ರಹಮತ್ ತರೀಕೆರೆಯವರ ಜನಸಂಸ್ಕೃತಿಗಳ ಅಧ್ಯಯನ ಮತ್ತು ಪ್ರಮೇಯಗಳು
ಭಾಗ-3
ಮೂರು, ಶಂಬಾ, ಡಿ.ಆರ್., ಢೇರೆ ಮುಂತಾದವರು ಕಥನದ ಮಾದರಿಗಳ ಮೂಲಕ ಸಂಶೋಧನಾ ಬರಹಗಳನ್ನು ಮಾಡಿದ್ದಾರೆ. ನಿರೂಪಣೆಯ ದೃಷ್ಟಿಯಿಂದಲೂ ಕಥನದ ಮಾದರಿ ಆಕರ್ಷಕವಾದುದು. ಹಿಂದೆ ರಾಜಕೀಯ, ಧಾರ್ಮಿಕ ಕಥನಗಳನ್ನು ನಿರೂಪಿಸುವಾಗಲೂ ವಿದ್ವಾಂಸರು ಕಾವ್ಯದ ಮೊರೆ ಹೋಗಿದ್ದಾರೆ. ಡಿ.ಆರ್.ರಂತೆಯೇ ರಹಮತ್ ಅವರು ಕೂಡ ಸೃಜನಶೀಲ, ಸೃಜನೇತರ ಎಂಬ ಕಂಪಾರ್ಟುಮೆಂಟುಗಳನ್ನು ಒಡೆದು ಹಾಕುತ್ತಾರೆ. ಆದರೆ ರಹಮತ್ ಅವರಿಗೂ ಕಥನದ ಮಾದರಿ ಆಕರ್ಷಕವೇ. ಆದರೆ ಸಂಶೋಧನಾ ಬರವಣಿಗೆಗಳಲ್ಲಿ ಕಥನ ಕ್ರಮವನ್ನು ಮುರಿದು ನಿರೂಪಣೆಯ ಮಾದರಿಗೆ ಇಳಿಯುತ್ತಾರೆ. ಅಕಡೆಮಿಕ್ ಶಿಸ್ತು ಎಂಬುದು ಮೆದುಳಿನ ಕೆಲಸ ಅನ್ನಿಸುವಂತೆ ಮಾಡುತ್ತದೆ. ಹಾಗೆ ನೋಡಿದರೆ ಯಾವುದೋ ರೈಲು, ಬಸ್ಸುಗಳ ಪ್ರಯಾಣಗಳು, ಜನರ ಆಚರಣೆಗಳು, ವರ್ತನೆಗಳ ಬಗ್ಗೆ ಬರೆಯುವಾಗ ಅತ್ಯಂತ ಜೀವಂತವಾದ ಸಾಂಸ್ಕೃತಿಕ ಅಧ್ಯಯನದ ಜೀವಂತ ಸೆಲೆಗಳು ಪುಟಿದು ನಿಂತು ಬಹುಕಾಲ ಓದುಗರನ್ನು ಕಾಡುತ್ತವೆ. ಇಂತಹ ಬರಹಗಳಲ್ಲಿ ಅವರ ತಾಂತ್ರಿಕತೆಯ ಸ್ಟ್ರಕ್ಚರು ಮಾಯವಾಗಿರುತ್ತದೆ.
