ವಿವಾದಾತ್ಮಕ ಹೇಳಿಕೆ ನೀಡಿದ ಬಿಷಪ್ ವಿರುದ್ಧ ಕ್ರಮಕೈಗೊಳ್ಳುವ ಇರಾದೆಯಿಲ್ಲ ಎಂದ ಕೇರಳ ಸಿಎಂ ಪಿಣರಾಯಿ ವಿಜಯನ್
ತಿರುವನಂತಪುರಂ: ವಿವಾದಾತ್ಮಕ ‘ನಾರ್ಕಾಟಿಕ್ ಜಿಹಾದ್' ಹೇಳಿಕೆ ನೀಡಿದ್ದಕ್ಕಾಗಿ ಪಾಲ ಧರ್ಮಪ್ರಾಂತ್ಯದ ಬಿಷಪ್ ಜೋಸೆಫ್ ಕಲ್ಲರಂಗಟ್ಟ್ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಉದ್ದೇಶ ಕೇರಳ ಸರಕಾರಕ್ಕಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ರಾಜ್ಯದಲ್ಲಿ ವಿಭಜನಾತ್ಮಕ ಶಕ್ತಿಗಳಿದ್ದರೂ ಎಲ್ಲಾ ಸಮುದಾಯಗಳ ನಡುವೆ ಭ್ರಾತೃತ್ವ ಹಾಗೂ ಕೋಮು ಸೌಹಾರ್ದತೆ ಕಾಪಾಡುವುದು ಅಗತ್ಯ, ಯಾವುದೇ ಸಮಸ್ಯೆಯನ್ನು ಮಾತುಕತೆಗಳ ಮೂಲಕ ಇತ್ಯರ್ಥ ಪಡಿಸುವ ಉದ್ದೇಶವಿರಬೇಕು ಎಂದು ಅವರು ಹೇಳಿದರು.
ಬಿಷಪ್ ಅವರ ಹೇಳಿಕೆ ತಮ್ಮ ಸಮುದಾಯವನ್ನು ಡ್ರಗ್ಸ್ ಹಾವಳಿ ವಿರುದ್ಧ ಎಚ್ಚರಿಸುವುದು ಹಾಗೂ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸದಂತೆ ಮನವಿ ಮಾಡುವುದಾಗಿತ್ತು ಎಂದು ಅವರು ಹೇಳಿದರು.
‘ಮಾಫಿಯಾ’ ಅಥವಾ ‘ನಾರ್ಕಾಟಿಕ್ಸ್ ಮಾಫಿಯಾ’ ಎಲ್ಲರಿಗೂ ತಿಳಿದಿರುವ ಪದಗಳಾಗಿವೆ ಆದರೆ ಬಿಷಪ್ ಅವರು ತಾವು ‘ನಾರ್ಕಾಟಿಕ್ಸ್ ಜಿಹಾದ್’ ಬಗ್ಗೆ ಕೇಳಿಲ್ಲ ಎಂದಾಗ ಇಂತಹ ಚಟುವಟಿಕೆಗಳಿಗೆ ಮತೀಯ ಬಣ್ಣ ನೀಡಬಾರದೆಂದು ಹೇಳುವ ಉದ್ದೇಶ ಅವರದ್ದಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು.