ಮಂಗಳೂರು ಜಂಕ್ಷನ್‌ನಿಂದ ದಕ್ಕೆಗಿಲ್ಲ ಬಸ್ ಸಂಚಾರ!

Update: 2021-09-20 07:12 GMT

ಮಂಗಳೂರು, ಸೆ.20: ನಗರದ ಪಡೀಲ್ ಬಳಿಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮತ್ತು ನಗರದ ಬಂದರ್ ಮೀನುಗಾರಿಕೆ ದಕ್ಕೆಗೆ ಬಸ್ ಸಂಚಾರ ಆರಂಭಿಸಬೇಕು ಎಂಬ ಸಾರ್ವಜನಿಕರ ಆಗ್ರಹಕ್ಕೆ ಹಲವು ವರ್ಷಗಳು ಸಂದಿವೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡುತ್ತಿದ್ದಾರೆಯೇ ವಿನಃ ಅದಕ್ಕೆ ಇನ್ನೂ ಸ್ಪಂದಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಪಡೀಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ನಗರದ ಹ್ಯಾಮಿಲ್ಟನ್ ಸರ್ಕಲ್‌ಗೆ ಬಸ್ ಸೌಕರ್ಯವಿಲ್ಲ. ಹಾಗಾಗಿ ಸಾವಿರಾರು ಪ್ರಯಾಣಿಕರು ಬಾಡಿಗೆ ರಿಕ್ಷಾವನ್ನು ಆಶ್ರಯಿಸುತ್ತಿದ್ದು, ಇದರಿಂದ ಅನೇಕ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ.

ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಿಂದ ಸ್ಟೇಟ್‌ಬ್ಯಾಂಕ್-ಹ್ಯಾಮಿಲ್ಟನ್ ಸರ್ಕಲ್‌ಗೆ ಸುಮಾರು 5 ಕಿ.ಮೀ. ದೂರವಿದೆ. ಸದ್ಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹಗಲಿನ ವೇಳೆ ವಿವಿಧ ಕಡೆಗಳಿಂದ ಹಲವು ರೈಲುಗಳು ಬರುತ್ತಿವೆ. ಇಲ್ಲಿಂದ ಪ್ರಯಾಣಿಕರು ರಾ.ಹೆ. ಪ್ರವೇಶಿಸಲು ಬಾಡಿಗೆಗೆ ಕಾರು ಅಥವಾ ಆಟೊ ರಿಕ್ಷಾಗಳನ್ನೇ ಆಶ್ರಯಿಸಬೇಕಿದೆ. ಅಥವಾ ಹೆದ್ದಾರಿ ತಲುಪಲು 1 ಕಿ.ಮೀ. ನಡೆದುಕೊಂಡು ಬಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ ಬಹುತೇಕ ಪ್ರಯಾಣಿಕರಲ್ಲಿ ಲಗೇಜುಗಳಿದ್ದು, ಅವುಗಳನ್ನು ಹೊತ್ತುಕೊಂಡು ನಡೆಯುವುದು ಅಸಾಧ್ಯ.

ಮಂಗಳೂರು ಜಂಕ್ಷನ್‌ನಿಂದ ಬಿಜೈ ಕೆಎಸ್ಸಾರ್ಟಿಸಿ ಮತ್ತು ಹ್ಯಾಮಿಲ್ಟನ್ ಸರ್ಕಲ್‌ಗೆ ಸರಕಾರಿ ಬಸ್ ಪ್ರಾರಂಭಿಸಬೇಕು. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

► ಮಂಗಳೂರು ಜಂಕ್ಷನ್‌ಗೆ ಕೊಂಕಣ ಮಾರ್ಗ, ಹಾಸನ, ಕೇರಳ ಭಾಗದಿಂದ ಪ್ರಸಕ್ತ ವೇಳಾಪಟ್ಟಿಯಂತೆ ಬೆಳಗ್ಗೆ 5:45ಕ್ಕೆ ನೇತ್ರಾವತಿ ಎಕ್ಸ್‌ಪ್ರೆಸ್, 6:45ಕ್ಕೆ ಬೆಂಗಳೂರು-ಮಂಗಳೂರು ರಾತ್ರಿ ರೈಲು, ಸಂಜೆ 4:30ಕ್ಕೆ ಯಶವಂತಪುರ-ಮಂಗಳೂರು ಜಂಕ್ಷನ್, ಸಂಜೆ 6 ಗಂಟೆಗೆ ಹೊಸದಿಲ್ಲಿ-ತಿರುವನಂತಪುರ ಎಕ್ಸ್ ಪ್ರೆಸ್, 7 ಗಂಟೆಗೆ ಮಂಗಳಾ ಎಕ್ಸ್‌ಪ್ರೆಸ್ ರೈಲುಗಳು ಆಗಮಿಸುತ್ತಿವೆ. ಪ್ರತಿಯೊಂದು ರೈಲಿನಲ್ಲೂ ಮಂಗಳೂರು ನಗರ ಮತ್ತು ಸುತ್ತಲಿನ ಪ್ರದೇಶಕ್ಕೆ ಹೋಗುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

► ಸುಬ್ರಹ್ಮಣ್ಯ ರೈಲು ನಿಲ್ದಾಣಕ್ಕೆ ಇರುವಂತೆ ಮಂಗಳೂರು ಜಂಕ್ಷನ್‌ನಿಂದ ನಗರಕ್ಕೆ ಸರಕಾರಿ ಅಥವಾ ಖಾಸಗಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಹಲವು ವರ್ಷದಿಂದ ಇದೆ. ಕೆಲವು ಆಟೊ ಚಾಲಕರು ದುಬಾರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಮತ್ತು ಇನ್ನು ಕೆಲವು ಆಟೊ ಚಾಲಕರು ಜಂಕ್ಷನ್ ರೈಲು ನಿಲ್ದಾಣಕ್ಕೆ ಬಾಡಿಗೆಗೆ ತೆರಳಲು ಒಪ್ಪುವುದಿಲ್ಲ ಎಂಬ ಆರೋಪವೂ ಇದೆ.

ಬಂದರ್ ದಕ್ಕೆಗೂ ಬಸ್ ಸಂಚಾರ ವ್ಯವಸ್ಥೆ ಇಲ್ಲ: ಸ್ಟೇಟ್ ಬ್ಯಾಂಕ್-ಹ್ಯಾಮಿಲ್ಟನ್ ಸರ್ಕಲ್‌ನಿಂದ ಬಂದರ್ ದಕ್ಕೆಗೂ ಬಸ್ ಸಂಚಾರ ಆರಂಭಿಸಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ಕೂಡ ಈವರೆಗೆ ಸ್ಪಂದನ ಸಿಕ್ಕಿಲ್ಲ. ಜಿಲ್ಲೆ ಮತ್ತು ಹೊರ ಜಿಲ್ಲೆ, ರಾಜ್ಯದಿಂದ ಸಾವಿರಾರು ಮಂದಿ ಮೀನುಗಾರರು, ವ್ಯಾಪಾರಿಗಳು, ಕಾರ್ಮಿಕರು, ಸಾರ್ವಜನಿಕರು ಮುಂಜಾನೆ 5 ಗಂಟೆಯಿಂದ ಸಂಜೆ 6ರವರೆಗೆ ಬಂದರ್ ದಕ್ಕೆಗೆ ಭೇಟಿ ನೀಡುತ್ತಾರೆ. ಮೀನುಗಾರ ಮಹಿಳೆಯರ ಸಂಖ್ಯೆಯೂ ಸಾಕಷ್ಟಿದೆ. ಎಲ್ಲರೂ ಬಾಡಿಗೆ ರಿಕ್ಷಾವನ್ನೇ ಆಶ್ರಯಿಸಿದ್ದಾರೆ. ಅದರಲ್ಲೂ ಒಂದು ರಿಕ್ಷಾದಲ್ಲಿ ಮಿತಿಗಿಂತ ಅಧಿಕ ಮಂದಿಯನ್ನು ತುಂಬಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಹಾಗಾಗಿ ಬೆಳಗ್ಗೆ 5ರಿಂದ 9 ಮತ್ತು ಸಂಜೆ 4ರಿಂದ 6ರವರೆಗೆ ಖಾಸಗಿ ಅಥವಾ ಸರಕಾರಿ ಬಸ್‌ಗಳ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಯಿತ್ತು.