ನಾಲ್ಕು, ತರೀಕೆರೆಯವರು ತಮ್ಮ ಮೊದಲ ಬರಹಗಳಾದ ‘ಪ್ರತಿ ಸಂಸ್ಕೃತಿ’ ಮತ್ತು ‘ಮರದೊಳಗಣ ಕಿಚ್ಚು’ ಕೃತಿಗಳ ಬಗ್ಗೆ ಅವರಿಗೆ ತಕರಾರುಗಳು ಹುಟ್ಟಿದಂತಿವೆ. ಅವು ಸಂಸ್ಕೃತಿ ಮೀಮಾಂಸೆಯ ಪ್ರಣಾಳಿಕೆಯ ಮಾದರಿಯಲ್ಲಿವೆ ಎಂಬುದು ಅವರ ತಕರಾರಿಗೆ ಕಾರಣ ಇರಬಹುದು. ಆ್ಯಕ್ಟಿವಿಸ್ಟ್ ಮಾದರಿಯ ವಿದ್ವತ್ತು ವಿಷಯದ ಬೈನರಿಗಳನ್ನು ನಿರಾಕರಿಸುತ್ತದೆ ಎಂಬ ನಿಲುವಿಗೆ ಅವರು ತಲುಪಿದಂತೆ ಕಾಣುತ್ತದೆ. ಅಂದರೆ, ರಾಜಕೀಯ ಸಂಘಟನೆಗಳ ಒಬ್ಬ ಕಾರ್ಯಕರ್ತ ಸಂಸ್ಕೃತಿ, ಇತಿಹಾಸದಂತಹ ಅತ್ಯಂತ ಸೂಕ್ಷ್ಮವಾದ ವಿಷಯಗಳನ್ನು ಮುಖಾಮುಖಿಯಾಗುವಾಗ ಬೈಪಾಸು ಮಾಡುವ ಮತ್ತು ತನಗೆ ಬೇಕಾದ್ದನ್ನು ಆರಿಸಿ ಪೋಣಿಸಿಕೊಳ್ಳುವ ಮೆಥೆಡಾಲಜಿಯನ್ನು ಅಳವಡಿಸಿಕೊಳ್ಳಲು ಒತ್ತಾಯಿಸುತ್ತದೆ(ಈ ಮಾತನ್ನು ತರೀಕೆರೆಯವರು ಪದೇ ಪದೇ ತಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತಾರೆ). ತನ್ನ ಪೂರ್ವ ನಿರ್ಧರಿತವಾದ ಉದ್ದೇಶಗಳಿಗಾಗಿ ತನಗೆ ಹಿತವಲ್ಲದ ಅಥವಾ ತಾನು ನಂಬಿದ ಪ್ರಮೇಯಗಳಿಗೆ ವಿರುದ್ಧವಾದ ಸಂಗತಿಗಳಿದ್ದರೆ ಅದನ್ನು ಬೈಪಾಸು ಮಾಡಿ ತನಗೆ ಬೇಕಾದ್ದನ್ನು ಆರಿಸಿ ಪೋಣಿಸುವ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಇತಿಹಾಸ ರಚನೆಗೆ ತೊಡಗಿದ ಪೂರ್ವನಿರ್ಧರಿತ ಮನಸ್ಥಿತಿಯ ಇತಿಹಾಸಕಾರರು ಈ ಮೆಥೆಡಾಲಜಿಯನ್ನು ಅಳವಡಿಕೊಂಡಿರುತ್ತಾರೆ. ಇಂತಹ ಮೆಥೆಡಾಲಜಿಯನ್ನು ರಹಮತ್ ಅವರು ದೋಷಗ್ರಸ್ತ ಎಂದು ಭಾವಿಸುತ್ತಾರೆ. ಅದರಲ್ಲೂ ಭಾರತದಂತಹ ಅಪಾರ ಏಣಿಶ್ರೇಣಿಗಳಿರುವ ಸಂಸ್ಕೃತಿಗಳಲ್ಲಿ ಈ ಬೈಪಾಸು ಮೆಥೆಡಾಲಜಿಗಳು ಮಾಡುವ ಹಾನಿಗಳು ಊಹಾತೀತವಾಗಿರುತ್ತವೆ. ಇಂತಹ ಕಡೆ ‘ನಿಜ’ ಎಂಬುದರ ಕಾಲು ಹಿಂದಕ್ಕೂ ತಲೆ ಮುಂದಕ್ಕೂ ತಿರುಗಿ ನಿಂತು ಬಿಡುತ್ತದೆ. ಆಧುನಿಕ ಭಾರತದ ರಕ್ತ ಸಿಕ್ತ ಅಧ್ಯಾಯಗಳ ಹಿಂದೆ ಕೆಲಸ ಮಾಡಿರುವುದು ಇದೇ ಮೆಥೆಡಾಲಜಿ. ಸೂಫಿ ಕೃತಿ ಬರೆವ ಹೊತ್ತಿಗೆ ರಹಮತ್‌ರು ಆರಂಭ ಕಾಲದ ಮೆಥೆಡಾಲಜಿಯನ್ನು ಬಿಟ್ಟುಕೊಟ್ಟರು. ವಿಷಯಗಳನ್ನು ಸರಳವಾಗಿ ಹೇಳುವ ಎದರು ಸಂಗತಿಗಳನ್ನು ಗೌರವಿಸಿ, ಅವುಗಳ ಜೊತೆ ಸಂವಾದ ಮಾಡುವ ಅದ್ವೈತ ಮಾದರಿಯನ್ನು ಅಳವಡಿಸಿಕೊಂಡರು. ಈ ವಿಧಾನವು ನಮ್ಮ ತೆಳು ಗ್ರಹಿಕೆಯ ಅಕಡೆಮಿಶಿಯನ್ನರ ಕಣ್ಣಿಗೆ ‘ನಾಜೂಕಿನ ಮೆಥೆಡಾಲಜಿ’ ಎಂಬಂತೆ ಕಾಣಿಸಿತು. ಎಲ್ಲೂ ಸಿಕ್ಕಿ ಹಾಕಿಕೊಳ್ಳದ ನಾಜೂಕಿನ ಚಿಂತನೆ, ವಿಷಯಗಳನ್ನು ತಾತ್ವಿಕ, ಪರಿಕಲ್ಪನಾತ್ಮಕ ಪ್ರಮೇಯಗಳನ್ನು ನಿರ್ಲಕ್ಷಿಸಿದ ಮತ್ತು ವಿವರಗಳಲ್ಲೇ ಸುಖಿಸಿದ ವಿದ್ವತ್ತು ಎಂಬ ವಿಮರ್ಶೆಯನ್ನು ತರೀಕೆರೆಯವರು ಎದುರಿಸುವಂತಾಯಿತು.
ಆದರೆ ಸಂಕರ ಸಂಸ್ಕೃತಿ ಎಂಬುದು ‘ಪ್ರತಿ ಸಂಸ್ಕೃತಿ’ಯ ಬಹಳ ಪ್ರಮುಖವಾದ ಸಮಾಜೋ-ರಾಜಕೀಯ ಅಂಶ. ಮಿಲಿಯಾಂತರ ವರ್ಷಗಳ ಮನುಷ್ಯನ ವಿಕಾಸದ ಚರಿತ್ರೆಯನ್ನು ಹುಡುಕುತ್ತಾ ಹೋದರೆ ಬೆಂಕಿ, ಕೊಡಲಿ, ಧಾನ್ಯ, ಚಕ್ರ, ಜಾನುವಾರುಗಳು, ಸಂಕೇತಗಳು ಮಾತ್ರ ಒಬ್ಬರಿಂದೊಬ್ಬರ ನಡುವೆ ವಿನಿಮಯವಾಗಿಲ್ಲ. ಮನುಷ್ಯರ ರಕ್ತವೂ ಬೆರೆತು ಹೋಗಿದೆ. ಭೂ ಖಂಡದ ಮೇಲಿನ ಎಲ್ಲರ ಡಿಎನ್‌ಎಗಳು ತನ್ನ ತವರು ಮನೆ ಆಫ್ರಿಕ ಎನ್ನುತ್ತವೆ. ಹಾಗಿದ್ದಾಗ ಕಳೆದ ಎರಡು ಸಾವಿರ ವರ್ಷದಿಂದೀಚೆಗೆ ಕಂಡುಕೊಂಡ ಮನುಷ್ಯ ಜಾತಿ, ಧರ್ಮ, ಮತ, ಪಂಥಗಳು ಹಾಗೂ ಅವುಗಳ ಮೇಲೆ ಬೆಳೆದ ಸಂಸ್ಕೃತಿಗಳು ಸಹ ಒಂದರೊಳಗೊಂದು ಹೇಗೆ ಬೆರೆತು ಹೋಗಿವೆ ಎಂದು ವಿಶ್ವಾತ್ಮಕ ಪ್ರತಿಭೆಯ ಲೋಕ ಚಿಂತಕರು ಪ್ರತಿಪಾದಿಸಿದ್ದಾರೆ ಎಂಬುದನ್ನು ಹುಡುಕಿ ಮಂಡಿಸುವುದು ತರೀಕೆರೆಯವರ ಪ್ರಮುಖ ಆದ್ಯತೆಯಾಗಿದೆ. ವಿವೇಕವುಳ್ಳ ಜನ ಸಂಸ್ಕೃತಿಯನ್ನು ಪ್ರತಿಪಾದಿಸುವವರೆಲ್ಲರ ಆದ್ಯತೆಯೂ ಆಗಿದೆ. ತರೀಕೆರೆಯವರು 1993ರಲ್ಲಿ ಬರೆದ ‘ಪ್ರತಿ ಸಂಸ್ಕೃತಿ’ ಮತ್ತು 1996ರಲ್ಲಿ ಬರೆದ ‘ಮರದೊಳಗಣ ಕಿಚ್ಚು’ ಕೃತಿಗಳು ಜನಸಂಸ್ಕೃತಿಗಳ ರಾಜಕೀಯ-ಸಮಾಜೋ-ಧಾರ್ಮಿಕ ಅಧ್ಯಯನಕ್ಕೆ ಪ್ರಣಾಳಿಕೆಯ ಮಾದರಿಯವು ಎನ್ನಿಸಿದವು. ನಿಧಾನವಾಗಿ ತರೀಕೆರೆಯವರಿಗೆ ಈ ಕೃತಿಗಳ ತಾತ್ವಿಕ ವಿಧಾನವಾದ ಬೈಪಾಸು ಮೆಥೆಡಾಲಜಿ ಕುರಿತು ಬಹಳ ಗಂಭೀರವಾದ ತಕರಾರುಗಳು ಹುಟ್ಟಿದ ಕಾರಣಕ್ಕೋ ಏನೊ ನಿಲ್ಲಿಸಿದರು. ನಂತರ ರಚಿಸಿದ ನಾಥ, ಸೂಫಿ, ಗುರು, ಶಾಕ್ತ ಪಂಥಗಳ ಅಧ್ಯಯನಗಳ ಮೂಲಕ ಪ್ರತಿ ಸಂಸ್ಕೃತಿ ಚಿಂತನೆಯನ್ನು ಮುಂದುವರಿಸಿದರೂ ಅವು ತಾತ್ವಿಕವಾಗಿ ಹೆಚ್ಚು ಇನ್‌ಕ್ಲೂಸಿವ್ ಆಗುತ್ತವೆ. ಜನರೊಂದಿಗೆ, ವಿದ್ವಾಂಸರೊಂದಿಗೆ ಒಡನಾಡಿದ ಎದೆ ಬಡಿತದ ಸಪ್ಪಳ ಈ ಕೃತಿಗಳಲ್ಲಿ ಕೇಳಿಸುತ್ತದೆ ಮತ್ತು ಕ್ಷೇತ್ರಾಧ್ಯಯನದ ವಿಪುಲ ವಿವರಗಳು ವಿಷಯದ ವಿಹಂಗಮ ನೋಟವನ್ನು ಮರೆಮಾಚಿಸುತ್ತದೆ.
