ಭ್ರಷ್ಟಾಚಾರ ಪ್ರಕರಣ: ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಪತ್ನಿ,‌ ಪುತ್ರಿಯರಿಗೆ ಜಾಮೀನು ನಿರಾಕರಣೆ

Update: 2021-09-28 14:46 GMT

ಮುಂಬೈ,ಸೆ.28: ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್(ಡಿಎಚ್ಎಫ್ಎಲ್)ಗೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್ನ ಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಬಿಂದು ಹಾಗೂ ಪುತ್ರಿಯರಾದ ರೋಶಿನಿ ಮತ್ತು ರಾಧಾ ಅವರಿಗೆ ಜಾಮೀನು ನೀಡಲು ಬಾಂಬೆ ಉಚ್ಚ ನ್ಯಾಯಾಲಯವು ಮಂಗಳವಾರ ನಿರಾಕರಿಸಿದೆ.

ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಏಕ ನ್ಯಾಯಾಧೀಶ ಪೀಠದ ನ್ಯಾ.ಭಾರತಿ ಡಾಂಗ್ರೆ ಅವರು ತಿರಸ್ಕರಿಸಿದರು. ತಮಗೆ ಜಾಮೀನು ನಿರಾಕರಿಸಿದ್ದ ವಿಶೇಷ ಸಿಬಿಐ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಿಂದು ಮತ್ತು ಅವರ ಪುತ್ರಿಯರು ಕಳೆದ ವಾರ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಅಕ್ರಮ ವ್ಯವಹಾರಗಳ ಮೂಲಕ ಅವರು ಯೆಸ್ ಬ್ಯಾಂಕ್ಗೆ 4,000 ಕೋ.ರೂ.ಗಳ ನಷ್ಟವನ್ನುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಹಿಳೆಯರು ಎಂಬ ಕಾರಣಕ್ಕೆ ಯಾವುದೇ ಸಹಾನುಭೂತಿಗೆ ಅವರು ಅರ್ಹರಲ್ಲ ಎಂದು ತನ್ನ ಆದೇಶದಲ್ಲಿ ಬೆಟ್ಟು ಮಾಡಿದ್ದ ವಿಶೇಷ ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಈ ಮೂವರೂ ಈಗ ಮುಂಬೈನ ಬೈಕುಲಾ ಮಹಿಳಾ ಕಾರಾಗೃಹದಲ್ಲಿದ್ದಾರೆ.
 
ರಾಣಾ ಕಪೂರ್ ಅವರೂ ಜಾರಿ ನಿರ್ದೇಶನಾಲಯ (ಈ.ಡಿ)ವು ತನಿಖೆ ನಡೆಸುತ್ತಿರುವ ಸಂಬಂಧಿತ ಪ್ರಕರಣವೊಂದಲ್ಲಿ ಈಗಾಗಲೇ ಬಂಧನದಲ್ಲಿದ್ದಾರೆ. ರಾಣಾ ಡಿಎಚ್ಎಫ್ಎಲ್ನ ಕಪಿಲ ವಾಧ್ವಾನ್ ಅವರೊಂದಿಗೆ ಕ್ರಿಮಿನಲ್ ಒಳಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಸಿಬಿಐ ಆರೋಪಿಸಿದೆ. 2018 ಎಪ್ರಿಲ್ ಮತ್ತು ಜೂನ್ನಲ್ಲಿ ಯೆಸ್ ಬ್ಯಾಂಕ್ ಡಿಎಚ್ಎಫ್ಎಲ್ನ ಅಲ್ಪಾವಧಿ ಡಿಬೆಂಚರ್ಗಳಲ್ಲಿ 3,700 ಕೋ.ರೂ.ಗಳನ್ನು ಹೂಡಿಕೆ ಮಾಡಿತ್ತು ಮತ್ತು ಇದಕ್ಕೆ ಪ್ರತಿಫಲವಾಗಿ ಡಿಎಚ್ಎಫ್ಎಲ್ ರಾಣಾ ಕಪೂರ್ ಅವರ ಪತ್ನಿ ಮತ್ತು ಪುತ್ರಿಯರ ನಿಯಂತ್ರಣದ ಡುಇಟ್ ಅರ್ಬನ್ ವೆಂಚರ್ಸ್ಗೆ ಸಾಲದ ರೂಪದಲ್ಲಿ ರಾಣಾಗೆ 900 ಕೋ.ರೂ.ಗಳ ಕಮಿಷನ್ ಪಾವತಿಸಿತ್ತು ಎಂದು ಸಿಬಿಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News