‘ಬೇಗಂಪುರ’ ಯುಟೋಪಿಯಾದ ಹುಡುಕಾಟವನ್ನು ನಿಲ್ಲಿಸಿದ ಗೇಲ್ ಓಮ್‌ವೆಡ್

Update: 2021-08-31 06:31 GMT

ಜನಪರ ಹೋರಾಟಗಳಿಂದ ಗಳಿಸಿದ ಅನುಭವಗಳನ್ನು ತಮ್ಮ ಕೃತಿಗಳ ರಚನೆಗೆ ಧಾರೆ ಎರೆದ ಗೇಲ್ ಅವರು ತಮ್ಮ ಸಂಶೋಧನೆ ಮತ್ತು ಅಧ್ಯಯನದ ಮೂಲಕ ದಕ್ಕಿದ ಚಿಂತನೆಗಳನ್ನು ಬಳಸಿಕೊಂಡು ಹೋರಾಟಗಳನ್ನು ಕಟ್ಟಿದರು. ಅಪರೂಪದಲ್ಲಿ ಅಪರೂಪದ ‘ಚಿಂತಕಿ-ಹೋರಾಟಗಾರ್ತಿ’ಯಾಗಿದ್ದರು. ರೈತ ಚಳವಳಿಯ ಸಂದರ್ಭದಲ್ಲಿ ಮಹಿಳೆ ಮತ್ತು ಕೃಷಿ ಕುರಿತು ವಿಭಿನ್ನ ದೃಷ್ಟಿಕೋನದ ಮೂಲಕ ವಿಚಾರಗಳ ನಡುವಿನ ಯುದ್ಧಗಳನ್ನೂ ಹುಟ್ಟು ಹಾಕಿದ್ದು ವಿಶೇಷವಾಗಿತ್ತು. ಅಂಬೇಡ್ಕರ್ ಅವರ ಬದುಕು ಮತ್ತು ದೃಷ್ಟಿಕೋನವನ್ನು ಕರಾರುವಕ್ಕಾಗಿ ಗ್ರಹಿಸಿದ್ದ ಗೇಲ್ ನಿಜದ ಅಂಬೇಡ್ಕರ್‌ವಾದಿಯಾಗಿದ್ದರು.

ಲೋಕ ಚಿಂತಕಿ, ಫುಲೆ-ಅಂಬೇಡ್ಕರ್ ಘರಾಣದ ಸಮಾಜಶಾಸ್ತ್ರಜ್ಞೆ, ಸಾಮಾಜಿಕ ಕಾರ್ಯಕರ್ತೆ ಗೇಲ್‌ ಓಮ್‌ವೆಡ್ ಆಗಸ್ಟ್ 25, 2021ರಂದು ತಮ್ಮ 81ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಸೆಗಾಂ ಗ್ರಾಮದಲ್ಲಿ ನಿಧನರಾದರು. ಜಾತಿ ಅಧ್ಯಯನ ಮತ್ತು ಜಾತಿ ವಿರೋಧಿ ಚಳವಳಿಗಳ ಕುರಿತು ಮಹತ್ವದ ಚಿಂತಕಿಯಾಗಿದ್ದ ಗೇಲ್ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು. ಚಿಂತನೆ-ಹೋರಾಟ ಎರಡನ್ನೂ ಬೆಸೆದು ಫುಲೆ-ಅಂಬೇಡ್ಕರ್ ಶಾಲೆಯನ್ನು ಕಟ್ಟಿದರು. ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದ ಗೇಲ್ ಮಹಿಳಾ ಚಳವಳಿಗೆ ಜಾತಿ ಪ್ರಶ್ನೆಯನ್ನು ಜೋಡಿಸಿದರು ಮತ್ತು ಸ್ತ್ರೀವಾದಿ ಹೋರಾಟವು ವರ್ಗ-ಜಾತಿ ಪ್ರತ್ಯೇಕಿಸಿ ಹೆಜ್ಜೆ ಇಡಲು ಸಾಧ್ಯವಿಲ್ಲ ಎಂದು ದೃಢವಾಗಿ ನಂಬಿದ್ದರು. ಇಂದು ನಮ್ಮ ನಡುವಿನ ಜಾತಿ ವಿರೋಧಿ ಚಿಂತಕಿ, ಸಂಶೋಧಕಿ, ಸಾಮಾಜಿಕ ಕಾರ್ಯಕರ್ತೆಯನ್ನು, ಮಾನವತಾವಾದಿಯನ್ನು ಕಳೆದುಕೊಂಡಿದ್ದೇವೆ. ಅಂಬೇಡ್ಕರ್ ನಂತರ ಜಾತಿ ವಿಷಯದ ಮೇಲೆ ಅತ್ಯಂತ ವಿಮರ್ಶಾತ್ಮಕವಾಗಿ ಚಿಂತಿಸಿ, ಬರೆದವರು ಗೇಲ್ ಎನ್ನುವುದು ನನ್ನ ದೃಢ ನಂಬಿಕೆ.

 ಎಂಭತ್ತು, ತೊಂಭತ್ತರ ದಶಕದ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದವರಿಗೆ, ಜಾತಿ ವಿರೋಧಿ ಚಿಂತನೆಗಳನ್ನು ರೂಪಿಸುವಲ್ಲಿ ತಡಕಾಡುತ್ತಿದ್ದ ಚಿಂತಕರಿಗೆ ಗೇಲ್ ಓಮ್‌ವೆಡ್ ಮತ್ತು ಎಲಿನಾರ್ ಜೆಲಿಯೆಟ್ ಹೆಸರುಗಳು ಚಿರಪರಿಚಿತವಾಗಿದ್ದವು. ಇವರು ಇಲ್ಲಿನ ಮಣ್ಣಿನ ಎಲ್ಲಾ ಗುಣಗಳನ್ನು ಅರಿತುಕೊಂಡಿದ್ದು, ಗ್ರಹಿಸಿದ್ದು, ತಮ್ಮ ಪ್ರಜ್ಞೆಯೊಳಗಿನ ಭಾಗವಾಗಿಸಿಕೊಂಡಿದ್ದು ಮತ್ತು ಅದಕ್ಕೆ ಅಗತ್ಯವಾದ ಸಂವೇದನೆ ರೂಪಿಸಿಕೊಂಡಿದ್ದು ಅನನ್ಯವಾಗಿದೆ. ಆಗಸ್ಟ್ 2, 1941ರಲ್ಲಿ ಅಮೆರಿಕದ ಮಿನ್ನಿಪೊಲಿಸ್‌ನಲ್ಲಿ ಜನಿಸಿದ ಗೇಲ್ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಪದವಿ ಪಡೆದುಕೊಂಡರು. 1963ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದರು. ನಂತರ ಎಪ್ಪತ್ತರ ದಶಕದ ಆರಂಭದ ವರ್ಷಗಳಲ್ಲಿ ಮರಳಿ ಭಾರತಕ್ಕೆ ಬಂದ ಗೇಲ್ ‘ವಸಾಹತು ಸಮಾಜದಲ್ಲಿ ಸಾಂಸ್ಕೃತಿಕ ಬಂಡಾಯ: ಪಶ್ಚಿಮ ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳವಳಿ, 1873-1930’ ಎನ್ನುವ ವಿಷಯದ ಮೇಲೆ ಪಿಎಚ್.ಡಿ. ಪ್ರಬಂಧ ಪ್ರಕಟಿಸಿದರು. ಫುಲೆವಾದಿ, ಮಾರ್ಕ್ಸಿಸ್ಟ್ ಭರತ್ ಪಟಂಕರ್ ಜೊತೆ ಮದುವೆಯಾದರು ಮತ್ತು ಮಹಾರಾಷ್ಟ್ರದಲ್ಲಿಯೇ ನೆಲೆಸಿದರು. 1983ರಲ್ಲಿ ಭಾರತದ ಪೌರತ್ವ ಪಡೆದುಕೊಂಡರು. ಪಟಂಕರ್ ಜೊತೆಗೂಡಿ ‘ಶ್ರಮಿಕ್ ಮುಕ್ತಿ ದಳ’ ಸಂಘಟನೆಯನ್ನು ಕಟ್ಟಿದರು. ಮಹಿಳೆಯ ಭೂಮಿ ಹಕ್ಕುಗಳು ಮತ್ತು ರಾಜಕೀಯ ಅಧಿಕಾರದ ಪರವಾಗಿ ಹೋರಾಟ ಕಟ್ಟಿದ ‘ಶೇತ್ಕರಿ ಮಹಿಳಾ ಅಗಾಡಿ’ಯ ಸಕ್ರಿಯ ಸದಸ್ಯರಾಗಿದ್ದರು. ಸಾಮಾಜಿಕ ನ್ಯಾಯ, ಜಾತಿ ವಿರೋಧಿ ಚಳವಳಿ, ಗ್ರಾಮೀಣ ಮಹಿಳೆಯರ ಸಂಘಟನೆಯನ್ನೊಳಗೊಂಡ ರೈತ ಚಳವಳಿಯಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದ ಗೇಲ್ ಅವರು ಆ ಚಳವಳಿಗಳಿಗೆ ಫುಲೆ-ಅಂಬೇಡ್ಕರ್ ಕಾಣ್ಕೆಯನ್ನು ತಂದುಕೊಟ್ಟಿದ್ದು ಬೆರಗು ಹುಟ್ಟಿಸುತ್ತದೆ.

