ಪರಮಾಣು ಸ್ಥಾವರಗಳ ಪರಿವೀಕ್ಷಣೆಗೆ ಅಡ್ಡಿ; ಇರಾನ್ ಕ್ರಮಕ್ಕೆ ವ್ಯಾಪಕ ಖಂಡನೆ, ಎಚ್ಚರಿಕೆ

Update: 2021-09-28 15:30 GMT

 ಜೆದ್ದಾ, ಸೆ.28: ತನ್ನ ಪರಮಾಣು ಸ್ಥಾವರಗಳ ಕಾರ್ಯನಿರ್ವಹಣೆಯನ್ನು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ) ಪರಿವೀಕ್ಷಿಸಲು ಅನುಮತಿ ನಿರಾಕರಿಸಿರುವ ಇರಾನ್ ನಡೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ತೀವ್ರ ಪ್ರತಿಕ್ರಮದ ಮುನ್ನೆಚ್ಚರಿಕೆ ನೀಡಲಾಗಿದೆ.

ಟೆಹ್ರಾನ್ ಬಳಿಯ ಕರಾಜ್ ಎಂಬಲ್ಲಿರುವ ಸೆಂಟ್ರಿಫ್ಯೂಜ್(ಅಪಕೇಂದ್ರಕ) ಉತ್ಪಾದಿಸುವ ಘಟಕಕ್ಕೆ ತನ್ನ ಪರಿವೀಕ್ಷಕರು ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿದ್ದು ಈ ಕ್ರಮವು ಸೆಪ್ಟಂಬರ್ 12ರಂದು ಇರಾನ್ನ ಪರಮಾಣು ಯೋಜನೆ ಮುಖ್ಯಸ್ಥ ಮುಹಮ್ಮದ್ ಇಸ್ಲಾಮಿ ಮತ್ತು ಐಎಇಎ ನಿರ್ದೇಶಕ ರಫೇಲ್ ಗ್ರಾಸಿ ಉಪಸ್ಥಿತಿಯಲ್ಲಿ ಏರ್ಪಟ್ಟ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಐಎಇಎ ರವಿವಾರ ಹೇಳಿದೆ.

ಇರಾನ್ ತಕ್ಷಣ ಅಂತರಾಷ್ಟ್ರೀಯ ಪರಿವೀಕ್ಷಕರಿಗೆ ಪ್ರವೇಶಾವಕಾಶ ನೀಡಬೇಕು. ಇಲ್ಲದಿದ್ದರೆ ಐಎಇಎ ಆಡಳಿತ ಮಂಡಳಿಯಿಂದ ರಾಜತಾಂತ್ರಿಕ ಪ್ರತೀಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಸಿದೆ. ಇನ್ನಷ್ಟು ವಿಳಂಬಿಸದೆ, ಪರಮಾಣು ಸ್ಥಾವರಕ್ಕೆ ಪ್ರವೇಶಾವಕಾಶ ನೀಡಬೇಕು. ಇದಕ್ಕೆ ವಿಫಲವಾದರೆ ಆಡಳಿತ ಮಂಡಳಿಯ ಇತರ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಐಎಇಎಯಲ್ಲಿನ ಅಮೆರಿಕದ ಪ್ರತಿನಿಧಿ ಲೂಯಿಸ್ ಬೊನೊ ಹೇಳಿದ್ದಾರೆ. ವಿಳಂಬಿಸದೆ ಅಂತರಾಷ್ಟ್ರೀಯ ಪರಿವೀಕ್ಷಕರಿಗೆ ಪ್ರವೇಶಾವಕಾಶ ಒದಗಿಸಬೇಕೆಂದು ಯುರೋಪಿಯನ್ ಯೂನಿಯನ್ ಕೂಡಾ ಆಗ್ರಹಿಸಿದೆ.

ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ಪರಮಾಣು ಶಕ್ತಿಯ ಪ್ರದರ್ಶನದ ಮೂಲಕ ತನ್ನ ಪ್ರಾಬಲ್ಯ ಸಾಧಿಸಲು ಇರಾನ್ ಪ್ರಯತ್ನಿಸುತ್ತಿದೆ ಎಂದಿರುವ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್, ಇರಾನ್ನ ಪರಮಾಣು ಕಾರ್ಯಕ್ರಮ ಮತ್ತು ನಮ್ಮ ತಾಳ್ಮೆ ಈಗ ಪರಾಕಾಷ್ಟೆಯ ಸ್ಥಿತಿ ತಲುಪಿದೆ ಎಂದಿದ್ದಾರೆ. ಇರಾನ್ನ ಪರಮಾಣು ಕಾರ್ಯಕ್ರಮ ಗಂಭೀರ ಅಂಶವಾಗಿದ್ದು ಎಲ್ಲಾ ಅಪಾಯದ ಗೆರೆಗಳನ್ನೂ ದಾಟಲಾಗಿದೆ, ಪರಿವೀಕ್ಷಣೆಗೆ ಅವಕಾಶ ನಿರಾಕರಿಸಲಾಗಿದೆ. ಇಷ್ಟೆಲ್ಲಾ ಮಾಡಿದರೂ ಅವರು ಬಚಾವಾಗುತ್ತಿದ್ದಾರೆ. ಆದರೆ ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಯೋಚಿಸಿ, ನಮ್ಮ ಸಂಪನ್ಮೂಲಗಳನ್ನು ಬಳಸಿದರೆ ನಾವು ಮೇಲುಗೈ ಸಾಧಿಸಬಹುದು ಎಂದು ಬೆನೆಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News