸಾರ್ವಜನಿಕವಾಗಿ) ಶಾಬ್ದಿಕವಾದಾಗ, ಅವಮಾನಿತ ವ್ಯಕ್ತಿ ತನ್ನ ಆತ್ಮ-ಗೌರವ ಕಳೆದುಕೊಂಡು ಹತಾಶನಾಗಬಹುದು. ಆತನಿಗಾದ ಅವಮಾನ ‘ಆಳವಾದ ಅವಮಾನ’ ಆಗಿದ್ದಲ್ಲಿ ಆ ಅವಮಾನ ಆತನ ಆತ್ಮಹತ್ಯೆಗೂ ಕಾರಣವಾಗಬಹುದು ಅಥವಾ ಆತ ಆಲ್ಬರ್ಟ್ ಕ್ಯಾಮುವಿನ ಪರಿಕಲ್ಪನೆಯ ‘ರೆಬೆಲ್’ ಆಗಬಹುದು. ದಲಿತ ಸಮುದಾಯದ ‘ರೆಬೆಲ್’ ಆಗುವ ಪ್ರಕ್ರಿಯೆಯೇ ನಮ್ಮ ದೇಶದಲ್ಲಿ ನಡೆದ ದಲಿತ ಚಳವಳಿಯ ಹಿಂದಿನ ಶಕ್ತಿಯಾಗಿತ್ತು.
ಒಬ್ಬ ವ್ಯಕ್ತಿಗಾಗುವ ಅವಮಾನದ ತೀವ್ರತೆ ವ್ಯಕ್ತಿಯ ಅನುಭವ, ಆತನ/ಆಕೆಯ ಕೌಟುಂಬಿಕ ಸಾಮಾಜಿಕ ಸಂಬಂಧಗಳ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ. ಇಂತಹ ಅವಮಾನ, ನಿಂದನೆ ಜಾತಿಯ ಕಾರಣದಿಂದಾಗಿ ಮಾತ್ರ ಆಗುವುದಿಲ್ಲ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಒಂದು ಪಠ್ಯ ಇಂತಹ ಅವಮಾನದ ಮೂಲಗಳನ್ನು, ಆರು ಸ್ತರಗಳನ್ನು ಹೀಗೆ ಪಟ್ಟಿಮಾಡುತ್ತದೆ:
ಹೀನಾಂಗಾನತಿರಿಕ್ತಾಂಗಾನ್ ವಿದ್ಯಾಹೀನಾನ್ ವಯೋಧಿಕಾನ್
ರೂಪದ್ರವ್ಯ ವಿಹೀನಾಂಶ ಜಾತಿಹೀನಾಂಶ್ಚ ನಾಕ್ಷಿಪೇತ್ (4:139)
ಅಂಗವಿಕಲರನ್ನು, ಹೆಚ್ಚಿನ ಅಂಗಾಂಗಗಳಿರುವವರನ್ನು, ವಿದ್ಯಾಹೀನರನ್ನು, ಮುಪ್ಪಿನವರನ್ನು, ಕುರೂಪಿಗಳನ್ನು, ಬಡವರನ್ನು ಹೀನಜಾತಿಯವರನ್ನು ಅವಮಾನಿಸಬಾರದು (ತಾತ್ಸಾರ ಮಾಡಬಾರದು).
ಅಂಗವೈಕಲ್ಯ, ಶಿಕ್ಷಣದ ಕೊರತೆ (ನಿರಕ್ಷತೆ), ಮುದಿತನ, ದೈಹಿಕ ಸೌಂದರ್ಯರಾಹಿತ್ವ (ಮೈಬಣ್ಣ), ಆರ್ಥಿಕ ಹಿಂದುಳಿಯುವಿಕೆ, ಹುಟ್ಟಿನಿಂದ ಬರುವ ಸಾಮಾಜಿಕ ಅಸ್ಮಿತೆ-ಇವುಗಳು ಇಂದಿಗೂ ನಮ್ಮ ಯಾವುದೇ ಸಮಾಜದಲ್ಲಿ ವ್ಯಕ್ತಿಯೊಬ್ಬನನ್ನು ಅವಮಾನಿಸಲು, ನಿಂದಿಸಲು, ಮಾತಿನಿಂದ ಚುಚ್ಚಲು ಜನರಿಗೆ ಬಿಟ್ಟಿಯಾಗಿ ದೊರೆಯುವ ಆಯುಧಗಳು. ಇಂಗ್ಲಿಷ್‌ಭಾಷೆಯ ಇಂದಿನ ಪರಿಭಾಷೆಯಲ್ಲಿ ‘ರಾಜಕೀಯವಾಗಿ ಸರಿಯಲ್ಲದ’ ಶಬ್ದಗಳು ಬಳಸಲ್ಪಡುವ ಕ್ಷೇತ್ರಗಳು ಇವು. ಇದನ್ನು ಮನಗಂಡಿರುವ ಪಾಶ್ಚಾತ್ಯ ಸಮಾಜದ ಪ್ರಭಾವದ ಪರಿಣಾಮವಾಗಿ ಕನ್ನಡದಲ್ಲೂ ಈಗ ಅಂಗವಿಕಲರು (physically handicapped)ಎನ್ನದೆ ‘ವಿಶೇಷ ಚೇತನರು’ ಎಂಬ ಪದಪುಂಜ ಬಳಕೆಗೆ ಬಂದಿದೆ, ಇಂಗ್ಲಿಷ್ ಚೆನ್ನಾಗಿ ಬಲ್ಲವರು ಈಗ "old' ಎನ್ನದೆ "chronologically gifted' (ವಯಸ್ಸಿನ ವಿಷಯದಲ್ಲಿ ವರಪಡೆದವ), "bald' (ಬೋಳುತಲೆ)ಗೆ ಬದಲಾಗಿ "hair disadvantaged' (ಕೂದಲಿನ ವಿಷಯದಲ್ಲಿ ಅನನುಕೂಲತೆ ಹೊಂದಿದವ) ಎನ್ನುತ್ತಾರೆ. "un educated' (ಅಶಿಕ್ಷಿತ) ಶಬ್ದಕ್ಕೆ "differently schooled' (ನಮ್ಮ ಶಿಕ್ಷಣಕ್ಕಿಂತ ಭಿನ್ನವಾದ ಶಿಕ್ಷಣ ಪಡೆದವ), ದಢೂತಿ- 'fat' ಬದಲಾಗಿ "differently sized' ಇತ್ಯಾದಿ ಯಾವುದೇ ರೀತಿಯಲ್ಲೂ ವ್ಯಕ್ತಿಯ ಮನಸ್ಸನ್ನು ನೋಯಿಸದ, ಆತನನ್ನು ಆಕೆಯನ್ನು ಅವಮಾನಿಸದ, ನಿಂದಿಸದ ಭಾಷಾಬಳಕೆ ಪಾಶ್ಚಾತ್ಯ ಸಮಾಜದಲ್ಲಿದೆ. ಹೀಗಾಗಿಯೇ ನಾವೀಗ ಗಾಂಧೀಜಿ ಬಳಸಿದ್ದ ಅವರ ಪ್ರಸಿದ್ಧ ಪತ್ರಿಕೆಯ ಹೆಸರಿನ ಶಬ್ದಕ್ಕೆ ಬದಲಾಗಿ ‘ದಲಿತ’ ಶಬ್ದವನ್ನು ಬಳಸುತ್ತಿದ್ದೇವೆ.
‘ರಾಜಕೀಯವಾಗಿ ಸರಿಯಲ್ಲ’ ಎಂದರೆ ಅದು ಸಾಮಾಜಿಕವಾಗಿ, ನೈತಿಕವಾಗಿ ತಪ್ಪುಎಂದೇ ಅರ್ಥ. ಆದ್ದರಿಂದ ಇವತ್ತು ಬಾಹ್ಮಣ, ಬ್ರಾಹ್ಮಣ್ಯ, ಜಾತಿನಿಂದನೆಯ ಪ್ರಶ್ನೆ ಮತ್ತೆ ಮತ್ತೆ ಎದುರಾಗುವಾಗ ನಾವು ಮಾಡಬಹುದಾದ ಒಂದು ಕೆಲಸವೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಶಬ್ದಗಳಿಗೆ ‘ರಾಜಕೀಯವಾಗಿ ಸರಿ’ ಅನ್ನಿಸುವ, ಅವಮಾನ/ನಿಂದನೆ ಅನ್ನಿಸದ ಹೊಸ ಶಬ್ದಗಳನ್ನು ಚಲಾವಣೆಗೆ ತರುವುದು-ಅಮೆರಿಕನ್ನರು ಜನಾಂಗೀಯ ನಿಂದನೆಯ ‘ನೀಗ್ರೊ’ ಶಬ್ದಕ್ಕೆ ಬದಲಾಗಿ "black' ತಂದ ಹಾಗೆ ಅಥವಾ ‘ಟಾಲೆಟ್ ಶುಚಿಗೊಳಿಸುವವ’ನಿಗೆ ಬದಲಾಗಿ "sanitary engineer' ಪದಪುಂಜವನ್ನು ಚಲಾವಣೆಗೆ ತಂದ ಹಾಗೆ.
ಈಗ ಜಾತಿಯೇ ಆಧುನಿಕ ಭಾರತದ ಧರ್ಮವಾಗಿದೆ. ವರ/ವಧು ವೀಕ್ಷಣೆಯಿಂದ ಹಿಡಿದು ಸಾರ್ವತ್ರಿಕ ಚುನಾವಣೆಗಳವರೆಗೆ ಎಲ್ಲರಿಗೂ ಜಾತಿಯೇ ಮನೆದೇವರಾಗಿದೆ. ‘ದುಡ್ಡು ದೊಡ್ಡಪ್ಪ’ ಆಗಿರುವಲ್ಲಿ ಜಾತಿ ಸ್ವಲ್ಪಸಣ್ಣವನಾಗಿ ಪಿಸುದನಿಯಲ್ಲಿ ಮಾತಾಡುತ್ತದೆ. ಆದ್ದರಿಂದಲೇ ಡಾ. ಬಿ.ಆರ್. ಅಂಬೇಡ್ಕರ್‌ರವರು "Annihilation of Caste' (ಜಾತಿಯ ವಿನಾಶ) ಬರೆದು 85 ವರ್ಷಗಳು ಕಳೆದ ಬಳಿಕವೂ, ನಾವು ಹಲವು ‘ಜಾತಿ ವಿನಾಶ ಸಮ್ಮೇಳನ’ಗಳನ್ನು ನಡೆಸಿದ ಬಳಿಕವೂ ಜಾತಿವ್ಯವಸ್ಥೆ ಈ ದೇಶದ ದಲಿತ ರಾಷ್ಟ್ರಪತಿಗೆ ದೇವಾಲಯ ಪ್ರವೇಶ ಸುಲಭಸಾಧ್ಯವಾಗದಷ್ಟು ಪ್ರಬಲವಾಗಿದೆ. ಹೀಗಿರುವಾಗ ಆ ವ್ಯವಸ್ಥೆ ನಾಶವಾಗುತ್ತದೆಂಬುದು ಒಂದೋ ಕನಸು ಅಥವಾ ಭ್ರಮೆ ಇರಬಹುದಲ್ಲವೇ? ಬೆಂಗಳೂರಿನ ಅಪಾರ್ಟ್‌ಮೆಂಟ್ ಸಂಸ್ಕೃತಿಯಲ್ಲಿ ಜನಪ್ರಿಯವಾಗುತ್ತಿರುವ ‘‘ಜಾತಿ ಕಾಲನಿಗಳಿಗೆ ಬಾಂಬ್ ಹಾಕಬೇಕು’’ ಎಂದು ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿ ನಡೆದ ಪ್ರಶಸ್ತಿ ನೀಡಿಕೆ ಸಮಾರಂಭವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ಮೈಸೂರು ವಿಶ್ವವಿದ್ಯಾನಿಲಯದ ನನ್ನ ಎಂಎ ಅಧ್ಯಯನದ ದಿನಗಳ ಗೆಳೆಯ ದೇವನೂರ ಮಹಾದೇವ ಹೇಳಿದ್ದರು. ಆ ಸಮಾರಂಭದಲ್ಲಿ ಅವರನ್ನು ಅಭಿನಂದಿಸಿ ನಾನು ಭಾಷಣ ಮಾಡಿದ್ದೆ. ದೇವನೂರರ ಬಾಂಬ್ ಸಮಾನವಾದ ಆಕ್ರೋಶದ ಹಿಂದಿರುವ ಜಾತಿ ಅವಮಾನದ, ಅಸ್ಪೃಶ್ಯತೆಯ ಬೆಂಕಿಯ ಬಿಸಿ ಈ ದೇಶದ ಎಲ್ಲ ಮನುಷ್ಯರಿಗೂ ಅನುಭವವಾದಾಗ ಸಮಾನತೆ, ಮಾನವೀಯತೆಯ ಹೊಸ ಯುಗವೊಂದು ಆರಂಭವಾಗಬಹುದು.
(bhaskarrao599@gmail.com)