 ಮಲ್ಲೆಪಲ್ಲಿ ಲಕ್ಷ್ಮಯ್ಯ ಅವರು ‘‘1930ರ ದಶಕದ ಹೊತ್ತಿಗೆ ಜಾತಿ ವಿರೋಧಿ, ಬ್ರಾಹ್ಮಣೇತರ ಚಳವಳಿಯಲ್ಲಿ ಭಾಗವಹಿಸಿದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡ ಕಾರಣಕ್ಕೆ ಪಶ್ಚಿಮ ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳವಳಿಯು ಮಸುಕಾಗತೊಡಗಿತು ಎಂದು ಹೇಳಿದ ಗೇಲ್, ಆದರೆ ಈ ಬ್ರಾಹ್ಮಣೇತರ ಚಳವಳಿಯು ಒಂದು ಗಟ್ಟಿಯಾದ ಪರಂಪರೆಯನ್ನು ಉಳಿಸಿ ಹೋಗಿದೆ ಎಂದೂ ಅಭಿಪ್ರಾಯ ಪಡುತ್ತಾರೆ’’ ಎಂದು ಬರೆಯುತ್ತಾರೆ. ಅಂಬೇಡ್ಕರ್‌ವಾದಿ ಪೂರ್ವ ಕಾಲಘಟ್ಟವಾದ 1900 ರಿಂದ 1930ರ ಅವಧಿಯಲ್ಲಿನ ದಲಿತ ಚಳವಳಿಯನ್ನು ಅಧ್ಯಯನ ಮಾಡುವ ಗೇಲ್ ಮುಂದುವರಿದು 1930ರಿಂದ 1942ರ ಕಾಲದ ಪ್ರಜಾಪ್ರಭುತ್ವವಾದಿ ಚಳವಳಿ ಮತ್ತು ಗಾಂಧಿ, ಅಂಬೇಡ್ಕರ್, ಮಾರ್ಕ್ಸ್‌ವಾದಿಗಳ ಕುರಿತು ಸಂಶೋಧನೆ ನಡೆಸುತ್ತಾರೆ. ಬ್ರಾಹ್ಮಣೇತರ ಚಳವಳಿಯ ನಂತರ ರೂಪು ಗೊಂಡ ಜಾತಿ ವಿರೋಧಿ, ಅಸ್ಪಶ್ಯತೆ ವಿರೋಧಿ ಚಳವಳಿಗಳ ಕುರಿತು ಅಧ್ಯಯನ ಮಾಡುತ್ತಾರೆ.