ಐದು, ಸಾಂಸ್ಕೃತಿಕವಾಗಿ ಮುಖ್ಯವಾದ ಪಂಥಗಳ ಮೇಲಿನ ಅಧ್ಯಯನಗಳಲ್ಲಿ ತಟಸ್ಥ ನೋಡುಗನ ನಿಲುವುಗಳಿವೆ ಎಂಬ ಆರೋಪಗಳೂ ಇವೆ. ಆದರೆ ಕನ್ನಡದ ಆಧುನಿಕ ವಿದ್ವತ್ ವಲಯ ಯಾವುದನ್ನು ಮುಖ್ಯ ವಲ್ಲವೆಂದು ನಿರಾಕರಿಸಿತ್ತೋ ಆ ಏರಿಯಾಗಳಿಗೆ ಗಂಭೀರವಾಗಿ ಪ್ರವೇಶ ಪಡೆದು ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಈ ಪಂಥಗಳ ಬಹುಮುಖಿ ಆಯಾಮಗಳನ್ನು ವಿವರಿಸಿದ ಯಶಸ್ಸು ರಹಮತ್ ತರೀಕೆರೆಯವರಿಗೆ ಸಲ್ಲಬೇಕು. ಸರಳವಾಗಿ ಬರೆಯುವುದು ಅತ್ಯಂತ ಪ್ರಮುಖವಾದ ರಾಜಕೀಯ ತಿಳುವಳಿಕೆ. ಸರಳವಾಗಿ ಹೇಳಬೇಕಾದ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಕಠಿಣಗೊಳಿಸುವುದು ಅತಿ ದೊಡ್ಡ ಅಪರಾಧ. ಓದು, ತಿರುಗಾಟ ಮತ್ತು ಕ್ಷೇತ್ರಕಾರ್ಯಗಳ ಮೂಲಕ ರಹಮತ್ ಅವರು ಶಂಬಾ ಅವರಷ್ಟೇ ಪ್ರಮುಖ ಕೊಡುಗೆಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಹಾಗಾಗಿಯೇ ಕನ್ನಡದ ಓದುಗರು ರಹಮತ್ ಅವರನ್ನು ಬಹಳ ಅಕ್ಕರಾಸ್ಥೆಯಿಂದ ಓದುತ್ತಾರೆ. ಓದುಗರು ಪಂಥಗಳ ಬಗೆಗಿನ ಬರಹಗಳನ್ನು ಓದಿದ್ದಕ್ಕಿಂತ ಹೆಚ್ಚಾಗಿ ‘ನಡೆದಷ್ಟೂ ನಾಡು’, ‘ಕದಳಿ ಹೊಕ್ಕು ಬಂದೆ’ ಮತ್ತು ‘ಹಿತ್ತಲ ಜಗತ್ತು’ ಬರಹಗಳನ್ನು ಹೆಚ್ಚು ಲವಲವಿಕೆಯಿಂದ ಓದುತ್ತಾರೆ. ಇವೂ ಕೂಡ ಗಹನವಾದ ಸಾಂಸ್ಕೃತಿಕ ರಾಜಕಾರಣವನ್ನು ಪ್ರತಿಪಾದಿಸುತ್ತವೆ.
ಆರು, ತರೀಕೆರೆಯವರು ಕಳೆದ ಮೂರು ದಶಕಗಳಿಂದ ತಿರುಗಿ ವಿವರಗಳನ್ನು ಸಂಗ್ರಹಿಸಿ ಕಟ್ಟಿದ ಕೃತಿಗಳ ಕುರಿತು ಗಂಭೀರವಾದ ಅನುಸಂಧಾನ ಮಾಡಬೇಕಾದ ವಿದ್ವತ್ತು ಮತ್ತು ಮನಸ್ಸು ಕನ್ನಡದಲ್ಲಿ ಇಲ್ಲದೆ ಹೋದದ್ದು ದೊಡ್ಡ ಕೊರತೆ. ಕನ್ನಡದ ವಿದ್ವತ್ ವಲಯ ತೆಳುವಾಗುತ್ತಿರುವುದು ಮತ್ತು ಜಾತಿ, ಮತ, ಪಂಥಗಳ ಹೆಸರಿನಲ್ಲಿ ಆಯ್ಕೆಯ ಮತ್ತು ನಿರ್ಲಕ್ಷದ ರಾಜಕಾರಣ ಮಾಡುತ್ತಿರುವುದು ನಾಡಿಗೆ ಒದಗಿರುವ ಕೇಡಿನ ಸಂಕೇತ. ಇದೇ ರಾಜಕಾರಣವು ರಾಷ್ಟ್ರ ಮಟ್ಟದಲ್ಲಿ ಬಾಬಾ ಸಾಹೇಬರಿಗೂ ಕನ್ನಡದಲ್ಲಿ ಶಂಬಾ ಅವರಿಗೂ ಅನ್ಯಾಯ ಮಾಡಿದೆ.
