ಮನಶಾಂತಿಗೆ ಆದ್ಯತೆ ನೀಡಲು ಎಲ್ಲಾ ಕ್ರಿಕೆಟ್‌ನಿಂದ ಅನಿರ್ದಿಷ್ಟ ವಿರಾಮ ತೆಗೆದುಕೊಂಡ ಬೆನ್ ಸ್ಟೋಕ್ಸ್

Update: 2021-07-30 17:47 GMT

ಲಂಡನ್: ಇಂಗ್ಲೆಂಡ್ ನ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು ತಮ್ಮ ಮನಶಾಂತಿಗೆ ಆದ್ಯತೆ ನೀಡಲು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ 'ಅನಿರ್ದಿಷ್ಟ' ವಿರಾಮವನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.

ಸ್ಟೋಕ್ಟ್ ಆಗಸ್ಟ್ 4ರಿಂದ ಆರಂಭವಾಗಲಿರುವ ಭಾರತ ವಿರುದ್ಧ ಸ್ವದೇಶಿ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಸ್ಟೋಕ್ಸ್ ಅವರ ಹೆಜ್ಜೆಯನ್ನು  ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸಂಪೂರ್ಣವಾಗಿ ಬೆಂಬಲಿಸಿದೆ.

ಸ್ಟೋಕ್ಸ್ ವಿರಾಮ ಪಡೆಯಲಿದ್ದಾರೆ. ಈ ತಿಂಗಳಾರಂಭದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಗೆ ವಾಪಸಾಗಿರುವ ಸ್ಟೋಕ್ಸ್ ಅವರ ಕೈಬೆರಳಿಗೆ ಆಗಿರುವ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ತಿಳಿಸಿದೆ.

ಇಂಗ್ಲೆಂಡ್ ಪುರುಷರ ಕ್ರಿಕೆಟ್‌ನ ವ್ಯವಸ್ಥಾಪಕ ನಿರ್ದೇಶಕ ಆಶ್ಲೇ ಗೈಲ್ಸ್ ಅವರು ಸ್ಟೋಕ್ಸ್ ಅವರ ನಿರ್ಧಾರವನ್ನು ಬೆಂಬಲಿಸಿದರು. "ಬೆನ್ ತನ್ನ ಭಾವನೆಗಳು ಮತ್ತು ಮನಶಾಂತಿಯ ಬಗ್ಗೆ ತೆರೆದುಕೊಳ್ಳಲು ಅಪಾರ ಧೈರ್ಯವನ್ನು ತೋರಿಸಿದ್ದಾರೆ. ನಮ್ಮ ಎಲ್ಲ ಜನರ ಮಾನಸಿಕ ಆರೋಗ್ಯ ಹಾಗೂ  ಹಿತದೃಷ್ಟಿಯತ್ತ ನಮ್ಮ ಪ್ರಾಥಮಿಕ ಗಮನ ಯಾವಾಗಲೂ ಇರುತ್ತದೆ ಹಾಗೂ  ಮುಂದುವರಿಯುತ್ತದೆ. ಕನಿಷ್ಠ ಸ್ವಾತಂತ್ರ್ಯದೊಂದಿಗೆ ಕುಟುಂಬದಿಂದ ಸಾಕಷ್ಟು ಸಮಯ ದೂರ ಕಳೆಯುವುದು ಕಠಿಣ ಸವಾಲಾಗಿದೆ'' ಎಂದು ಹೇಳಿದರು.

ಆಟಗಾರರು ಕೋವಿಡ್ ಸೋಂಕಿನಿಂದ ದೂರ ಉಳಿಯಲು ತಿಂಗಳುಗಳ ಕಾಲ ಬಯೋ ಬಬಲ್ ನಲ್ಲಿ ಇರುತ್ತಿರುವ ಕಾರಣ ಕೋವಿಡ್ ಸಮಯದಲ್ಲಿ ಕ್ರಿಕೆಟಿಗರ ಮಾನಸಿಕ ಆರೋಗ್ಯವು ಪ್ರಮುಖ ಚರ್ಚಾಸ್ಪದ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News