►ಸುಮಾರು 40 ವರ್ಷದ ಹಿಂದೆ ರೂಟ್ ನಂಬ್ರ 18ರ ಖಾಸಗಿ ಬಸ್ಸೊಂದು ಸ್ಟೇಟ್‌ಬ್ಯಾಂಕ್, ಬಂದರ್ ದಕ್ಕೆ, ಗೂಡ್ಸ್ ಶೆಡ್, ಹೊಯಿಗೆ ಬಝಾರ್, ಮಾರಿಗುಡಿ, ಲಿವಲ್ ಪ್ರದೇಶಕ್ಕೆ ಚಲಿಸುತ್ತಿತ್ತು. ಇದರಿಂದ ಮೀನುಗಾರರಿಗೆ ಅನುಕೂಲವಾಗುತ್ತಿತ್ತು. ಆ ಬಸ್ ಸಂಚಾರ ಸ್ಥಗಿತಗೊಂಡ ಬಳಿಕ ದಕ್ಕೆಗೆ ಹೋಗಲು ಬಾಡಿಗೆ ರಿಕ್ಷಾವನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ.

ಸ್ಟೇಟ್‌ಬ್ಯಾಂಕ್-ಹ್ಯಾಮಿಲ್ಟನ್ ಸರ್ಕಲ್‌ಗೆ ಬಂದರ್ ದಕ್ಕೆಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಪೊನ್ನುರಾಜ್ ಜಿಲ್ಲಾಧಿಕಾರಿಯಾಗಿದ್ದಾಗ ನಡೆದ ಆರ್‌ಟಿಎ ಸಭೆಯಲ್ಲಿ ನಾನು ಬೇಡಿಕೆ ಮುಂದಿಟ್ಟಿದ್ದೆ. ಅವರು ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಕಾರ್ಯಗತಗೊಳ್ಳಲಿಲ್ಲ.

ಹನುಮಂತ ಕಾಮತ್, ಸಾಮಾಜಿಕ ಕಾರ್ಯಕರ್ತ, ಮಂಗಳೂರು

ದಕ್ಕೆಯಿಂದ ಸ್ಟೇಟ್‌ಬ್ಯಾಂಕ್-ಹ್ಯಾಮಿಲ್ಟನ್ ಸರ್ಕಲ್‌ಗೆ ಸುಮಾರು ಎರಡೂವರೆ ಕಿ.ಮೀ. ದೂರವಿದೆ. ಮೀನುಗಾರ ಮಹಿಳೆಯರ ಸಹಿತ ಹೆಚ್ಚಿನವರು ಬಾಡಿಗೆ ರಿಕ್ಷಾವನ್ನು ಆಶ್ರಯಿಸಿದ್ದಾರೆ. ಇಲ್ಲಿಗೆ ಪೀಕ್‌ಅವರ್‌ನಲ್ಲಿ ಖಾಸಗಿ ಅಥವಾ ಸರಕಾರಿ ಬಸ್ ಸಂಚಾರ ಆರಂಭಿಸಬೇಕು ಎಂದು ಮೀನುಗಾರರ ಸಹಿತ ಸಾರ್ವಜನಿಕರು ಅನೇಕ ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಸರಕಾರ ಸ್ಪಂದಿಸಲಿ.

ಅಲಿ ಹಸನ್, ಅಧ್ಯಕ್ಷ, ಗಿಲ್‌ನೆಟ್ ಮೀನುಗಾರರ ಸಂಘ, ಮಂಗಳೂರು

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News