ನಾಸಾ ಫೆಲೋಶಿಪ್‌ ಪ್ಯಾನೆಲ್‌ ಗೆ ಔರಂಗಾಬಾದ್‌ ಬಾಲಕಿ ಆಯ್ಕೆ ಎನ್ನುವ ಸುದ್ದಿ ಸುಳ್ಳು: ಆಸ್ಟ್ರಾನಾಮಿಕಲ್‌ ಸೊಸೈಟಿ

Update: 2021-08-21 08:03 GMT

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್‍ನ 14 ವರ್ಷದ ಬಾಲಕಿಯೊಬ್ಬಳು ನಾಸಾದ ಎಂಎಸ್‍ಐ ಫೆಲ್ಲೋಶಿಪ್ಸ್ ವರ್ಚುವಲ್ ಪ್ಯಾನೆಲ್ ಗೆ ಆಯ್ಕೆಯಾಗಿದ್ದಾಳೆಂಬ ಸುದ್ದಿ ಸುಳ್ಳು ಎಂದು ಅಸ್ಟ್ರಾನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಹೇಳಿದೆ.

ಬಾಲಕಿಯ ಸಂಶೋಧನಾ ವರದಿಯೊಂದನ್ನು ನಾಸಾ ಸ್ವೀಕರಿಸಿದೆ ಎಂಬ ಸುದ್ದಿಗಳು ಈ ಹಿಂದೆ ಹರಿದಾಡಿದ್ದವು. ಆದರೆ ನಾಸಾದ ಪ್ರಮಾಣಪತ್ರವೆಂದು ಆಕೆ ಸಲ್ಲಿಸಿದ ದಾಖಲೆಗಳು ಹಾಗೂ ಇಮೇಲ್ ಮಾಹಿತಿಗಳಲ್ಲಿ ನ್ಯೂನತೆಗಳಿವೆ ಎಂದು ಸೊಸೈಟಿ ಹೇಳಿದೆ.

"ನಾನು ಬ್ಲ್ಯಾಕ್ ಹೋಲ್‍ಗಳು ಮತ್ತು ದೇವರ ಕುರಿತ ಒಂದು ಸಿದ್ಧಾಂತದ ಕುರಿತು ಬರೆದಿದ್ದೆ. ಮೂರು ಪ್ರಯತ್ನಗಳ ಬಳಿಕ ಅದನ್ನು ನಾಸಾ ಸ್ವೀಕರಿಸಿತ್ತು. ಅವರ ವೆಬ್‍ಸೈಟ್‍ಗೆ ಬರೆಯುವಂತೆ ಅವರು ನನಗೆ ಹೇಳಿದರು" ಎಂದು ಬಾಲಕಿ ಹೇಳಿರುವುದನ್ನು ANI ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

ಆಕೆ ಬರೆದಿದ್ದಾಳೆನ್ನಲಾದ ಲೇಖನವನ್ನು ವೈಜ್ಞಾನಿಕ ಪತ್ರಿಕೆಗಳು ಆರಂಭಿಕ ಹಂತದಲ್ಲಿಯೇ ತಿರಸ್ಕರಿಸುವ ಸಾಧ್ಯತೆ ಹೆಚ್ಚು ಎಂದು ಅಸ್ಟ್ರಾನಾಮಿಕಲ್ ಸೊಸೈಟಿ ಹೇಳಿದೆ.

Photo: Astronomical Society of India

ಆಕೆ ಹಾಜರುಪಡಿಸಿದ ಪ್ರಮಾಣಪತ್ರದಲ್ಲಿ ಜಿಮ್ ಬ್ರೈಡೆಸ್ಟೀನ್ ಅವರನ್ನು ನಾಸಾದ ಸಿಇಒ ಮತ್ತು ಅಧ್ಯಕ್ಷ ಎಂದು ಉಲ್ಲೇಖಿಸಲಾಗಿದೆ. ಆದರೆ ವಾಸ್ತವವಾಗಿ ನಾಸಾದಲ್ಲಿ ಅಂತಹ ಹುದ್ದೆಯಲ್ಲಿರುವವರು ಯಾರೂ ಇಲ್ಲ. ಪ್ರಮಾಣಪತ್ರದಲ್ಲಿರುವ ಇನ್ನೊಂದು ಹೆಸರು ಜೇಮ್ಸ್ ಫೆಡರಿಕ್ ಆಗಿದ್ದು, ಈ ಹಿಂದೆ ನಾಸಾ ಆಡಳಿತಾಧಿಕಾರಿಯಾಗಿದ್ದ ಜೇಮ್ಸ್ ಫ್ರೆಡ್ರಿಕ್ ಬ್ರೈಡೆಸ್ಟೀನ್ ಅವರ ಹೆಸರುಗಳನ್ನು ಎರಡು ಭಾಗಗಳಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರಬಹುದು ಎಂದು ಸಂಸ್ಥೆ ಹೇಳಿದೆ.

ಮೇಲಾಗಿ ನಾಸಾ ಆ ಬಾಲಕಿಗೆ ಕಳುಹಿಸಿದ ಇಮೇಲ್‍ನ ಸಬ್ಜೆಕ್ಟ್ ಲೈನ್‍ನಲ್ಲಿ ಅರ್ಜೆಂಟ್  ಆಕ್ಷನ್ ರಿಕ್ವೈರ್ಡ್ ಎಂದು ಬರೆಯುವಾಗ ಅರ್ಜೆಂಟ್ ಸ್ಪೆಲ್ಲಿಂಗ್ ತಪ್ಪಾಗಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News