ನ್ಯಾಯಮೂರ್ತಿ ಅಶೋಕ್ ಇಕ್ಬಾಲ್ ಚೀಮಾ ಅವರ ಅಕಾಲಿಕ ನಿವೃತ್ತಿ ವಿವಾದಕ್ಕೆ ಸುಪ್ರೀಂಕೋರ್ಟ್ ನಲ್ಲಿ ತೆರೆ
ಹೊಸದಿಲ್ಲಿ: ಕೇಂದ್ರ ಸರಕಾರವು ಎನ್‌ಸಿಎಲ್‌ಎಟಿ ಮಾಜಿ ಅಧ್ಯಕ್ಷ ನ್ಯಾಯಮೂರ್ತಿ ಅಶೋಕ್ ಇಕ್ಬಾಲ್ ಸಿಂಗ್ ಚೀಮಾ ಅವರನ್ನು ಸೆಪ್ಟೆಂಬರ್ 20 ರವರೆಗೆ ಕಚೇರಿಯಲ್ಲಿ ಮುಂದುವರಿಯಲು ಅನುಮತಿ ನೀಡುವ ಮೂಲಕ ಚೀಮಾ ಅವರ ಅಕಾಲಿಕ ನಿವೃತ್ತಿಯ ವಿವಾದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ತೆರೆಬಿದ್ದಿದೆ.
ನ್ಯಾಶನಲ್ ಕಂಪನಿ ಲಾ ಮೇಲ್ಮನವಿ ನ್ಯಾಯಾಧಿಕರಣದ (ಎನ್‌ಸಿಎಲ್‌ಎಟಿ) ಮಾಜಿ ಅಧ್ಯಕ್ಷರಾದ ನ್ಯಾಯಮೂರ್ತಿ ಚೀಮಾ ಅವರು ಸೆಪ್ಟೆಂಬರ್ 20 ರಂದು ಸೇವಾ ನಿವೃತ್ತಿಯಾಗಬೇಕಾಗಿತ್ತು. ಆದರೆ ಅವರ ನಿವೃತ್ತಿಯ ಮೊದಲೇ ನ್ಯಾಯಾಧೀಶರಾದ ಎಂ. ವೇಣುಗೋಪಾಲ್ ಅವರನ್ನು ಸೆಪ್ಟೆಂಬರ್ 11 ರಿಂದ ನ್ಯಾಯಾಂಗದ ಹಂಗಾಮಿ ಮುಖ್ಯಸ್ಥರಾಗಿ ನೇಮಿಸಲಾಯಿತು. ಚೀಮಾ ಅವರು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಕದ ತಟ್ಟಿದರು.
"ನಾನು ಸೂಚನೆಗಳನ್ನು ಪಡೆದುಕೊಂಡಿದ್ದೇನೆ. ಅವರು (ಚೀಮಾ) ತೀರ್ಪುಗಳನ್ನು ಬರೆಯಲು ರಜೆ ತೆಗೆದುಕೊಂಡರು ಎಂದು ಹೇಳಲಾಗಿದೆ. ಹಾಗಾಗಿ ನಾವು ಅವರಿಗೆ ಕಚೇರಿಗೆ ತೆರಳಿ ತೀರ್ಪು ನೀಡಲು ಅವಕಾಶ ನೀಡಲು ನಿರ್ಧರಿಸಿದ್ದೇವೆ. ಹಾಲಿ ಅಧ್ಯಕ್ಷ ನ್ಯಾಯಮೂರ್ತಿ ವೇಣುಗೋಪಾಲ್ ಅವರನ್ನು ರಜೆ ಮೇಲೆ ಕಳುಹಿಸಲಾಗುವುದು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.