 ಗೇಲ್ ಒಬ್ಬ ಲೋಕ ಚಿಂತಕಿಯಾಗಿದ್ದರು. ಭಾರತದ ಶ್ರೇಣೀಕೃತ ಜಾತಿ ಸಮಾಜವನ್ನು ಅದರ ಸಂಕೀರ್ಣತೆಯನ್ನು ತಳಮಟ್ಟದಲ್ಲಿ ಅಧ್ಯಯನ ನಡೆಸಿದರು. ಅವರು “Cultural Revolt in a Colonial Society: The Non-Brahman Movement in Maharashtra”, “Reinventing Revolution: New Social Movements in India”, “Dalit Visions: the Anti caste movement and Indian Cultural Identity”, “Ambedkar: Towards an Enlightened India”, “Jotirao Phule and the Ideology of Social Revolution in India”, Dalits and the Democratic Revolution: Dr. Ambedkar and the Dalit Movement in Colonial India,. Buddhism in India: Challenging Brahmanism and Caste ಗಳನ್ನು ಒಳಗೊಂಡಂತೆ ಸುಮಾರು 25ಕ್ಕೂ ಅಧಿಕ ಜಾತಿ ವ್ಯವಸ್ಥೆಯ ಪ್ರತ್ಯೇಕತೆ, ತಾರತಮ್ಯದ ಆಳವಾದ ಒಳನೋಟಗಳನ್ನುಳ್ಳ, ಮಹಿಳಾ ಚಳವಳಿ, ಫುಲೆ ಮತ್ತು ಸತ್ಯಶೋಧಕ ಸಮಾಜ, ಅಂಬೇಡ್ಕರ್ ಕಾಣ್ಕೆ ಮತ್ತು ಬಹುಜನ ರಾಜಕಾರಣ, ಮಹಾರಾಷ್ಟ್ರದ ಬ್ರಾಹ್ಮಣೇತರ ಚಳವಳಿ, ದಲಿತ ವಿಶನ್, ಭಾರತೀಯರ ಯುಟೋಪಿಯನ್ ಚಿಂತನೆ ಮುಂತಾದ ವ್ಯಾಪಕವಾದ ಹರಹುಗಳನ್ನುಳ್ಳ ವಿಷಯಗಳ ಕುರಿತು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಬುದ್ಧಿಸಂನ ಜಾತಿ ವಿರೋಧಿ ದೃಷ್ಟಿಕೋನ, ಪ್ರಜ್ಞೆಯ ಮೂಲಕ ಬ್ರಾಹ್ಮಣ್ಯದ ಪುರೋಹಿತಶಾಹಿಯನ್ನು ವಿವರಿಸಿದ್ದಾರೆ. ತುಕಾರಾಂ ಮತ್ತು ಭಕ್ತಿ ಪಂಥದ ಕುರಿತು ನಡೆಸಿದ ಸಂಶೋಧನೆ ಸಹ ಕುತೂಹಲಕಾರಿಯಾಗಿದೆ. ‘We Shall Smash This Prison: Indian Women in Struggle’ ಪುಸ್ತಕವು ಮಹಿಳಾ ಚಳವಳಿಯ ಎಲ್ಲಾ ಮಗ್ಗಲುಗಳನ್ನು ಶೋಧಿಸುತ್ತದೆ ಮತ್ತು ಲಿಂಗ, ಬಡತನ, ಜಾತಿಗಳ ಕಾರಣಕ್ಕೆ ಸಂತ್ರಸ್ತೆಯಾಗಿರುವ ದಲಿತ ಮಹಿಳೆಯ ಸಾಮಾಜಿಕ ಭದ್ರತೆ ಕುರಿತು ನಿರ್ವಚಿಸುತ್ತಾರೆ. ಕೃಷಿ ಆರ್ಥಿಕತೆ ಮತ್ತು ಬಿಕ್ಕಟ್ಟು, ಜಾತಿ ಮತ್ತು ವರ್ಗ ಸಂಘರ್ಷಗಳ ಆ ಜಟಿಲತೆ ಮತ್ತು ಘನೀಕರಣಗೊಂಡ ಸ್ವಭಾವಗಳ ಕುರಿತು ಬರೆದಿದ್ದಾರೆ.