ತರೀಕೆರೆಯವರು ಜನಸಂಸ್ಕೃತಿಗಳ ಅಧ್ಯಯನದ ಮೂಲಕ ಸಾಮರಸ್ಯದ ಪರಂಪರೆ, ಪುರೋಹಿತಶಾಹಿ ಪರಂಪರೆಯ ವಿರುದ್ಧ ನಡೆಸಿದ ಸಂಘರ್ಷ, ಪುರೋಹಿತಶಾಹಿ ಮೌಲ್ಯಗಳನ್ನು ಧಾರಣ ಮಾಡಿಕೊಂಡಿರುವ ದುರಂತ, ಆಳುವ ವರ್ಗದ ಜತೆಗೂ ಕೂಡಿಕೊಂಡ ಸಂತರು ಪ್ರಭುತ್ವಗಳ ರಕ್ತಪಿಪಾಸುತನಕ್ಕೆ ಸಾಥು ಕೊಟ್ಟ ದಾರುಣತೆ ಹೀಗೆ ಹಲವು ಆಯಾಮಗಳನ್ನು ವಿವರಿಸುತ್ತಾರೆ. ಕೂಡಿ ಬೆಳೆಯುವ ಸಾಗರ ಸಂಗಮದ ಕಲ್ಪನೆ ತರೀಕೆರೆಯವರಿಗೆ ನಿತ್ಯ ಬೀಳುವ ಕನಸು. ಶ್ರೇಷ್ಠತೆ, ಪ್ರತ್ಯೇಕತೆಗಳ ಎದುರು ಸಂಕರ ಎಂಬುದು ಬಹುದೊಡ್ಡ ಬದುಕಿನ ಜೈವಿಕ, ರಾಜಕೀಯ ಸತ್ಯ. ತಳಿವಿಜ್ಞಾನವು ಸಹ ಪ್ರತ್ಯೇಕತೆಯನ್ನು ಸಾವು, ಸಂಕರವನ್ನು ವಿಕಾಸವೆಂದು ಪ್ರತಿಪಾದಿಸುತ್ತದೆ. ಬೇರೆ ಮಂದೆಯ ಜೊತೆ ಬೆರೆಯದೆ ಹೋದ ಕುರಿಮಂದೆ ಕರಗಿ ಹೋಗುತ್ತದೆ ಎಂಬುದು ಕುರಿಗಾರರು ಕಂಡುಕೊಂಡ ಸತ್ಯ. ಆದರೆ ಹದಗೆಟ್ಟ ಮನುಷ್ಯರ ಜಾತಿ, ಮತ, ಬುಡಕಟ್ಟುಗಳ ಪ್ರತ್ಯೇಕತೆಯ ರಾಜಕೀಯ ಪ್ರಜ್ಞೆ ಮಾತ್ರ ಶುದ್ಧತೆ, ಶ್ರೇಷ್ಠತೆಗಳನ್ನು ಪ್ರತಿಪಾದಿಸುತ್ತದೆ. ಅದಕ್ಕಾಗಿ ಹಲವು ಸಂರಚನೆಗಳನ್ನು ಮಾಡಿಕೊಂಡು ನರಳುತ್ತಿದೆ. ಆದರೆ ಸಾಮಾನ್ಯ ಜನರು ಪ್ರತ್ಯೇಕತೆಯ ರಾಜಕೀಯ ಪ್ರಮೇಯವನ್ನು ಹಲವು ನೆಲೆಗಳಲ್ಲಿ ಮುರಿದು ಎಸೆಯಲು ಪ್ರಯತ್ನಿಸಿದ್ದಾರೆ. ಅಂತಹ ಪ್ರಯತ್ನಗಳ ಫಲವೇ ನಾಥ, ಶಾಕ್ತ, ಸೂಫಿ ಮತ್ತು ಗುರುಪಂಥಗಳ ಮೂಲ ಆಶಯ. ವಿವರಗಳ ಮೂಲಕವೇ ತಾತ್ವಿಕ ಪ್ರಮೇಯವನ್ನು ಮಂಡಿಸುವುದು ಇವರ ಪ್ರಮುಖ ಮೆಥೆಡಾಲಜಿ. ಇದನ್ನು ಗುರುತಿಸದೆ ಕನ್ನಡು ಬಹಳಷ್ಟನ್ನು ಕಳೆದುಕೊಂಡಿದೆ.
ತರೀಕೆರೆಯವರ ಈ ಸಂಶೋಧನೆಗಳ ವಿಧಾನಗಳು ಆಕರ ಸಂಗ್ರಹ ಮತ್ತು ಮಂಡಿಸುವ ವಿಧಾನಗಳಿಂದ ‘ವಿಶಿಷ್ಟ’ವಾಗಲು ತುಡಿಯುತ್ತವೆ. ಜನರೆ ಕಟ್ಟಿ ಬೆಳೆಸಿದ ಈ ಚಿಂತನೆಗಳು ವಿಶ್ವ ಪ್ರಜ್ಞೆಗೆ ಸರಿಸಾಟಿಯಾಗಿ ಬೆಳೆದಿವೆ, ಅನೇಕ ಕಡೆ ವಿಶ್ವಕ್ಕೆ ಬೆಳಕು ಕೊಡುವಷ್ಟು ಸಮರ್ಥವಾಗಿವೆ. ಜಗತ್ತಿನ ಯಾವ ದೇಶದಲ್ಲೂ ಇಲ್ಲದ ಸಂಕೀರ್ಣತೆಗಳು, ಬಿಡುಗಡೆಯೇ ಇಲ್ಲದಂತೆ ಮಾಡುವ ತಾರತಮ್ಯಗಳು ಇಲ್ಲಷ್ಟೇ ಸಂಭವಿಸಿವೆ. ಅವುಗಳ ಎದುರು ನಾಥ ಮತ್ತು ಶಾಕ್ತರು ತಾರತಮ್ಯಗಳಿಲ್ಲದ ನಿಸರ್ಗದ ಸೂತ್ರಗಳಿಗೆ ತೀರಾ ಎದುರಾಗದೆ ಬದುಕುವ ಕ್ರಮವನ್ನು ಪ್ರತಿಪಾದಿಸುತ್ತವೆ. ಸೂಫಿ ಮತ್ತು ಗುರು ಪಂಥಗಳು ಸಂಕರ ಮತ್ತು ಜ್ಞಾನ ತತ್ವವನ್ನು ಪ್ರತಿಪಾದಿಸುತ್ತವೆ ಎಂಬ ಸಂಗತಿಗಳನ್ನು ತರೀಕೆರೆಯವರು ಲೋಕದ ವಿವರಗಳ ರೂಪದಲ್ಲಿ ಮಂಡಿಸಿದ್ದಾರೆ. ಇವು ಹೊಸ ಅಧ್ಯಯನಕಾರರಿಗೆ ಪ್ರಮುಖ ಆಕರರೂಪಿ ಸಂಪನ್ಮೂಲಗಳಾಗಿವೆ. ನಮ್ಮ ಹೊಸ ತಲೆಮಾರಿನ ಸಂಶೋಧಕರಾದರೂ ಇವುಗಳ ಕುರಿತು ಚಿಂತನೆ ನಡೆಸಿ ಕನ್ನಡದ ವಿದ್ವತ್ ಪರಂಪರೆಯನ್ನು ಮುನ್ನಡೆಸಬೇಕಾದ ಅನಿವಾರ್ಯತೆಯನ್ನು ಆಧುನಿಕ ಸಂದರ್ಭವು ತಂದೊಡ್ಡಿದೆ.
(ಮುಗಿಯಿತು)