 ಜನಪರ ಹೋರಾಟಗಳಿಂದ ಗಳಿಸಿದ ಅನುಭವಗಳನ್ನು ತಮ್ಮ ಕೃತಿಗಳ ರಚನೆಗೆ ಧಾರೆ ಎರೆದ ಗೇಲ್ ಅವರು ತಮ್ಮ ಸಂಶೋಧನೆ ಮತ್ತು ಅಧ್ಯಯನದ ಮೂಲಕ ದಕ್ಕಿದ ಚಿಂತನೆಗಳನ್ನು ಬಳಸಿಕೊಂಡು ಹೋರಾಟಗಳನ್ನು ಕಟ್ಟಿದರು. ಅಪರೂಪದಲ್ಲಿ ಅಪರೂಪದ ‘ಚಿಂತಕಿ-ಹೋರಾಟಗಾರ್ತಿ’ಯಾಗಿದ್ದರು. ರೈತ ಚಳವಳಿಯ ಸಂದರ್ಭದಲ್ಲಿ ಮಹಿಳೆ ಮತ್ತು ಕೃಷಿ ಕುರಿತು ವಿಭಿನ್ನ ದೃಷ್ಟಿಕೋನದ ಮೂಲಕ ವಿಚಾರಗಳ ನಡುವಿನ ಯುದ್ಧಗಳನ್ನೂ ಹುಟ್ಟು ಹಾಕಿದ್ದು ವಿಶೇಷವಾಗಿತ್ತು. ಅಂಬೇಡ್ಕರ್ ಅವರ ಬದುಕು ಮತ್ತು ದೃಷ್ಟಿಕೋನವನ್ನು ಕರಾರುವಕ್ಕಾಗಿ ಗ್ರಹಿಸಿದ್ದ ಗೇಲ್ ನಿಜದ ಅಂಬೇಡ್ಕರ್‌ವಾದಿಯಾಗಿದ್ದರು. ಅಂಬೇಡ್ಕರ್ ಅಧ್ಯಯನದ ಮೂಲಕ ಗಳಿಸಿದ ಅರಿವು ಮತ್ತು ಪ್ರಜ್ಞೆಯ ಮೂಲಕ ದಲಿತ ಚಳವಳಿಗಳು ಸವೆಸಬೇಕಾದ ಹಾದಿ ಮತ್ತು ಕಟ್ಟಿಕೊಳ್ಳಬೇಕಾದ ಮಾರ್ಗ ಕುರಿತು ನೀಲನಕ್ಷೆಯನ್ನೇ ಬಿಡಿಸಿಟ್ಟರು. ಕ್ರಾಂತಿ ಕುರಿತು ಮಾತನಾಡುವವರಿಗೆ ‘ದಲಿತರು ಮತ್ತು ಪ್ರಜಾತಾಂತ್ರಿಕ ಕ್ರಾಂತಿ’ ಚಿಂತನೆಗಳ ಮೂಲಕ ವಸಾಹತುಶಾಹಿ ಕಾಲಘಟ್ಟದಿಂದ ವಸಾಹತೋತ್ತರ ಕಾಲದ ವರೆಗಿನ ನಡೆದು ಬಂದ Dalit assertion ಹೋರಾಟದ ಕಥನಗಳನ್ನು ನಿಜವಾದ ಕ್ರಾಂತಿ ಎಂದು ಎಳೆ ಎಳೆಯಾಗಿ ವಿವರಿಸಿದ್ದರು. ಮಹಾತ್ಮಾ ಫುಲೆ ಮತ್ತು ಸತ್ಯಶೋಧಕ ಸಮಾಜದ ಮೇಲಿನ ಅವರ ಬರಹಗಳು ನಮ್ಮ ಕಾಲದ ಶ್ರೇಷ್ಠ ಚಿಂತನೆಗಳು. ಎಲ್ಲಾ ಕಾಲಕ್ಕೂ ಪ್ರಸ್ತುತವಾದ ಅಕರಗಳು.

 ಭಾರತದ ಎರಡು ಮುಖ್ಯ ಸಾಮಾಜಿಕ ಚಳವಳಿಗಳಾದ ಜಾತಿ ವಿರೋಧಿ ಚಳವಳಿ ಮತ್ತು ಪರಿಸರ ಚಳವಳಿ ಪರಸ್ಪರ ಅಪರಿಚಿತವಾಗಿ ಉಳಿದುಕೊಂಡಿರು ವುದರ ಕುರಿತು ದೀರ್ಘವಾಗಿ ಬರೆಯುತ್ತಾರೆ ಮತ್ತು ಅರುಂಧತಿ ರಾಯ್‌ಗೆ ಬಹಿರಂಗ ಪತ್ರವನ್ನೂ ಬರೆಯುತ್ತಾರೆ. ‘‘ಮೇಲ್ಜಾತಿಗಳು ಮುನ್ನಡೆಸುತ್ತಿರುವ ಪರಿಸರದ ಚಳವಳಿಯಲ್ಲಿ ಆದಿವಾಸಿ ನಾಯಕ/ನಾಯಕರಿಲ್ಲ. ಆದರೆ ಅಸ್ಮಿತೆ ಮತ್ತು ನಾಯಕತ್ವದ ಪ್ರಶ್ನೆಗಳು ಜಾತಿ ವಿರೋಧಿ ಚಳವಳಿಯ ಮುಖ್ಯ ಪ್ರಣಾಳಿಕೆಗಳು’’ ಎನ್ನುತ್ತಾರೆ.

 ಇಸ್ಲಾಂ ಭ್ರಾತೃತ್ವದ, ಸಮತಾವಾದದ ಆಶಯಗಳನ್ನುಳ್ಳ ಧರ್ಮ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಗೇಲ್ ಬುದ್ಧ್ದಿಸಂನ ಸೋಲಿನ ನಂತರ ಭಾರತದಲ್ಲಿ ಈ ಮೌಲ್ಯಗಳನ್ನು ಉಳಿಸಿಕೊಂಡು ಬಂದಿರುವುದು ಈ ಧರ್ಮ ಮಾತ್ರ. ವಸಾಹತುಶಾಹಿ ಕಾಲದಲ್ಲಿ ದಲಿತರು ಮತ್ತು ಮುಸ್ಲಿಮರು ಒಡನಾಡಿಗಳಾಗಿದ್ದರು. ಇವರಿಬ್ಬರಿಗೂ ಬ್ರಾಹ್ಮಿನಿಸಂ ಎನ್ನುವ ಸಾಮಾನ್ಯ ಶತ್ರುವಿರುವುದು ಸಹ ಇದಕ್ಕೆ ಕಾರಣ. ಆದರೆ ದಲಿತರು ತಮ್ಮನ್ನು ಹಿಂದೂ ಅಥವಾ ಮುಸ್ಲಿಂ ಎಂದು ಗುರುತಿಸಿಕೊಳ್ಳಲು ಬಯಸುವುದಿಲ್ಲ ಎನ್ನುತ್ತಾರೆ.

 2009ರಲ್ಲಿ ಪ್ರಕಟಗೊಂಡ ‘Seeking Begumpura: The Social Vision of Anticaste Intellectuals’ ಪುಸ್ತಕದಿಂದ ಬ್ರಿಟಿಷ್ ವಸಾಹತುಶಾಹಿ ಮತ್ತು ಭಾರತದ ಸಂಪ್ರದಾಯವಾದಿಗಳಿಂದ ಕಡೆಗಣಿಸಲ್ಪಟ್ಟ, ಮುಖ್ಯವಾಹಿನಿಯಲ್ಲಿ ಪ್ರಕಟಗೊಳ್ಳದ ಸಬಲ್ಟ್ರಾನ್ ಇತಿಹಾಸವನ್ನು ನಮಗೆ ಪರಿಚಯಿಸುತ್ತಾರೆ. ಜಾತಿರಹಿತ ಸಮಾಜದ ಮಾದರಿಗಳನ್ನು ಕಟ್ಟುತ್ತಾರೆೆ. ಜಾತಿ ವಿರೋಧಿ ಚಿಂತಕರನ್ನು ನಮಗೆ ಹೊಸ ಒಳನೋಟದೊಂದಿಗೆ ವಿವರಿಸುವ ಗೇಲ್, ಸಬಲ್ಟ್ರಾನ್ ಸಂಸ್ಕೃತಿಯನ್ನು ತಮ್ಮಾಳಗೆ ಜೀರ್ಣಿಸಿಕೊಂಡ ಇಲ್ಲಿನ ಎಲೈಟ್ ವರ್ಗದ ವಂಚನೆಯ ಕುರಿತು ವಿವರಿಸುತ್ತಾರೆ. ಪೌರಾತ್ಯವಾದವನ್ನು ಮತ್ತು ಹಿಂದುತ್ವದ ರಾಷ್ಟ್ರೀಯತೆಯನ್ನು ತಿರಸ್ಕರಿಸುವ ಗೇಲ್ 12-13ನೇ ಶತಮಾನದ ಭಕ್ತಿ ಪಂಥದ ಕವಿ ನಾಮದೇವ್‌ನಿಂದ 20ನೇ ಶತಮಾನದ ಅಂಬೇಡ್ಕರ್‌ವರೆಗೆ ಸಬಲ್ಟ್ರಾನ್ ಕಾಣ್ಕೆಗಳನ್ನು ಹೆಣೆಯುತ್ತಾರೆ. ಈ ಪುಸ್ತಕದ ಅಂತಿಮ ಅಧ್ಯಾಯದಲ್ಲಿ ಗೇಲ್ ‘‘ಕಾಲ್ಪನಿಕ ವೇದದ ಸುವರ್ಣಯುಗದಲ್ಲಿ ಇರಬಹುದು ಎನ್ನಲಾದ ಗತಕಾಲದ ಮೌಲ್ಯಗಳನ್ನು ಪುನರಸ್ಥಾಪಿಸಲು ಅನುಕೂಲಸ್ಥ, ಎಲೈಟ್ ಜಾತಿಗಳು ಯಾಜಮಾನಕೀಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಬಯಸದೆ ವರ್ಣಾಶ್ರಮ ಧರ್ಮವನ್ನು ಆದರ್ಶೀಕರಿಸಿಕೊಳ್ಳುತ್ತಾರೆ. ಸಬಲ್ಟ್ರಾನ್ ಚಿಂತಕರು ಸಮಾನತೆ ಮತ್ತು ಐಕ್ಯತೆಯ ‘ರಾಜಕೀಯ ರಾಷ್ಟ್ರೀಯವಾದ’ವನ್ನು ತಾಣವಾಗಿ ಬಳಸಿಕೊಳ್ಳುತ್ತಾರೆ’’ ಎಂದು ಬರೆಯುತ್ತಾರೆ.

 ಭಾರತೀಯ ಯುಟೋಪಿಯಾವನ್ನು ಊಹಾತ್ಮಕವಾಗಿ ಕಲ್ಪಿಸಿಕೊಂಡ ಭಕ್ತಿ ಚಳವಳಿಯ ಸಂತ, ಕವಿ ರವಿದಾಸ್ ಜಾತಿ ಮತ್ತು ವರ್ಗವಿಲ್ಲದ, ಸೌಹಾರ್ದದಲ್ಲಿ ಬದುಕುತ್ತಿರುವ ಬೇಗಂಪುರ ಎನ್ನುವ ಕಾಲ್ಪನಿಕ ನಗರದ ಕುರಿತು ಮಾತನಾಡುತ್ತಾನೆ. ಈ ಬೇಗಂಪುರ ದುಃಖವಿಲ್ಲದ, ಜಾತಿರಹಿತ, ವರ್ಗರಹಿತ ಸಮಾಜ. ಇಲ್ಲಿ ದೇವಸ್ಥಾನಗಳ ಪ್ರಸ್ತಾಪವಿಲ್ಲ. ತೆರಿಗೆಗಳಿಲ್ಲ, ದೌರ್ಜನ್ಯವಿಲ್ಲ. ಕಲಿಯುಗದ ಬ್ರಾಹ್ಮಣ್ಯಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿರುವ ಈ ‘ಬೇಗಂಪುರ ಯುಟೋಪಿಯಾ’ವನ್ನು ಕೇಂದ್ರ ಆಧಾರವನ್ನಾಗಿಟ್ಟುಕೊಳ್ಳುವ ಗೇಲ್ ಅವರು ಐದು ಶತಮಾನಗಳ ಅವಧಿಯಲ್ಲಿ ಮಧ್ಯಕಾಲೀನ ಭಾರತದ ತಲಸ್ಪರ್ಶಿ ಭಕ್ತಿ ಚಳವಳಿಯ ಸಂತರಾದ ನಾಮದೇವ್, ರವಿದಾಸ್, ಚೋಕಮೇಲಾ, ಜನಾಭಾಯಿ, ನಿರ್ಮಲಾ, ಸೋಯ್ರಿ, ಬಂಕ, ಗೋರ ಕುಂಬಾರ, ಕಬೀರ ಮತ್ತು ತುಕಾರಾಂ ಕುರಿತು ಮೊದಲಿನ ನಾಲ್ಕು ಅಧ್ಯಾಯಗಳಲ್ಲಿ ವಿವರಿಸಿದ್ದಾರೆ. ಆನಂತರ ವಸಾಹತುಶಾಹಿಯ ಆರಂಭದ ಕಾಲಘಟ್ಟದ ಚಿಂತಕರಾದ ಫುಲೆ, ರಾಮಾಬಾಯಿ, ಪಂಡಿತ ರಮಾಬಾಯಿ, ಅಯೋತಿ ದಾಸ್‌ರ ಅಧ್ಯಾಯಗಳು ನಂತರ ವಿಮೋಚಕರ ಚಿಂತನೆ ಮತ್ತು ಸಂಘಟನೆಗೆ ತಾರ್ಕಿಕ ಅಂತ್ಯವನ್ನು ಕಟ್ಟಿಕೊಟ್ಟ ಪೆರಿಯಾರ್ ಮತ್ತು ಅಂಬೇಡ್ಕರ್‌ರಂತಹ ಸಬಲ್ಟ್ರಾನ್ ಚಿಂತಕರು ರೂಪಿಸಿದ ಯುಟೋಪಿಯಾ ಕುರಿತು ಬರೆಯುತ್ತಾ ಹೋಗುತ್ತಾರೆ. ಗೇಲ್ ಅವರು ‘‘ಕಾರಣ ಮತ್ತು ಭಾವಪರವಶತೆ, ಧ್ಯಾನ ಮತ್ತು ಭಕ್ತಿ ಅಥವಾ ಭಾವ’’ ನನ್ನ ಈ ಪುಸ್ತಕದ ಮುಖ್ಯ ವಿಷಯವಸ್ತು ಎನ್ನುತ್ತಾರೆ. ಆಧುನಿಕ ಜಗತ್ತಿನಲ್ಲಿ ಈ ಯುಟೋಪಿಯಾ ಕಾರಣ ಮತ್ತು ಭಾವಪರವಶತೆಯನ್ನು ಬೆಸೆಯುತ್ತದೆ, ಒಂದಾಗಿಸುತ್ತದೆ.

 ಯುಟೋಪಿಯಾ ವಾಸ್ತವದಲ್ಲಿ ಬೇರು ಬಿಟ್ಟಿರುತ್ತದೆ ಮತ್ತು ನೂರಾರು ಟೊಂಗೆಗಳಲ್ಲಿ ಟಿಸಿಲೊಡೆದು ಮುಗಿಲೆತ್ತರಕ್ಕೆ ಕೈ ಚಾಚುತ್ತಿರುತ್ತದೆ. ಆದರೆ ಇದು ಫ್ಯಾಂಟಸಿಯಲ್ಲ. ಏಕೆಂದರೆ ವಾಸ್ತವದ ಕ್ರೌರ್ಯ ಮತ್ತು ಕುರೂಪವನ್ನು ಟೀಕಿಸುತ್ತಿರುತ್ತದೆ ಮತ್ತು ಅದರಿಂದ ಬಿಡುಗಡೆ ಬಯಸುತ್ತಿರುತ್ತದೆ ಮತ್ತು ಈ ವಿಮೋಚನೆಯ ಆಶಯವೇ ಯುಟೋಪಿಯಾ. ಇದರ ನೆಲೆಯಲ್ಲಿ ಭಾರತದ ಚಿಂತಕರ, ವಿಮೋಚಕರ ಜಾತಿ ವಿರೋಧಿ ದೃಷ್ಟಿಕೋನ ಮತ್ತು ಬದುಕಿನ ಕಾಣ್ಕೆ ಹಾಗೂ ದರ್ಶನದ ಎಲ್ಲಾ ಒಳನೋಟಗಳನ್ನು ಕಾಣಿಸಿಕೊಡುವ ‘Seeking Begumpura’ ಪುಸ್ತಕ ನಮ್ಮ ಕಾಲದ ಅತ್ಯಂತ ಮಹತ್ವದ ಕೃತಿ. ಕೈಮರ, ಬುಡ್ಡಿದೀಪ.

 ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ‘ಸ್ತ್ರೀವಾದಿ ಸಂವಾದ’ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತ ಗೇಲ್, ‘‘ಗಾಂಧಿಯನ್ ಮಾದರಿ ಮದುವೆಗಳಲ್ಲಿ ಸರಳತೆ, ಸ್ವದೇಶಿ ಸಿದ್ಧಾಂತ ಮತ್ತು ವರದಕ್ಷಿಣೆ ವಿರೋಧಿ ನೀತಿಗಳಿರುತ್ತವೆ, ಆದರೆ ಸತ್ಯಶೋಧಕ ಮಾದರಿ ಮದುವೆಗಳಲ್ಲಿ ಜಾತಿ ವಿರೋಧಿ ಸಿದ್ಧಾಂತ, ಮಹಿಳಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಪರವಾದ ಬದ್ಧತೆಗಳಿರುತ್ತವೆ’’ ಎಂದು ಹೇಳಿದ್ದರು. ಇದು ಗೇಲ್ ಅವರ ‘ಬೇಗಂಪುರ’ ಯುಟೋಪಿಯಾ. ನಮ್ಮೆಲ್ಲರದ್ದು ಸಹ.

 ಜಾತಿ ವಿರೋಧಿ ಸಮಾಜದಲ್ಲಿ ನಂಬಿಕೆ ಇರುವವರು ಗೇಲ್ ಅವರ ಎಲ್ಲಾ ಬರಹಗಳನ್ನು ಓದಬೇಕು. ಅವರ ಚಿಂತನೆಗಳ ಜೊತೆ ಹೆಣೆದುಕೊಳ್ಳಬೇಕು. ನಂತರ ವಷ್ಟೇ ಗೇಲ್ ನಮ್ಮ ಮೇಲೆ ಹೊರಿಸಿರುವ ‘ಬೇಗಂಪುರ’ ಯುಟೋಪಿಯಾದ ಸಾಕ್ಷಾತ್ಕಾರಗೊಳಿಸುವ ಗುರುತರವಾದ ಜವಾಬ್ದಾರಿ ನಿಭಾಯಿಸುವ ಧೈರ್ಯ ಪ್ರದರ್ಶಿಸಬಹುದು.

ಜೈ ಭೀಮ್ ಕಾಮ್ರೇಡ್

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News